ಜೀವವಿದ್ದಾಗಲೇ ಹೂಳಲ್ಪಟ್ಟು ಜೀವಂತ ದಂತಕಥೆಯಾಗಿ ಎದ್ದುಬಂದು ಪದ್ಮಶ್ರೀ ಪಡೆದ ಸಾಧಕಿ
ಊರಿನವರು ಸಾಯಿಸಿಬಿಡಬಹುದು ಎಂಬ ಕಾರಣಕ್ಕಾಗಿ ಆರು ತಿಂಗಳಿನ ಹಸುಗೂಸನ್ನು ತಂದೆ ತಾನು ಹೋದಲ್ಲೆಲ್ಲ ಕೊಂಡೊಯ್ಯುತ್ತಾನೆ. ಹಾವಿನ ಬುಟ್ಟಿಯ ಪಕ್ಕದಲ್ಲಿ ಮಲಗಿಸಿಕೊಂಡೇ ಹಾವುಗಳನ್ನು ಆಡಿಸುತ್ತಾನೆ. ಅದನ್ನು ನೋಡುತ್ತಲೇ ಬೆಳೆದ ಆ ಮಗು ಅಪೂರ್ವ ಸರ್ಪ ನೃತ್ಯಗಾತಿಯಾಗಿ ರೂಪುಗೊಂಡಿದ್ದಾಳ
-ಅಂಶಿ ಪ್ರಸನ್ನಕುಮಾರ್, ಮೈಸೂರು
ಹೆಣ್ಣೆಂದು ಜೀವಂತ ಹೂಳಲ್ಪಟ್ಟು, ತಾಯಿ ಮತ್ತು ಚಿಕ್ಕಮ್ಮ ಅವರ ಹುಡುಕಾಟದಿಂದ ನಾಲ್ಕು ತಾಸುಗಳ ನಂತರ ಸಿಕ್ಕಿ ಪವಾಡಸದೃಶವಾಗಿ ಬದುಕುಳಿದು ನಂತರ ಜಾಗತಿಕ ಖ್ಯಾತಿಯ ಜನಪದ ನೃತ್ಯಗಾರ್ತಿಯಾಗಿ, 2016ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದವರು ಗುಲಾಬೊ ಸಪೇರಾ.
ರಾಜಸ್ಥಾನದ ಕಾಲ್‌ಬೆಲಿಯಾ (ಹಾವಾಡಿಗರು) ಎಂಬ ಅಲೆಮಾರಿ ಬುಡಕಟ್ಟು ಜನಾಂಗದಲ್ಲಿ ಮನೆಗೊಂದೇ ಹೆಣ್ಣು ಮಗುವಿರಬೇಕು ಎಂಬ ಸಂಪ್ರದಾಯವಿತ್ತು. ಎರಡನೇ ಹೆಣ್ಣು ಮಗುವಾದರೇ ಜೀವಂತ ಸಮಾಧಿ ಮಾಡಿಬಿಡುತ್ತಿದ್ದರು. ಹೀಗಿರುವಾಗ ಈಗಾಗಲೇ ಮೂರು ಗಂಡು, ಮೂರು ಹೆಣ್ಣುಗಳಿದ್ದ ಕುಟುಂಬದಲ್ಲಿ ನಾಲ್ಕನೇ ಹೆಣ್ಣಾಗಿ ಹುಟ್ಟಿದ ಮಗು ಇದು. ಸಮಾಜದ ವಿರೋಧದ ನಡುವೆಯೂ ಮೂರು ಹೆಣ್ಣುಮಕ್ಕಳನ್ನು ಅಪ್ಪ ಉಳಿಸಿಕೊಂಡಿದ್ದ. ನಾಲ್ಕನೆಯದು ಹೆಣ್ಣಾದಾಗ ಸೂಲಗಿತ್ತಿಯೇ ತೆಗೆದುಕೊಂಡು ಹೋಗಿ ಕಾಡಿನಲ್ಲಿ ಜೀವಂತ ಸಮಾಧಿ ಮಾಡಿದ್ದಳು. ತಾಯಿ ಮತ್ತು ಚಿಕ್ಕಮ್ಮನ ತೀವ್ರ ಹುಡುಕಾಟದ ಫಲವಾಗಿ ಆಕೆ ಮತ್ತೆ ಉಸಿರಾಡುತ್ತಾಳೆ. ತಂದೆಯ ವಿಶೇಷ ಕಾಳಜಿಯಿಂದಾಗಿ ‘ಪೆಸಲ್’ (ಸ್ಪೆಷಲ್) ಮಗುವಾಗಿ ಬೆಳೆಯುತ್ತಾಳೆ.
