ನಾನಾ ಕಾರಣಕ್ಕೆ ವಿಚ್ಛೇದನ ಪಡೆಯುವ ಮಹಿಳೆಯರು ಸಂಖ್ಯೆ ಹೆಚ್ಚಾಗ್ತಿದೆ. ಡಿವೋರ್ಸ್ ನಂತ್ರ ಮಹಿಳೆಯರು ಖುಷಿಯಾಗಿರ್ತಾರಾ? ಇದ್ರೆ ಅದಕ್ಕೆ ಕಾರಣ ಏನು? 

ಪ್ರೀತಿ (Love) ತುಂಬಿದ ಸುಂದರ ಸಂಸಾರವನ್ನು ಪ್ರತಿಯೊಬ್ಬ ಮಹಿಳೆ ಬಯಸ್ತಾಳೆ. ಆದ್ರೆ ಅಸಂಖ್ಯಾತ ಮಹಿಳೆಯರಿಗೆ ಈ ಮದುವೆ ಕತ್ತಲ ಕೋಣೆಯಾಗುತ್ತದೆ. ಪ್ರತಿ ವರ್ಷ ಅವರ ಭಾವನೆಗಳು ಮತ್ತಷ್ಟು, ಇನ್ನಷ್ಟು ಕುಗ್ಗುವ ಜಾಗವಾಗುತ್ತದೆ. ಉಸಿರುಗಟ್ಟಿಸುವ ವಾತಾವರಣ ಅವರನ್ನು ದಾಂಪತ್ಯ ಜೀವನದಿಂದ ಹೊರ ಬರುವಂತೆ ಮಾಡುತ್ತೆ. ಮದುವೆ ಆರಂಭ, ವಿಚ್ಛೇದನ ಅಂತ್ಯವಲ್ಲ. ಅಸಂಖ್ಯಾತ ಮಹಿಳೆಯರ ಪಾಲಿಗೆ ಈ ವಿಚ್ಛೇದನ ಹೊಸ ಬದುಕಿನ ಆರಂಭ. ಪ್ರೀತಿ, ಸ್ವಾತಂತ್ರ್ಯದ ಜೀವನಕ್ಕೆ ಬುನಾದಿ. ಹಿಂದೆ ಅತ್ಯಂತ ಕೊಳಕಾಗಿದ್ದ, ರಹಸ್ಯವಾಗಿರುತ್ತಿದ್ದ ವಿಚ್ಛೇದನ (divorce) ಈಗ ಹೊಸ ಅರ್ಥ ಪಡೆದುಕೊಂಡಿದೆ. ಸ್ವಾಭಿಮಾನ, ಸ್ವಾತಂತ್ರ್ಯ, ಸಂತೋಷದ ಹೆಬ್ಬಾಗಿಲಾಗ್ತಿದೆ. ಮದುವೆಗಿಂತ ವಿಚ್ಛೇದನದ ನಂತ್ರ ಮಹಿಳೆಯರು ಖುಷಿಯಾಗಿರಲು ಅನೇಕ ಕಾರಣವಿದೆ.

ತಾನು ಆಯ್ಕೆ ಮಾಡಿಕೊಳ್ಳದ ಪಾತ್ರದಿಂದ ಹೊರ ಬರ್ತಾಳೆ ಮಹಿಳೆ : ಪ್ರಪಂಚದ ಸಂಸ್ಕೃತಿಯಲ್ಲಿ ಒಳ್ಳೆಯ ಹೆಂಡತಿ ಎನ್ನುವ ಬಿರುದೊಂದಿದೆ. ಅದನ್ನು ಪಡೆಯಲು ಪ್ರತಿಯೊಬ್ಬ ಮಹಿಳೆ ತನ್ನತನವನ್ನು ಬಿಡ್ತಾಳೆ. ಅವಳಿಗೆ ಅವಳ ಧ್ವನಿಯೇ ಕೇಳಿಸದಂತಾಗುತ್ತೆ. ವಿಚ್ಛೇದನ ಮಹಿಳೆ ಧ್ವನಿಗೊಂದು ಶಕ್ತಿ ನೀಡುತ್ತದೆ. ಇಷ್ಟು ದಿನ ತನ್ನನ್ನು ತಾನು ಬೇರೆಯವರಿಗಾಗಿ ಸಮರ್ಪಿಸಿಕೊಂಡಿದ್ದ ಮಹಿಳೆ ವಿಚ್ಛೇದನದ ನಂತ್ರ ತನ್ನನ್ನು ತಾನು ಅರಿಯಲು ಶುರು ಮಾಡ್ತಾಳೆ. ಇದು ಸ್ವಾರ್ಥವಲ್ಲ. ಪ್ರಾಮಾಣಿಕ ಜೀವನದ ಆರಂಭ.

