ಶುಂಠಿ ಬೇಸಿಗೆಯಲ್ಲೂ ಫ್ರೆಶ್ ಆಗಿರ್ಬೇಕು ಅಂದ್ರೆ ಏನು ಮಾಡಬೇಕು? ಇಲ್ಲಿವೆ ಟಿಪ್ಸ್!
ಅಡುಗೆ ಮನೆಯಲ್ಲಿ ತರಕಾರಿ, ಹಣ್ಣು, ಮಸಾಲೆ ಪದಾರ್ಥ ಹಾಳಾಗದಂತೆ ಇಡೋದು ಸುಲಭವಲ್ಲ. ಮಾರುಕಟ್ಟೆಯಿಂದ ತಂದ ನಾಲ್ಕೈ ದಿನಗಳಲ್ಲಿ ಎಲ್ಲ ಬಾಡಿ ಹಾಳಾಗಿರುತ್ತೆ. ಶುಂಠಿ ಸದಾ ಫ್ರೆಶ್ ಆಗಿರ್ಬೇಕು ಅಂದ್ರೆ ಹೀಗೆ ಮಾಡಿ.
ಬೇಸಿಗೆ ಬಿಸಿ ಎಲ್ಲರನ್ನು ಹೈರಾಣ ಮಾಡಿದೆ. ಹಿಂದೆ ಏಪ್ರಿಲ್ ಶುರುವಾಗ್ತಿದ್ದಂತೆ ಆಗೊಂದು ಈಗೊಂದು ಮಳೆ ಬರ್ತಾ ಇತ್ತು. ಇದ್ರಿಂದ ವಾತಾವರಣ ಕೂಲ್ ಆಗ್ತಿತ್ತು. ಜನರ ಜೊತೆ ಉಳಿದ ಪ್ರಾಣಿಗಳು, ಮನೆಯಲ್ಲಿರುವ ವಸ್ತುಗಳು ಕೂಡ ಹಾಳಾಗದೆ ಇರ್ತಿದ್ವು. ಆದ್ರೆ ಈ ವರ್ಷ ಬಿಸಿಲು ವಿಪರೀತ ಎನ್ನುವಂತಾಗಿದೆ. ಎಲ್ಲಿ ಹೋದ್ರೂ ಬಿಸಿಲು, ಸೆಕೆ ಎನ್ನುವ ಮಾತು ಬಿಟ್ರೆ ಮತ್ತೇನು ಕೇಳ್ತಿಲ್ಲ. ಇಂಥ ಸಮಯದಲ್ಲಿ ತರಕಾರಿ, ಹಣ್ಣುಗಳನ್ನು ನಾಲ್ಕೈದು ದಿನ ಇಟ್ಟುಕೊಳ್ಳೋದು ಕಷ್ಟ. ಫ್ರಿಜ್ ನಲ್ಲಿಯೇ ತರಕಾರಿ ಒಣಗಲು ಶುರುವಾಗಿದೆ. ಇನ್ನು ಹೊರಗೆ ಇಟ್ಟ ತರಕಾರಿ ಕಥೆ ಕೇಳೋದೇ ಬೇಡ. ನೀವು ಪ್ರತಿ ದಿನ ಎಲ್ಲ ತರಕಾರಿ ಖರೀದಿ ಮಾಡಲು ಸಾಧ್ಯವಿಲ್ಲ. ಅದ್ರಲ್ಲೂ ಶುಂಠಿಯಂತಹ ಮಸಾಲೆಗೆ ಅಗತ್ಯವಿರುವ ಪದಾರ್ಥವನ್ನು ಪ್ರತಿ ದಿನ ಖರೀದಿ ಮಾಡಲಾಗದು. ಒಂದು – ಎರಡು ವಾರಕ್ಕೆ ಅಗತ್ಯವಿರುಷ್ಟು ಶುಂಠಿಯನ್ನು ನಾವು ಖರೀದಿ ಮಾಡಿ ಫ್ರಿಜ್ ನಲ್ಲಿ ಇಡ್ತೇವೆ. ಆದ್ರೆ ಫ್ರಿಜ್ ನಲ್ಲಿಟ್ಟ ಶುಂಠಿ ಒಣಗುತ್ತೆ ಇಲ್ಲ ಮೊಳಕೆ ಬರಲು ಶುರುವಾಗುತ್ತದೆ. ಈ ಎರಡೂ ಶುಂಠಿ ರುಚಿಯನ್ನು ಹಾಳು ಮಾಡುತ್ತದೆ. ಫ್ರಿಜ್ ನಲ್ಲಿಟ್ಟ ಶುಂಠಿ ಫ್ರೆಶ್ ಆಗಿರಬೇಕು, ದೀರ್ಘಕಾಲ ಬಳಕೆಗೆ ಯೋಗ್ಯವಾಗಬೇಕು ಅಂದ್ರೆ ಏನು ಮಾಡ್ಬೇಕು ಗೊತ್ತಾ?.
ಶುಂಠಿ (Ginger) ಯನ್ನು ಹೀಗೆ ಫ್ರೆಶ್ ಆಗಿಡಿ :
ಟಿಶ್ಯೂ – ಪೇಪರ್ : ನೀವು ಶುಂಠಿಯನ್ನು ಫ್ರಿಜ್ (Fridge) ನಲ್ಲಿ ಇಡುವ ಮೊದಲು ಟಿಶ್ಯೂ ಅಥವಾ ಪೇಪರ್ ನಲ್ಲಿ ಅದನ್ನು ಸುತ್ತಿಡಬೇಕು. ಇದು ತೇವಾಂಶವನ್ನು ಹಿಡಿದಿಡುತ್ತದೆ. ಇದ್ರಿಂದ ಶುಂಠಿಯನ್ನು ನೀವು ಬಹುದಿನ ಬಳಕೆ ಮಾಡಬಹುದು.
