ಗಂಡಾಗಿ ಹುಟ್ಟಿ ಹೆಣ್ಣಾಗಿ, 11 ವರ್ಷಕ್ಕೆ ಅತ್ಯಾಚಾರದಲ್ಲಿ ಬೆಂದ ನಾಝಾಗೆ ಒಲಿದ ಅಂತಾರಾಷ್ಟ್ರೀಯ ಕಿರೀಟ!
11ರ ಹರೆಯದಲ್ಲಿ ಅತ್ಯಾಚಾರ, ನೋವಿನಲ್ಲಿ ನೊಂದು ಬೆಂದ ಜೀವಕ್ಕೆ ಚಕ್ಕಾ, ಹಿಜಿಡಾ ಅನ್ನೋ ಅವಮಾನ. ಇದರ ನಡುವೆ ಸಾಧನೆ ಹಾದಿಯಲ್ಲಿ ನಡೆದ ನಾಝಾ ಇದೀಗ ಅಂತಾರಾಷ್ಟ್ರೀಯ ಸೌಂದರ್ಯ ಪ್ರಶಸ್ತಿ ಕಿರೀಟ ಮುಡಿಗೇರಿಸಿಕೊಂಡು ಅನಭಿಷಿಕ್ತ ರಾಣಿಯಾಗಿ ಮೆರೆಯುತ್ತಿದ್ದಾಳೆ. ಯಾರೀಕೆ? ದೆಹಲಿಯಿಂದ ಮುಂಬೈ ಬಂದ ಸೌಂದರ್ಯ ಖನಿಯ ರೋಚಕ ಪಯಣ ಇಲ್ಲಿದೆ
ಶೋಭಾ ಎಂ.ಸಿ, ಔಟ್ ಪುಟ್ ಹೆಡ್, ಏಷ್ಯಾನೆಟ್ ಸುವರ್ಣ ನ್ಯೂಸ್
ಗಂಡೋ, ಹೆಣ್ಣೋ ತಿಳಿಯದ ವಯಸ್ಸು. ಆದರೆ, ಸಾವಿರ ಕಣ್ಣುಗಳಿಗೆ ಅವನು ‘ಅದು’ ಎಂಬ ಅನುಮಾನ. ಒಳ್ಳೆ ಕುಟುಂಬದಲ್ಲಿ ಜನಿಸಿದರೂ, ಸುಂದರ ಬದುಕು ಸಿಗಲಿಲ್ಲ. ಕಾರಣ, ಅವನು ‘ಅದು’ ಎಂಬ ಶಂಕೆ. ಆದರೆ, ಎಲ್ಲವನ್ನೂ ಮೀರಿ ಈಗ ‘ಆಕೆ’ ಇಡೀ ವಿಶ್ವದ ಸೌಂದರ್ಯ ಸ್ಪರ್ಧೆಯಲ್ಲಿ ಅತ್ಯಂತ ಸುಂದರ ಮಂಗಳಮುಖಿ.
ಇದು, ನಾಝಾ ಜೋಶಿಯ ಕಥೆ ಇದು.
ನಾಝಾ ಜೋಶಿ, ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ಕಿರೀಟ ತೊಟ್ಟ ಮೊದಲ ಭಾರತದ ಮಂಗಳಮುಖಿ. ಎಲ್ಲ ಮಂಗಳಮುಖಿಯರಂತೆ ಆಕೆಯದ್ದೂ ಬೀದಿಗೆ ಬಿದ್ದ ಬದುಕಾಗಿದ್ದರೆ, ಇದನ್ನು ಬರೆಯುವ ಅವಶ್ಯಕತೆ ಇರಲಿಲ್ಲವೇನೋ. ಆದರೆ, ನಾಝಾಳದ್ದು ಕ್ಷಣಕ್ಕೊಂದು ತಿರುವು, ಬದುಕಿನ ಪ್ರತಿ ಹಂತದಲ್ಲೊಂದು ನೋವು, ಅವಮಾನದ ಜೀವನ. ಕೇವಲ 11 ವರ್ಷಕ್ಕೆ ಸಾಮೂಹಿಕ ಅತ್ಯಾಚಾರಕ್ಕೀಡಾದರೂ, ಎದೆಗುಂದದೇ ಕಷ್ಟಗಳನ್ನು ಗೆದ್ದು, ಗೆದ್ದು ಇಂದು ಸೌಂದರ್ಯದ ಖನಿಯಲ್ಲಿ ಮಿಂಚುತ್ತಿದ್ದರೆ, ಅದಕ್ಕೆ ಕಾರಣ ಆಕೆಯ ಆತ್ಮವಿಶ್ವಾಸ ಮತ್ತು ಗೆದ್ದೇ ಗೆಲ್ಲಬೇಕೆಂಬ ಛಲ.
ದೆಹಲಿಯ ಮುಸ್ಲಿಂ ಕುಟುಂಬದ ತಾಯಿ, ಹಿಂದೂ ಪಂಜಾಬಿ ತಂದೆಗೆ ಜನಿಸಿದ ನಾಝಾ, ಗಂಡಾಗಿ ಹುಟ್ಟಿದ್ರೂ, ಬೆಳೆಯುತ್ತಾ, ಬೆಳೆಯುತ್ತಾ, ಅವನಲ್ಲಿ ಹೆಣ್ಣೊಂದು ಆವರಿಸಿಕೊಳ್ಳುತ್ತಿತ್ತು. ನಾಝಾ, ಬೆಳವಣಿಗೆ ಬಗ್ಗೆ ಅನುಮಾನ ಹೊಂದಿದ್ದ ಸಂಬಂಧಿಕರು, ನೆರೆಹೊರೆಯವರು, ಹಿಜಡಾ ಸಮುದಾಯಕ್ಕೆ ಕಳಿಸುವಂತೆ ಪೋಷಕರ ಮೇಲೆ ಒತ್ತಡ ಹೇರತೊಡಗಿದ್ರು. ಆದ್ರೆ, ಮಗನನ್ನು ಬಿಟ್ಟುಕೊಡಲು ಹೆತ್ತ ಒಡಲು ಬಿಲ್ಕುಲ್ ಒಪ್ಪಲಿಲ್ಲ. ಮಗನನ್ನು ಓದಿಸಿ, ಬೆಳೆಸಲು ನಿರ್ಧರಿಸಿದ್ರು. ಆದ್ರೆ, ನಾಝಾ ಶಾಲೆ ಸೇರುತ್ತಿದ್ದಂತೆ, ಹೊಸ ಸವಾಲು ಎದುರಾಯ್ತು. ಸ್ಕೂಲ್ನಲ್ಲಿ ಆತನನ್ನು ಚಕ್ಕಾ, ಚಕ್ಕಾ ಎಂದು ಮೂದಲಿಸತೊಡಗಿದರು. ತಾಯಿಯೂ ಸಹ, ಹುಡುಗನಂತೆ ಇರಬಾರದೇ ಎಂದು ಗದರಿದ್ದೂ ಇದೆ. ಆ ಪುಟ್ಟ ಹೃದಯ ಈ ಅವಮಾನ ಸಹಿಸದೇ ಅದೆಷ್ಟು ಬಿಕ್ಕಿತೋ ? ದೇವರೇ, ನನ್ನನ್ಯಾಕೆ ಹೀಗೆ ಹುಟ್ಟಿಸಿದೆ ಎಂದು ನಾಝಾ ಒಂಟಿಯಾಗಿ ಅತ್ತಿದ ದಿನಗಳು ಅದೆಷ್ಟೋ ?
