ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ದೊರೆತ ಬೆನ್ನಲ್ಲೇ ವೀಕೆಂಡ್‌ ದಿನವಾದ ಶನಿವಾರ ರಾಜ್ಯದ ಪ್ರವಾಸಿ ತಾಣಗಳು ಹಾಗೂ ದೇಗುಲಗಳು ಮಹಿಳೆಯರಿಂದ ತುಂಬಿ ತುಳುಕುತ್ತಿದ್ದವು. 

ಬೆಂಗಳೂರು (ಜೂ.18): ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ದೊರೆತ ಬೆನ್ನಲ್ಲೇ ವೀಕೆಂಡ್‌ ದಿನವಾದ ಶನಿವಾರ ರಾಜ್ಯದ ಪ್ರವಾಸಿ ತಾಣಗಳು ಹಾಗೂ ದೇಗುಲಗಳು ಮಹಿಳೆಯರಿಂದ ತುಂಬಿ ತುಳುಕುತ್ತಿದ್ದವು. ಬಸ್‌ಗಳು ಮಹಿಳೆಯರಿಂದಲೇ ತುಂಬಿ ತುಳುಕುತ್ತಿದ್ದು, ಪುರುಷ ಪ್ರಯಾಣಿಕರು ಪ್ರಯಾಣಿಸಲು ಪರದಾಡುವಂತಾಯಿತು. ಬಸ್‌ ನಿಲ್ದಾಣಗಳಲ್ಲಿಯೇ ಬಸ್‌ಗಳು ಫುಲ್‌ ಆಗಿದ್ದು, ಕೋರಿಕೆ ನಿಲ್ದಾಣಗಳಲ್ಲಿ ನಿಲ್ಲದೆ, ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲು ತೊಂದರೆ ಅನುಭವಿಸುವಂತಾಯಿತು.

ಈ ಮಧ್ಯೆ, ಮಹದೇಶ್ವರ ಬೆಟ್ಟಕ್ಕೆ ತೆರಳಲು ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದ ಬಸ್‌ ನಿಲ್ದಾಣದಲ್ಲಿ ಕಾದು ನಿಂತಿದ್ದ ಮಹಿಳೆಯರು ಬಸ್‌ ಹತ್ತಲು ಒಟ್ಟಿಗೆ ನುಗ್ಗಿದಾಗ ಬಸ್‌ನ ಬಾಗಿಲು ಮುರಿದುಹೋದ ಘಟನೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಸುಬ್ರಹ್ಮಣ್ಯಗಳಿಗೆ ಉತ್ತರ ಕರ್ನಾಟಕ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ 8 ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಧರ್ಮಸ್ಥಳದಿಂದ ಸುಬ್ರಹ್ಯಣ್ಯಕ್ಕೆ ಬಿಡಲಾಯಿತು. ಅಲ್ಲದೆ, ಮಂಗಳೂರಿನಲ್ಲಿ ಕಿಟಕಿ ಬದಿಯ ಸೀಟಿಗಾಗಿ ಮಹಿಳೆಯರ ಮಧ್ಯೆ ನೂಕಾಟ-ತಳ್ಳಾಟ ನಡೆದಿದ್ದು, ಸೀಟಿನ ಬದಿಯ ಕಬ್ಬಿಣದ ಕಂಬಿಯನ್ನೇ ಕಿತ್ತುಹಾಕಿದ ಘಟನೆ ಕೂಡ ನಡೆಯಿತು. ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಪ್ರತಿ ಐದು ನಿಮಿಷಕ್ಕೊಂದು ಬಸ್‌ ಇದ್ದರೂ ಭಾರೀ ಜನಜಂಗುಳಿ ಕಂಡು ಬಂತು. ಕಾಲಿಡಲೂ ಜಾಗವಿಲ್ಲದಂತೆ ಬಸ್‌ಗಳು ತುಂಬಿದ್ದವು.