ಏರ್ಪೋರ್ಟಲ್ಲಿ ಯಾವತ್ತಾದರೂ ಪಾನಿ ಪುರಿ ತಿಂದಿದ್ದೀರಾ? ಬೆಲೆ 30 ರೂ. ಅಲ್ಲ. 330 ರೂ.!
ವಿನೆಗರ್ (Vinegar) : ನೀವು ಶುಂಠಿಯನ್ನು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಿದ್ದು, ಬೇಗ ಹಾಳಾಗುತ್ತೆ ಎನ್ನುವ ಭಯ ಇದ್ದರೆ ನೀವು ವಿನೆಗರ್ ಪ್ರಯೋಗ ಮಾಡಬಹುದು. ಮೊದಲು ಶುಂಠಿಯನ್ನು ಕತ್ತರಿಸಿ. ಅದನ್ನು ಒಂದು ಗಾಳಿಯಾಡದ ಬಾಟಲ್ ಗೆ ಹಾಕಿ ವಿನೆಗರ್ ತುಂಬಿಸಿ ಫ್ರಿಜ್ ನಲ್ಲಿ ಇಡಿ. ಹೀಗೆ ಮಾಡಿದ್ರೆ ನೀವು ಅನೇಕ ದಿನಗಳ ಕಾಲ ಶುಂಠಿಯನ್ನು ಫ್ರೆಶ್ ಆಗಿ ಇಡಬಹುದು.
ಪೇಸ್ಟ್ ಮಾಡಿಟ್ಟು ನೋಡಿ : ನೀವು ಶುಂಠಿಯನ್ನು ಪೇಸ್ಟ್ ಮಾಡಿಯೂ ಫ್ರಿಜ್ ನಲ್ಲಿ ಇಡಬಹುದು. ಶುಂಠಿ ಒಣಗಿದ ಮೇಲೆ ಪೇಸ್ಟ್ ಮಾಡಿದ್ರೆ ಪ್ರಯೋಜನವಿಲ್ಲ. ನೀವು ಶುಂಠಿ ತಂದ ದಿನವೇ ಅದನ್ನು ಚೆನ್ನಾಗಿ ವಾಶ್ ಮಾಡಿ, ಅದರ ಸಿಪ್ಪೆ ತೆಗೆದು, ಅದನ್ನು ಸಣ್ಣದಾಗಿ ಕತ್ತರಿಸಿ, ನೀರು ಹಾಕದೆ ಮಿಕ್ಸಿ ಮಾಡಿ. ನಂತ್ರ ಅದಕ್ಕೆ ಸ್ವಲ್ಪ ಉಪ್ಪನ್ನು ಹಾಕಿ. ಈ ಪೇಸ್ಟನ್ನು ಗಾಳಿಯಾಡದ ಜಾರ್ ನಲ್ಲಿ ಹಾಕಿ ಫ್ರಿಜ್ ನಲ್ಲಿಡಿ. ನಿಮಗೆ ಅಗತ್ಯವಿದ್ದಾಗ ಅದನ್ನು ಬಳಸಿ ಮತ್ತೆ ಹಾಗೇ ಇಡಬಹುದು. ಪೇಸ್ಟನ್ನು ನೀವು ನಾಲ್ಕೈದು ತಿಂಗಳು ಆರಾಮವಾಗಿ ಬಳಸಬಹುದು.
ಪೌಡರ್ ಮಾಡಿಟ್ಟು ನೋಡಿ : ನೀವು ಶುಂಠಿಯನ್ನು ಪೌಡರ್ ರೀತಿಯಲ್ಲೂ ಬಳಸಬಹುದು. ಶುಂಠಿಯನ್ನು ಬಿಸಿಲಿನಲ್ಲಿ ಒಣಗಿಸಬೇಕು. ನಂತ್ರ ಅದನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿ ಫ್ರಿಜ್ ನಲ್ಲಿ ಇಡಬೇಕು. ದೀರ್ಘಕಾಲದವರೆಗೆ ಈ ಶುಂಠಿ ಪೌಡರ್ ಹಾಳಾಗುವುದಿಲ್ಲ.
ಚಮಚ ಬಿಡಿ, ಕೈಯಿಂದಲೇ ಆಹಾರ ತಿಂದ್ರೆ ಆರೋಗ್ಯಕ್ಕೆ ಲಾಭ ಎನ್ನುತ್ತೆ ವಿಜ್ಞಾನ, ಹೇಗೆ?
ಜಿಪ್ ಲಾಕ್ : ಶುಂಠಿಯನ್ನು ನೀವು ಜಿಪ್ ಲಾಕ್ ಕವರ್ ನಲ್ಲಿಯೂ ಇಡಬಹುದು. ಶುಂಠಿಯನ್ನು ಜಿಪ್ ಲಾಕ್ ಕವರ್ ಗೆ ಹಾಕಿ ಅದನ್ನು ಫ್ರಿಜ್ ನಲ್ಲಿಟ್ಟರೆ ಸುಮಾರು ಮೂರು ವಾರ ಅದನ್ನು ಆರಾಮವಾಗಿ ಬಳಸಬಹುದು.
ಐಸ್ ಕ್ಯೂಬ್ (Ice Cube) : ಶುಂಠಿಯನ್ನು ಪುಡಿ ಮಾಡಿ ಐಸ್ ಕೂಬ್ ನಲ್ಲಿ ಹಾಕಿ ಫ್ರೀಜ್ ಮಾಡಿ. ನೀವು ಶುಂಠಿಯನ್ನು ಹೀಗೆ ಇಟ್ಟಲ್ಲಿ ಐದರಿಂದ ಆರು ತಿಂಗಳು ಬಳಸಬಹುದು.