Women's Day : ವೃತ್ತಿಯಲ್ಲಿ ಸಾಫ್ಟ್‌ವೇರ್ ಡೆವಲಪರ್, ಪ್ರವೃತ್ತಿಯಲ್ಲಿ ದೇಶ ಸುತ್ತೋ ಸಾಹಸಿ ಬೈಕರ್ ಕೃತಿ ಉಚ್ಚಿಲ್
ಹುಡುಗೀರು ಬೈಕ್ ಬಿಡೋದನ್ನು ನೋಡಿದಾಗ, ನಾವು ವಾವ್ ಅಂತೀವಿ… ಛೇ ನಂಗೂ ಬೈಕ್ ಬಿಡೋಕೆ ಬರ್ತಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತಾ ಅಂದ್ಕೊಳ್ತೀವಿ. ಆಮೇಲೆ ಸುಮ್ಮನಾಗ್ತೀವಿ. ಆದ್ರೆ ಇಲ್ಲೊಬ್ರು ಎಲ್ಲಾ ಹುಡುಗೀರು ಸ್ಕೂಟಿ ಕಲಿತಿರೋದನ್ನು ನೋಡಿ, ತಾನು ಸ್ಕೂಟಿ ಬಿಟ್ಟು ನೇರವಾಗಿ ಬೈಕ್ ಕಲಿತು ಉತ್ತರದ ಲೇಹ್, ಲಡಾಕ್ ನಿಂದ ದಕ್ಷಿಣದ ಧನುಷ್ಕೋಟಿವರೆಗೂ ಬೈಕ್ ರೈಡ್ ಮೂಲಕವೇ ಸುತ್ತಾಡೋ ಮಂಗಳೂರಿನ ಬೈಕ್ ರೈಡರ್ ಕೃತಿ ಉಚ್ಚಿಲ್ ಬಗ್ಗೆ ತಿಳಿಯೋಣ.
ಮಹಿಳಾ ದಿನಾಚರಣೆಯ ಈ ಸ್ಪೆಷಲ್ ಡೇಯಂದು (International Womens day), ಮಹಿಳೆಯರು ಯಾವುದ್ರಲ್ಲೂ ಹಿಂದೆ ಬೀಳ್ಬಾರ್ದು, ಅಂದ್ಕೊಂಡದನ್ನು ಮಾಡಿಯೇ ಬಿಡ್ಬೇಕು ಎಂದು ಹೇಳುವ ಈ ಬೈಕ್ ರೈಡರ್ ಹೆಸರು ಕೃತಿ ಉಚ್ಚಿಲ್ (Krithi Uchil). ಮಂಗಳೂರಿನಲ್ಲೇ ಹುಟ್ಟಿ ಬೆಳೆದ ಇವರು, ಅಲ್ಲೇ ತಮ್ಮ ಸ್ಕೂಲ್, ಕಾಲೇಜು ಎಲ್ಲಾ ಮುಗಿಸಿದ್ದಾರೆ. ಸದ್ಯ ಬೆಂಗಳೂರಿನ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಡೆವಲಪರ್ ಆಗಿ ಕೆಲಸ ಮಾಡ್ತಾ ಇದ್ದಾರೆ. ಹಲವಾರು ಮಹಿಳೆಯರಿಗೆ ಪ್ರೇರಣೆ ನೀಡುವ ಬೈಕರ್ ಕೃತಿ ಉಚ್ಚಿಲ್ ಜೊತೆಗಿನ ಚಿಟ್ ಚಾಟ್ ಹೀಗಿತ್ತು…
ಬೈಕ್ ರೈಡಿಂಗ್ ಬಗ್ಗೆ ಇಂಟ್ರೆಸ್ಟ್ ಹೇಗೆ ಬಂತು?