ಜಂಟಿಯಾಗಿ ಒಂಟಿತನ ಅನುಭವಿಸುವ ಬದಲು ನೋವಿನ ಒಂಟಿತನ ಸ್ವೀಕಾರ : ನೀವು ಪಕ್ಕದಲ್ಲಿದ್ರೂ ಇಲ್ಲದಂತೆ ನೋಡುವ ವ್ಯಕ್ತಿ ಜೊತೆ ನೀವು ಜೀವನ ನಡೆಸಿದಾಗ ಕಾಡುವ ಒಂಟಿತನಕ್ಕಿಂತ, ವಿಚ್ಛೇದನದ ನಂತ್ರ ಕಾಡುವ ಒಂಟಿತನ ಒಳ್ಳೆಯದು. ಇದು ವಿವಾಹಿತ ಅನೇಕ ಮಹಿಳೆಯರಿಗೆ ಗೊತ್ತು. ವಿಚ್ಛೇದನದ ಒಂಟಿತನ ವಿಚಿತ್ರವೆನ್ನಿಸಿದ್ರೂ ನಿಧಾನವಾಗಿ ಆಕೆ ತನ್ನೊಳಗೆ ವಿಶ್ರಾಂತಿ ಪಡೆಯೋದನ್ನು ಕಲಿಯುತ್ತಾಳೆ. ತನ್ನಿಷ್ಟದ ತಿಂಡಿ ತಿನ್ನುತ್ತಾಳೆ. ತನಿಗಷ್ಟಬಂದ ಆಹಾರ ಸೇವಿಸ್ತಾಳೆ. ಮಲಗುವಾಗ ಟೀಕೆಯಿಲ್ಲ. ಕುಳಿತಾಗ ನೋವಿಲ್ಲ. ಶಾಂತ ಸ್ವಾತಂತ್ರ್ಯ ಆಕೆಗೆ ಸಿಗುತ್ತದೆ.

ಗೌರವ, ಆರ್ಥಿಕ ಬಲ : ಅತೃಪ್ತ ದಾಂಪತ್ಯದಲ್ಲಿ ಹಣ ನಿಯಂತ್ರಣದ ಸಾಧನವಾಗ್ಬಹುದು. ಡಿವೋರ್ಸ್ ನಂತ್ರ ಹಣ ಕಡಿಮೆ ಇದ್ರೂ, ಮಹಿಳೆ ತಾನು ಶ್ರೀಮಂತೆ ಎನ್ನುವ ಭಾವನೆ ಹೊಂದುತ್ತಾಳೆ. ಏನು ಗಳಿಸಬೇಕು, ಏನು ಖರ್ಚು ಮಾಡಬೇಕು ಮತ್ತು ಭಯ ಅಥವಾ ಒಪ್ಪಿಗೆ ಪಡೆಯದೆ ಏನು ಉಳಿಸಬೇಕು ಎಂಬ ನಿರ್ಧಾರ ಆಕೆಯದ್ದು. ಈ ಸಂದರ್ಭದಲ್ಲಿ ಅನೇಕರು ಬಜೆಟ್ ನಿರ್ವಹಣೆ, ಹೂಡಿಕೆ ಪ್ಲಾನ್, ಬ್ಯುಸಿನೆಸ್ ಕಲಿಯುತ್ತಾರೆ.

