ದೀಪಾವಳಿಗೆ ದೇಶವೇ ಸಜ್ಜಾಗಿದೆ. ಮನೆಮನೆಗಳೂ ಸುಣ್ಣ ಬಣ್ಣ ಪಡ್ಕೊಂಡು ಅಲಂಕಾರಮಗ್ನವಾಗಿದ್ರೆ, ಹಾದಿಬೀದಿಗಳೆಲ್ಲ ಲೈಟಿನಿಂದ ಕಂಗೊಳಿಸಲು ಆರಂಭಿಸಿಯಾಗಿವೆ. ಹಬ್ಬ ತಂದ ಪಾಸಿಟಿವ್ ವೈಬ್ಸ್‌ಗೆ ಎಲ್ಲರೂ ಖುಷಿಖುಷಿಯಾಗಿ ಉತ್ಸಾಹದಲ್ಲಿ ಓಡಾಡಲಾರಂಭಿಸಿದ್ದಾರೆ. ಶಾಪಿಂಗ್ ಎಂಬುದು ಕೊನೆಕ್ಷಣದವರೆಗೂ ಮುಗಿಯುವ ಮಾತಲ್ಲ. ಇನ್ನು ಆಹಾರದ ವಿಷಯಕ್ಕೆ ಬಂದರೆ, ಈ ಬೆಳಕಿನ ಹಬ್ಬದಲ್ಲಿ ಜನ ಡಯಟ್ ಮರೆತು ಯೋಚನೆಯಿಲ್ಲದೆ ಮೂರ್ನಾಲ್ಕು ದಿನಗಳ ಕಾಲ ದಿನಕ್ಕೊಂದೆರಡರಂತೆ ವಿವಿಧ ತಿನಿಸುಗಳನ್ನು ಸವಿದು ಸಂಭ್ರಮಿಸುತ್ತಾರೆ. 

ಎಲ್ಲ ಹಬ್ಬಗಳೂ ಜನರನ್ನು ಒಂದುಗೂಡಿಸುವ ಒಳಗುಟ್ಟಿನವೇ. ಅದರಲ್ಲೂ ದೀಪಾವಳಿಯಲ್ಲಿ ಸಿಹಿತಿನಿಸುಗಳನ್ನು ಹಂಚಿ ಶುಭ ಕೋರುತ್ತಾ ಜನರು ಒಬ್ಬರಿಗೊಬ್ಬರು ಆಪ್ತವಾಗುತ್ತಾರೆ. ಸಿಹಿ ಎಂಬುದಕ್ಕೆ ಎಲ್ಲರನ್ನು ಒಗ್ಗೂಡಿಸುವ ಶಕ್ತಿಯಿದೆ. ಹಾಗಂಥ ದೀಪಾವಳಿಗೆ ದೇಶಾದ್ಯಂತ ಒಂದೇ ಸಿಹಿಯೇನಲ್ಲ. ಹಬ್ಬದ ಸಂದರ್ಭದಲ್ಲಿ ಆಯಾ ರಾಜ್ಯಗಳಿಗೆ ಅದರದೇ ಆದ ಸಾಂಪ್ರದಾಯಿಕ ಸಿಹಿಯಡುಗೆಯ ಹಿನ್ನೆಲೆ ಇದೆ. ಉತ್ತರ ಭಾರತೀಯರು ಜಾಮೂನ್, ಮೋತಿಚೂರ್ ಲಡ್ಡೂ, ಬರ್ಫಿಗಳನ್ನು ಮಾಡಿ ಹಂಚಿತಿಂದರೆ, ದಕ್ಷಿಣದಲ್ಲಿ ಪಾಯಸ, ಕಾಯಿಪಾಕ, ಅರಿಸೇಲು ಮುಂತಾದ ಸಿಹಿ ಪದಾರ್ಥಗಳು ಹೆಚ್ಚು. ಹಾಗಂಥ, ಇಲ್ಲಿನ ಸಿಹಿತಿಂಡಿ ಇಷ್ಟಕ್ಕೇ ಮುಗಿಯಲಿಲ್ಲ. ಹಾಗಾದರೆ, ದೀಪಾವಳಿಗೆ ಯಾವ ರಾಜ್ಯಗಳಲ್ಲಿ ಯಾವ ಸಿಹಿತಿಂಡಿ ಮಾಡುತ್ತಾರೆ ಎಂದು ನೋಡೋಣ. 