ಬೈಕ್ ರೈಡಿಂಗ್ (Bike riding) ಯಾರನ್ನೋ ನೋಡಿ ಆಸಕ್ತಿ ಹುಟ್ಟಿರೋದಲ್ಲ ಎನ್ನುವ ಇವರು, ಸಣ್ಣವರಿರೋವಾಗ ಅಕ್ಕ, ಪಕ್ಕದ ಹುಡುಗೀರು ಸ್ಕೂಟಿ ಓಡಿಸೋದು ನೋಡಿ, ನನ್ ಹತ್ರ ಸ್ಕೂಟಿ ಇದ್ರೆ ನಾನು ಬಿಡ್ತಿದ್ದೆ ಅಂತ ಅಂದ್ಕೊಂಡಿದ್ರಂತೆ. ನಂತ್ರ ಅಣ್ಣ ಬೈಕ್ ಖರೀದಿಸಿದ ಮೇಲೆ ಫಸ್ಟ್ ಗೆ ಬೈಕನ್ನೇ ಓಡಿಸೋಕೆ ಆರಂಭಿಸಿದ್ರಂತೆ ಇವ್ರು.
ಫಸ್ಟ್ ಬೈಕ್ ರೈಡ್ ಮಾಡಿದ್ದು ಯಾವಾಗ? ಫಸ್ಟ್ ರೈಡ್ ಮಾಡಿದ ಬೈಕ್ ಯಾವುದು?
ಫಸ್ಟ್ ಬೈಕ್ ರೈಡ್ (first Bike ride) ಕಲಿತದ್ದು ಅಣ್ಣನಿಂದಲೇ, ಅದು ಅಣ್ಣನ FZ ಬೈಕ್. ಆವಾಗ 18 ವರ್ಷ ಆಗಿತ್ತು, ಅಣ್ಣ ಮುಂಬೈಗೆ ಕೆಲಸಕ್ಕೆ ಹೋಗಿದ್ರಿಂದ ಬೈಕ್ ಮನೇಲಿ ಇತ್ತು. ಆವಾಗ ಬೈಕ್ ರೈಡ್ ಮಾಡ್ಬೇಕಾದ್ರೆ ಲೈಸೆನ್ಸ್ ಬೇಕು ಅಂತಾನೆ ಗೊತ್ತಿಲ್ಲಾಯ್ತು, ಕಾಲೇಜಿಗೆ ಹೋಗೋವಾಗ ಬೈಕಿನಲ್ಲೇ ಹೋಗ್ತಿದ್ದೆ. ಒಂದು ದಿನ ಸಿಕ್ಕಿ ಬಿದ್ದೆ, ಆವಾಗ್ಲೆ ಗೊತ್ತಾಗಿದ್ದು ಡ್ರೈವಿಂಗ್ ಲೈಸೆನ್ಸ್ (Driving licence) ಬೇಕು ಅಂತಾ, ಆಮೇಲೆ DL ಮಾಡ್ಸಿದ್ದಂತೆ ಇವರು.
ಫೆವರಿಟ್ ಬೈಕ್ ಯಾವುದು? ನಿಮ್ಮ ಹತ್ರ ಈವಾಗ ಇರೋ ಬೈಕ್ ಯಾವುದು?
ಫೆವರಿಟ್ ಬೈಕ್ ಅಂದ್ರೆ Triumph Tiger. ಆದ್ರೆ ಸದ್ಯ ನನ್ ಹತ್ರ Yamaha MT15 ಇದೆ. ಈ ಬೈಕ್ ಬಗ್ಗೆ ಹೇಳೋದಾದ್ರೆ ಮೊದ್ಲೆಲ್ಲಾ ರೈಡ್ ಹೋಗ್ಬೇಕಾದ್ರೆ ರೆಂಟೆಡ್ ಬೈಕ್ ತೆಗೊಂಡು ಹೋಗ್ತಿದ್ವಿ. ಆದ್ರೆ ಲಾಕ್ ಡೌನ್ ಆಗಿ, ವರ್ಕ್ ಫ್ರಮ್ ಹೋಮ್ ಸಿಚುವೇಶನ್ ಬಂದಾಗ, ಜೊತೆಗೆ ಫ್ರೆಂಡ್ಸ್ ಎಲ್ಲಾ ಜೊತೆಗೆ ಸಿಕ್ಕಾಗ, ರೈಡ್ ಬಗ್ಗೆ ಮಾತನಾಡೊವಾಗ, ಛೇ ನಾನು ಒಂದು ಬೈಕ್ ತೆಗೋಳ್ಬೇಕು ಅಂತಾ ಅನಿಸಿ, ಬೈಕ್ ಖರೀದಿಸಿದೆ. ಇದೇ ನನ್ನ ಜೀವನದ ಬೆಸ್ಟ್ ವಿಷ್ಯ ಎನ್ನುತ್ತಾರೆ ಕೃತಿ ಉಚ್ಚಿಲ್.
