ಪ್ರೀತ್ಸೆ, ಪ್ರೀತ್ಸೆ ಕಣ್ಣುಮುಚ್ಚಿ ನನ್ನ ಪ್ರೀತ್ಸೆ ಎಂದು ಹುಡುಗರು ಮಾತ್ರ ಹೇಳಬೇಕೆ? ಯಾಕೆ ಹುಡುಗಿಯರು ಹೇಳ್ಬಾರದಾ? ರಿಯಲ್ ಲೈಫ್ ಬಿಡಿ, ರೀಲ್ ಲೈಫ್‍ನಲ್ಲೂ ಪ್ರಪೋಸ್ ಮಾಡೋದರಲ್ಲಿ ಹುಡುಗರೇ ಮುಂದು.ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಕಾಣಿಸಿಕೊಳ್ಳುತ್ತಿದ್ದು, ಕೆಲವು ಸಿನಿಮಾಗಳಲ್ಲಿ ಲೇಡೀಸ್‍ಗೆ ಫಸ್ಟ್ ಚಾನ್ಸ್ ಕೊಡಲಾಗುತ್ತಿದೆ.ಆದರೆ, ಆ ರೀತಿ ಪ್ರಪೋಸ್ ಮಾಡುವ ಹುಡುಗಿಯರು ಸಿಕ್ಕಾಪಟ್ಟೆ ಬೋಲ್ಡ್, ಗಂಡುಬೀರಿ ಎಂಬಂತೆ ಚಿತ್ರಿಸಲಾಗಿರುತ್ತದೆ. ನೀವೇ ಬೇಕಿದ್ದರೆ ವ್ಯಾಲೆಂಟೆನ್ಸ್ ಡೇ ಬಗ್ಗೆ ಅಥವಾ ಪ್ರಪೋಸ್ ಮಾಡುವ ಕುರಿತು ನಿಮ್ಮ ಮನಸ್ಸಿನಲ್ಲೇ ಒಂದು ಚಿತ್ರಣವನ್ನು ಕಲ್ಪಿಸಿಕೊಳ್ಳಿ. ನೀವು ಆದೆಷ್ಟೇ ಫಾಸ್ಟ್ ಫಾರ್ವರ್ಡ್ ಆಗಿದ್ದರೂ ಆ ನಿಮ್ಮ ಕಲ್ಪನೆಯಲ್ಲಿ ಕೈಯಲ್ಲಿ ರೆಡ್ ರೋಸ್ ಹಿಡಿದು ಹುಡುಗಿಯ ಮುಂದೆ ಮಂಡಿಯೂರಿ ಕುಳಿತ ಹುಡುಗನ ಚಿತ್ರಣವೇ ಮೂಡುತ್ತದೆ. ಇದಕ್ಕೆ ಕಾರಣ ನಮ್ಮ ಸಾಮಾಜಿಕ ವ್ಯವಸ್ಥೆ. ಎಲ್ಲದರಲ್ಲೂ ಲೇಡಿಸ್ ಫಸ್ಟ್ ಎನ್ನುವ ನಾವು, ಮದುವೆ ಹಾಗೂ ಪ್ರೀತಿ ವಿಚಾರದಲ್ಲಿ ಮಾತ್ರ ಇಂದಿಗೂ ಗಂಡಿಗೇ ಮೊದಲ ಚಾನ್ಸ್ ಇರಲಿ ಎನ್ನುತ್ತೇವೆ.

ಪ್ರೀತಿ ಅದೆಷ್ಟೇ ಮಧುರವಾಗಿದ್ದರೂ ಅಭಿವ್ಯಕ್ತಿಗೊಳಿಸದಿದ್ರೆ ಕಹಿ ಅನುಭವ ನೀಡುವುದು ಪಕ್ಕಾ. ಮನಸ್ಸಿನ ಮಾತನ್ನು ಯಾರು ಹೇಳಿದ್ರೆ ಏನು? ಇಬ್ಬರಲ್ಲೂ ಆ ಭಾವನೆಯಿದ್ರೆ ಸಾಕು ಅಲ್ಲವೆ? ಆದ್ರೂ ಮನಸ್ಸಿನ ಮಾತನ್ನು ಹೇಳುವುದರಲ್ಲಿ ಹುಡುಗೀರು ಸ್ವಲ್ಪ ವೀಕ್. ಅದ್ಯಾಕೆ ಹಾಗೆ?

ಕೈತುತ್ತು ತಿನಿಸುವವನಿಗಿಂತ ಕೈ ತುಂಬಾ ಎಣಿಸುವವನೇ ಪ್ರಿಯ, ಏನಿವಾಗ?