ಹಬ್ಬದ ದಿನ ತಿನ್ನೋ ಮುನ್ನ ಯೋಚಿಸಿ

ಅನಾರಸ, ಮಹಾರಾಷ್ಟ್ರ
ಅಕ್ಕಿ ಹಿಟ್ಟು ಹಾಗೂ ಬೆಲ್ಲ ಸೇರಿಸಿ ತಯಾರಿಸುವ ಅನಾರಸ ಮಹಾರಾಷ್ಟ್ರದ ದೀಪಾವಳಿಯಲ್ಲಿ ಅರಸನಾಗಿ ಮೆರೆದಾಡುತ್ತದೆ. ಎಣ್ಣೆಯಲ್ಲಿ ಚೆನ್ನಾಗಿ ಕರಿದು ಕೆಂಪಾಗಾಗುವ ಅನಾರಸ ಮೈತುಂಬಾ ಬಿಳಿಎಳ್ಳನ್ನು ಮೆತ್ತಿಕೊಂಡು ಆಕರ್ಷಕವಾಗಿರುತ್ತದೆ. 

ಬಬ್ರೂ, ಹಿಮಾಚಲ ಪ್ರದೇಶ
ಹಿಟ್ಟು ಸಕ್ಕರೆ ಹಾಗೂ ಯೀಸ್ಟ್ ಬಳಸಿ ತಯಾರಿಸುವ ಬಬ್ರೂ ಹಿಮಾತಲ ಪ್ರದೇಶದಲ್ಲಿ ದೀಪಾವಳಿ ವಿಶೇಷ. ನೋಡಲು ಗುಳ್‌ಗುಳೆಯಂತೆ ಕಂಡರೂ ರುಚಿಯಿಂದಾಗಿ ವಿಭಿನ್ನವಾಗಿ ನಿಲ್ಲುವ ಬಬ್ರೂವನ್ನು ರಬ್ಡಿ ಹಾಗೂ ಖೀರ್ ಜೊತೆ ಸೇರಿಸಿ ತಿನ್ನಲಾಗುತ್ತದೆ. 

ನಾರಿಕೋಲ್ ಲಾರು, ಅಸ್ಸಾಂ
ಕಾಯಿ ಲಾಡು ಎಂದೂ ಕರೆಯುವ ನಾರಿಕೋಲ್ ಲಾರು ಅಸ್ಸಾಂನ ಜನಪ್ರಿಯ ಸಿಹಿತಿನಿಸು. ಕಾಯಿ, ಹಸಿರು ಏಲಕ್ಕಿ ಪುಡಿ ತುಪ್ಪ ಹಾಗೂ ಸಕ್ಕರೆ ಸೇರಿಸಿ ಮಾಡುವ ಇದರ ರುಚಿ ನಾಲಿಗೆಯಲ್ಲಿ ನೀರೂರಿಸುತ್ತದೆ. 

ಚೋಡೋ ಶಾಕ್, ಪಶ್ಚಿಮ ಬಂಗಾಳ
ದೀಪಾವಳಿಗೆ ಪಶ್ಚಿಮ ಬಂಗಾಳದ ಪ್ರತಿ ಹಿಂದೂಗಳ ಮನೆಯಲ್ಲಿಯೂ ಚೋಡೋ ಶಾಕ್ ಎಂಬ ತಿನಿಸೊಂದನ್ನು ಮಾಡಲಾಗುತ್ತದೆ. 14 ರೀತಿಯ ಹಸಿರು ಸೊಪ್ಪು ತರಕಾರಿಗಳಿಂದ ತಯಾರಿಸುವ ಇದು ಕೆಟ್ಟದ್ದನ್ನು ದೂರವಿಡುತ್ತದೆ ಎಂಬ ನಂಬಿಕೆ ಬೆಂಗಾಳಿಗರದ್ದು.

ಗವ್ವಾಲು, ಆಂಧ್ರಪ್ರದೇಶ
ಮೈದಾ ಹಿಟ್ಟು, ತುಪ್ಪ, ಬೆಲ್ಲ ನೀರು ಸೇರಿಸಿ ಉಂಡೆಯಂಥದನ್ನು ತಯಾರಿಸಿ ಅದನ್ನು ಸಕ್ಕರೆ ಪಾಕದಲ್ಲಿ ಅದ್ದಿ ತೆಗೆಯಲಾಗುತ್ತದೆ. ಸಿಕ್ಕಾಪಟ್ಟೆ ಕ್ಯಾಲೋರಿಯ ತಿಂಡಿಯಾದರೂ ರುಚಿಯಿಂದಾಗಿ ನೀವು ಡಯಟ್ ಮರೆತು ತಿನ್ನುವಂತೆ ಮಾಡುತ್ತದೆ. 

ಮಾವಾ ಕಚೋರಿ, ರಾಜಸ್ಥಾನ
ಹೊರಗಿನಿಂದ ಕರುಮಾಕುರಂ, ಒಳಗೆ ಡ್ರೈಫ್ರೂಟ್ಸ್ ಹಾಗೂ ಕೋವಾದ ಮಜಾ- ಇದೇ ಜೋಧ್‌ಪುರ ವಿಶೇಷ ಸಿಹಿತಿನಿಸು ಮಾವಾ ಕಚೋರಿ. ಇದನ್ನು ಸಕ್ಕರೆ ಪಾಕದಲ್ಲಿ ಅದ್ದಿಡಲಾಗಿರುತ್ತದೆ. 

