60ಕ್ಕೂ ಹೆಚ್ಚು ದೇಸಿ ಗೋವು ಸಲಹುತ್ತಿರುವ ಆಧುನಿಕ ಗೋಪಾಲಕಿ ಕಮಲಮ್ಮ

ಉಡುಪಿ ನಗರಸಭಾ ವ್ಯಾಪ್ತಿಯ ದೊಡ್ಡಣಗುಡ್ಡೆಯ ಅಂಬೇಡ್ಕರ್ ಕಾಲನಿಯ ನಿವಾಸಿ ಕಮಲಮ್ಮನವರು ಗೋರಕ್ಷಣೆಯ ವಿಷಯದಲ್ಲಿ ಓರ್ವ ಮಾದರಿ ಮಹಿಳೆ. ಪರಿಶಿಷ್ಟ ಜಾತಿಯ ವಿಧವೆಯಾಗಿರುವ ಇವರು ತನಗೆ ಸರ್ಕಾರದಿಂದ ಒದಗಿದ ಕೇವಲ ಮೂರು ಸೆಂಟ್ಸ್ ಜಾಗದಲ್ಲಿ ಸುಮಾರು 60 ಕ್ಕೂ ಅಧಿಕ ದೇಶಿ ಹಸುಗಳನ್ನು ಪೋಷಿಸುತ್ತಿದ್ದಾರೆ.

Kamalamma tending  more than 60 desi cows at udupi rav

ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ನ.9) : ಉಡುಪಿ ನಗರಸಭಾ ವ್ಯಾಪ್ತಿಯ ದೊಡ್ಡಣಗುಡ್ಡೆಯ ಅಂಬೇಡ್ಕರ್ ಕಾಲನಿಯ ನಿವಾಸಿ ಕಮಲಮ್ಮನವರು ಗೋರಕ್ಷಣೆಯ ವಿಷಯದಲ್ಲಿ ಓರ್ವ ಮಾದರಿ ಮಹಿಳೆ. ಪರಿಶಿಷ್ಟ ಜಾತಿಯ ವಿಧವೆಯಾಗಿರುವ ಇವರು ತನಗೆ ಸರ್ಕಾರದಿಂದ ಒದಗಿದ ಕೇವಲ ಮೂರು ಸೆಂಟ್ಸ್ ಜಾಗದಲ್ಲಿ ಸುಮಾರು 60 ಕ್ಕೂ ಅಧಿಕ ದೇಶಿ ಹಸುಗಳನ್ನು ಪೋಷಿಸುತ್ತಿದ್ದಾರೆ.

ಕಷ್ಟ ಯಾರಿಗ್ ಬರೋಲ್ಲ ಹೇಳಿ, ಇಂಥ ದೃತಿಗೆಡದ ನಾರಿ ಎಲ್ಲರಿಗೂ ಆಗ್ತಾರೆ ಮಾದರಿ!

ನಗರ ಪ್ರದೇಶದಲ್ಲಿ ಮಹಿಳೆಯೊಬ್ಬರ , ಈ ಗೋ ಪ್ರೇಮ  ನಿಜಕ್ಕೂ ಒಂದು ಅಚ್ಚರಿಯ ಸಂಗತಿ. ಎಕರೆಗಟ್ಟಲೆ ಕೃಷಿ ಭೂಮಿ ಇರುವ ಕೆಲವು ಕೃಷಿಕರೂ ಇತ್ತೀಚೆಗೆ ಗೋರಕ್ಷಣೆಗೆ ಹಿಂದೇಟು ಹಾಕುತ್ತಿರುವಾಗ ಹಾಗೂ ಗೋರಕ್ಷಣೆಯ ಕಾಳಜಿ ಮಾತಾಡುವವರೂ ಕಾರಣಾಂತರಗಳಿಂದ  ಗೋವಿನ ಪೋಷಣೆಯ ಮಾತು ಬಂದಾಗ ಹತ್ತಾರು ಸಬೂಬುಗಳನ್ನು ಹೇಳಿ ಮಾರು ದೂರ ಸರಿಯುತ್ತಾರೆ. ಆದರೆ ಇಂಥ ಸಂದರ್ಭದಲ್ಲೂ ನಗರ ಭಾಗದಲ್ಲಿ ಆರ್ಥಿಕ ಬಲ, ಅಗತ್ಯ ಭೂಮಿ, ಸಹಾಯಕರ ನೆರವು  ವ್ಯವಸ್ಥೆಗಳಿಲ್ಲದೆಯೇ ಕೇವಲ ಗೋವಿನ ಪ್ರೀತಿ , ಕಾಳಜಿ  ಮತ್ತು ಶ್ರದ್ಧೆಯಿಂದ ಈ ಕೆಲಸ ಮಾಡಿಕೊಂಡು ಬಂದಿದ್ದಾರೆ.

