ಉಚಿತ ಪ್ರಯಾಣ: ಸಾರಿಗೆ ಬಸ್ಸಿನಲ್ಲಿ ಮಹಿಳಾ ಶಕ್ತಿಯ ಅನಾವರಣ!
ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಪ್ರಾರಂಭಿಸಿರುವುದರಿಂದ ಬಸ್ ಫುಲ್ ಆಗುತ್ತಿವೆ. ಯಾವ ಬಸ್ಸಿಗೂ ಜಾಗವೇ ಇಲ್ಲದಂತಾಗಿದೆ. ಸುತ್ತಾಡುವವರ ಸಂಖ್ಯೆ ದುಪ್ಪಟ್ಟಾಗಿದೆ. ಇದರಿಂದ ಆಗಿರುವ ಅನುಕೂಲ? ತೊಂದರೆ ಬಗ್ಗೆ ಮೇಲೆ ಬೆಳಕು ಚೆಲ್ಲುವ ಸುದ್ದಿ ಸರಣಿ ಇಂದಿನಿಂದ.
ಸೋಮರಡ್ಡಿ ಅಳವಂಡಿ
ಕೊಪ್ಪಳ (ಜೂ.18) ಒಂದೇ ಬಸ್ಸಿನಲ್ಲಿ 136 ಜನರ ಪ್ರಯಾಣ! ಧರ್ಮಸ್ಥಳ ಬಸ್ಸಿಗೆ ನೂಕುನುಗ್ಗಲು, ಶಾಲಾ ವಿದ್ಯಾರ್ಥಿಗಳಿಗೂ ಸಿಗುತ್ತಿಲ್ಲ ಜಾಗ. ಪ್ರವಾಸ ಕೈಗೊಂಡಿರುವ ಮಹಿಳೆಯರು, ಬಸ್ಸಿನಲ್ಲಿ ನಿರ್ವಾಹಕನಿಗೂ ಜಾಗ ಇಲ್ಲ.
ಇದು, ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣ ಯೋಜನೆ ಪರಿಣಾಮದ ಕುರಿತು ಕನ್ನಡಪ್ರಭ ರಿಯಾಲಿಟಿ ಚೆಕ್ ನಡೆಸಿದಾಗ ಕಂಡು ಬಂದ ವಾಸ್ತವ ಸ್ಥಿತಿ.
ಶನಿವಾರ ಕೊಪ್ಪಳದಿಂದ ತಾಲೂಕಿನ ಮಂಗಳೂರಿಗೆ ತೆರಳುವ ಬಸ್ಸಿನಲ್ಲಿ ಬರೋಬ್ಬರಿ 136 ಪ್ರಯಾಣಿಕರು ಇದ್ದರು. ಅದರಲ್ಲಿ ಶೇ. 90 ರಷ್ಟುಮಹಿಳೆಯರೇ ತುಂಬಿದ್ದರು. ಈ ಬಸ್ಸಿನಲ್ಲಿ ನಿರ್ವಾಹಕನಿಗೂ ಜಾಗ ಇಲ್ಲದಂತಾಗಿತ್ತು. ಕೊನೆಗೂ ಹೇಗೆ ಕಷ್ಟಪಟ್ಟು ಬಸ್ ಹತ್ತಿದ್ದರೂ ಟಿಕೆಟ್ ಕೊಡಲು ಒಂಚೂರು ಜಾಗ ಇಲ್ಲ. ಹೀಗಾಗಿ, ಊರಾಚೆ ಬಸ್ ನಿಲ್ಲಿಸಿ ಟಿಕೆಟ್ ವಿತರಣೆ ಮಾಡಿ ಬಸ್ ಪ್ರಯಾಣ ಶುರು ಮಾಡುವಂತಾಯಿತು.
ಮಂಗಳೂರು: ಒಂದೇ ವಾರದಲ್ಲಿ 63,715 ಮಹಿಳೆಯರ ಪ್ರಯಾಣ!
