ದಾವಣಗೆರೆ: ಖಾಸಗಿ ಬಸ್‌ನಲ್ಲೂ ಉಚಿತ ಪ್ರಯಾಣಕ್ಕೆ ಕೂಗು!
ರಾಜ್ಯಾದ್ಯಂತ ಜೂ.11ರಿಂದ ಅನ್ವಯವಾಗುವಂತೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದಂತೆ ಖಾಸಗಿ ಬಸ್ಸುಗಳಲ್ಲೂ ಪ್ರಯಾಣಿಸಲು ಅವಕಾಶ ಕಲ್ಪಿಸುವ ಮೂಲಕ ಗ್ರಾಮೀಣ ಮಹಿಳೆಯರಿಗೂ ಯೋಜನೆ ಲಾಭ ಕಲ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಖಾಸಗಿ ಬಸ್ಸು ಮಾಲೀಕರ ಸಂಘವು ಒತ್ತಾಯಿಸಿದೆ.
ನಾಗರಾಜ ಎಸ್.ಬಡದಾಳ್
ದಾವಣಗೆರೆ (ಜೂ.7) ರಾಜ್ಯಾದ್ಯಂತ ಜೂ.11ರಿಂದ ಅನ್ವಯವಾಗುವಂತೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದಂತೆ ಖಾಸಗಿ ಬಸ್ಸುಗಳಲ್ಲೂ ಪ್ರಯಾಣಿಸಲು ಅವಕಾಶ ಕಲ್ಪಿಸುವ ಮೂಲಕ ಗ್ರಾಮೀಣ ಮಹಿಳೆಯರಿಗೂ ಯೋಜನೆ ಲಾಭ ಕಲ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಖಾಸಗಿ ಬಸ್ಸು ಮಾಲೀಕರ ಸಂಘವು ಒತ್ತಾಯಿಸಿದೆ.
ಕಾಂಗ್ರೆಸ್ಸಿನ ಐದು ಗ್ಯಾರಂಟಿಗಳಲ್ಲಿ(Congress guarantees) ಒಂದಾದ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ಸು ಪ್ರಯಾಣವೂ ಒಂದಾಗಿದೆ. ಇದೀಗ ಕೆಎಸ್ಸಾರ್ಟಿಸಿ ಸಾಮಾನ್ಯ ಬಸ್ಸುಗಳಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸಿ, ಕೆಲವೊಂದು ಷರತ್ತುಗಳನ್ನೂ ವಿಧಿಸಿದೆ. ಇದರ ಬೆನ್ನಲ್ಲೇ ಕೆಎಸ್ಸಾರ್ಟಿಸಿ ಬಸ್ಸುಗಳಂತೆ ಖಾಸಗಿ ಬಸ್ಸಿನಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲು ಖಾಸಗಿ ಬಸ್ಸು ಮಾಲೀಕರ ಸಂಘದ ಜಿಲ್ಲಾ ಘಟಕ ಸರ್ಕಾರಕ್ಕೆ ಮನವಿ ಮಾಡಿದೆ.
ಖಾಸಗಿ ಬಸ್‌ನಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ: ಕರಾವಳಿ ಭಾಗದಲ್ಲಿ ಒತ್ತಾಯ
ಜಿಲ್ಲೆಯಲ್ಲಿ 350 ಖಾಸಗಿ ಬಸ್:
ಕೆಎಸ್ಸಾರ್ಟಿಸಿ(KSRTC) ಬಸ್‌ಗಳಿಗೆ ಸರಿಸಮಾನ ಸಂಖ್ಯೆಯ ಖಾಸಗಿ ಬಸ್ಸು ರಾಜ್ಯದಲ್ಲಿವೆ. ದಾವಣಗೆರೆಯಲ್ಲೇ ನಗರ, ಗ್ರಾಮೀಣ ಸೇರಿ ಸುಮಾರು 350 ಖಾಸಗಿ ಬಸ್, ರಾಜ್ಯದಲ್ಲಿ ಸುಮಾರು 6,500 ಬಸ್ಸು ಇವೆ. ರಾಷ್ಟ್ರೀಯ ರಹದಾರಿ ಬಸ್ಸು ಸಂಖ್ಯೆ ಇದರಲ್ಲಿ ಸೇರಿಲ್ಲ. ಖಾಸಗಿ ಬಸ್ಸುಗಳಿಗೂ ಷರತ್ತು ವಿಧಿಸಿ, ಮಹಿಳೆಯರ ಉಚಿತ ಪ್ರಯಾಣಾವಕಾಶ ಕಲ್ಪಿಸಲಿ ಎಂಬುದು ಬಸ್ಸು ಮಾಲೀಕರ ಸಂಘದ ರಾಜ್ಯವ್ಯಾಪಿ ಒತ್ತಾಯ.
