ವಾಯುಪಡೆ ಯುದ್ಧ ಘಟಕಕ್ಕೆ ಮೊದಲ ಬಾರಿ ಮಹಿಳಾ ಅಧಿಕಾರಿ ನೇತೃತ್ವ; ಪಶ್ಚಿಮ ವಿಭಾಗ ಕ್ಯಾಪ್ಟನ್ ಹುದ್ದೆಗೆ ಶಾಲಿಜಾ ಧಾಮಿ ನೇಮಕ
ವಾಯುಪಡೆ ಯುದ್ಧ ಘಟಕಕ್ಕೆ ಮೊದಲ ಬಾರಿ ಮಹಿಳಾ ಅಧಿಕಾರಿ ನೇತೃತ್ವ ವಹಿಸಿದ್ದು, ವಾಯುಪಡೆಯ ಪಶ್ಚಿಮ ವಿಭಾಗದ ಕ್ಯಾಪ್ಟನ್ ಹುದ್ದೆಗೆ ಶಾಲಿಜಾ ಧಾಮಿ ನೇಮಕವಾಗಿದ್ದಾರೆ. ಮಹಿಳಾ ದಿನಾಚರಣೆಗೂ ಮುನ್ನ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ನವದೆಹಲಿ (ಮಾರ್ಚ್ 8, 2023): ಭಾರತೀಯ ವಾಯುಪಡೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಯುದ್ಧ ಘಟಕದ ನೇತೃತ್ವವನ್ನು ಮಹಿಳಾ ಅಧಿಕಾರಿಯೊಬ್ಬರಿಗೆ ವಹಿಸಲಾಗಿದೆ. ಮಹಿಳಾ ದಿನಾಚರಣೆಯ ಮುನ್ನಾದಿನ ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರನ್ನು ದೆಹಲಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತೀಯ ವಾಯುಪಡೆಯ ಪಶ್ಚಿಮ ವಿಭಾಗದ ಮುಂಚೂಣಿ ಯುದ್ಧ ಘಟಕದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.
ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿಯ ಎಂಬ ಖ್ಯಾತಿ ಹೊಂದಿರುವ ಮತ್ತು ಉಷ್ಣಾಂಶ ಮೈನಸ್ 40 ಡಿಗ್ರಿಯವರೆಗೂ ಕುಸಿಯುವ ಸಿಯಾಚಿನ್‌ಗೆ ಇತ್ತೀಚೆಗೆ ಕ್ಯಾಪ್ಟನ್ ಸೇನಾಪಡೆಯ ಶಿವಾ ಚೌಹಾಣ್ ಅವರನ್ನು ನಿಯೋಜಿಸಲಾಗಿತ್ತು. ಅದರ ಬೆನ್ನಲ್ಲೇ ಮತ್ತೊರ್ವ ಮಹಿಳೆಗೆ ಅತ್ಯಂತ ಉನ್ನತ ಹುದ್ದೆ ನೀಡಲಾಗಿದೆ.
ಇದನ್ನು ಓದಿ: ಸೂಪರ್ ಮಾಡೆಲ್‌ನಂತೆ ಕಾಣೋ ಇವರು ಮಹಿಳಾ ಪೊಲೀಸ್ ಅಧಿಕಾರಿ!
ಗ್ರೂಪ್ ಕ್ಯಾಪ್ಟನ್ ಧಾಮಿ ಅವರನ್ನು 2003ರಲ್ಲಿ ವಾಯುಪಡೆಯಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿ ನೇಮಕ ಮಾಡಲಾಗಿತ್ತು. 2019ರಲ್ಲಿ ಇವರಿಗೆ ಫ್ಲೈಟ್ ಕಮಾಂಡರ್ ಆಗಿ ಪದೋನ್ನತಿ ನೀಡಲಾಗಿತ್ತು. ಈ ಮೂಲಕ ವಾಯುಪಡೆಯ ಮೊದಲ ಮಹಿಳಾ ಅಧಿಕಾರಿ ಎನಿಸಿಕೊಂಡಿದ್ದರು. ಧಾಮಿ ತಮ್ಮ 15 ವರ್ಷಗಳ ಸೇವೆಯಲ್ಲಿ ಇವರು ಸುಮಾರು 2,800 ಗಂಟೆಗಳ ಕಾಲ ಹಾರಾಟ ನಡೆಸಿದ ಅನುಭವವನ್ನು ಹೊಂದಿದ್ದಾರೆ.
