Asianet Suvarna News Asianet Suvarna News

ನಾನು ಬದುಕೋದು ಆರೇ ತಿಂಗಳು, ಅಪ್ಪ ಅಮ್ಮನಿಗೆ ಹೇಳಬೇಡಿ ಪ್ಲೀಸ್, 6 ವರ್ಷದ ಬಾಲಕನ ಮಾತಿಗೆ ಡಾಕ್ಟರ್ ಕಣ್ಣೀರು!

ಸಮರ್ಥ್​ ಎದುರು ಸಾವು ಬಾಗಿಲು ತೆರೆದು ನಿಂತಿತ್ತು. ಆದ್ರೆ, ಸಾವಿಗೆ ಹೆದರದೇ,  ಬೆನ್ನು ತೋರದೇ, ನಿಂತಿದ್ದ. ಸಾವು ಇನ್ನೇನು ಸಮೀಪಿಸುತ್ತಿದೆ ಎನ್ನುವಾಗಲೂ, ಆ ಬಾಲಕನಿಗೆ ಇದ್ದದ್ದು ಹೆತ್ತವರ ಚಿಂತೆ, ಹೆತ್ತೊಡಲಿಗೆ ಬೆಂಕಿ ಇಡಬಾರದೆಂಬ ಪ್ರೀತಿ. ಆದರೆ, ಕರುಳ ಕುಡಿ ಹೆತ್ತವರ ಕಣ್ಣೆರುದೇ ಉಸಿರು ಚೆಲ್ಲುವುದಿದೆಯಲ್ಲ, ಅದು ಶಾಪ ಅಲ್ಲದೇ ಮತ್ತೇನು..?

6 year old cancer patient heartwarming story Boy tells doctors to not to reveal this to parents only 6 month left in my life ckm
Author
First Published Jan 7, 2023, 10:35 PM IST

ಶೋಭಾ ಎಂ.ಸಿ, ಔಟ್ ಪುಟ್ ಹೆಡ್, ಏಷ್ಯಾನೆಟ್ ಸುವರ್ಣ ನ್ಯೂಸ್

ಆ ಬಾಲಕನ ವಯಸ್ಸು ಕೇವಲ ಆರೇ ಆರು. ಆಗಲೇ ಸಾವಿನ ಮನೆಯ ಬಾಗಿಲಲ್ಲಿ ಬಂದು ನಿಂತು ಬಿಟ್ಟಿದ್ದಾನೆ. ಇಂದೋ, ನಾಳೆಯೋ ಯಮಪಾಶ ಬಿಗಿಯುವುದು ಖಚಿತ ಅನ್ನೋದು ಗೊತ್ತಾಗುತ್ತಿದ್ದಂತೆ, ಆತನ ಹೆತ್ತವರು ಕಂಗಾಲಾಗಿ ಬಿಟ್ಟಿದ್ದಾರೆ. ಕಣ್ಣೀರು ಹಾಕದ ದಿನವಿಲ್ಲ, ಪ್ರಾರ್ಥಿಸಿದ ದೇವರಿಲ್ಲ. 

ಹೈದರಾಬಾದ್​ ದಂಪತಿಗೆ ಒಬ್ಬನೇ ಮುದ್ದಿನ ಮಗ ಸಮರ್ಥ್​ (ಹೆಸರು ಬದಲಿಸಲಾಗಿದೆ) ಹೆತ್ತವರ ಪಾಲಿಗೆ ಅವನೇ ಪ್ರಪಂಚ. ಅವನ ಆಟ-ಪಾಟ, ತುಂಟಾಟ ನೋಡುತ್ತಾ ಕಾಲ ಕಳೆಯುತ್ತಿದ್ದ ದಂಪತಿಗೆ, ಭವಿಷ್ಯದ ಅರಿವೇ ಇರಲಿಲ್ಲ. ಸುಂದರ ಬದುಕಲ್ಲಿ ಬಿರುಗಾಳಿ ಎದ್ದೇ ಬಿಟ್ಟಿತು. ಅದು, ಅದೊಂದು ದಿನ, ಇದ್ದಕ್ಕಿದ್ದಂತೆ ಸಮರ್ಥ್ ಪ್ರಜ್ಞಾಹೀನನಾಗಿಬಿಟ್ಟ. ಗಾಬರಿಯಾದ ಪೋಷಕರು, ಆಸ್ಪತ್ರೆಯತ್ತ ಹೊತ್ತೊಯ್ದರು. ಎಲ್ಲ ರೀತಿಯ ಟೆಸ್ಟ್​ಗಳ ನಂತರ ವೈದ್ಯರು ಹೇಳಿದ್ದು, ಸಮರ್ಥ್​ಗೆ ಬ್ರೈನ್​ ಟ್ಯೂಮರ್​​ (Glioblastoma multiforme on the left side of his brain) ಅದೂ ಕೊನೆಯ ಹಂತದಲ್ಲಿದೆ.