ಇಲ್ಲಿವರೆಗೆ ಎಲ್ಲೆಲ್ಲಿ ಟ್ರಾವೆಲ್ ಮಾಡಿದ್ದೀರಿ? ನಿಮ್ಮ ಫಸ್ಟ್ ಲಾಂಗ್ ರೈಡ್ ಯಾವುದು?
ಕೃತಿ ಇಲ್ಲಿವರೆಗೆ ಭಾರತದ ಹಲವಾರು ಸುಂದರ ತಾಣಗಳಿಗೆ ಬೈಕ್ ರೈಡ್ ಮೂಲಕ ಟ್ರಾವೆಲ್ ಮಾಡಿದ್ದಾರಂತೆ. ದಕ್ಷಿಣ ಭಾರತ ಪೂರ್ತಿಯಾಗಿ ಸುತ್ತಿರೋ ಇವರು, ಲೇಹ್, ಲಡಾಖ್, ಅರುಣಾಚಲ್ ಪ್ರದೇಶ್, ರಣ್ ಆಫ್ ಕಚ್, ಅಸ್ಸಾಂ, ಗೋವಾ, ದೇಶಾದ್ಯಂತ ಹೆಚ್ಚಿನ ಸ್ಥಳಗಳಿಗೆ ಹೋಗಿದ್ದಾರಂತೆ. ಇವರು ಫಸ್ಟ್ ಲಾಂಗ್ ಡ್ರೈವ್ (first long drive) ಹೋಗಿದ್ದು ತಮಿಳುನಾಡೀನ ಧನುಷ್ಕೋಟಿ.
ಲಡಾಕ್ ರೋಡ್ ಟ್ರಿಪ್ ಹೇಗಾಯ್ತು?
ಲೇಹ್, ಲಡಾಕ್ ರೋಡ್ ಟ್ರಿಪ್ (Leh Ladakh Road Trip) ಮಾಡ್ಬೇಕು ಅನ್ನೋದು ಪ್ರತಿಯೊಬ್ಬ ಬೈಕ್ ರೈಡರ್ ಡ್ರೀಮ್. ಅದಕ್ಕೆ ಕೃತಿ ಕೂಡ +ಫ್ರೆಂಡ್ಸ್ ಜೊತೆ ಪ್ಲ್ಯಾನ್ ಮಾಡಿದ್ರಂತೆ. ಆದ್ರೆ ಅಲ್ಲಿ ಹೋದ ಮೇಲೆ ಗೊತ್ತಯ್ತಂತೆ ಅದು ಅಷ್ಟೊಂದು ಸುಲಭ ಇಲ್ಲಾಂತ. ಯಾಕಂದ್ರೆ ದಕ್ಷಿಣ ಭಾರತದ ಜನರಿಗೆ ಹೆಚ್ಚಿನ ಚಳಿಯನ್ನು ಅನುಭವಿಸಿಯೇ ಗೊತ್ತಿಲ್ಲ, ಆದ್ರೆ ಅಲ್ಲಿನ ಸಿಚುವೇಶನ್ ಬೇರೆಯಾಗಿತ್ತು. ಆಕ್ಸಿಜನ್ ಲೆವೆಲ್ ಕೂಡ ಕಡಿಮೆಯಾಗಿ ಸಮಸ್ಯೆಯಾಗಿತ್ತಂತೆ. ಇನ್ನು ಅಲ್ಲಿನ ರೋಡ್ ಗಳು, ಗ್ಲೇಷಿಯರ್ ಮೆಲ್ಟ್ ಆಗೋದು, ಶೂ ಒದ್ದೆಯಾಗೋದು ಇವೆಲ್ಲಾ ಸೇರಿ ಆ ಜರ್ನಿ ಕಷ್ಟ ಆಗಿತ್ತಂತೆ, ಆದ್ರೆ ಫೈನಲ್ ಓವರ್ ಆಲ್ ಟ್ರಿಪ್ ಚೆನ್ನಾಗಿ ಆದಾಗ ಏನೋ ಸಾಧನೆ ಮಾಡಿದಂತೆ ತುಂಬಾನೆ ಖುಷಿ ಪಟ್ಟಿದ್ರಂತೆ ಇವ್ರು ಮತ್ತು ಫ್ರೆಂಡ್ಸ್.
ಮೋಸ್ಟ್ ಮೆಮೊರೇಬಲ್ ರೈಡ್ ಯಾವುದು? ಡ್ರೀಮ್ ರೈಡ್ ಯಾವುದು?
ಅರುಣಾಚಲ ಪ್ರದೇಶದಲ್ಲಿ ಭಾರತದ ಫಸ್ಟ್ ಸನ್ ರೈಸ್ (Indias first sun rise) ನೋಡಿದ ಆ ಜರ್ನಿ ಮೋಸ್ಟ್ ಮೆಮೊರೇಬಲ್ ರೈಡ್. ಅರುಣಾಚಲ ಪ್ರದೇಶ ತುಂಬಾ ಚೆನ್ನಾಗಿದೆ, ಜೊತೆಗೆ ಅಲ್ಲಿನ ಜನರು ಕೂಡ ತುಂಬಾ ಒಳ್ಳೆ ಜನ ಅಂತಾರೆ ಕೃತಿ. ಜೊತೆಗೆ ಭಾರತದ ಫಸ್ಟ್ ವಿಲೇಜ್ ಕಾಹೋ ನೀಡಿದ ಅನುಭವ ಚೆನ್ನಾಗಿತ್ತು, ಇದ್ರ ಜೊತೆಗೆ ಲೇಹ್ -ಲಡಾಖ್ ನಲ್ಲಿರೋಅತಿ ಎತ್ತರದ ಕದುಂಗ್ಲಾ ಮೋಟರ್ ರೋಡ್ ನಲ್ಲಿ ರೈಡ್ ಮಾಡೋವಾಗ ಸಿಕ್ಕಿದ ಫಸ್ಟ್ ಸ್ನೋ ಫಾಲ್ ಅನುಭವವನ್ನು ಯಾವತ್ತೂ ಮರೆಯೋಕೆ ಸಾಧ್ಯ ಇಲ್ಲಾ ಅಂತಾರೆ ಈ ರೈಡರ್.
ಸೋಲೋ ಟ್ರಿಪ್ ಮಾಡಿದೀರಾ? ಯಾವ ಜಾಗಕ್ಕೆ ಹೋಗ್ಬೇಕು ಅಂತಾ ಇದೆ?