ಪ್ರೀತಿ ಮಿತಿಯ ಬಗ್ಗೆ ಮಕ್ಕಳಿಗೆ ಪಾಠ : ಅತೃಪ್ತ ದಾಂಪತ್ಯಕ್ಕಿಂತ ವಿಚ್ಛೇದನ ಉತ್ತಮ ಅಂತ ಅವರು ಭಾವಿಸ್ತಾರ. ವಿಚ್ಛೇದನ ಪಡೆದ ಮಹಿಳೆ ಎಂದೂ ತನ್ನ ಮಕ್ಕಳಿಗೆ ಕುಟುಂಬ ಮುಖ್ಯವಲ್ಲ ಎಂಬುದನ್ನು ಕಲಿಸುವುದಿಲ್ಲ. ಗೌರವ ಮತ್ತು ಶಾಂತಿ ಹೆಚ್ಚು ಮುಖ್ಯ ಎಂಬುದನ್ನು ತಿಳಿಸುತ್ತಾಳೆ. ನಿಜವಾದ ಪ್ರೀತಿಯಲ್ಲಿ ನೋವನ್ನು ಮೌನವಾಗಿ ಸ್ವೀಕರಿಸುವ ಅಗತ್ಯವಿಲ್ಲ ಎಂಬುದನ್ನು ಕಲಿಸ್ತಾಳೆ.

ಮತ್ತೆ ಚಿಗುರುವ ಕನಸು : ಮದುವೆ ನಂತ್ರ ಸಂಗಾತಿ, ಮಕ್ಕಳ ಅನುಕೂಲಕ್ಕೆ ಮಹಿಳೆ ಹೊಂದಿಕೊಳ್ತಾಳೆ. ವೃತ್ತಿ, ಆಸಕ್ತಿ ಮೂಲೆ ಸೇರುತ್ತದೆ. ವಿಚ್ಛೇದನದ ನಂತ್ರ ಮತ್ತೆ ಕನಸು ಚಿಗುರುತ್ತದೆ. ಹಳೆ ಕನಸುಗಳಿಗೆ ಮಹಿಳೆ ಮರಳ್ತಾಳೆ. ಡಿವೋರ್ಸ್ ನಂತ್ರ ಎಷ್ಟೋ ಮಹಿಳೆಯರು ಶಿಕ್ಷಣ ಮುಂದುವರೆಸಿದ್ದಿದೆ. ಬ್ಯುಸಿನೆಸ್ ಶುರು ಮಾಡಿದ್ದಿದೆ. ಒಂಟಿಯಾಗಿ ಊರು ಸುತ್ತುವವರಿದ್ದಾರೆ. ಸ್ವಾತಂತ್ರ್ಯ ಎಂದರೆ ಏನು ಎಂಬುದನ್ನು ಕಂಡುಕೊಳ್ತಾರೆ.

ಇನ್ಮುಂದೆ ಯಾವುದೋ ಮಹಿಳೆ ವಿಚ್ಛೇದನ ಪಡೆದಾಗ ಡಿವೋರ್ಸ್ ಆಗಿದೆ ಅಂತ ಆಕೆಯನ್ನು ಕೆಕ್ಕರಿಸಿ ನೋಡ್ಬೇಕಾಗಿಲ್ಲ. ಅವಳು ತನ್ನ ಜೀವನವನ್ನು ಅಂತ್ಯ ಮಾಡ್ಕೊಂಡಿಲ್ಲ.ಹೊಸದಾಗಿ ಆರಂಭಿಸಿದ್ದಾಳೆ. ಪ್ರೀತಿ ಬಿಟ್ಟುಕೊಟ್ಟಿಲ್ಲ, ನಿಜವಾದ ಪ್ರೀತಿಯ ಹುಡುಕಾಟ ಶುರು ಮಾಡಿದ್ದಾಳೆ. ಅವಳನ್ನು ನೀವು ಕರುಣೆಯಿಂದ ನೋಡುವ ಅಗತ್ಯವಿಲ್ಲ. ತನ್ನ ಜೀವನದ ಮಹತ್ವದ ಘಟ್ಟವನ್ನು ದಾಟಿ ಬಂದು ಒಂಟಿಯಾಗಿ ನಿಂತಿದ್ದಾಳೆ ಅಂದ್ರೆ ಅವಳು ಧೈರ್ಯಶಾಲಿ.