Women's Day : ವೃತ್ತಿಯಲ್ಲಿ ಸಾಫ್ಟ್‌ವೇರ್ ಡೆವಲಪರ್, ಪ್ರವೃತ್ತಿಯಲ್ಲಿ ದೇಶ ಸುತ್ತೋ ಸಾಹಸಿ ಬೈಕರ್ ಕೃತಿ ಉಚ್ಚಿಲ್
ತಂದೆಯಿಂದಾಗಿ ಬದುಕಿದ ಕೂಸು
ಗುಲಾಬೋಳ ಅಪ್ಪ-ಅಮ್ಮನಿಗೆ ಮೂವರು ಪುತ್ರರು, ಮೂವರು ಪುತ್ರಿಯರಿದ್ದರು. ‘ಹೆಣ್ಣು ಕೂಸುಗಳು ಮಾತಾ ಚಾಮುಂಡಿ ದೇವಿಯ ದಯೆಯ ಪ್ರಸಾದ’ ಎಂದು ಭಾವಿಸುವ ಅಪ್ಪನಿಂದಾಗಿ ಹೆಣ್ಣು ಮಕ್ಕಳು ಬದುಕುಳಿದಿದ್ದವು. ನಾಲ್ಕನೇ ಹೆಣ್ಣು ಕೂಸು ಜನಿಸಿದಾಗ ಹೆರಿಗೆಗೆ ಸಹಕರಿಸಿದ ಸೂಲಗತ್ತಿಯು ತಾಯಿಗೆ ಗೊತ್ತಾಗುವ ಮುನ್ನವೇ ಜೀವಂತ ಸಮಾಧಿ ಮಾಡುತ್ತಾಳೆ. ಗಂಡನಿಗೆ ಏನೆಂದು ಉತ್ತರ ಕೊಡುವುದು ಎಂಬ ಆತಂಕದಿಂದ ತಾಯಿಯು ತನ್ನ ಸೋದರಿ ಜೊತೆ ಕಾಡಿಗೆ ಹೋಗಿ ಸಮಾಧಿಯಿಂದ ಹೊರತೆಗೆದು ತರುತ್ತಾಳೆ. ಮರುದಿನ ಸಾಂತ್ವನ ಹೇಳಲು ಬಂದಾಗ ಇದನ್ನು ಗಮನಿಸಿದ ಸೂಲಗಿತ್ತಿಯು ಆಕೆ ಮಗುವಿನ ದೆವ್ವಕ್ಕೆ ಹಾಲುಣಿಸುತ್ತಿದ್ದಾಳೆ ಎಂಬ ಗಲಾಟೆ ಎಬ್ಬಿಸಿ, ಊರಿಗೆಲ್ಲಾ ವಿಷಯ ಗೊತ್ತಾಗುವಂತೆ ಮಾಡುತ್ತಾಳೆ. ಸಮಾಜದ ಕಟ್ಟಳೆಯ ನಡುವೆಯೂ ಅಪ್ಪ ಆ ಮಗುವನ್ನು ರಕ್ಷಿಸುತ್ತಾನೆ. ‘ಧನ್ವಂತ್ರಿ’ ಎಂದು ನಾಮಕರಣ ಮಾಡುತ್ತಾನೆ. ತಾನು ಹೊರಗೆ ಹೋದಾಗ ಊರಿನವರು ಸಾಯಿಸಿಬಿಡಬಹುದು ಎಂಬ ಕಾರಣಕ್ಕಾಗಿ ಆರು ತಿಂಗಳಿನ ಹಸುಗೂಸನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಾನೆ. ಆ ಕೂಸನ್ನು ಹಾವಿನ ಬುಟ್ಟಿಯ ಪಕ್ಕದಲ್ಲಿ ಮಲಗಿಸಿಕೊಂಡೇ ಹಾವುಗಳನ್ನು ಆಡಿಸುತ್ತಾನೆ. ಅದನ್ನು ನೋಡುತ್ತಲೇ ಬೆಳೆದ ಆ ಮಗು ಅಪೂರ್ವ ಸರ್ಪ ನೃತ್ಯಗಾರ್ತಿಯಾಗಿ ರೂಪುಗೊಳ್ಳುತ್ತದೆ.
ನೃತ್ಯಗಾತಿಯಾಗಿ ಬೆಳೆದ ಬಾಲೆ
ಒಮ್ಮೆ ಸಮೀಪದ ಪುಷ್ಕರ ಮೇಳಕ್ಕೆ ಸಮಾಜದ ಇತರೆ ಹೆಣ್ಣು ಮಕ್ಕಳೊಂದಿಗೆ ಹೋದಾಗ ಆಕೆಯ ನೃತ್ಯ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಾದ ತೃಪ್ತಿ ಪಾಂಡೆ ಹಾಗೂ ಹಿಮ್ಮತ್ ಸಿಂಗ್ ಅವರ ಗಮನ ಸೆಳೆಯುತ್ತದೆ. ದೊಡ್ಡ ವೇದಿಕೆಯಲ್ಲಿ ನೃತ್ಯಕ್ಕೆ ಅವಕಾಶ ಸಿಗುತ್ತದೆ. ಪುಷ್ಕರವು ರಾಜಸ್ಥಾನದ ‘ಗುಲಾಬಿ ತೋಟ’ ಎಂದೇ ಪ್ರಸಿದ್ಧಿ. ಹೀಗಾಗಿ ತೃಪ್ತಿ ಪಾಂಡೆ ಅವರು ಆಕೆಗೆ ‘ಗುಲಾಬಿ’ ಎಂದು ಕರೆಯುತ್ತಾರೆ. ಜೈಪುರದ ರಾಣಿ ಗಾಯಿತ್ರಿದೇವಿ ಅವರ ಮೆಚ್ಚುಗೆಯೂ ಸಿಗುತ್ತದೆ. ಮುಂದೆ 1985ರಲ್ಲಿ ಅಮೆರಿಕಾಗೆ ತೆರಳಿ, ಎರಡು ತಿಂಗಳ ಕಾಲ ಪ್ರದರ್ಶನ ನೀಡಿ, ಮೆಚ್ಚುಗೆ ಗಳಿಸುತ್ತಾರೆ. ಆ ನೃತ್ಯ ಸಪೇರಾ ನೃತ್ಯ ಎಂದು ಕರೆಯಲ್ಪಡುತ್ತದೆ.