ಬಸ್ಸಿನಲ್ಲಿ ಮೀತಿ ಮೀರಿದ ಪ್ರಯಾಣಿಕರು ತುಂಬಿದ್ದರಿಂದ ಬಸ್ ವೇಗದಲ್ಲಿ ತೆರಳಲಿಲ್ಲ. ಅದು ಕೇವಲ 20 ಕಿಮೀ ಸಂಚಾರಕ್ಕೆ ಒಂದುವರೆ ಗಂಟೆ ತೆಗೆದುಕೊಂಡಿತು. ಇನ್ನು ದಾರಿಯುದ್ದಕ್ಕೂ ಬಸ್ಸಿಗಾಗಿ ಕಾಯುತ್ತಿದ್ದವರು ಹತ್ತಿಸಿಕೊಳ್ಳಲು ಒಂಚೂರು ಜಾಗ ಇರದೆ ಇರುವುದರಿಂದ ಬಸ್ ಹಾಗೇ ಸಾಗುತ್ತಿತ್ತು. ಹೀಗೆ ರಸ್ತೆ ಮಾರ್ಗದಲ್ಲಿ ಊರಿಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳ ಪಾಡು ದೇವರಿಗೆ ಪ್ರೀತಿ ಎನ್ನುವಂತೆ ಕಂಡಿತು.
ಕೊಪ್ಪಳದಿಂದ ಧರ್ಮಸ್ಥಳಕ್ಕೆ ಹೊರಟ ಬಸ್ಸಿಗಾಗಿ ಮುಗಿಬಿದ್ದ ಮಹಿಳೆಯರು. ತಳಕಲ್ ಗ್ರಾಮದ ಬಸವಂತೆಮ್ಮ ದೇಸಾಯಿ ಕುಟುಂಬದವರೆಲ್ಲರೂ ಧರ್ಮಸ್ಥಳಕ್ಕೆ ಪ್ರವಾಸಕ್ಕೆ ಹೊರಟಿರುವುದು ಕಂಡು ಬಂದಿತು. 6 ಜನ ಮಹಿಳೆಯರು ಮತ್ತು ಓರ್ವ ಮಾತ್ರ ಪುರುಷ ಅವರ ಜೊತೆಯಲ್ಲಿ ಇದ್ದರು. ಹೀಗೆ,ಇಡೀ ಬಸ್ಸಿನಲ್ಲಿ ಇದೇ ರೀತಿ ಪ್ರವಾಸ ಕೈಗೊಂಡವರೇ ಇದ್ದರು. ಎಲ್ಲರೂ ಕುಟುಂಬ ಸಮೇತರಾಗಿ ತೆರಳುತ್ತಿದ್ದರು. ಕುಟುಂಬ ಸಮೇತ ಎಂದರೇ ಶೇ.90 ರಷ್ಟುಮಹಿಳೆಯರು ಹಾಗೂ ಒಬ್ಬಿಬ್ಬರು ಮಾತ್ರ ಪುರುಷರು ಅವರ ಜೊತೆಯಲ್ಲಿದ್ದರು.
ಹುಲಿಗೆಮ್ಮನ ಸನ್ನಿಧಿಗೆ:
ಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನಕ್ಕೂ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ನಿತ್ಯವೂ ಆಗಮಿಸುತ್ತಿದ್ದಾರೆ. ಈ ಮೊದಲು ನಿತ್ಯವೂ ಹತ್ತಾರು ಸಾವಿರ ಇದ್ದಿದ್ದು, ಈಗ 15-20 ಸಾವಿರದಷ್ಟುಜನರು ಆಗಮಿಸುತ್ತಿದ್ದಾರೆ. ಅಚ್ಚರಿ ಎಂದರೆ ಹೀಗೆ ಬರುವವರಲ್ಲಿ ಶೇ. 90 ರಷ್ಟುಮಹಿಳೆಯರೇ ಇರುತ್ತಾರೆ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.
ಇದೇ ರೀತಿ ಪ್ರವಾಸಿ ತಾಣಗಳಿಗೆ ಬರುವವರ ಸಂಖ್ಯೆಅಧಿಕವಾಗುತ್ತಿದೆ. ಅನೇಕರು ಬಸ್ಸಿನಲ್ಲಿ ಪ್ರವಾಸ ಆರಂಭಿಸಿರುವುದರಿಂದ ಪ್ರವಾಸಿ ತಾಣಗಳು ಮತ್ತು ದೇವಸ್ಥಾನಗಳಿಗೆ ಬರುವವರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಲೇ ಸಾಗಿದೆ.
