ಬೆಳಗ್ಗೆ ಪೀಕ್‌ ಟೈಮಲ್ಲಿ ಆ ಇಬ್ಬರು ಹುಡುಗರು ಬಸ್ ಏರ್ತಾರೆ, ಹೆಣ್ಣು ಮಕ್ಕಳನ್ನು ನೋಡಿ ನಗ್ತಾರೆ, ಮೈ ಮುಟ್ಟುತ್ತಾರೆ. ಆದರೆ ಒಮ್ಮೆ ಈ ಹುಡುಗರು ನಕ್ಕಾಗ ಒಬ್ಬ ಹುಡುಗಿ ಮರು ನಗ್ತಾಳೆ. ಅವರಿಬ್ಬರೂ ತನಗಿಷ್ಟ ಅಂತಾಳೆ, ಆಮೇಲೆ ನಡೆದದ್ದೇ ಬೇರೆ.

ನಿತ್ಯ ಬಸ್‌ನಲ್ಲಿ ಪ್ರಯಾಣಿಸೋ ಹೆಣ್ಮಕ್ಕಳಿಗೆ ಕಾಮುಕರ ಕಾಟ ಇದ್ದಿದ್ದೇ. ರಶ್‌ ಇರೋ ಬಸ್‌ ಅನ್ನೇ ನೋಡ್ಕೊಂಡು ಬಸ್‌ ಏರೋ ಈ ಬೀದಿ ಕಾಮಣ್ಣರು ಟೈಮ್‌ ನೋಡ್ಕೊಂಡು ತಮ್ಮ ಆಟ ಶುರು ಹಚ್ಕೊಳ್ತಾರೆ. ಹಿಂದೆ ಹೋಗೋ ನೆವದಲ್ಲಿ ಹೆಣ್ಮಕ್ಕಳ ಮೈ ಸವರಿಕೊಂಡು ಹೋಗ್ತಾರೆ. ಏನೇನೋ ನೆವದಲ್ಲಿ ಮೈ ಕೈ ಸವರ್ತಾರೆ. ಕೆಟ್ಟ ಕೆಟ್ಟ ಸನ್ನೆ ಮಾಡ್ತಾರೆ. ನಮ್ಮ ಹೆಚ್ಚಿನ ಮಧ್ಯಮ ವರ್ಗದ ಮನೆಯವರು ಇನ್ನೂ ಹೆಣ್ಣನ್ನು ದುರ್ಬಲೆಯಾಗಿಯೇ ಬೆಳೆಸುತ್ತಿದ್ದಾರೆ. ಅವಳು ಒಂಚೂರು ದನಿ ಎತ್ತಿದರೆ, ಅವಳಿಗೆ ಏನಾದರೂ ಆದರೆ ಮರ್ಯಾದೆ ಹೋಯ್ತು ಅನ್ನೋ ಥರ ಆಡ್ತಾರೆ. ಅವಳ ಓದಿಗೆ, ಕೆಲಸಕ್ಕೆ ಕತ್ತರಿ ಹಾಕೋ ದುಷ್ಟ ಮನಸ್ಥಿತಿಯವರು ಮನೆಯಲ್ಲೇ ಇರುತ್ತಾರೆ. ಇಲ್ಲದ ಮರ್ಯಾದೆ ಹೆಸರಲ್ಲಿ ಹೆಣ್ಮಕ್ಕಳು ನಿತ್ಯ ನೋವು ಅನುಭವಿಸೋದು ಸಾಮಾನ್ಯ ಅನ್ನೋ ಹಾಗಾಗಿದೆ. ಅವಳನ್ನು ದನಿ ಎತ್ತದಂತೆ ಮಾಡೋ ಸಮಾಜಕ್ಕೆ ಹೆದರಿ ಇಂಥಾ ಬೀದಿ ಕಾಮಣ್ಣರ ಆಟಗಳನ್ನು ಆಕೆ ಮೌನವಾಗಿ ಸಹಿಸಿಕೊಳ್ತಾಳೆ.