ಸಮಾಜದ ಮೂದಲಿಕೆ, ಅಪಮಾನಕ್ಕೆ ಗುರಿಯಾದ ಹೆತ್ತವರೂ, ಮಗನನ್ನು ಮುಂಬೈನ ಸಂಬಂಧಿಕರ ಮನೆಗೆ ಕಳಿಸಿಬಿಟ್ರು. ಆಗ ವಯಸ್ಸು ಕೇವಲ 11. ಮುಂಬೈಯನ ರೆಸ್ಟೋರೆಂಟ್ನಲ್ಲಿ ಟೇಬಲ್ ಕ್ಲೀನಿಂಗ್ ಕೆಲಸಕ್ಕೆ ಸೇರಿಕೊಂಡಳು. ಆದ್ರೆ, ಮುಂಬೈ ಜಗತ್ತು ಆಕೆಯನ್ನು ಹಿಂಡಿ ಹಿಪ್ಪೆ ಮಾಡಿತ್ತು. ಆಕೆಯ ಕಸಿನ್ಗಳು, ಸ್ನೇಹಿತರು ಆಕೆಯನ್ನು ಮನಸ್ಸೋ ಇಚ್ಛೆ ಹುರಿದು ಮುಕ್ಕಿಬಿಟ್ಟರು. 11 ವರ್ಷದ ದೇಹ, ಸಾಮೂಹಿಕ ಅತ್ಯಾಚಾರದಿಂದ ನರಳಿಬಿಟ್ಟಿತು. ಆಕೆಯನ್ನು ರೇಪ್ ಮಾಡಿ ಸಂಭ್ರಮಿಸಿದ ಅಷ್ಟೂ ಮಂದಿಯ ಆಸ್ಪತ್ರೆಯ ಬಳಿ ಎಸೆದು ಹೋಗಿಬಿಟ್ಟರು. ರೇಪ್ ಅಂದರೇನು ಎಂಬುದನ್ನೇ ಅರಿಯದ ಹನ್ನೊಂದರ ಎಳೆಯ ಜೀವ, ಅಪಾರ ನೋವಿನಿಂದ ಒದ್ದಾಡಿತ್ತು. ಏನಾಗಿದೆ ಎಂಬುದು ಅರಿವಾಗುಷ್ಟರಲ್ಲಿ, ಮಂಗಳಮುಖಿಯೊಬ್ಬರ ಪರಿಚಯವಾಗಿತ್ತು. ಆದ್ರೆ, ಭಿಕ್ಷೆ ಬೇಡಿ ಬದುಕುವ ಮಂಗಳಮುಖಿ ತಾನಾಗಬಾರದೆಂದು ಗಟ್ಟಿ ನಿರ್ಧಾರ ಮಾಡಿಬಿಟ್ಟಿದ್ದಳು.
ನಾನು ಬದುಕೋದು ಆರೇ ತಿಂಗಳು, ಅಪ್ಪ ಅಮ್ಮನಿಗೆ ಹೇಳಬೇಡಿ ಪ್ಲೀಸ್, 6 ವರ್ಷದ ಬಾಲಕನ ಮಾತಿಗೆ ಡಾಕ್ಟರ್ ಕಣ್ಣೀರು!
ಮುಂಬೈನ ಡಾನ್ಸ್ಬಾರ್ನಲ್ಲಿ 1998ರಿಂದ 2006ರವರೆಗೂ ಕೆಲಸ ಮಾಡುತ್ತಲೇ ಓದು ಮುಂದುವರಿಸಿದಳು. ಅಲ್ಲಿ ಆಕೆಗೆ ಪರಿಚಯವಾಗಿದ್ದು ಖ್ಯಾತ ಮಾಡೆಲ್ ವಿವೇಕ್ ಬಾಬಾಜೀ. ಅಲ್ಲಿಂದ ನಾಝಾ ಬದುಕು ಹೊಸ ತಿರುವು ಪಡೆಯಿತು.