ವಿದ್ಯಾರ್ಥಿಗಳಿಗೂ ಸಮಸ್ಯೆ:
ವಿದ್ಯಾರ್ಥಿಗಳು ಶಾಲೆಗೆ ಬರುವುದಕ್ಕೆ, ಹೋಗುವುದಕ್ಕೆ ಬಸ್ಸಿನಲ್ಲಿ ಜಾಗವೇ ಇಲ್ಲದಂತಾಗಿದೆ. ಇದರಿಂದ ಅನೇಕ ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಾಗುವಂತಾಗಿದೆ. ಗ್ರಾಮೀಣ ಪ್ರದೇಶದಿಂದ ಸಾಮಾನ್ಯವಾಗಿ ಬಸ್‌ಗಳ ಸಂಖ್ಯೆ ಕಡಿಮೆ ಇವೆ. ಈಗ ಈ ಬಸ್ಸಿನಲ್ಲಿ ಮಹಿಳೆಯರೇ ಅಧಿಕ ಪ್ರಮಾಣದಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಜಾಗವೇ ಇಲ್ಲದಂತಾಗಿದೆ.
ನಿಲ್ಲದ ಬಸ್‌ಗಳು:
ಬಸ್ ನಿಲ್ದಾಣಗಳಲ್ಲಿಯೇ ಬಸ್‌ಗಳು ಫುಲ್ ಆಗುವುದರಿಂದ ನಗರ ಪ್ರದೇಶ ವ್ಯಾಪ್ತಿಯಲ್ಲಿ ಇರುವ ಕೋರಿಕೆ ನಿಲ್ದಾಣಗಳಲ್ಲಿ ನಿಲ್ಲುವುದೇ ಇಲ್ಲ. ನಿಲ್ಲಿಸಲು ಬಸ್ಸಿನಲ್ಲಿ ಜಾಗವೇ ಇರುವುದಿಲ್ಲ ಎನ್ನುವುದು ನಿರ್ವಾಹಕರ ವಾದವಾಗಿದೆ. ಹೀಗಾಗಿ, ಈಗ ಅನೇಕರು ಅನಿವಾರ್ಯವಾಗಿ ಕೋರಿಕೆ ನಿಲುಗಡೆಯ ಬದಲಾಗಿ ಬಸ್ ನಿಲ್ದಾಣಕ್ಕೆ ಹೋಗುವಂತಾಗಿದೆ.
ಮಹಿಳೆಯರಿಗೆ ಉಚಿತ ಪ್ರಯಾಣ: ಬಸ್‌ಗಳೆಲ್ಲ ಹೌಸ್ ಫುಲ್, ತೀರ್ಥಕ್ಷೇತ್ರ ಫುಲ್ ರಶ್!
ಚಾಲಕನ ಫಜೀತಿ:
ಬಸ್ ಫುಲ್ ಆಗುವುದರಿಂದ ಚಾಲಕನ ಸುತ್ತಲು ಪ್ರಯಾಣಿಕರೇ ತುಂಬಿರುತ್ತಾರೆ. ಎಲ್ಲಿಯವರೆಗೂ ಎಂದರೇ ಸ್ಟೇರಿಂಗ್ ಬಳಿಯೇ ಅನೇಕರು ನಿಂತಿರುತ್ತಾರೆ. ಪಕ್ಕದ ಎಂಜಿನ್ ಬಾಕ್ಸ್ ಮೇಲೆಯೂ ಕುಳಿತುಕೊಂಡು ಪ್ರಯಾಣ ಮಾಡುತ್ತಾರೆ. ಹೀಗಾಗಿ ಸುತ್ತಮುತ್ತಲು ನೋಡಿಕೊಂಡು ವಾಹನ ಚಾಲನೆ ಮಾಡುವುದಕ್ಕೂ ಸಮಸ್ಯೆಯಾಗುತ್ತಿದೆ ಚಾಲಕರಿಗೆ.