ಸೋಲೋ ರೈಡ್ ಮಾಡಿದ್ದು, ಕಡಿಮೆ, ಆದ್ರೆ ಬೆಂಗಳೂರು, - ಮಂಗಳೂರು ರೈಡ್ ಮಾಡ್ತಾನೆ ಇರ್ತಾರಂತೆ, ಜೊತೆಗೆ ಚಿಕ್ಕಮಗಳೂರಿಗೆ ಸೋಲೋ ರೈಡ್ ಮಾಡಿದ್ದಾರಂತೆ. ಇನ್ನು ಭಾರತವನ್ನು ಪೂರ್ತಿಯಾಗಿ ಒಮ್ಮೆಯಾದ್ರೂ ಬೈಕ್ ರೈಡ್ ಮೂಲಕ ನೋಡ್ಬೇಕು ಅನ್ನೋದು ಇವ್ರ ದೊಡ್ಡ ಬಯಕೆಯಂತೆ, ಇದರ ಜೊತೆಗೆ ನೇಪಾಳ, ಭೂತಾನ್ ಟ್ರಾವೆಲ್ ಮಾಡ್ಬೇಕು ಅನ್ನೋ ಆಸೆಯೂ ಇವರ ಬಕೆಟ್ ಲಿಸ್ಟ್ ನಲ್ಲಿದೆ.
ಬೈಕ್ ರೈಡ್ ಮಾಡೋವಾಗ ಏನಾದ್ರೂ ಸಮಸ್ಯೆ ಆಗಿದ್ಯಾ? ಜನರಿಂದ ಬೆಂಬಲ ಸಿಕ್ಕಿದ್ಯಾ?
ಭಾರತದಲ್ಲಿ ಇಲ್ಲಿವರೆಗಿನ ಟ್ರಾವೆಲ್ ನಲ್ಲಿ ಆ ರೀತಿಯ ಸಮಸ್ಯೆ ಎದುರಾಗಿಲ್ಲ. ಆದ್ರೆ ಹೋದ ಕಡೆಗಳಲ್ಲೆಲ್ಲಾ, ಮಹಿಳಾ ಬೈಕ್ ರೈಡರ್ (women bike rider) ಎನ್ನುವ ಸಂತೋಷದಿಂದ ನಮ್ಮನ್ನು ಬರಮಾಡಿಕೊಳ್ಳುತ್ತಿದ್ದರು, ಜೊತೆಗೆ ಉತ್ತಮ ರೀತಿಯಲ್ಲಿ ಸಹಾಯವನ್ನೂ ಮಾಡ್ತಿದ್ರಂತೆ ಜನ.
ಬೈಕ್ ರೈಡರ್ ಕಮ್ಯೂನಿಟೀಸ್, ಗ್ರೂಪ್ ಯಾವ ರೀತಿ ಕೆಲಸ ಮಾಡುತ್ತೆ?
ಬೈಕ್ ರೈಡ್ ಮಾಡೋಕೆ ಆರಂಭಿಸಿದಾಗ ರೈಡಿಂಗ್ ಜಾಕೆಟ್ (rider jacket), ಸೇಫ್ಟಿ ಕಿಟ್, ಫುಲ್ ಫೇಸ್ ಹೆಲ್ಮೆಟ್, ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲಾಯ್ತು, ಆದ್ರೆ ಒಂದ್ಸಲ ಆಕ್ಸಿಡೆಂಟ್ ಆಗಿ ಗಾಯಗೊಂಡಾಗ ಇದ್ರ ಬಗ್ಗೆ ಎಲ್ಲಾ ಬೈಕ್ ಕಮ್ಯೂನಿಟಿ ಮೂಲಕ ತಿಳಿಯಿತು. ಬೈಕ್ ರೈಡರ್ ಕಮ್ಯೂನಿಟಿ (bike rider communities) ಮೂಲಕ ಹಲವಾರು ಜಾಗೃತಿ ರ್ಯಾಲಿಗಳು ನಡೆಯುತ್ತವೆ. ಇದ್ರಿಂದ ಜನರಿಗೆ ಸೇಫ್ಟಿ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತೆ.