ಬಸ್ ಮಾಲೀಕರಿಗೆ ಸಂಕಷ್ಟ:
ಮಹಿಳೆಯರಿಗೆ ಖಾಸಗಿ ಬಸ್ಸಿನಲ್ಲೂ ಉಚಿತ ಪ್ರಯಾಣಕ್ಕೆ ಬದ್ಧರಿದ್ದೇವೆ. ಬಸ್ಸನ್ನೇ ಅವಲಂಬಿಸಿರುವ ಮಾಲೀಕರು, ಚಾಲಕರು, ನಿರ್ವಾಹಕರು, ಮೆಕ್ಯಾನಿಕ್, ಕಾರ್ಮಿಕರು ಇದ್ದಾರೆ. ಈ ಎಲ್ಲರಿಗೂ ಆಸರೆಯಾದಂತಾಗುತ್ತದೆ. ಇಂದಿಗೂ ಜಿಲ್ಲಾ, ತಾಲೂಕು ಕೇಂದ್ರಕ್ಕೆ ಸಂಪರ್ಕಕ್ಕೆ ಆಸರೆಯಾಗಿ ನಿಂತಿರುವುದೇ ಖಾಸಗಿ ಬಸ್‌ಗಳು. ಸರ್ಕಾರಿ ಬಸ್‌ಗಳಲ್ಲಿ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದರೆ, ಖಾಸಗಿ ಬಸ್‌ಗಳಿಗೆ ಸಂಚಕಾರ ಬರುತ್ತದೆ. ಖಾಸಗಿ ಬಸ್ ಮಾಲೀಕರಿಗೆ ಸಂಕಷ್ಟಎದುರಾದರೆ, ವಿಷ ಕುಡಿಯುವ ಪರಿಸ್ಥಿತಿ ಬರುತ್ತದೆ. ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಸಂಘ ಎಚ್ಚರಿಸಿದೆ.
ಸರ್ಕಾರದ ಷರತ್ತುಗಳ ವಿಚಾರವಾಗಿ ಖಾಸಗಿ ಬಸ್ಸು ಮಾಲೀಕರ ಸಂಘಗಳು ಮುಕ್ತ ಚರ್ಚೆಗೂ ಸಿದ್ಧರಿದ್ದೇವೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಮಲ್ಲೇಶಪ್ಪ, ಉಪಾಧ್ಯಕ್ಷರಾದ ಎಚ್.ಸಿ.ಮಹೇಶ ಪಲ್ಲಾಗಟ್ಟೆ, ವೀರಣ್ಣ ಕಂಚಿಕೇರಿ, ಪ್ರಧಾನ ಕಾರ್ಯದರ್ಶಿ ಎಂ.ಆರ್.ಸತೀಶ, ಖಜಾಂಚಿ ಮಹ್ಮಮದ್ ಅಸ್ಲಂ, ಜಿಲಾನ್ ಬೇಗ್, ಸುದೀಪ್, ಖಂಡೋಜಿರಾವ್, ಸುದೀಪ್ ಇತರರು ಒತ್ತಾಯಿಸಿದ್ದಾರೆ.
