ಬೆಂಗಳೂರಿನ ಈ ಬಾರ್ ಮಹಿಳೆಯರಿಗೆ ಮಾತ್ರ!
ಈ ಬಾರ್ ಮಹಿಳೆಯರಿಗೆ ಮಾತ್ರ!| ಮಾಲಿಕರಿಂದ ಹಿಡಿದು ಕೆಲಸಗಾರರವರೆಗೆ ಎಲ್ಲರೂ ಮಹಿಳೆಯರೇ| ಮಾ.8ಕ್ಕೆ ಸೇವೆ ಮುಕ್ತ
ಬೆಂಗಳೂರು[ಫೆ.14]: ನಗರದಲ್ಲೊಂದು ಬಾರ್ ಆ್ಯಂಡ್ ರೆಸ್ಟೋರೆಂಟ್ ಆರಂಭವಾಗಿದೆ. ಇದು ಮಹಿಳೆಯರಿಂದಲೇ, ಮಹಿಳೆಯರಿಗಾಗಿಯೇ, ಮಹಿಳೆಯರೇ ಸಂಪೂರ್ಣವಾಗಿ ನಡೆಸುವ ಬಾರ್. ಇಲ್ಲಿ ಪುರುಷರಿಗೆ ಸ್ವಾಗತವಿಲ್ಲ!
ಹೌದು, ನಗರದ ಬ್ರಿಗೇಡ್ ರಸ್ತೆಯಲ್ಲಿ ‘ಮಿಸ್ ಆ್ಯಂಡ್ ಮಿಸೆಸ್ ರೆಸ್ಟೋರೆಂಟ್ ಮತ್ತು ಲಾಂಜ್ ಬಾರ್’ ಹೆಸರಿನ ಬಾರ್ ಹಾಗೂ ರೆಸ್ಟೋರೆಂಟ್ ಆರಂಭಗೊಳ್ಳಲಿದೆ. ಈ ಇಡೀ ರೆಸ್ಟೋರೆಂಟ್ ಸಂಪೂರ್ಣ ಮಹಿಳಾ ಮಯ.
ರೆಸ್ಟೋರೆಂಟ್‌ನ ಮಾಲಿಕರಿಂದ ಬೌನ್ಸರ್‌ವರೆಗೆ, ವ್ಯಾಲೆಟ್ ಪಾರ್ಕಿಂಗ್ ಸಿಬ್ಬಂದಿಯಿಂದ ಕ್ಯಾಷಿಯರ್, ಬಾಣಸಿಗರು, ಸಫ್ಲೈಯರ್‌ವರೆಗೆ ಎಲ್ಲರೂ ಮಹಿಳೆಯರೇ. 2500 ಚದರಡಿ ಅಡಿಯಲ್ಲಿ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಈ ರೆಸ್ಟೋರೆಂಟ್ ಮಾಚ್‌ರ್ 8ರಂದು ಮಹಿಳಾ ದಿನಾಚರಣೆ ದಿನವೇ ಸೇವೆಗೆ ಮುಕ್ತಗೊಳಿಸಲು ತಯಾರಿ ನಡೆದಿದೆ.
ಮಹಿಳೆಯರಿಗೆ ಸೀಮತವಾಗಿರುವ ಈ ರೆಸ್ಟೋರೆಂಟ್‌ನಲ್ಲಿ ವೈವಿಧ್ಯಮಯ ಊಟ, ಮದ್ಯದ ಜತೆಗೆ ಸ್ಪಾ, ನೇಲ್ ಆರ್ಟ್, ಪೆಡಿಕ್ಯೂರ್, ಲೆಗ್ ಮಸಾಜ್ ಸೇರಿದಂತೆ ಕೈಗೆಟಕುವ ದರದಲ್ಲಿ ಹಲವು ಸೇವೆಗಳು ಲಭ್ಯವಾಗಲಿವೆ. ಗ್ರಾಹಕರು ತಮಗಿಷ್ಟವಾದ ಸೇವೆ ಪಡೆದುಕೊಳ್ಳಬಹುದು. ಈ ರೆಸ್ಟೋರೆಂಟ್ ವಾರದ ಎಲ್ಲ ದಿನವೂ ಮಧ್ಯಾಹ್ನ 12ರಿಂದ ತಡರಾತ್ರಿ 1ರವರೆಗೂ ಕಾರ್ಯ ನಿರ್ವಹಿಸಲಿದೆ. ಮಹಿಳೆಯ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ತಡರಾತ್ರಿ ಕ್ಯಾಬ್ ಬುಕ್ ಮಾಡಿ ಕಳುಹಿಸಿ ಕೊಡಲಾಗುತ್ತದೆ ಎಂದು ರೆಸ್ಟೋರೆಂಟ್‌ನ ವ್ಯವಸ್ಥಾಪಕ ನಿರ್ದೇಶಕಿ ಪಂಜೂರಿ ವಿ.ಶಂಕರ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹಲವು ಸಂದರ್ಭಗಳಲ್ಲಿ ರೆಸ್ಟೋರೆಂಟ್‌ಗಳಲ್ಲಿ ಮಹಿಳೆಯರು ಪುರುಷರೊಂದಿಗೆ ಕುಳಿತು ಊಟ ಮಾಡುವಾಗ ಅಥವಾ ಮದ್ಯ ಸೇವಿಸುವಾಗ ಮುಜುಗರ ಪಡುವುದನ್ನು ನೋಡಿದ್ದೆ. ಹೀಗಾಗಿ ಮಹಿಳೆಯರಿಗಾಗಿಯೇ ಒಂದು ರೆಸ್ಟೋರೆಂಟ್ ಆರಂಭಿಸುವ ಯೋಚನೆ ಬಂದಿತು. ಬಳಿಕ ಸಮಾನ ಮನಸ್ಕ ಸ್ನೇಹಿತೆಯರಾದ ಅಂಕಿತಾ ಶೆಟ್ಟಿ, ಅರುಣಾ ಶ್ರೀಧರ್, ಸಹನಾ ಸಂಪತ್, ಆಶಾ ಹೆಗಡೆ ಹಾಗೂ ಸೌಮ್ಯಾ ಶ್ರೀನಿವಾಸ್ ಅವರೊಂದಿಗೆ ಚರ್ಚಿಸಿದೆ. ಎಲ್ಲರೂ ಉತ್ಸಾಹ ತೋರಿದ ಪರಿಣಾಮ ರೆಸ್ಟೋರೆಂಟ್ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಈ ರೆಸ್ಟೋರೆಂಟ್‌ಗೆ ಗ್ರಾಹಕರಿಂದ ವ್ಯಕ್ತವಾಗುವ ಪ್ರತಿಕ್ರಿಯೆ ಆಧರಿಸಿ ಬೇರೆಡೆಗೂ ವಿಸ್ತರಿಸುವ ಬಗ್ಗೆ ತೀರ್ಮಾನಿಸುವುದಾಗಿ ಅವರು ಹೇಳಿದರು.