ಅದೊಂದು ಶಾರ್ಟ್ ಮೂವಿ, ಹೆಸರು ದಿ ಬೆಟರ್ ಹಾಫ್- ಅದರಲ್ಲಿ ಆಕೆ ಅದೇಕೋ ಇತ್ತೀಚೆಗೆ ಕೆಲಸದವಳು ತಮಾಷೆ ಮಾಡಿದರೂ ಹರಿಹಾಯುತ್ತಿದ್ದಾಳೆ, ಗಂಡ ಟವೆಲ್ ಕೊಡಲು ಹೇಳಿದರೂ ಸಿಡಿದು ಬೀಳುತ್ತಿದ್ದಾಳೆ. ದಿನಸಿ ಅಂಗಡಿಯವನು ಹಣ ತಂದುಕೊಡಲು ಹೇಳಿದ್ದಕ್ಕೆ ಕಿರುಚಾಡಿ ಜಗಳ ಮಾಡುತ್ತಾಳೆ, ಪೇಪರ್‌ನವನು, ಇಸ್ತ್ರಿಯವನು, ಹಾಲಿನವನು- ಕಣ್ಣೆದುರು ಬಂದ ಯಾರೊಬ್ಬರೂ ಆಕೆಯ ಕೋಪಾಗ್ನಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಪೇರೆಂಟಿಂಗ್‌ನಲ್ಲಿ ಉದ್ಯೋಗಿ ತಾಯಂದಿರು ಎಡವುದೆಲ್ಲಿ?

ಸಮಯವೇ ಸಾಲುತ್ತಿಲ್ಲ. ಏನು ಮಾಡಿದರೂ ಸಮಯ ವ್ಯರ್ಥ ವಾಗುತ್ತದೆ ಎಂಬ ಟೆನ್ಷನ್ ಅವಳದು. ಇದರಿಂದ ರೋಸಿ ಹೋದ ಕೆಲಸದವಳು ಕೆಲಸ ಬಿಡುವುದಾಗಿ ಹೇಳುತ್ತಿದ್ದಾಳೆ. ಇವೆಲ್ಲವನ್ನೂ ಗಮನಿಸಿದ್ದ ಪತಿರಾಯ ಒಂದು ದಿನ ಆಕೆಯನ್ನು ಕರೆದು ವೀಕೆಂಡ್ ಆಫ್ ತೆಗೆದುಕೊಳ್ಳುವಂತೆ ಹೇಳುತ್ತಾನೆ. ಅರೆ ವೀಕೆಂಡ್ ಆಫ್ ಇದ್ದೇ ಇದೆಯಲ್ಲ ಎಂಬ ಪತ್ನಿಗೆ, ಕಚೇರಿ ಕೆಲಸಕ್ಕೇನೋ ಆಫ್ ಇದೆ. ಮನೆ, ಮಕ್ಕಳ ಕೆಲಸಕ್ಕೆ? ಎಂದು ಕೇಳುವ ಗಂಡ ಈ ವಾರಾಂತ್ಯಕ್ಕೆ ಗೋವಾ ಹಾಲಿಡೇ ಬುಕ್ ಮಾಡಿಕೊಡುತ್ತೇನೆ.

ಗೆಳತಿಯರೊಂದಿಗೆ ಹೋಗಿ ಬಾ, ತಾನು ಎರಡು ದಿನ ಮನೆಮಕ್ಕಳನ್ನು ನಿಭಾಯಿಸುತ್ತೇನೆ ಎನ್ನುತ್ತಾನೆ. ಅವಳು ಖುಷಿಯಲ್ಲಿ ಕಣ್ಣೀರಾಗುತ್ತಾಳೆ, ನೀನಾದರೂ ಅರ್ಥ ಮಾಡಿಕೊಂಡೆಯಲ್ಲ ಎಂದು. ಅವನು ನಾನಲ್ಲದೆ ನಿನ್ನನ್ನು ಕೆಲಸದವಳೋ, ಪೇಪರಿನವನೋ ಅರ್ಥ ಮಾಡಿಕೊಳ್ಳಲು ಸಾಧ್ಯವೇ ಎನ್ನುತ್ತಾನೆ. 

ಮಾತೃಭೂಮಿಗಾಗಿ ಫ್ಯಾಶನ್ ಲೋಕ ಬಿಟ್ಟರು: ಲೆ. ಗರಿಮಾ ಯಾದವ್ ನಮಗೆಲ್ಲಾ ಗುರು!