•ಆತನೇ ಕೇಳಲಿ ಎಂಬ ಭಾವನೆ: ಆತನ ಬಗ್ಗೆ ಆಕೆ ತನ್ನ ಎದೆಗೂಡಲ್ಲಿ ಅದೆಷ್ಟೇ ದೊಡ್ಡ ಪ್ರೀತಿಯ ಅರಮನೆ ಕಟ್ಟಿಕೊಂಡಿದ್ದರೂ ಆತನೇ ಮೊದಲು ಬಾಗಿಲು ಬಡಿದು ಒಳಬರಲಿ ಎಂದು ಬಯಸುತ್ತಾಳೆ. ಹುಡುಗಿಯರಿಗೆ ಪ್ರಶ್ನೆ ಮಾಡುವುದಕ್ಕಿಂತ ಪ್ರಶ್ನೆಗೆ ಉತ್ತರಿಸುವುದೆಂದ್ರೆ ಇಷ್ಟ.ಮೊದಲು ಹುಡುಗನ ಕಡೆಯಿಂದಲೇ ಪ್ರಪೋಸಲ್ ಬರಲಿ,ಅದಕ್ಕೆ ಉತ್ತರ ನಾನು ನೀಡುತ್ತೇನೆ ಎಂಬ ಭಾವನೆ ಹುಡುಗಿಯರಲ್ಲಿರುತ್ತದೆ.ಇದೇ ಕಾರಣಕ್ಕೆ ಅವರಾಗಿಯೇ ಪ್ರೀತಿ ಹೇಳಲು ಮುಂದೆ ಹೋಗುವುದಿಲ್ಲ. ಸಮೀಕ್ಷೆಯೊಂದರ ಪ್ರಕಾರ ಶೇ.90ರಷ್ಟು ಹುಡುಗಿಯರು ಹುಡುಗರೇ ಮೊದಲು ಪ್ರಪೋಸ್ ಮಾಡಲಿ ಎಂದು ಬಯಸುತ್ತಾರೆ.

•ಪ್ರೀತಿ ನಿರಾಕರಣೆ ಭಯ: ಪ್ರೇಮ ವೈಫಲ್ಯ ಹುಡುಗರಿಗೆ ಮಾತ್ರವಲ್ಲ,ಹುಡುಗಿಯರಿಗೂ ಆಗುತ್ತದೆ. ಸಿನಿಮಾಗಳಲ್ಲಿ ತೋರಿಸುವಂತೆ ಪ್ರೀತಿ ಕೈಕೊಡ್ತು ಎಂಬ ಕಾರಣಕ್ಕೆ ದಾಡಿ ಬಿಟ್ಟು ದೇವದಾಸ ಆಗುವ ಹುಡುಗರು ಅನುಕಂಪ ಗಿಟ್ಟಿಸಿಕೊಳ್ಳುತ್ತಾರೆ.ಆದರೆ, ಪ್ರೀತಿಗೆ ಎದೆಯಲ್ಲೇ ಗೋರಿ ಕಟ್ಟಿಕೊಂಡು ಬದುಕುವ ಹೆಣ್ಣಿನ ಸಂಕಟ ಹೊರಜಗತ್ತಿಗೆ ಗೋಚರಿಸುವುದಿಲ್ಲ. ಗಂಡಿಗಿಂತಲೂ ಹೆಣ್ಣು ಭಾವಜೀವಿ.ಆಕೆ ನೋವು, ಹತಾಸೆ ದೇವದಾಸ್‍ಗಿಂತಲೂ ಹೆಚ್ಚಿರುತ್ತದೆ. ನಾನು ಪ್ರಪೋಸ್ ಮಾಡಿದ್ರೆ ಆತ ನಿರಾಕರಿಸಬಹುದು ಎಂಬ ಭಯ ಹೆಣ್ಣಿಗೆ ಗಂಡಿಗಿಂತಲೂ ಒಂಚೂರು ಹೆಚ್ಚಿರುತ್ತದೆ.ಇದೇ ಕಾರಣಕ್ಕೆ ಆಕೆ ಪ್ರೀತಿ ಹೇಳಿಕೊಳ್ಳಲು ಹಿಂದೇಟು ಹಾಕುತ್ತಾಳೆ. 

ಗೆಳತಿಯರು ಬೆನ್ನಿಗಿದ್ರೆ ಉದ್ಯೋಗಸ್ಥೆ ಮಹಿಳೆಗೆ ಆನೆಬಲ

•ತಪ್ಪು ತಿಳಿಯಬಹುದೆಂಬ ಭಯ: ನಮ್ಮ ಸಮಾಜದಲ್ಲಿ ಪ್ರೀತಿ,ಮದುವೆ ವಿಚಾರದಲ್ಲಿ ಹುಡುಗರಿಗೇ ಮೊದಲ ಆದ್ಯತೆ.ಇದೇ ಕಾರಣಕ್ಕೆ ಹುಡುಗನೊಬ್ಬನ ಮುಂದೆ ನೇರವಾಗಿ ಪ್ರೀತಿ ಹೇಳಿಕೊಂಡರೆ ಆತ ತನ್ನನ್ನು ತಪ್ಪು ತಿಳಿಯಬಹುದು ಎಂಬ ಅಳುಕು ಹೆಣ್ಣಿಗಿರುತ್ತದೆ. ಆತ ತನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂಬ ಭಯವೇ ಆಕೆಯನ್ನು ಪ್ರೀತಿ ಹೇಳಿಕೊಳ್ಳದಂತೆ ಹಿಮ್ಮೆಟ್ಟಿಸುತ್ತದೆ.