ಅಧಿಕ ಇಳುವರಿಯ ಹಾಲಿನ ಆದಾಯಕ್ಕಾಗಿ ಆಸೆಪಟ್ಟು ವಿದೇಶಿ ತಳಿಯ ಹಸುಗಳನ್ನು ಸಾಕದೆ 60 ಕ್ಕೂ ಅಧಿಕ ದೇಶಿ ಹಸುಗಳನ್ನೇ ಸಾಕುತ್ತಿರುವ ಕಮಲಮ್ಮನ ಸಾಹಸ ಇವತ್ತಿನ‌ ಕಾಲಕ್ಕೆ ಒಂದು ಕೌತುಕವೇ ಆಗಿದೆ .‌ಇವರ ಮಗನೂ ತಾಯಿಯ ಕೆಲಸಕ್ಕೆ ಅಷ್ಟಿಷ್ಟು ನೆರವಾಗುತ್ತಾನೆ . 

ಕೆಲವರ್ಷಗಳ ಹಿಂದೆ ಹೊಸನಗರದ ಶ್ರೀ ರಾಮಚಂದ್ರಾಪುರ ಮಠಾಧೀಶರು ಕಮಲಮ್ಮನ ಗೋವಿನ ಕಾಳಜಿಯನ್ನು ಮೆಚ್ಚಿ ಮಠದ ವತಿಯಿಂದ ಪುಟ್ಟ ಸುಂದರವಾದ ಗೋಶಾಲೆ ನಿರ್ಮಿಸಿ ಕೊಟ್ಟಿದ್ದರು‌. ಆದರೆ ಸೂಕ್ತ  ಆವರಣ ಗೋಡೆ ಇಲ್ಲದ್ದರಿಂದ  ಕೆಲವು ಬಾರಿ ಗೋಹಂತಕರು ಗೋಕಳ್ಳರು ಇಲ್ಲಿನ ಗೋವುಗಳನ್ನು ಕದ್ದೊಯ್ದದ್ದೂ ಇದೆ!

ಈಗಲೂ ಆಗಾಗ್ಗೆ ಗೋಕಳ್ಳರ ವಕ್ರದೃಷ್ಟಿ ಈ ಗೋಶಾಲೆಯ ಮೇಲಿರುವುದು ದುರಂತ. ಹೀಗಿರುವಾಗ ಕಳೆದ ವರ್ಷದ ದೀಪಾವಳಿಯಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಶಾಸಕ ರಘುಪತಿ ಭಟ್ಟರೊಂದಿಗೆ ಸೇರಿಕೊಂಡು ಕಮಲಮ್ಮನ ಗೋಶಾಲೆಗೆ ಬಂದು ಗೋವುಗಳಿಗೆ ಪೂಜೆ ನೆರವೇರಿಸಿ ಕಮಲಮ್ಮ ಮತ್ತು ಅವರ ಮಗನ ಕಾರ್ಯವನ್ನು ಶ್ಲಾಘಿಸಿ ಉಡುಗೊರೆಯನ್ನೂ ನೀಡಿದ್ದರು.

ಅದೇ ಸಂದರ್ಭ ಶಾಸಕ ರಘುಪತಿ ಭಟ್ ತಾವು ಮತ್ತು ಉಡುಪಿ ನಗರಸಭೆಯ ವತಿಯುಂದ ಈ ಗೋಶಾಲೆಗೆ ಕೆಲವು ಮೂಲ ಸೌಕರ್ಯಗಳನ್ನು ಒದಗಿಸಿರುವುದನ್ನು ವಿವರಿಸಿ , ವಿಶೇಷ ಪ್ರಕರಣವೆಂದು ಗುರುತಿಸಿ ಆವರಣ ಗೋಡೆಯನ್ನು ತುರ್ತಾಗಿ ನಿರ್ಮಿಸಿಕೊಡುವಂತೆ ಸಚಿವರಿಗೆ ಮನವಿ ಮಾಡಿದ್ದರು .‌

ಅದರಂತೆ ಸಮಾಜಕಲ್ಯಾಣ ಇಲಾಖೆಯ ಮೂಲಕ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸದ್ರಿ ಉದ್ದೇಶಕ್ಕಾಗಿ 15 ಲಕ್ಷ ರೂ ಮಂಜೂರು ಮಾಡಿ, ಕಮಲಮ್ಮರ ಗೋಪ್ರೇಮವನ್ನು ಸರ್ಕಾರದ ಮೂಲಕ ಗುರುತಿಸಿದ್ದಾರೆ. ಈ ದೊಡ್ಡ ಸಹಾಯದ ವಿಷಯ ತಿಳಿದ ಕಮಲ್ಮನವರ ಕಣ್ಣಂಚಲ್ಲಿ ಆನಂದಬಾಷ್ಪವೇ ಹರಿದು ಬಂದಿತ್ತು.