ಮಂಗಳೂರು ಬೈಕರ್ನಿ ಗ್ರೂಪ್ ಆರಂಭಿಸಿದ್ರು ಕೃತಿ
ಫೇಸ್ ಬುಕ್ ಮೂಲಕ ಭಾರತದ ಮೊದಲ ಫೀಮೇಲ್ ಬೈಕರ್ ಕಮ್ಯೂನಿಟಿ ಬೈಕರ್ನಿ ಬಗ್ಗೆ ತಿಳಿದಾಗ, ಅವರು ಮಂಗಳೂರಿನಲ್ಲೂ ಗ್ರೂಪ್ ಆರಂಭಿಸುವಂತೆ ಸಲಹೆ ನೀಡಿದ್ರಂತೆ. ಈ ಗ್ರೂಪ್ ದೇಶದ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತೆ. ಮಂಗಳೂರು ಬೈಕರ್ನಿ ಗ್ರೂಪ್ ಅನ್ನು (Mangaluru Bikernis) ಮಂಗಳೂರಿನಲ್ಲಿ ಆರಂಭಿಸಿದ ಕ್ರೆಡಿಟ್ ಕೃತಿ ಉಚ್ಚಿಲ್ ಆವರಿಗೆ ಸೇರುತ್ತೆ. ಸದ್ಯ ಈ ಗ್ರೂಪ್ ನಲ್ಲಿ 25 ಜನ ಇದ್ದಾರಂತೆ.
ಬೈಕರ್ ಕಮ್ಯೂನಿಟಿ, ಗ್ರೂಪ್ ಜಾಯಿನ್ ಆಗೋದು ಹೇಗೆ?
ಕೃತಿ ಹೇಳೊವಂತೆ ಇವರ ಗ್ರೂಪಿಗೆ ಜಾಯಿನ್ ಆಗೋಕೆ ಮೊದ್ಲು ಡ್ರೈವಿಂಗ್ ಲೈಸೆನ್ಸ್ ನೋಡ್ತಾರಂತೆ, ನಂತ್ರ ಸಣ್ಣದೊಂದು ರೈಡ್ ಹೋಗೋವಾಗ ಅವರನ್ನು ಕರೆದುಕೊಂಡು ಹೋಗ್ತಾರಂತೆ. ಆಮೇಲೆ ಅವ್ರನ್ನ ಗ್ರೂಪಿಗೆ ಸೇರಿಸ್ತಾರಂತೆ. ಇನ್ನು ವಿಮೆನ್ ಗ್ರೂಪ್ ಯಾಕೆ ಬೇಕು ಅಂತಾ ಹೇಳೊದಾದ್ರೆ, ಕೆಲವೊಮ್ಮೆ ಕೆಲವೊಂದು ಮನೆಗಳಲ್ಲಿ ಹುಡುಗಿಯರು, ಹುಡುಗರ ಜೊತೆ ಲಾಂಗ್ ಡ್ರೈವ್ ಹೋದಾಗ ಸಮಸ್ಯೆ ಉಂಟಾಗುತ್ತೆ, ಆದ್ರೆ ಇಂತಹ ಗ್ರೂಪ್ ಗಳಿದ್ರೆ ಮನೆಯವರಿಗೂ ಧೈರ್ಯ ಇರುತ್ತೆ, ಮನೆಯವರಿಗೆ ಸೇಫ್ ಫೀಲ್ ಆಗಿರುತ್ತೆ ಎನ್ನುತ್ತಾರೆ ಈ ವೆಬ್ ಡೆವಲಪರ್ ಕಮ್ ರೈಡರ್.
ವರ್ಕ್ ಲೈಫ್ ಮತ್ತು ಬೈಕ್ ರೈಡಿಂಗ್ ಹೇಗೆ ಮ್ಯಾನೇಜ್ ಮಾಡ್ತೀರಿ?
