ಈ ದೀಪಾವಳಿಗೆ ಚಿನ್ನವಲ್ಲ, ಕಬ್ಬಿಣ ಕೊಳ್ಳಿ ಎಂದ ವಿದ್ಯಾ ಬಾಲನ್, ಕಾರಣ ಏನ್ ಗೊತ್ತಾ?
ಈಗ ಚಿನ್ನಕ್ಕಿಂತ ಕಬ್ಬಿಣ ದುಬಾರಿ, ಲಾಭಕಾರಿ ಕೂಡಾ ಎಂಬ ಅಭಿಯಾನವೊಂದು ನಡೆಯುತ್ತಿದೆ. ಹಾಗಾಗಿ, ಇನ್ನು ಚಿನ್ನಕ್ಕಿಂತ ಹೆಚ್ಚಾಗಿ ಕಬ್ಬಿಣದ ಮೇಲೆ ಹೂಡಿಕೆ ಮಾಡೋಣ ಎಂದು ವಿದ್ಯಾ ಬಾಲನ್, ಮಂದಿರಾ ಬೇಡಿ ಸೇರಿದಂತೆ ಹಲವು ಬಾಲಿವುಡ್ ನಟಿಯರು ಕರೆ ನೀಡುತ್ತಿದ್ದಾರೆ. ಅವರೇಕೆ ಹಾಗೆನ್ನುತ್ತಿದ್ದಾರೆ ಗೊತ್ತೇ?
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ #ದೀಪಾವಳಿ2019 ಟ್ರೆಂಡ್ ಆಗ ಶುರುಹತ್ತಿದ್ದೇ ಹತ್ತಿದ್ದು, ಈ ಸಮಯದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಹಾಕಿದ ಒಂದು ಪೋಸ್ಟ್‌ನಿಂದಾಗಿ ಟ್ರೆಂಡ್ ಸಡನ್ ಆಗಿ ಬದಲಾಗಿ ಹೋಯಿತು. #ಪ್ರಾಜೆಕ್ಟ್ ಸ್ತ್ರೀ ಧನ್ ಎಂಬ ಹ್ಯಾಶ್‌ಟ್ಯಾಗ್ ರಾತ್ರೋರಾತ್ರಿ ಪುನರಾವರ್ತನೆಯಾಗಿ ಟ್ರೆಂಡ್ ಆಗಿ ಹೋಯಿತು. ಹಾಗಿದ್ದರೆ, ವಿದ್ಯಾ ಹಾಕಿದ ಪೋಸ್ಟ್ ಆದರೂ ಏನು?
ಖರ್ಜೂರದ ತಟ್ಟೆಯನ್ನೆದುರಿಟ್ಟುಕೊಂಡ ಫೋಟೋ ಹಾಕಿದ್ದ ವಿದ್ಯಾ, "ಭಾರತದಲ್ಲಿ ಪ್ರತಿ ಇಬ್ಬರಲ್ಲಿ ಒಬ್ಬ ಮಹಿಳೆ ಅನೀಮಿಯಾದಿಂದ ಬಳಲುತ್ತಿದ್ದಾಳೆ. ಹಲವು ವರ್ಷಗಳ ಕಾಲ ನಾನು ಕೂಡಾ ಅನೀಮಿಯಾದಿಂದ ಬಳಲುತ್ತಿದ್ದೆ. ನನ್ನ ದೇಹದೊಳಗೆ ಹಿಮೋಗ್ಲೋಬಿನ್ ಜಾಸ್ತಿಯಾಗುತ್ತಲೇ ನನಗೆ ನಾನು ಅದೆಷ್ಟು ಸ್ಟ್ರಾಂಗ್ ಹಾಗೂ ಆರೋಗ್ಯವಂತಳೆಂದು ಅನಿಸುತ್ತೇನೆಂಬುದನ್ನು ವ್ಯಕ್ತಪಡಿಸಲು ಪದಗಳಿಲ್ಲ.
ದೀಪಾವಳಿಗೆ ಚಿನ್ನ ಖರೀದಿ: ಟ್ಯಾಕ್ಸ್ ರೂಲ್ಸ್ ಗೊತ್ತಿರದಿದ್ದರೆ ಮನೆಗೆ ಬರಲು ಐಟಿ ರೆಡಿ!