ರಜೆಯಿಲ್ಲದ ಕೆಲಸ

ಎಷ್ಟು ಸಣ್ಣದಾಗಿ ಎಷ್ಟೊಂದು ಮನೆಯ ಹೆಣ್ಣಮಕ್ಕಳ ಕತೆ ಹೇಳಿದ್ದಾರೆ ಎಂಬುದಕ್ಕೆ ಇದಕ್ಕೆ ಬಂದಿರುವ ಕಾಮೆಂಟ್‌ಗಳ ಸಂಖ್ಯೆಯೇ ಸಾಕ್ಷಿ! ಬಹುತೇಕ ಒಂದೆರಡು ಮಕ್ಕಳನ್ನು ಹೊಂದಿದ ಉದ್ಯೋಗಿ ಮಹಿಳೆಯರೆಲ್ಲ ಇದು ನನ್ನದೇ ಕತೆ, ನನ್ನದೇ ಕತೆ ಎಂದು ಹೇಳಿಕೊಂಡಿದ್ದಾರೆ. ಹಾಗಂಥ ಅವರೆಲ್ಲರಿಗೂ ಇಷ್ಟೇ ಅರ್ಥ ಮಾಡಿಕೊಳ್ಳುವ ಗಂಡನಿದ್ದಾನೆ ಎಂದಲ್ಲ. ಇಂಥ ಗಂಡ ನನಗೂ ಇದ್ದರೆ ಎಂಬುದು ಅವರ ಆಸೆ, ಅಳಲು. 

ಹೌದಲ್ಲವೇ? ಕೆಲಸಕ್ಕೆ ಹೋಗುವ ಪ್ರತಿಯೊಬ್ಬರಿಗೂ ರಜೆಯುಂಟು. ಮನೆಗೆಲಸದವರಿಗೂ ರಜೆ ಇದ್ದೇ ಇರುತ್ತದೆ. ಆದರೆ, ಮನೆ ಯಜಮಾನಿ ಎಂಬ ಪಟ್ಟ ಗಳಿಸಿ ಕೆಲಸದವರ ಮಟ್ಟದಲ್ಲಿ ಎಲ್ಲವನ್ನು ಮಾಡಿಕೊಂಡು ಹೋಗುವ ಆಕೆಗೆ ಮಾತ್ರ ರಜೆಯಿಲ್ಲ.  ಮಹಿಳೆ ಉದ್ಯೋಗಕ್ಕೆ ಹೋಗುತ್ತಿರಲಿ, ಹೋಂ ಮೇಕರ್ ಆಗಿರಲಿ, ಮದುವೆ, ಮಕ್ಕಳಾದ ಮೇಲೆ ಆಕೆಗೆ ರಜೆ ಎಂಬುದು, ಈ ಸಂಕೋಲೆಗಳಿಂದ ಬಿಡುಗಡೆ ಎಂಬುದು ಎಂದಿಗೂ ಇಲ್ಲ.

ದಿನ ಏಳಾದರೂ ನಿಲ್ಲದ ಪೀರಿಯಡ್ಸ್ ಗೆ ಕಾರಣವೇ ಇದು!

ಅದರಲ್ಲೂ ವರ್ಷಗಳುರುಳಿದಂತೆಲ್ಲ ಆಕೆ ಇಷ್ಟು ಕೆಲಸ ಮಾಡಬೇಕಾದುದೇ ಸಹಜ  ಎಂದು ಇತರರೂ ಭಾವಿಸುತ್ತಾರೆ, ಆಕೆಯೂ ಆ ಒದ್ದಾಟದ ಬದುಕಿಗೆ ಒಗ್ಗಿ ಹೋಗುತ್ತಾಳೆ. ಬೆಳಗ್ಗೆ ಬೇಗನೆದ್ದು ರಾತ್ರಿ ಮಲಗುವವರೆಗೂ ಮನೆಯವರೆಲ್ಲ ಸಂತೋಷಕ್ಕಾಗಿ ದುಡಿದು, ಆ ಬಳಿಕವೂ ಮಕ್ಕಳು ಎದ್ದರೆ ಎದ್ದು, ಅವರಿಗೆ ಕೆಟ್ಟ ಕನಸು ಬಿದ್ದರೆ ಸಮಾಧಾನ ಮಾಡಿ, ಮತ್ತೆ ಬೆಳಗ್ಗೆ 5-6ಕ್ಕೆಲ್ಲ ಎದ್ದು ತಿಂಡಿ, ಅಡುಗೆ ತಯಾರಿಸಿ, ಮಕ್ಕಳನ್ನು ಶಾಲೆಗೆ ಸಿದ್ಧಗೊಳಿಸಿ, ಗಂಡನನ್ನು ಕಚೇರಿಗೆ ಬಾಕ್ಸ್ ಕೊಟ್ಟು ಕಳಿಸಿ, ತಾನೂ ಆಫೀಸಿಗೆ ಹೋಗಿ ಅಲ್ಲಿನ ಕೆಲಸ ಮಾಡಿ, ಮಾಡುತ್ತಲೇ ಮನೆಗೆ ಹೋದ ಮೇಲೆ ಏನೆಲ್ಲ ಕೆಲಸವಾಗಬೇಕೆಂದು ಮನಸಿನಲ್ಲೇ ಪಟ್ಟಿ ಮಾಡಿಕೊಂಡು, ಮನೆಗೆ ಬಂದರೆ ಕೂರಿಸಿ ಒಂದು ಲೋಟ ಕಾಫಿ ಕೊಡುವವರೂ ಆಕೆಗಿಲ್ಲ.