ಮರಳು ಮಾಫಿಯಾಗೆ ಪೇದೆ ಬಲಿ: ಕರ್ತವ್ಯ ನಿರ್ಲಕ್ಷ ಆರೋಪದಡಿ ಮೂವರು ಪೊಲೀಸರ ಅಮಾನತ್ತು

ಉಚಿತ ಬಸ್‌ ಯೋಜನೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಧರ್ಮಸ್ಥಳಕ್ಕೆ ಆಗಮಿಸಿದ್ದ ಹುಬ್ಬಳ್ಳಿಯ ಮಹಿಳೆಯೊಬ್ಬರು ಮೊದಲ ಬಾರಿಗೆ ಮಂಜುನಾಥನ ದರ್ಶನ ಪಡೆದ ಖುಷಿ ಹಂಚಿಕೊಂಡರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸುಬ್ರಹ್ಮಣ್ಯ ಬಸ್‌ ನಿಲ್ದಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಕೊಪ್ಪಳದಿಂದ ಮಂಗಳೂರಿಗೆ ತೆರಳುವ ಬಸ್ಸಿನಲ್ಲಿ ಬರೋಬ್ಬರಿ 136 ಪ್ರಯಾಣಿಕರು ಪ್ರಯಾಣಿಸಿದ್ದು, ಅದರಲ್ಲಿ ಶೇ.90ರಷ್ಟು ಮಹಿಳೆಯರೇ ತುಂಬಿದ್ದರು. ಮಿತಿಮೀರಿದ ಪ್ರಯಾಣಿಕರಿಂದಾಗಿ ಬಸ್‌ ನಿಧಾನಗತಿಯಲ್ಲಿ ಪ್ರಯಾಣಿಸಿದ್ದು, ಕೇವಲ 20 ಕಿ.ಮೀ. ಸಂಚಾರಕ್ಕೆ ಒಂದೂವರೆ ಗಂಟೆ ತೆಗೆದುಕೊಂಡಿತು. ಮೈಸೂರಿನ ಚಾಮುಂಡಿ ಬೆಟ್ಟದಲ್ಲೂ ಮಹಿಳೆಯರ ರಶ್‌ ಕಂಡುಬಂತು. ಮೈಸೂರಿನ ಕುವೆಂಪುನಗರ ಬಸ್‌ ಡಿಪೋದಿಂದ ಚಾಮುಂಡಿಬೆಟ್ಟಕ್ಕೆ ಶನಿವಾರ 2 ಬಸ್‌ಗಳು ಹೋಗಿ-ಬಂದು ಮಾಡಿದ್ದು, ಅವುಗಳಲ್ಲಿ 2,600 ಮಂದಿ ಪ್ರಯಾಣಿಸಿದ್ದಾರೆ. ಈ ಪೈಕಿ 1,600 ಮಂದಿ ಮಹಿಳೆಯರು ಮತ್ತು 1 ಸಾವಿರ ಮಂದಿ ಪುರುಷರು ಇದ್ದರು.

ಇದೇ ವೇಳೆ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇಗುಲ, ನಿಮಿಷಾಂಬ ದೇಗುಲ, ಬಲಮುರಿ, ಎಡಮುರಿ, ಮುತ್ತತ್ತಿ, ಗಗನಚುಕ್ಕಿ ಜಲಪಾತ, ಕೆಆರ್‌ಎಸ್‌ ಬೃಂದಾವನ, ವಿಜಯಪುರ ಜಿಲ್ಲೆಯ ಆಲಮಟ್ಟಿ, ವಿಶ್ವವಿಖ್ಯಾತ ಗೋಳಗುಮ್ಮಟ, ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನ, ಬೆಳಗಾವಿ ಜಿಲ್ಲೆ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮದೇವಿ, ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನ ಅನ್ನಪೂರ್ಣೇಶ್ವರಿ, ಶೃಂಗೇರಿಯ ಶಾರದಾಂಬೆ, ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮೇ ದೇವಾಲಯ ಸೇರಿದಂತೆ ರಾಜ್ಯದ ಇತರೆಡೆಯ ಶಕ್ತಿಸ್ಥಳ, ಪ್ರವಾಸಿ ತಾಣಗಳಲ್ಲೂ ಮಹಿಳಾ ಪ್ರಯಾಣಿಕರ ದಂಡು ಕಂಡು ಬಂತು.

ಬಿಜೆಪಿ ಮುಖಂಡರಿಂದಲೇ ಪಕ್ಷಕ್ಕೆ ಸೋಲು: ಸಂಸದ ಮುನಿಸ್ವಾಮಿ ಬೇಸರ

ಮಹಿಳೆಯರ ವೀಕೆಂಡ್‌ ಪ್ರಯಾಣ 50% ಏರಿಕೆ!: ಮಹಿಳೆಯರ ಉಚಿತ ಬಸ್‌ ಪ್ರಯಾಣದ ಶಕ್ತಿ ಯೋಜನೆ ಜಾರಿಗೊಂಡ ನಂತರದ ಮೊದಲ ವೀಕೆಂಡ್‌ ಹಿನ್ನೆಲೆಯಲ್ಲಿ ಶನಿವಾರ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಮಹಿಳೆಯರ ಸಂಖ್ಯೆಯಲ್ಲಿ ಶೇ.45ರಿಂದ 50ರಷ್ಟುಹೆಚ್ಚಳವಾಗಿದೆ. ಹಾಗಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕಾಲಿಡಲು ಸಹ ಸಾಧ್ಯವಾಗದಷ್ಟು ದಟ್ಟಣೆ ಕಂಡುಬಂದಿದೆ.