ಚಿನ್ನದಂಥ ದೇಹಎನಿಸುತ್ತದೆ. ಐರನ್ ಹೆಚ್ಚಾಗಿರುವ ನನ್ನ ಫೇವರೇಟ್ ಆಹಾರವೆಂದರೆ ಡೇಟ್ಸ್. ನಿಮ್ಮದ್ಯಾವುದು? ಈ ದೀಪಾವಳಿಯಲ್ಲ...ನಾವು ಚಿನ್ನದ ಮೇಲೆ ಹೂಡಿಕೆ ಮಾಡುವುದು ಬೇಡ, ಕಬ್ಬಿಣದ ಮೇಲೆ ಹೂಡಿಕೆ ಮಾಡೋಣ. ಆರೋಗ್ಯಯುತವಾದ ಕಬ್ಬಿಣಾಂಶ ಹೆಚ್ಚಿರುವ ಆಹಾರ ಸೇವಿಸಿ, ಪರೀಕ್ಷೆ ಮಾಡಿಸಿಕೊಳ್ಳಿ. ಎಚ್ಚರಿಕೆಯಿಂದಿರಿ, ಆರೋಗ್ಯಯುತವಾಗಿರಿ" ಎಂಬ ಸಂದೇಶ ಸಾರಿದ್ದರು.
ಇಷ್ಟಕ್ಕೂ ಈ #ಪ್ರಾಜೆಕ್ಟ್ ಸ್ತ್ರೀ ಧನ್ ಹ್ಯಾಶ್‌ಟ್ಯಾಗ್‌ಗೂ ಇದಕ್ಕೂ ಏನು ಸಂಬಂಧ? ಈ ಬಗ್ಗೆ ವಿವರ ಇಲ್ಲಿದೆ ನೋಡಿ.
#ಪ್ರಾಜೆಕ್ಟ್ ಸ್ತ್ರೀ ಧನ್ ಎಂದರೇನು?
ಇದೊಂದು ಜಾಗೃತಿ ಪ್ರಚಾರವಾಗಿದ್ದು, ಭಾರತೀಯ ಮಹಿಳೆಯರಿಗೆ ಕಬ್ಬಿಣ ಹೆಚ್ಚಿರುವ ಆಹಾರದ ಮೇಲೆ ಹೂಡಿಕೆ ಮಾಡಿ ಆರೋಗ್ಯದಿಂದಿರುವಂತೆ ಕರೆ ನೀಡುವ ಉದ್ದೇಶ ಹೊಂದಿದೆ. ಆ ಮೂಲಕ ಮಹಿಳೆಯರನ್ನು ಅನೀಮಿಯಾದಿಂದ ಮೇಲೆತ್ತುವ ಇರಾದೆ ಇದೆ.
ದೀಪಾವಳಿಗೆ ಎಣ್ಣೆ ಸ್ನಾನ ಮಾಡಿದ್ರಾ? ಅಷ್ಟಕ್ಕೂ ಇದರ ಮಹತ್ವವೇನು?
ಇದೇಕೆ ಭಾರತೀಯ ಮಹಿಳೆಯರಿಗೆ ಮುಖ್ಯ?
ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆಯ ವರದಿಯಂತೆ, ಭಾರತದಲ್ಲಿ ಅನೀಮಿಯಾ ಎಂಬುದು ಬಹಳ ಸಾಮಾನ್ಯ ಸಮಸ್ಯೆಯಾಗಿ ಹರಡಿದೆ. ಶೇ.53ರಷ್ಟು ಗರ್ಭಿಣಿಯರಲ್ಲದ ಮಹಿಳೆಯರು ಹಾಗೂ ಶೇ.50ರಷ್ಟು ಗರ್ಭಿಣಿ ಮಹಿಳೆಯರು ಅನೀಮಿಯಾದಿಂದ ಬಳಲುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಈ ಸಂಖ್ಯೆ ಶೇ.55ರಿಂದ 53ಕ್ಕೆ ಇಳಿದಿದೆಯಾದರೂ ಇದೇನು ಗಣನೀಯ ಬದಲಾವಣೆಯಲ್ಲ. ಈ ನಿಟ್ಟಿನಲ್ಲಿ ಮಹಿಳೆಯರಲ್ಲಿ ಅನೀಮಿಯಾ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ.
ಅನೀಮಿಯಾ ಎಂದರೇನು?
ಇದೊಂದು ಮೆಡಿಕಲ್ ಕಂಡಿಶನ್ ಆಗಿದ್ದು, ವ್ಯಕ್ತಿಯ ರಕ್ತದಲ್ಲಿ ಹಿಮೋಗ್ಲೋಬಿನ್ ಸಂಖ್ಯೆ ಅಗತ್ಯಕ್ಕಿಂತ ಹೆಚ್ಚು ಇಳಿಕೆಯಾಗುತ್ತದೆ. ಇದರಿಂದ ರಕ್ತವು ಸಾಕಷ್ಟು ಆಮ್ಲಜನಕ ಕೊಂಡೊಯ್ಯದ ಸ್ಥಿತಿ ತಲುಪುತ್ತದೆ. ಇದರಿಂದ ಸುಸ್ತು, ಚರ್ಮದ ಬಣ್ಣ ಬಿಳಿಚಿಕೊಳ್ಳುವುದು, ಉಸಿರಾಟ ಸಮಸ್ಯೆ, ತಲೆ ಸುತ್ತುವುದು, ಹೃದಯ ಬಡಿತ ಜೋರಾಗುವುದು ಮುಂತಾದ ಲಕ್ಷಣಗಳು ಕಂಡುಬರಬಹುದು. ಇದರಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಜೊತೆಗೆ, ಕೆಲ ಪ್ರಕರಣಗಳಲ್ಲಿ ಸಾವು ಸಂಭವಿಸಿದ್ದು ಕೂಡಾ ಇದೆ.