ವರ್ಕ್ ಲೈಫ್ ಮತ್ತು ಬೈಕ್ ರೈಡಿಂಗ್ ಮ್ಯಾನೇಜ್ ಮಾಡೋದು ಕಷ್ಟ ಆಗೋದಿಲ್ಲ, ಅದ್ಕೆ ಸರಿಯಾದ ಪ್ಲ್ಯಾನ್ ಇದ್ರೆ ಆಯ್ತು ಎನ್ನುವ ಈ ಯಂಗ್ ರೈಡರ್, ಲಾಂಗ್ ವಿಕೆಂಡ್ ಯಾವುದಿದೆ ಅನ್ನೋದನ್ನು ಮೊದ್ಲೇ ನೋಡ್ಕೊಂಡು, ಅದಕ್ಕೊಂದೆರಡು ರಜೆ ಸೇರಿಸಿ, ಮ್ಯಾನೇಜರ್ ಹತ್ರ ಪರ್ಮಿಶನ್ ಕೇಳಿದ್ರೆ ಆಯ್ತು, ಆವಾಗ ಹೆಚ್ಚು ರಜೆ ಹಾಕ್ಬೇಕಾಗೂ ಬರಲ್ಲ, ಚೆನ್ನಾಗಿ ಲಾಂಗ್ ಡ್ರೈವ್ (long drive) ಮಾಡೋಕು ಸಾಧ್ಯ ಆಗುತ್ತೆ ಅಂತಾ ಪ್ಲ್ಯಾನಿಂಗ್ ಐಡಿಯಾ ಕೊಡ್ತಾರೆ ಮಂಗಳೂರಿನ ಈ ಡೇರಿಂಗ್ ರೈಡರ್.
ವಿಮೆನ್ಸ್ ಡೇ ಸ್ಪೆಷಲ್ ಆಗಿ ಒಬ್ಬ ಮಹಿಳಾ ಬೈಕ್ ರೈಡರ್ ಆಗಿ, ಮಹಿಳೆಯರಿಗೆ ಏನ್ ಹೇಳೋಕೆ ಇಷ್ಟ ಪಡ್ತೀರಾ?
ನನಗೆ ಇದು ಮಾಡೋಕೆ ಸಾಧ್ಯ ಇದೆ ಅಂದ್ರೆ, ಅದನ್ನು ಖಂಡಿತಾ ನಿಮಗೂ ಕೂಡ ಮಾಡಲು ಸಾಧ್ಯ ಇರುತ್ತೆ ಎನ್ನುವ ಕೃತಿ, ನಿಮಗೆ ಜೀವನದಲ್ಲಿ ಏನು ಮಾಡೋದಕ್ಕೆ ಆಸಕ್ತಿ ಇದೆಯೋ ಅದನ್ನ ಮಾಡಿ, ಯಾರು ನಮ್ಮ ಬಗ್ಗೆ ಏನು ಹೇಳ್ತಾರೋ ಅನ್ನೋದ್ರ ಬಗ್ಗೆ ಚಿಂತೆಯೇ ಮಾಡ್ಬೇಡಿ. ನಿಮ್ಮ ಮನಸ್ಸಿಗೆ ಇಷ್ಟವಾದುದನ್ನು ಮಾಡಿದ್ರೆ, ನೀವು ಹ್ಯಾಪಿಯಾಗಿರಲು ಸಾಧ್ಯ ಆಗುತ್ತೆ ಎನ್ನುತ್ತಾ ಪ್ರತಿಯೊಬ್ಬ ಮಹಿಳೆಗೂ ಪ್ರೇರಣೆ ನೀಡುತ್ತಾರೆ ಕೃತಿ ಉಚ್ಚಿಲ್. ನಿಮಗೂ ಸಹಇವ್ರ ಸಾಹಸಗಳ, ಜೊತೆಗೆ ಟ್ರಾವೆಲ್ ಸ್ಟೋರಿ ಬಗ್ಗೆ ತಿಳಿದುಕೊಳ್ಳೋ ಕುತೂಹಲ ಇದ್ರೆ ‘ಕೃತಿ ಉಚ್ಚಿಲ್ ಇನ್’ಸ್ಟಾಗ್ರಾಂ’ ಇಲ್ಲಿ ಕ್ಲಿಕ್ ಮಾಡಿ.