ಬದಲಿಗೆ ಮಕ್ಕಳ, ಪತಿಯ ಹೊಟ್ಟೆಗೆ ಆಕೆಯೇ ಏನಾದರೂ ಮಾಡಿ, ಹೋಂವರ್ಕ್ ಮಾಡಿಸಿ, ನಾಳಿಗೆ ಸಾಧ್ಯವಾದಷ್ಟು ತಯಾರಿ ಮಾಡಿಕೊಂಡು ಮಲಗಬೇಕು. ಅಷ್ಟೆಲ್ಲ ಮಾಡಿದ ಬಳಿಕವೂ ಮಕ್ಕಳಿಗೆ ಸಮಯ ಕೊಡುವುದಿಲ್ಲ, ಪತಿಯೊಂದಿಗೆ ನಗುತಾ ಮಾತನಾಡುವುದಿಲ್ಲ, ಮಕ್ಕಳನ್ನು ಡ್ಯಾನ್ಸ್ ಕ್ಲಾಸಿಗೆ ಕರೆದುಕೊಂಡು ಹೋಗಲಾಗುತ್ತಿಲ್ಲ ಮುಂತಾದ ದೂರುಗಳು, ಈ ಸಂಬಂಧ ಲೇಖನಗಳು, ಸಾಮಾಜಿಕ ಒತ್ತಡ ಎಲ್ಲವೂ ಆಕೆಯ ತಲೆಯ ಮೇಲೆ ಮೂಟೆಯಂತೆ ಸದಾ ಭಾರವಾಗಿರುತ್ತದೆ. ಅಷ್ಟಾದರೂ ತಾಳ್ಮೆಯಿಂದ ನಗುನಗುತ್ತಾ ವರ್ತಿಸುವಂತೆ ಹೇರಿಕೆ ಬೇರೆ. ಇದೇನು ಒಂದೆರಡು ದಿನದ ಕತೆಯಲ್ಲವಲ್ಲ, ಜೀವನ ಪೂರ್ತಿ ಹೀಗೆಯೇ. 

ಆ ಟೈಮಲ್ಲಿ ಅಂಡರ್‌ವೈರ್ ಬ್ರಾಗಳಿಗೆ ಹೇಳಿ ಬೈ ಬೈ!

ಪುರುಷರಿಂದ ಇಷ್ಟೊಂದು ಜವಾಬ್ದಾರಿ ನಿಭಾಯಿಸಲು ಸಾಧ್ಯವೇ? ಮುಂಚೆಯೇ ಪುರುಷರು ತಾಳ್ಮೆ, ನಗು, ಲವಲವಿಕೆಗಳಿಗೆ ವಿರುದ್ಧ ಪದದಂತೆ (ಅಥವಾ ಸಮಾಜ ಪುರುಷನ ಅಸ್ತಿತ್ವ ಪರಿಗಣಿಸಿರುವುದೇ ಹಾಗೆ). ಇನ್ನು ಇಷ್ಟೆಲ್ಲ ಕರ್ತವ್ಯ, ಜವಾಬ್ದಾರಿಯನ್ನು ಹೇರಿದರಂತೂ ಅದೆಷ್ಟು ಸಿಡುಕು ಮೂತಿ ಸಿಂಗಾರಪ್ಪಗಳಾಗುತ್ತಾರೋ!

ಇದಕ್ಕೇನು ಪರಿಹಾರ?

