ಉತ್ತರ ಪ್ರದೇಶದ ಜೌನ್ಪುರದಲ್ಲಿ ನಿರಂತರ ವಿದ್ಯುತ್ ಕಡಿತದಿಂದ ಬೇಸತ್ತ ಮಹಿಳೆಯರು ಗಂಡನ ಮನೆ ಬಿಟ್ಟು ತವರು ಸೇರುತ್ತಿದ್ದಾರೆ. ವಿದ್ಯುತ್ ಕೊರತೆಯಿಂದ ದೈನಂದಿನ ಕೆಲಸಗಳು, ಮಕ್ಕಳ ಶಿಕ್ಷಣ ಮತ್ತು ನೀರಿನ ಸಮಸ್ಯೆ ಉಲ್ಬಣಿಸಿದೆ. ಸ್ಥಳೀಯರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ವಿದ್ಯುತ್ ಇಲಾಖೆ ಹೊಸ ಟ್ರಾನ್ಸ್ಫಾರ್ಮರ್ ಅಳವಡಿಸುವ ಭರವಸೆ ನೀಡಿದೆ.

ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಮಹಿಳೆಯರೆಲ್ಲ ತಮ್ಮ ಗಂಡನ ಮನೆ ಬಿಟ್ಟು ತವರು ಸೇರ್ತಿದ್ದಾರೆ. ಮಹಿಳೆಯರ ಈ ನಿರ್ಧಾರದಿಂದ ಬೇಸತ್ತ ಗಂಡಂದಿರುವ ಯೋಗಿ ಸರ್ಕಾರದ ಮೊರೆ ಹೋಗಿದ್ದಾರೆ. ಅಷ್ಟಕ್ಕೂ ಮಹಿಳೆಯರು ಮನೆ ಬಿಡಲು ಕಾರಣ ಕೌಟುಂಬಿಕ ಕಲಹ ಅಲ್ವೇ ಅಲ್ಲ. ವಿದ್ಯುತ್ ಕಡಿತ. ಯಸ್, ಕಳೆದ ಆರು ತಿಂಗಳಿಂದ ನಿರಂತರವಾಗಿ ಆಗ್ತಿರುವ ವಿದ್ಯುತ್ ಕಡಿತದಿಂದ ಬೇಸತ್ತ ಮಹಿಳೆಯರು ತಮ್ಮ ಗಂಡನ ಮನೆ ತೊರೆದು ತವರು ಸೇರ್ತಿದ್ದಾರೆ.

ಈ ಘಟನೆ ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯ ದೇವಚಂದಪುರ ವಾರ್ಡ್ನಲ್ಲಿರುವ ಕಾಕೋರ್ ಗಹನ್ ಮೊಹಲ್ಲಾದಲ್ಲಿ ನಡೆದಿದೆ. ಕಾಕೋರ್ ಗಹನ್ ಮೊಹಲ್ಲಾ ಇದೇ ಕಾರಣಕ್ಕೆ ಸ್ಥಳೀಯ ಜನರ ಆಕರ್ಷಣೆಯ ಕೇಂದ್ರವಾಗಿದೆ. ಇಲ್ಲಿ ಟ್ರಾನ್ಸ್ಫಾರ್ಮರ್ ಆಗಾಗ್ಗೆ ಹಾಳಾಗುವುದರಿಂದ ವಿದ್ಯುತ್ ಕಡಿತವಾಗ್ತಿದೆ. ಬೇಸಿಗೆಯ ದಗೆಯಲ್ಲಿ ಫ್ಯಾನ್ ಇಲ್ಲ ಅಂದ್ರೆ ಇರೋದು ಕಷ್ಟ. ಈ ಸಮಯದಲ್ಲೇ ವಿದ್ಯುತ್ ವ್ಯತ್ಯಯ ಹೆಚ್ಚಾಗಿದ್ದು, ಹಳ್ಳಿ ಹಾಗೂ ಪಟ್ಟಣ ಪ್ರದೇಶದಲ್ಲಿ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ. ಈ ಪ್ರದೇಶದ ಅನೇಕ ಮಹಿಳೆಯರು ತಮ್ಮ ಅತ್ತೆ-ಮಾವನ ಮನೆ ತೊರೆದು ತವರಿಗೆ ಹೋಗಿದ್ದಾರೆ. ಗಂಡನ ಮನೆಗೆ ವಾಪಸ್ ಬರ್ಬೇಕು ಅಂದ್ರೆ ವಿದ್ಯುತ್ ಸಮಸ್ಯೆ ನಿಲ್ಬೇಕು ಎನ್ನುವ ಷರತ್ತು ವಿಧಿಸಿದ್ದಾರೆ.