•ಕಟ್ಟಿ ಹಾಕುವ ಸಾಮಾಜಿಕ ಕಟ್ಟುಪಾಡು: ಹೆಣ್ಣು ಸ್ವಲ್ಪ ಬೋಲ್ಡ್ ಆಗಿದ್ರೆ, ತನ್ನ ಪ್ರೀತಿಯನ್ನು ಧೈರ್ಯವಾಗಿ ಹುಡುಗನ ಮುಂದೆ ಹೇಳಿಕೊಂಡರೆ ಆಕೆಯನ್ನು ವಿಚಿತ್ರವಾಗಿ ನೋಡುವ ಸ್ಥಿತಿ ಈಗಲೂ ಇದೆ. ಸ್ನೇಹಿತರ ವಲಯದಲ್ಲೇ ಆಕೆಯ ಬಗ್ಗೆ ಇಲ್ಲಸಲ್ಲದ ಮಾತುಗಳು ಬಂದು ಹೋಗಬಹುದು. ಯಾರಾದರೂ ತಪ್ಪು ತಿಳಿಯಬಹುದು, ತನ್ನ ಕ್ಯಾರೆಕ್ಟರ್ ಅನ್ನು ಅನುಮಾನಿಸಬಹುದು ಎಂಬ ಕಾರಣಕ್ಕೆ ಹುಡುಗಿಯರು ಪ್ರಪೋಸ್ ಮಾಡುವ ಮುನ್ನ ಯೋಚಿಸುತ್ತಾರೆ.

•ಸ್ಪೆಷಲ್ ಫಿಲಿಂಗ್ ಮಿಸ್ ಆಗುವ ಭಯ: ಹುಡುಗಿಗೆ ತಾನೇ ಪ್ರಪೋಸ್ ಮಾಡುವುದಕ್ಕಿಂತ ನನ್ನ ಪ್ರೀತಿಯ ಹುಡುಗನೇ ಮನಸ್ಸಿನ ಮಾತು ಹೇಳಲಿ ಎಂಬ ಬಯಕೆ ಹೆಚ್ಚು. ಪ್ರೀತಿಯ ಹುಡುಗ ಪ್ರಪೋಸ್ ಮಾಡಿದಾಗ ಆಕೆಗದು ಸ್ಪೆಷಲ್ ಫಿಲಿಂಗ್ ಕೊಡುತ್ತೆ. ಆದರೆ,ತಾನೇ ಪ್ರಪೋಸ್ ಮಾಡಿದ್ರೆ ಆ ಸ್ಪೆಷಲ್ ಫಿಲಿಂಗ್, ಥ್ರಿಲಿಂಗ್ ಮಿಸ್ ಆಗುತ್ತೆ ಎಂಬ ಭಾವನೆಯಿದೆ ಆಕೆ ಆತನ ಪ್ರೇಮ ನಿವೇದನೆಗಾಗಿ ಕಾಯುತ್ತಾಳೆ. 

ಅವಳು ನಂಗೆ ಬಿದ್ಲಾ? ಗೊತ್ತಾಗೋದು ಹೇಗೆ?

ಕಾರಣ ಸಾವಿರ ಇರಲಿ, ಪ್ರೀತಿ ಮಾತನ್ನು ಮನಸ್ಸಿನಲ್ಲೇ ಬಚ್ಚಿಟ್ಟುಕೊಂಡು ಹುಡುಗನೇ ಬಂದು ಹೇಳಲಿ ಎಂದು ಕಾಯುತ್ತ ಕೂರಬೇಡಿ. ಯಾರು ಏನು ಬೇಕಾದ್ರೂ ಅಂದ್ಕೊಳ್ಳಲಿ,ಅದಕ್ಕೆ ನೀವು ಹೊಣೆಯಲ್ಲ. ನಿಮ್ಮ ಭಾವನೆಗಳನ್ನು ಈ ವ್ಯಾಲೆಂಟೆನ್ಸ್ ಡೇಯಂದು ನಿಮ್ಮ ಹುಡುಗನ ಮುಂದೆ ಧೈರ್ಯದಿಂದ ಹೇಳಿ, ಮನಸ್ಸಿನ ಭಾರವನ್ನು ತಗ್ಗಿಸಿಕೊಳ್ಳಿ. ಇಷ್ಟೆಲ್ಲ ಓದಿದ ಮೇಲೆ ವ್ಯಾಲೆಂಟೆನ್ಸ್ ಡೇಯಂದು ಮನಸ್ಸಿನ ಮಾತು ಹೇಳೇ ಬಿಡ್ತೀನಿ ಎಂದು ಧೈರ್ಯ ಮಾಡಿರುವ ಎಲ್ಲ ಹುಡ್ಗಿರ್ಗೂ ಅಲ್ ದಿ ಬೆಸ್ಟ್.