ಆದರೆ ಇಲ್ಲೊಬ್ಬ ಹುಡುಗಿ ಮಾತ್ರ ಹಾಗೆ ಮಾಡಲಿಲ್ಲ. ಎಂದಿನಂತೆ ಆ ಬಸ್ ಏರಿದ ಆ ಪೋಕರಿ ಹುಡುಗರು ಅವಳನ್ನು ಕಂಡು ನಗ್ತಾರೆ. ಆ ಸುಂದರಿ ಅವಳನ್ನು ನೋಡಿ ತಿರುಗಿ ನಗ್ತಾಳೆ. ಹುಡುಗರಿಗೆ ಅಚ್ಚರಿಯೋ ಅಚ್ಚರಿ. ಇಲ್ಲೀವರೆಗೆ ಅವರು ನಕ್ಕಾಗ ಮುಖ ತಿರುಗಿಸಿಯೋ ಭಯಪಟ್ಟೋ ಇರುವ ಹುಡುಗಿಯರನ್ನು ನೋಡಿದ್ದಾರೆ, ಇವಳು ನೋಡಿದ್ರೆ ನಮ್ಮನ್ನು ನೋಡಿ ತಿರುಗಿ ನಗ್ತಿದ್ದಾಳೆ, ನೋಡೋದಕ್ಕೂ ಸಖತ್ತಾಗಿದ್ದಾಳೆ. ಅವರಿಬ್ಬರೂ ತಮ್ಮ ಎಂದಿನ ಚೇಷ್ಟೆ ಶುರು ಮಾಡ್ತಾರೆ. ಅವಳ ಕೈ ಮುಟ್ತಾರೆ, ಅವಳು ಏನೂ ಹೇಳದೇ ನಗುತ್ತಾಳೆ. ಅವಳಿಗೆ ಸೀಟು ಸಿಕ್ಕಿ ಕೂತಾಗ ಅವಳಿಗೆ ಪಕ್ಕದಲ್ಲಿ ಒತ್ತಿಕೊಂಡು ಕೂರ್ತಾರೆ. ಎಲ್ಲಿ ಹೋಗೋಣ, ಹೊಟೇಲಾ, ಮನೆನಾ ಅಂತ ಕೆಟ್ಟ ಭಾಷೆಯಲ್ಲಿ ಕೇಳುತ್ತಾರೆ.

ಹೊಸ ಮಾನದಂಡ ಸೃಷ್ಟಿಸಿದ ದೀಪಿಕಾ ಪಡುಕೋಣೆ; ಟೈಮ್ ಮ್ಯಾಗಜೀನ್‌ನಲ್ಲಿ ಕವರ್‌ ಪೇಜ್‌ನಲ್ಲಿ ಡಿಪಿ!