ಪಂಜಾಬ್‌ನ ಲೂಧಿಯಾನದಲ್ಲಿ ಜನಿಸಿದ ಧಾಮಿ 2003ರಲ್ಲಿ ಮೊದಲ ಬಾರಿಗೆ ಎಚ್‌ಎಎಲ್‌ನ ಎಚ್‌ಪಿಟಿ-32 ಡಿ ವಿಮಾನವನ್ನು ಹಾರಿಸಿದ್ದರು. 2005ರಲ್ಲಿ ಇವರಿಗೆ ಫ್ಲೈಟ್ ಲೆಫ್ಟಿನೆಂಟ್ ಆಗಿ, 2009ರಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿ ಪದೋನ್ನತಿ ನೀಡಲಾಯಿತು. ಗ್ರೂಪ್ ಕ್ಯಾಪ್ಟನ್ ಹುದ್ದೆಯು, ಸೇನೆಯಲ್ಲಿನ ಕರ್ನಲ್ ಹುದ್ದೆಗೆ ಸಮನಾಗಿದೆ.
ಇದನ್ನೂ ಓದಿ: ಮೈಸೂರು ಒಡೆಯರಿಂದ ರಾಜೀವ್ ಚಂದ್ರಶೇಖರ್ ತನಕ: ಡಕೋಟಾ ಡಿಸಿ 3 ಯುದ್ಧ ವಿಮಾನದ ಇತಿಹಾಸ ಹೀಗಿದೆ..
70 ವಿಮಾನಕ್ಕಾಗಿ ಎಚ್‌ಎಎಲ್ ಜತೆ ಸರ್ಕಾರ 6800 ಕೋಟಿಯ ಒಪ್ಪಂದ
ಭಾರತೀಯ ವಾಯುಪಡೆಗಾಗಿ 70 ಎಚ್‌ಟಿಟಿ-40 ತರಬೇತಿ ವಿಮಾನಗಳನ್ನು ಒದಗಿಸುವುದಕ್ಕಾಗಿ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಜೊತೆಗೆ ರಕ್ಷಣಾ ಸಚಿವಾಲಯ 6,800 ಕೋಟಿ ರೂ. ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಿದೆ.
ಇದೇ ವೇಳೆ 3 ತರಬೇತಿ ಹಡಗುಗಳಿಗಾಗಿ ಲಾರ್ಸೆನ್ ಅಂಡ್ ಟ್ಯೂಬ್ರೋ ಲಿಮಿಟೆಡ್ ಜೊತೆಗೆ 3,100 ಕೋಟಿ ರೂ. ಒಪ್ಪಂದ ಮಾಡಿಕೊಂಡಿದೆ. ಈ 2 ಒಪ್ಪಂದಗಳಿಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ಸಮಿತಿ ಮಾರ್ಚ್ 1ರಂದು ಒಪ್ಪಿಗೆ ನೀಡಿತ್ತು. ಎಚ್‌ಎಎಲ್ ಮುಂದಿನ 6 ವರ್ಷಗಳ ಅವಧಿಯಲ್ಲಿ ವಿಮಾನಗಳನ್ನು ಪೂರೈಕೆ ಮಾಡಲಿದೆ. ಹಡಗುಗಳ ಡೆಲಿವರಿ 2026ರಿಂದ ಆರಂಭವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ವಿನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸ ಪ್ರದರ್ಶಿಸಿದ ಎಚ್‌ಎಎಲ್
ಎಚ್‌ಎಎಲ್ ತಯಾರಿಸಿರುವ ಎಚ್‌ಟಿಟಿ-40 ವಿಮಾನಗಳು ಉತ್ತಮವಾದ ನಿರ್ವಹಣಾ ಸಾಮರ್ಥ್ಯವನ್ನು ಹೊಂದಿದ್ದು, ತರಬೇತಿಗೆ ಉತ್ತಮವಾಗಿವೆ. ಅಲ್ಲದೇ ಈ ವಿಮಾನಗಳ ಖರೀದಿಯ ಬಳಿಕ ವಾಯುಪಡೆಯಲ್ಲಿರುವ ಸ್ವದೇಶಿ ವಿಮಾನಗಳ ಪ್ರಮಾಣ ಶೇ.60ಕ್ಕೆ ಏರಿಕೆಯಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಟರ್ಕಿ ಭೂಕಂಪ: ಭಾರತದಿಂದ ಸಹಾಯಹಸ್ತ; ದೋಸ್ತ್ ಎಂದು ಧನ್ಯವಾದ ಹೇಳಿದ ಟರ್ಕಿ ಸರ್ಕಾರ