ಹಸಿರು ದೀಪಾವಳಿ ಆಚರಿಸುವುದು ಹೇಗೆ?
#ಪ್ರಾಜೆಕ್ಟ್ ಸ್ತ್ರೀ ಧನ್ ಹಾಗೂ ಬಾಲಿವುಡ್
ಈ ಕ್ಯಾಂಪೇನ್‌ಗೆ ಬೆಂಬಲಿಸಿ ವಿದ್ಯಾ ಬಾಲನ್ ಪೋಸ್ಟ್ ಮಾಡಿದ್ದೇ ಮಾಡಿದ್ದು, ದಿಯಾ ಮಿರ್ಜಾ, ಸೋಹಾ ಅಲಿ ಖಾನ್, ಮಂದಿರಾ ಬೇಡಿ ಸೇರಿದಂತೆ ಹಲವು ಬಾಲಿವುಡ್ ನಟಿಯರು ಐರನ್ ರಿಚ್ ಆಹಾರ ಸೇವಿಸುತ್ತಿರುವ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಾಕಿ, ಜಾಗೃತಿ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಮಂದಿರಾ, ಸೇಬುವಿನೊಂದಿಗೆ ಫೋಟೋ ಹಾಕಿ, "ಕಬ್ಬಿಣದ ಮೇಲೆ ಹೂಡಿಕೆ ಮಾಡಲು ಇದು ಸುಸಮಯ. ಈ ದೀಪಾವಳಿಗೆ ಚಿನ್ನಕ್ಕಿಂತ ಬೆಲೆ ಬಾಳುವ ಐರನ್ ಮೇಲೆ ಹೆಚ್ಚು ಹೂಡಿಕೆ ಮಾಡೋಣ. ರಿಯಲ್ ಡೀಲ್ ಮೇಲೆ ಹೂಡಿಕೆ ಮಾಡಿ, ಎಲ್ಲ ಮಹಿಳೆಗೆ ಬೇಕಾದ ನಿಜವಾದ ಧನದ ಮೇಲೆ ಹೂಡಿಕೆ ಮಾಡಿ. #ಪ್ರಾಜೆಕ್ಟ್ ಸ್ತ್ರೀ ಧನ್ #ಇನ್ವೆಸ್ಟ್ ಇನ್ ಐರನ್" ಎಂದು ಬರೆದಿದ್ದಾರೆ.
ಬೆಳಕಿನ ಹಬ್ಬ ದೀಪಾವಳಿ: ಯಾವ ರಾಜ್ಯದಲ್ಲಿ ಯಾವ ತಿಂಡಿ ಸ್ಪೆಷಲ್?
ಆಸ್ತಿಗಿಂತ ಆರೋಗ್ಯ ಮುಖ್ಯ
ಆರೋಗ್ಯವೇ ಆಸ್ತಿ, ಆಸ್ತಿ ಗಳಿಕೆಗಿಂತ ಆರೋಗ್ಯ ಗಳಿಕೆಗೆ ಹೆಚ್ಚು ಮಹತ್ವ ಕೊಡಿ ಎಂಬುದನ್ನು ಈ ಜಾಗೃತಿ ಅಭಿಯಾನ ಹೇಳುತ್ತಿದೆ. ಆರೋಗ್ಯವೇ ಇಲ್ಲದೆ ಮೈ ಮೇಲೆ ಎಷ್ಟು ಚಿನ್ನ ಹೇರಿಕೊಂಡರೇನು ಅಲ್ಲವೇ? ಹಾಗಾಗಿ, ಮೊದಲು ಕಬ್ಬಿಣದ ಮೇಲೆಯೇ ಹೂಡಿಕೆ ಮಾಡೋಣ. ಮನೆಯ ಹೆಣ್ಣುಮಕ್ಕಳಿಗೆ ಹೆಚ್ಚು ಕಬ್ಬಿಣಾಂಶ ಹೊಂದಿದ ಆಹಾರ ನೀಡೋಣ. ಹೆಚ್ಚು ಹೆಚ್ಚು 'ಐರನ್ ಲೇಡಿ'ಗಳನ್ನು ತಯಾರು ಮಾಡೋಣ.