ತನ್ನ ಹಸುಗಳ ರಕ್ಷಣೆಗೆ ಸರ್ಕಾರ ನೆರವಿಗೆ ಬಂದಿರುವುದಕ್ಕಾಗಿ ಸಂತೋಷಗೊಂಡಿರುವ ಕಮಲಮ್ಮ ಸಚಿವ ಪೂಜಾರಿಯವರು ಮತ್ತು ಶಾಸಕ ರಘುಪತಿ ಭಟ್‌ರಿಗೆ ಕೃತಜ್ಞತೆ ಸಲ್ಲಿಸಿದ್ದರು.

ಕಮಲಮ್ಮನವರು ಇಡೀ ರಾಜ್ಯಕ್ಕೆ ಓರ್ವ ಮಾದರಿಯಾದ ಪರಿಶಿಷ್ಟ ಜಾತಿಯ  ಮಹಿಳೆ ಎಂಬ ನೆಲೆಯಲ್ಲಿ ವಿಶೇಷ ಕೋಟಾದಡಿ ಈ ಶಿಫಾರಸನ್ನು ಪರಿಗಣಿಸಿ ಈ ಅನುದಾನ ಮಂಜೂರು ಮಾಡಲಾಗಿತ್ತು. 
 
ಅರ್ಜಿ ಹಾಕದೆ ಬಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ:

ನವೆಂಬರ್ ತಿಂಗಳು ಬಂದರೆ ರಾಜ್ಯೋತ್ಸವ ಪ್ರಶಸ್ತಿಗಾಗಿ ಲಾಬಿ ಕೇವಲ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲ ಜಿಲ್ಲಾ ಮಟ್ಟದಲ್ಲೂ ನಡೆಯುವುದು ಮಾಮೂಲಿ. ಈ ಬಾರಿ ಕಮಲಮ್ಮ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅರಸಿಕೊಂಡು ಬಂದಿತ್ತು. ಪ್ರಶಸ್ತಿ ಪ್ರಕಟಣೆಗೊಳ್ಳುವವರೆಗೂ ಗೋ ಪ್ರೇಮಿ ಕಮಲಮ್ಮ ಗೆ ಮಾಹಿತಿಯೇ ಇರಲಿಲ್ಲ. ಯಾವುದೇ ಅರ್ಜಿ ಹಾಕದೆ ಲಾಬಿ ನಡೆಸದೆ ಪ್ರಶಸ್ತಿ ಪಡೆದು ಗಮನ ಸೆಳೆದಿದ್ದರು.

60ಕ್ಕೇ ಗೃಹೋದ್ಯಮದಲ್ಲಿ ಯಶಸ್ಸು ಕಂಡ ನಾಗಮಣಿ ಅವರಿಗೀಗ ವಯಸ್ಸು 88

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಮಲಮ್ಮಗೆ ಅಭಿನಂದನೆ:

ಈ ಬಾರಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪಡೆದ, ಕಮಲಮ್ಮನವರಿಗೆ  ಶಾಸಕ  ಕೆ. ರಘುಪತಿ ಭಟ್ ರವರು ಮನೆಗೆ ಭೇಟಿ ನೀಡಿ ಅಭಿನಂದಿಸಿದರು. ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಕಳೆದ ಅನೇಕ ವರ್ಷಗಳಿಂದ ತನ್ನ ಸಣ್ಣ ನಿವೇಶನದಲ್ಲಿ 60ಕ್ಕೂ ಅಧಿಕ ದೇಶಿ ಹಸುಗಳನ್ನು ಅತ್ಯಂತ ಶ್ರದ್ಧೆ ಮತ್ತು ಪ್ರೀತಿಯಿಂದ ಪೋಷಿಸಿಕೊಂಡು ಸಮಾಜಕ್ಕೆ ಮಾದರಿಯಾದ ಪುಣ್ಯ ಕಾರ್ಯವನ್ನು ನಡೆಸುತ್ತಿರುವ ಕಮಲಮ್ಮನ ಅವರ ಶ್ರಮವನ್ನು ಪರಿಗಣಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲು ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಶಿಫಾರಸ್ಸು ಮಾಡಿದ್ದರು.

Latest Videos
Follow Us:
Download App:
  • android
  • ios