ಅನಿಷ್ಟಪದ್ಧತಿ ಕೊನೆಗೂ ಅಂತ್ಯ
ಆಕೆ ಅಮೆರಿಕಾದಿಂದ ವಾಪಸ್ ಆದ ನಂತರ ದೇಶದ ಪತ್ರಿಕೆಗಳಲ್ಲಿ ವಿಮರ್ಶೆಗಳು ಪ್ರಕಟವಾದಾಗ ಗುಲಾಬಿ ಬದಲು ‘ಗುಲಾಬೊ’ ಎಂದು ಬರೆಯುತ್ತಿದ್ದರಿಂದ ಮುಂದೆ ಆಕೆ ‘ಗುಲಾಬೊ ಸಪೇರಾ’ ಎಂದು ಪ್ರಸಿದ್ಧರಾಗುತ್ತಾರೆ. ಜನಾಂಗದ ಸಭೆಯಲ್ಲಿ ಇನ್ನು ಮುಂದೆ ಒಂದಕ್ಕಿಂತ ಹೆಚ್ಚು ಹೆಣ್ಣು ಮಗುವಾದರೆ ಜೀವಂತ ಸಮಾಧಿ ಮಾಡುವುದಿಲ್ಲ ಎಂಬ ಮಾತು ಪಡೆಯುತ್ತಾರೆ. ಆ ಮೂಲಕ ಅನಿಷ್ಟಪದ್ಧತಿ ನಿರ್ಮೂಲನೆಗೆ ಕಾರಣರಾಗುತ್ತಾರೆ. ಕಾಲ್ ಬೆಲಿಯಾ ಸಮಾಜ ಎಲ್ಲಾ ಕಟ್ಟಳೆಗಳನ್ನು ಮೀರಿ ಆಕೆ ಮೇಲ್ವರ್ಗದ ಸೋಹನ್ ಜೊತೆ ಮದುವೆಯಾಗಿ ವೈಯಕ್ತಿಕ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಅವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು. ಮೊದಲ ಪುತ್ರಿ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪುತ್ರಿಯರು ರಾಜಸ್ಥಾನಿ ಚಲನಚಿತ್ರ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ.
2016ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುಲಾಬೋಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಕಲರ್ಸ್ ಟಿವಿಯ ಬಿಗ್‌ಬಾಸ್ ಐದನೇ ಸೀಸನ್ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಾರೆ. ರಾಜಸ್ಥಾನಿ, ಹಿಂದಿ ಚಿತ್ರಗಳಲ್ಲಿ ನೃತ್ಯ ಪ್ರದರ್ಶಿಸಿದ್ದಾರೆ. ಪ್ರಸ್ತುತ ಕಾಲ್ ಬೆಲಿಯಾ ನೃತ್ಯವನ್ನು ಮುಂದಿನ ಪೀಳಿಗೆಗೆ ದಾಟಿಸುವ ಕ್ರಿಯೆಯಲ್ಲಿ ನಿರತರಾಗಿದ್ದಾರೆ.
ಕನ್ನಡದಲ್ಲಿ ಈಕೆಯ ಕಾದಂಬರಿ
ಪ್ರಸಿದ್ಧ ಕತೆಗಾರ್ತಿ ಎಂ.ಎಸ್.ವೇದಾ ಅವರು ‘ಗುಲಾಬೊ ಸಪೇರಾ’ ಅವರ ಜೀವನ ಚಿತ್ರಣವನ್ನು ಕಾದಂಬರಿ ರೂಪದಲ್ಲಿ ಕಟ್ಟಿಕೊಟ್ಟಿದ್ದು, ಮೈಸೂರಿನ ಸಂವಹನ ಪ್ರಕಾಶನ ಪ್ರಕಟಿಸಿದೆ. ಏಳು ಅಧ್ಯಾಯಗಳ ಮೂಲಕ ವೇದಾ ಅವರು ಅದ್ಭುತವಾಗಿ ಕಾದಂಬರಿಯನ್ನು ರಚಿಸಿದ್ದಾರೆ. ಇದೊಂದು ಸ್ಫೂರ್ತಿದಾಯಕ ಜೀವನ ಚಿತ್ರಣ. ಆಸಕ್ತರು 9902639593 ಸಂಪರ್ಕಿಸಬಹುದು.