ಒಂದು ಕಡೆ ಆ ಹುಡುಗಿ ಇಳೀತಾಳೆ, ಇಲ್ಲೇ ಹೋಗೋಣ ಬನ್ನಿ ಅಂತ ಕರ್ಕೊಂಡು ಹೋಗ್ತಾಳೆ. ಇವತ್ತು ಬೆಳಬೆಳಗ್ಗೆ ಹಬ್ಬ ಅಂದಕೊಂಡು ಬರೋ ಹುಡುಗರಿಗೆ ತಮ್ಮ ಕಾಲರ್‌ ಪಟ್ಟಿಯನ್ನು ಯಾರೋ ಹಿಡ್ಕೊಂಡಾಗಲೇ ನಿಜದ ಅರಿವಾಗುತ್ತೆ. ಅವರು ರೆಡ್‌ ಹ್ಯಾಂಡಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರ್ತಾರೆ. ಅವರ ನಗುವಿಗೆ ಪ್ರತಿಯಾಗಿ ನಕ್ಕು ಅವರದೇ ದಾರಿಯಲ್ಲಿ ಸೆರೆ ಹಿಡಿದವಳು ಪೊಲೀಸ್ ಅಧಿಕಾರಿ. ಧೈರ್ಯ ಮಾಡಿ ಹುಡುಗಿಯೊಬ್ಬಳು ಈ ಕಾಮುಕರ ಬಗ್ಗೆ ದೂರು ಕೊಟ್ಟಾಗ ಅದರ ತನಿಖೆಗೆಂದು ಬಂದ ಆಕೆ ಆ ಇಬ್ಬರು ಕಾಮುಕರನ್ನು ಒದ್ದು ಜೈಲೊಳಗೆ ಹಾಕುವಲ್ಲಿ ಸಫಲಳಾಗ್ತಾಳೆ. 'ಗರ್ಲ್ ಸ್ಮೈಲ್ ಬ್ಯಾಕ್'(Girl smiles back) ಅನ್ನೋ ಶಾರ್ಟ್ ಮೂವಿಯ ಕಥೆ ಇದು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಪ್ರತೀ ಹೆಣ್ಣು ಮಗಳು ತನ್ನ ಮೇಲೆ ಲೈಂಗಿಕ ದೌರ್ಜನ್ಯ(Sexual harassment) ನಡೆದಾಗ ಸುಮ್ಮನೆ ಸಹಿಸಿಕೊಳ್ಳೋ ಬದಲು ಇಂಥದ್ದೊಂದು ದಿಟ್ಟ ಹೆಜ್ಜೆ ಇಟ್ಟರೆ ಪುಂಡು ಪೋಕರಿಗಳು ಬುದ್ಧಿ ಕಲೀತಾರೆ. ಹೆಣ್ಣುಮಕ್ಕಳ ಪೋಷಕರು ಅವಳಲ್ಲಿ ಮುಖ್ಯವಾಗಿ ಬೆಳೆಸಬೇಕಾದದ್ದು ಧೈರ್ಯವನ್ನು. ಆ ಧೈರ್ಯ ಬೆಳೆಸಿದರೆ ಪರಿಸ್ಥಿತಿ ಹೇಗೆ ಇದ್ದರೂ ಅದನ್ನು ಸಂಭಾಳಿಸಿಕೊಂಡು ಹೋಗುವ, ಜಾಣ್ಮೆಯಿಂದ ತನ್ನ ಸುರಕ್ಷತೆ ಕಾಯ್ದುಕೊಳ್ಳುವ ತಾಕತ್ತು ಅವಳಿಗೆ ಬರುತ್ತದೆ. ಹೆಣ್ಣುಮಕ್ಕಳನ್ನು ಬೇಲಿ ಹಾಕಿ ಇಲ್ಲದ ನಿರ್ಬಂಧ ವಿಧಿಸೋ ಬದಲು ಹೀಗೆ ಮಾಡಿದ್ರೆ ಒಳಿತಲ್ವಾ? ಈಗಂತೂ ಹೆಣ್ಣುಮಕ್ಕಳಿಗೆ ಸೇಫ್ಟಿ (Safety)ಇಲ್ಲ ಅಂತ ಅವಳನ್ನು ತಾವೆ ಸ್ಕೂಲು, ಕಾಲೇಜು, ಕೊನೆಗೆ ಉದ್ಯೋಗದ(Job) ಜಾಗಕ್ಕು ಬಿಟ್ಟು ಕರೆತರೋ ಹೆತ್ತವರೇ ಹೆಚ್ಚು. ಈ ಓವರ್ ಪ್ರೊಟೆಕ್ಟಿವ್ ನೆಸ್‌( Over Protectiveness) ಅವಳ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತೆ ಅನ್ನೋ ಕನಿಷ್ಠ ಜ್ಞಾನವೂ ಅವರಿಗಿರೋದಿಲ್ಲ. ಅದರ ಬದಲು ಅವಳಿಗೆ ಧೈರ್ಯ ಕಲಿಸಿದರೆ ತನ್ನ ಬದುಕನ್ನು ಸ್ವತಂತ್ರವಾಗಿ ಅವಳೇ ಕಟ್ಟಿಕೊಳ್ಳಬಲ್ಲಳು. ಅವಳ ಬದುಕು ಭಯವಿಲ್ಲದೇ ನೆಮ್ಮದಿಯಿಂದಿರುತ್ತದೆ.

ಹರಾಜಾಗಲಿದೆ ರಾಜಕುಮಾರಿ ಡಯಾನಾ ನೆಕ್ಲೇಸ್, ಬೆಲೆ ಎಷ್ಟೂಂತ ಗೊತ್ತಾದ್ರೆ ಬೆಚ್ಚಿಬೀಳ್ತೀರಾ!