ಶುಫ್ತಾ, ಕಾಶ್ಮೀರ
ಜಮ್ಮು ಕಾಶ್ಮೀರದ ಸಾಂಪ್ರದಾಯಿಕ ತಿಂಡಿಯಾಗಿರುವ ಶುಫ್ತಾವನ್ನು ಡ್ರೈ ಫ್ರೂಟ್ಸ್ ಹಾಗೂ ಮಸಾಲೆ ಸೇರಿಸಿ ತಯಾರಿಸಿ ಬಳಿಕ ಸಕ್ಕರೆ ಪಾಕದಲ್ಲಿ ಅದ್ದಿ ತೆಗೆಯಲಾಗುತ್ತದೆ. ಇದಕ್ಕೆ ಇಂಥದೇ ಆಕಾರ ಎಂದೇನಿಲ್ಲ. ಡ್ರೈ ಫ್ರೂಟ್‌ಗಳನ್ನು ಮಿಕ್ಸ್ ಮಾಡಿ ನೀರಿನಲ್ಲಿ ನೆನೆಸಿಟ್ಟು, ನಂತರ ತುಪ್ಪ ಹಾಗೂ ಮಸಾಲೆ, ಸ್ವಲ್ಪ ಸಕ್ಕರೆ ಬೆರೆಸಲಾಗುತ್ತದೆ. ರುಚಿ ಹೆಚ್ಚಿಸಲು ಗುಲಾಬಿ ದಳಗಳು ಹಾಗೂ ಕೇಸರಿ ಸೇರಿಸಲಾಗುತ್ತದೆ. 

ಭಾರತೀಯ ಆಹಾರದ ಮರ್ಮವೇನು?

ಚಿರೋಟಿ, ಕರ್ನಾಟಕ
ಚಿರೋಟಿ ರವೆ, ಮೈದಾ ಸೇರಿಸಿ ವೃತ್ತಕಾರದ ಲೇಯರ್ಸ್ ತಯಾರಿಸಿ ಅದನ್ನು ತುಪ್ಪದಲ್ಲಿ ಹುರಿದು ಚಿರೋಟಿ ತಯಾರಿಸಲಾಗುತ್ತದೆ. ಹೊರಗಿನಿಂದ ಸಕ್ಕರೆಪುಡಿ ಹಾಗೂ ಸಣ್ಣದಾಗಿ ಹೆಚ್ಚಿಕೊಂಡ ಡ್ರೈ ಫ್ರೂಟ್ಸ್ ಉದುರಿಸಲಾಗುತ್ತದೆ. 

ಚೋರಾಫಲಿ, ಗುಜರಾತ್
ಗರಿಗರಿಯಾಗಿರುವ ಕರಿದ ತಿಂಡಿಯಾಗಿರುವ ಚೋರಾಫಲಿ ಸ್ಪೈಸಿಯಾಗಿರುತ್ತದೆ. ಕಡಲೆ ಹಿಟ್ಟು, ಉದ್ದಿನ ಹಿಟ್ಟು, ಆಮ್‌ಚೂರ್ ಪೌಡರ್, ಕೆಂಪು ಮೆಣಸಿನ ಹುಡಿ ಹಾಗೂ ಕಪ್ಪು ಉಪ್ಪು ಸೇರಿಸಿ ತಯಾರಿಸುವ ಚೊರಾಫಲಿಯನ್ನು ಆ ಬಳಿಕ ಕರಿಯಲಾಗುತ್ತದೆ. ಹುಳಿ ಹುಳಿ, ಉಪ್ಪಾಗಿರುವ ಈ ತಿಂಡಿ ಸಂಜೆಯ ಕಾಫಿಯೊಂದಿಗೆ ಚೆನ್ನಾಗಿರುತ್ತದೆ. 

ಖಾಜಾ, ಬಿಹಾರ
ಮೈದಾ ಹಿಟ್ಟಿನಲ್ಲಿ ತಯಾರಿಸುವ ಖಾಜಾ ಎಣ್ಣೆ ತಿಂಡಿ. ಬಳಿಕ ಇದನ್ನು ಸಕ್ಕರೆ ಪಾಕದಲ್ಲಿ ಅದ್ದಲಾಗಿರುತ್ತದೆ. ದೀಪಾವಳಿಯಲ್ಲಿ ಬಿಹಾರಿಗರು ಖಾಜಾ ತಯಾರಿಸಿ ಹಂಚುತ್ತಾರೆ. 

"