ಬೈಕಲ್ಲಿ ಬಂದು ತನ್ನನ್ನೇ ಬೀಳಿಸಿ ಎಳೆದೊಯ್ದರು ಪರ್ಸ್‌ ಬಿಡದ ದಿಟ್ಟ ಮಹಿಳೆ: ವೀಡಿಯೋ

ಪಂಜಾಬ್‌ನಲ್ಲಿ ಬೈಕ್‌ನಲ್ಲಿ ಬಂದ ಕಳ್ಳ ಪರ್ಸ್ ಕಸಿಯಲು ಯತ್ನಿಸಿದಾಗ ಮಹಿಳೆಯೊಬ್ಬರು ಕೆಳಗೆ ಬಿದ್ದರೂ ಪರ್ಸ್ ಬಿಡದೆ ಹೋರಾಡಿದ್ದಾರೆ. ಕಳ್ಳ ಪರಾರಿಯಾಗಿದ್ದು, ಮಹಿಳೆಯ ದಿಟ್ಟತನಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Punjabi woman s Brave Fightback Leaves Thief Empty Handed watch video

ಒಂಟಿಯಾಗಿ ಓಡಾಡುವ ಮಹಿಳೆಯರು, ಅಥವಾ ಅಸಹಾಯಕರು ವೃದ್ಧರನ್ನೇ ಟಾರ್ಗೆಟ್ ಮಾಡುವ ಕಳ್ಳರು, ಅವರ ಬಳಿ ಇದ್ದ ಪರ್ಸ್ ಅಥವಾ ಸರವನ್ನು ಕ್ಷಣದಲ್ಲಿ ಎಗ್ಗರಿಸಿಕೊಂಡು ಹೋಗುವಂತಹ ಹಲವು ಘಟನೆಗಳು ಈಗಾಗಲೇ ನಡೆದಿವೆ. ಆದರೆ ಇಲ್ಲೊಂದು ಕಡೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಪರ್ಸನ್ನು ಬೈಕ್‌ನಲ್ಲಿ ಬಂದ ಕಳ್ಳನೋರ್ವ ಎಳೆದುಕೊಂಡು ಹೋಗಿದ್ದಾನೆ.  ಈ ವೇಳೆ ಪರ್ಸ್‌ ಮೇಲೆ ಹಿಡಿತ ಬಿಡದ ಮಹಿಳೆ ತಾವು ಕೆಳಗೆ ಬಿದ್ದರೂ ಕೂಡ ಪರ್ಸನ್ನು ಬಿಡದೇ ಧೈರ್ಯ ತೋರಿದ್ದಾರೆ. ಇದರಿಂದ ಕಳ್ಳ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅವರನ್ನು ಹಾಗೆಯೇ ಬಿಟ್ಟು ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ದಿಟ್ಟತನಕ್ಕೆ ಶ್ಲಾಘನೆ ವ್ಯಕ್ತವಾಗಿದೆ. 

ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದ ಮುಸುಕುಧಾರಿ ವ್ಯಕ್ತಿಯೊಬ್ಬ, ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕೈನಲ್ಲಿದ್ದ ಪರ್ಸನ್ನು  ಆತ ಕಿತ್ತುಕೊಳ್ಳಲು ಮುಂದಾಗಿದ್ದು, ಬೈಕನ್ನು ಓಡಿಸುತ್ತಲೇ ಪರ್ಸನ್ನು ಎಳೆದಿದ್ದಾನೆ. ಈ ವೇಳೆ ಮಹಿಳೆ ಕೆಳಗೆ ಬಿದ್ದರೂ ಪರ್ಸ್‌ನಿಂದ ಕೈ ಬಿಟ್ಟಿಲ್ಲ, ಈ ವೇಳೆ ಆತ ಆಕೆ ಬಿದ್ದಿದ್ದಾರೆ ಎಂಬುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ಕೆಲ ದೂರಗಳವರೆಗೆ ಅವರನ್ನು ಎಳೆದುಕೊಂಡು ಹೋಗಿದ್ದಾನೆ. ಆದರೂ ಮಹಿಳೆ ಪರ್ಸನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಹೀಗಾಗಿ ಕಳ್ಳ ತನ್ನ ಪ್ರಯತ್ನ ಕೈ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಫಿರೋಜ್‌ಪುರ್‌ನ ಟುಲಿವಾಲಿ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದೆ.  ಈ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಹೀಗೆ ಪರ್ಸ್‌ಗಳ್ಳನೊಂದಿಗೆ ಹೋರಾಡಿ ಗೆದ್ದ ಮಹಿಳೆಯ ಹೆಸರು ಆಶಾ ಬಿಂದ್ರಾ, ಇವರು ತಮ್ಮ ಕುಟುಂಬದ ಇನ್ನೊಬ್ಬ ಸದಸ್ಯರ ಜೊತೆ ಧಾರ್ಮಿಕ ಕೇಂದ್ರವೊಂದಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.  ಇವರ ಪರ್ಸ್‌ನಲ್ಲಿ ಮೊಬೈಲ್ ಫೋನ್ ಸೇರಿದಂತೆ ಕೆಲ ಅಮೂಲ್ಯ ವಸ್ತುಗಳಿದ್ದು, ಕಳ್ಳ ಅದನ್ನು ಎಗರಿಸಲು ನೋಡಿದ್ದಾನೆ. ಆದರೆ ಆಶಾ ಬಿಂದ್ರಾ ದಿಟ್ಟ ಹೋರಾಟ ನಡೆಸಿ ಕಳ್ಳ ಬರಿಗೈಲಿ ಓಡುವಂತೆ ಮಾಡಿದ್ದಾರೆ. ಘಟನೆಯಲ್ಲಿ ಆಶಾ ಬಿಂದ್ರಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 

ಘಟನೆ ಬಗ್ಗೆ ಮಾತನಾಡಿದ ಅವರು,  ನಾನು ನನ್ನ ಕುಟುಂಬದ ಸದಸ್ಯರ ಜೊತೆ ಕ್ಯಾಂಪೊಂದಕ್ಕೆ ಹೋಗುತ್ತಿದೆ ಈ ವೇಳೆ ಬಂದ ಮುಸುಕುಧಾರಿ ದರೋಡೆಕೋರ ನನ್ನ ಕೈನಲ್ಲಿದ್ದ ಪರ್ಸನ್ನು ಕಸಿಯಲು ಯತ್ನಿಸಿದ ಆದರೆ ನಾನು ಬಿಡಲಿಲ್ಲ, ಹೀಗಾಗಿ ಆತ ಓಡಿ ಹೋದ, ನನಗೆ ಘಟನೆಯಲ್ಲಿ ಗಾಯಗಳಾಗಿವೆ. ಆದರೂ ನಾನು ಬಿಡಲಿಲ್ಲ ಎಂದು ಅವರು ಹೇಳಿದ್ದಾರೆ.  

 

Latest Videos
Follow Us:
Download App:
  • android
  • ios