ಮಹಿಳೆಯರಿಗೆ ಉಚಿತ ಪ್ರಯಾಣ: ಖಾಸಗಿ ಬಸ್‌ಗಳಿಗೆ ನಷ್ಟದ ಆತಂಕ
ರಾಜ್ಯದ ಸುಮಾರು 15-16 ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳ ಸಂಚಾರ ಹೆಚ್ಚಾಗಿದೆ. ಜೂ.11ರಿಂದ ಖಾಸಗಿ ಬಸ್ಸುಗಳಲ್ಲೂ ಉಚಿತ ಪ್ರಯಾಣಕ್ಕೆ ಸರ್ಕಾರ ಅನುವು ಮಾಡಿಕೊಡಲಿ. ಸಾರಿಗೆ ಇಲಾಖೆ ನಿಗದಿಪಡಿಸಿದ ದರ ನೀಡಿದಲ್ಲಿ ನಾವೂ ಮಹಿಳೆಯರಿಗೆ ಉಚಿತ ಪ್ರಯಾಣದ ಸೇವೆ ನೀಡಲು ಸಿದ್ಧರಿದ್ದೇವೆ. 3 ತಿಂಗಳಿಗೊಮ್ಮೆ 48,952 ರು.ನಂತೆ ವರ್ಷಕ್ಕೆ 2 ಲಕ್ಷ ರು. ತೆರಿಗೆ ಕಟ್ಟುತ್ತೇವೆ. ಸರ್ಕಾರ ನಮಗೆ ತೆರಿಗೆಯಲ್ಲಿ ಹೊಂದಾಣಿಕೆಯಾದರೂ ಮಾಡಲಿ ಅಥವಾ 2 ತಿಂಗಳಿಗೊಮ್ಮೆ ಕೆಎಸ್ಸಾರ್ಟಿಸಿಗೆ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಹಣ ಸಂದಾಯ ಮಾಡಿದಂತೆ ನಮಗೆ ಕೊಟ್ಟರೂ ನಾವು ಸೇವೆ ಒದಗಿಸಲು ಸಿದ್ಧ.
ಎಚ್.ಸಿ.ಮಹೇಶ್ ಪಲ್ಲಾಗಟ್ಟೆ, ಉಪಾಧ್ಯಕ್ಷರು, ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ.
ಎಲ್ಲಾ ಕಡೆ ಸರ್ಕಾರಿ ಬಸ್ಸು ಸೇವೆ ಇಲ್ಲ. ಅಂತಹ ಕಡೆ ಖಾಸಗಿ ಬಸ್ಸುಗಳ ಸೇವೆಯನ್ನು ಸರ್ಕಾರ ಬಳಸಲಿ. ಒಂದು ಬಸ್ಸಿನಿಂದ 20 ಜನ ಪ್ರತ್ಯಕ್ಷ, ಪರೋಕ್ಷವಾಗಿ ಉದ್ಯೋಗ ಪಡೆದಿದ್ದು, ಲಕ್ಷಾಂತರ ಜನರಿಗೆ ಈ ಉದ್ಯಮ ಆಸರೆಯಾಗಿದೆ. ಸರ್ಕಾರ ಖಾಸಗಿ ಬಸ್ ಸೇವೆ ಬಳಸದಿದ್ದರೆ, ಈ ಎಲ್ಲರೂ ನಿರುದ್ಯೋಗಿಗಳಾಗುತ್ತಾರೆ. ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡುತ್ತಿರುವ ಸರ್ಕಾರವು ಖಾಸಗಿ ಬಸ್ ಅವಲಂಬಿತರ ಯಾವುದೇ ಕಾರಣಕ್ಕೂ ನಿರುದ್ಯೋಗಿಗಳಾಗಿ ಮಾಡಬಾರದು. ಖಾಸಗಿ ಬಸ್ಸುಗಳಲ್ಲೂ ಷರತ್ತು ವಿಧಿಸಿ, ಮಹಿಳೆಯರಿಗೆ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರರಿಗೆ ಮನವಿ ಮಾಡುತ್ತೇವೆ.
ಕೆ.ಎಸ್.ಮಲ್ಲೇಶಪ್ಪ, ಅಧ್ಯಕ್ಷರು, ಜಿಲ್ಲಾ ಖಾಸಗಿ ಬಸ್ಸು ಮಾಲೀಕರ ಸಂಘ.