ಫ್ಯಾಷನ್ ಕೋರ್ಸ್ ಬಗ್ಗೆ ಆಸಕ್ತಿ ಹೊಂದಿದ್ದ ನಾಝಾ, ದೆಹಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಲ್ಲಿ 3 ವರ್ಷದ ಕೋರ್ಸ್ ಸೇರಿದಳು. ಫ್ಯಾಷನ್ ಜಗತ್ತಿನಲ್ಲಿ ಬಣ್ಣ, ಬಣ್ಣದ ಕನಸು ಕಟ್ಟಿದ ನಾಝಾಗೆ ಮತ್ತೊಂದು ಸಮಸ್ಯೆ ಎದುರಾಯ್ತು. ಗಂಡು, ಹೆಣ್ಣು ಎಂಬ ಕ್ಯಾಟಗರಿ ಬಿಟ್ಟರೆ, ಬೇರೆ ಇಲ್ಲ. ಸರಿ, ತನ್ನ ಗುರುತು ಮರೆಮಾಚಿ, ಗಂಡು ಎಂದುಕೊಂಡೇ, ಕಾಲೇಜಿಗೆ ಸೇರಿದಳು. ಹುಡುಗನಂತೇ ಬಟ್ಟೆ ಧರಿಸಿ ಕ್ಲಾಸ್ ಅಟೆಂಡ್ ಮಾಡುತ್ತಿದ್ದಳು. ಓದುತ್ತಿದ್ದಾಗಲೂ ದೆಹಲಿಯ ಮಸಾಜ್ ಪಾರ್ಲರ್ನಲ್ಲಿ ಪಾರ್ಟ್ ಟೈಂ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದಳು. 2013ರಲ್ಲಿ ಸರ್ಜರಿ ಮಾಡಿಸಿಕೊಂಡು, ಅಧಿಕೃತವಾಗಿ ಮಂಗಳಮುಖಿ ಎಂದು ಸಂಭ್ರಮಿಸಿದಳು ನಾಝಾ. ತನ್ನಿಷ್ಟದ ಫ್ಯಾಷನ್ ಲೋಕದಲ್ಲಿ ಮಿಂಚತೊಡಗಿದಳು. 2017ರಲ್ಲಿ ತೆಹಲ್ಕಾ ಮ್ಯಾಗಝೈನ್ನ ಕವರ್ ಫೋಟೋದಲ್ಲಿ ನಾಝಾ ಪ್ರಜ್ವಲಿಸಿದ್ರು. ಇದೇ ವರ್ಷ, ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಡೈವರ್ಸಿಟಿ ಎಂಬ ಟೈಟಲ್ (Miss Diversity ) ಗೆದ್ದ ಮೊದಲ ಮಂಗಳಮುಖಿ ಎಂಬ ಖ್ಯಾತಿ ಪಡೆದಳು. 2017ರಿಂದ 2019ರವರೆಗೂ ಆ ಟೈಟಲ್ ನಾಝಾ ಮುಡಿಯಲ್ಲೇ ಇತ್ತು.
ಮಂಗಳಮುಖಿಗಳ ವಿವಾಹ ಸಮಾರಂಭ 18 ದಿನದವರೆಗೂ ಇರುತ್ತದೆ! ಯಾರೊಂದಿಗೆ ಮದುವೆಯಾಗುತ್ತಾರೆ?
ಇದೀಗ, ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ Empress Earth 2021-22 ಗೆಲ್ಲುವ ಮೂಲಕ, ಸೌಂದರ್ಯ ಜಗತ್ತಿನ ಅನಭಿಷಿಕ್ತ ರಾಣಿಯಾಗಿ ಮೆರೆಯುತ್ತಿದ್ದಾಳೆ.
ಈ ಸೌಂದರ್ಯ ರಾಣಿಯ ಸುಂದರ ಮುಖ, ಹಲವಾರು ನೋವುಗಳನ್ನು ಮರೆಮಾಚಿಕೊಂಡಿದೆ. ಇಡೀ ದೇಹವನ್ನೇ ಕುಕ್ಕಿ ತಿಂದವರ ಎದುರು ನಾಝಾ, ಸುಂದರಿಯಾಗಿ, ಆತ್ಮವಿಶ್ವಾಸದ ಖನಿಯಾಗಿ, ಮಂಗಳಮುಖಿ ಎಂಬ ಹೆಮ್ಮೆಯೊಂದಿಗೆ ಕಿರೀಟ ತೊಟ್ಟು ನಿಂತಿದ್ದಾಳೆ. ಸೋತು ಕೈಚೆಲ್ಲಿ, ಭಿಕ್ಷೆ ಬೇಡುತ್ತಿರುವ ಲಕ್ಷಾಂತರ ಮಂಗಳಮುಖಿಯರ ಪಾಲಿಗೆ ಆದರ್ಶವಾಗಿ ನಿಂತಿದ್ದಾಳೆ.