ಆಕೆಗೂ ಸ್ವಂತಕ್ಕೆಂದು ಸ್ವಲ್ಪ ಸಮಯ ಬೇಕಲ್ಲವೇ? ಹಿಂದೆಲ್ಲ ಉದ್ಯೋಗವೆಂದರೆ ದೈಹಿಕ ಶ್ರಮ ಬೇಡುವುದೇ ಆಗಿರುತ್ತಿತ್ತು. ಇದನ್ನು ಮಹಿಳೆಯರು ಮಾಡುವುದು ಕಷ್ಟಸಾಧ್ಯವಾಗಿರುತ್ತಿತ್ತು. ಹಾಗಾಗಿ ಮಹಿಳೆಯರು ಮನೆ ಮಕ್ಕಳನ್ನು ನೋಡಿಕೊಂಡು ಇರುತ್ತಿದ್ದರು. ಆದರೆ, ಈಗಿನ ಉದ್ಯೋಗಗಳಿಗೆ ದೈಹಿಕ ಬಲಕ್ಕಿಂತ ಮೆದುಳಿನ ತೀಕ್ಷ್ಣತೆ ಅಗತ್ಯ. ಹಾಗಾಗಿ, ಇಂದು ಮಹಿಳೆಯರು ಕೂಡಾ ಪುರುಷರ ಸಮಕ್ಕೆ ಹೊರಗೆ ದುಡಿಯುತ್ತಾರೆ. ಅಂದ ಮೇಲೆ ದೈಹಿಕ ಶ್ರಮ ಬೇಡುವ ಮನೆಗೆಲಸದಲ್ಲಿ ಪುರುಷರೂ ಕೈ ಹಾಕಬೇಕಲ್ಲವೇ? 

ಪತ್ನಿಯ ಕಷ್ಟವನ್ನು ಪತಿ ಅರ್ಥ ಮಾಡಿಕೊಂಡು ಮಾತನಾಡಿದರೇ ಆಕೆಗೆ ಅರ್ಧಕ್ಕರ್ಧ ಹೊರೆ ಇಳಿದಂತಾಗುತ್ತದೆ. ಇನ್ನಾತ ಅಡುಗೆಯಲ್ಲಿ, ಮಕ್ಕಳಿಗೆ ಹೋಂವರ್ಕ್ ಮಾಡಿಸುವುದರಲ್ಲಿ, ಮನೆಗೆಲಸದಲ್ಲಿ ಕೈ ಜೋಡಿಸಿದನೆಂದರೆ ಆಕೆ ಖುಷಿಯಿಂದಲೇ ಎಲ್ಲವನ್ನೂ ನಿಭಾಯಿಸುತ್ತಾಳೆ. ಇದರಿಂದ ಪತಿ ಪತ್ನಿಯ ಸಂಬಂಧವೂ ಹೆಚ್ಚು ಗಟ್ಟಿಯಾಗುತ್ತದೆ, ಜೊತೆಗೆ, ಮಕ್ಕಳಿಗೂ ತಂದೆತಾಯಿಯಿಬ್ಬರ ಸಮಯವೂ ಸಿಕ್ಕಂತಾಗಿ ಆರೋಗ್ಯಕರ ವಾತಾವರಣದಲ್ಲಿ ಅವು ಬೆಳೆಯುತ್ತವೆ. ಇವೆಲ್ಲದರೊಂದಿಗೆ ಮಕ್ಕಳನ್ನು ಕೂಡಾ ಸಣ್ಣಪುಟ್ಟ ಕೆಲಸಗಳಲ್ಲಿ ಸಹಾಯ ಮಾಡುವಂತೆ ಬೆಳೆಸಬೇಕು. ಕೆಲಸವನ್ನೇ ಆಟವಾಗಿಸಿದರೆ ಅವರದನ್ನು ಎಂಜಾಯ್ ಮಾಡಿಕೊಂಡು ಮಾಡಬಲ್ಲರು. ಒಂದು ಮನೆ ಎಂದರೆ ಅದರ ನಿಭಾವಣೆ ಮನೆಯ ಎಲ್ಲರ ಜವಾಬ್ದಾರಿ. ಒಬ್ಬಳೇ ನಿಭಾಯಿಸಬೇಕೆಂದರೆ ಕಷ್ಟವಾಗುತ್ತದೆ. ಎಲ್ಲರೂ ಹಂಚಿಕೊಂಡಾಗ ಶ್ರಮ ಸುಲಭವಾಗುತ್ತದೆ.