ಅನಿಯಮಿತ ವಿದ್ಯುತ್ ಸರಬರಾಜಿನಿಂದಾಗಿ, ಮಹಿಳೆಯರು ತಮ್ಮ ಮನೆಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗ್ತಿಲ್ಲ. ಕೂಲರ್ , ಫ್ಯಾನ್ ಮತ್ತು ಇತರ ವಿದ್ಯುತ್ ಉಪಕರಣಗಳು ಕಾರ್ಯನಿರ್ವಹಿಸದ ಕಾರಣ, ಮನೆಗಳಲ್ಲಿ ಸೆಕೆ ಅಸಹನೀಯವಾಗಿದೆ. ಇದರಿಂದಾಗಿ ಮಹಿಳೆಯರಿಗೆ ಅಡುಗೆ ಮಾಡೋದು, ಮಕ್ಕಳನ್ನು ನೋಡಿಕೊಳ್ಳೋದು, ಮನೆಯ ಇತರ ಕೆಲಸಗಳನ್ನು ಮಾಡೋದು ಕಷ್ಟವಾಗಿದೆ. 

ವಿದ್ಯುತ್ ಸಮಸ್ಯೆಗೆ ಬೇಸತ್ತು ತವರು ಸೇರಿದ್ದ ಸ್ಥಳೀಯ ಕೌನ್ಸಿಲರ್ನ ಪತ್ನಿ ! : ಜನ ಸಾಮಾನ್ಯರು ಮಾತ್ರವಲ್ಲ ಸ್ಥಳೀಯ ಕೌನ್ಸಿಲರ್ ಶಶಿ ಮೌರ್ಯ ಅವರ ಪತ್ನಿ ರಂಜು ದೇವಿ ಕೂಡ ಗಂಡನ ಮನೆ ತೊರೆದಿದ್ದರು. ಸುಂಗುಲ್ಪುರ ಮಡಿಯಾಹುನ್ನಲ್ಲಿರುವ ತಮ್ಮ ತವರು ಮನೆಗೆ ಹೋಗಿದ್ರು. ವಿದ್ಯುತ್ ಕೊರತೆ ಇಲ್ಲಿ ದೊಡ್ಡ ಸಮಸ್ಯೆ ಆಗಿದೆ ಅಂತ ಕೌನ್ಸಿಲರ್ ಒಪ್ಪಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಮದುವೆಯಾದ ಸ್ಥಳೀಯ ನಿವಾಸಿ ರಾಜ್ ಕುಮಾರ ಕೂಡ ಪತ್ನಿ ಇಲ್ಲದೆ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಸಮಸ್ಯೆ ಸರಿಹೋಗುವವರೆಗೂ ತಾನು ಹಿಂತಿರುಗುವುದಿಲ್ಲ ಎಂದಿರುವ ಪತ್ನಿ ತವರಿಗೆ ಹೋಗಿದ್ದಾಳೆ ಎಂದು ರಾಜ್ ಕುಮಾರ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಮಕ್ಕಳ ಓದಿನ ಮೇಲೆ ಪರಿಣಾಮ : ಹಳ್ಳಿಗಳಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಅನಿಯಮಿತ ವಿದ್ಯುತ್ ಸರಬರಾಜು ನೀರಿನ ಕೊರತೆಗೆ ಕಾರಣವಾಗಿದೆ. ಮಹಿಳೆಯರು ನೀರು ತರಲು ಬಹಳ ದೂರು ಹೋಗ್ಬೇಕಾಗಿದೆ. ಇದಲ್ಲದೆ, ರಾತ್ರಿಯಲ್ಲಿ ವಿದ್ಯುತ್ ಕೊರತೆಯಿಂದಾಗಿ ಮಕ್ಕಳು ಓದಲು ಸಾಧ್ಯವಾಗ್ತಿಲ್ಲ. ಇದ್ರಿಂದ ಅವರ ಶಿಕ್ಷಣದ ಮೇಲೆ ಅಡ್ಡಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ಚಿಂತೆ ವ್ಯಕ್ತಪಡಿಸಿದ್ದಾರೆ. 

ಪರಿಹಾರಕ್ಕಾಗಿ ಸ್ಥಳೀಯ ಆಡಳಿತಕ್ಕೆ ಮನವಿ : ಈ ಸಮಸ್ಯೆಯನ್ನು ಪರಿಹರಿಸುವಂತೆ ಜನರು ಯೋಗಿ ಸರ್ಕಾರ ಮತ್ತು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ್ದಾರೆ. ಪರಿಸ್ಥಿತಿ ಸುಧಾರಿಸದಿದ್ದರೆ, ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಟ್ರಾನ್ಸ್ಫಾರ್ಮರ್ಗಳ ಓವರ್ಲೋಡ್ನಿಂದಾಗಿ ಈ ಸಮಸ್ಯೆ ಉದ್ಭವಿಸುತ್ತಿದೆ ಎಂದು ವಿದ್ಯುತ್ ಇಲಾಖೆ ಅಧಿಕಾರಿಗಳು ಹೇಳ್ತಿದ್ದಾರೆ. ಹೊಸ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸುವುದಾಗಿ ಮತ್ತು ಕೇಬಲ್ಗಳನ್ನು ಶೀಘ್ರದಲ್ಲೇ ದುರಸ್ತಿ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.