ಸಮರ್ಥ್​ ಹೆತ್ತವರ ಹೃದಯ ಒಡೆದು ಹೋಗುವಂಥ ಸ್ಥಿತಿ, ಕನಸು ಛಿದ್ರ, ಛಿದ್ರವಾಗಿಬಿಟ್ಟಿತು. ದಂಪತಿ ಕುಸಿದುಬಿಟ್ಟರು. ಕಣ್ಣೀರು ಧಾರಾಕಾರ. ಮಗನನ್ನು ಬದುಕಿಸಿಕೊಳ್ಳಲೇಬೇಕೆಂಬ ಹಠಕ್ಕೆ ಬಿದ್ದ ದಂಪತಿ, ಆಸ್ಪತ್ರೆ ಅಲೆದರು. ದಿನಗಳು ಉರುಳತೊಡಗಿದ್ದವು. ಅಷ್ಟರಲ್ಲಿ ಸಮರ್ಥ್​ಗೆ ಶಸ್ತ್ರಚಿಕಿತ್ಸೆ ಆಗಿ, ಕಿಮೋಥೆರಪಿಯೂ ನಡೆದಿತ್ತು. ಬ್ರೈನ್​ ಕ್ಯಾನ್ಸರ್ ಪರಿಣಾಮ, ಸಮರ್ಥನ ಬಲಗೈ ಮತ್ತು ಬಲಗಾಲು ಸ್ವಾಧೀನತಪ್ಪಿತ್ತು. ವ್ಹೀಲ್​ಚೇರ್​​ ಆಶ್ರಯಿಯಾಗಿದ್ದ. 

ದಿಗ್ಗಜ ಟೆನಿಸ್‌ ಆಟಗಾರ್ತಿ ಮಾರ್ಟಿನಾ ನರ್ವಾಟಿಲೋವಾಗೆ ಕ್ಯಾನ್ಸರ್‌!

ಜನವರಿ 5 ರಂದು ಅಪೊಲೋ ಆಸ್ಪತ್ರೆಯ ನ್ಯೂರೋ ವಿಭಾಗಕ್ಕೆ ಬಂದ ದಂಪತಿ, ಡಾ. ಸುಧೀರ್​  ಕುಮಾರ್ ಬಳಿ, ಸಮರ್ಥ್​ ಚಿಕಿತ್ಸೆ ಬಗ್ಗೆ ಸಲಹೆ ಪಡೆಯಲು ಬಂದಿದ್ದರು. ಮಗನನ್ನು ಹೊರಗಿಟ್ಟು, ಡಾ. ಸುಧೀರ್​ ಕುಮಾರ್ ಬಳಿ ಬಂದ ದಂಪತಿ, ತಮ್ಮ ಮಗನಿಗೆ ಕ್ಯಾನ್ಸರ್ 4ನೇ ಹಂತದಲ್ಲಿದೆ, ಅವನಿಗೆ ಇದಾವುದೂ ಗೊತ್ತಿಲ್ಲ. ಅವರ ಟ್ರೀಟ್​ಮೆಂಟ್​ ಹಿಸ್ಟರಿ ನೋಡಿ, ಮುಂದಿನ ಚಿಕಿತ್ಸೆ ಬಗ್ಗೆ ಸಲಹೆ ಕೊಡಿ. ಆದರೆ, ಕ್ಯಾನ್ಸರ್ ವಿಷಯ ಸಮರ್ಥ್​ಗೆ ಗೊತ್ತಾಗಬಾರದು’ ಅಂತ ಮನವಿ ಮಾಡಿದ್ರು. ಸರಿ ಎಂದು ತಲೆ ಅಲ್ಲಾಡಿಸಿದ ಡಾ. ಸುಧೀರ್​, ಸಮರ್ಥ್​ನನ್ನು ಕರೆತರುವಂತೆ ಸೂಚಿಸಿದ್ರು. 

ವ್ಹೀಲ್​ಚೇರ್​ನಲ್ಲಿ ಬಂದ ಸಮರ್ಥ್​ನನ್ನು ಪರೀಕ್ಷಿಸಿ, ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದ್ರು ಡಾ. ಸುಧೀರ್​. ಎಲ್ಲ ಮುಗಿಸಿ ಇನ್ನೇನು ದಂಪತಿ ಡಾಕ್ಟರ್ ಕೊಠಡಿಯಿಂದ ಹೊರಹೋಗಲು ಸಿದ್ಧರಾಗುತ್ತಿದ್ದಂತೆ, ಅಪ್ಪ, ನಾನು ಡಾಕ್ಟರ್​ ಜತೆ ಮಾತನಾಡಬೇಕು’ ಎಂದು ಬಿಟ್ಟ. ಸರಿ ಎಂದು ಮಗನನ್ನು ಅಲ್ಲೇ ಬಿಟ್ಟು ದಂಪತಿ ಹೊರನಡೆದರು. 

ಡಾ.ಸುಧೀರ್ ಕುಮಾರ್​ ಮುಖವನ್ನೇ ನೇರವಾಗಿ ನೋಡುತ್ತಿದ್ದ ಸಮರ್ಥ್ , ಒಂಚೂರು ಅಳುಕಿಲ್ಲದೇ, ಸ್ಪಷ್ಟ ಮಾತುಗಳಲ್ಲಿ ಹೇಳಿದ್ದು, ‘ನಾನು ಬದುಕೋದು ಜಸ್ಟ್ 6 ತಿಂಗಳು ಮಾತ್ರ. ನನಗೆ ಕ್ಯಾನ್ಸರ್ ಕೊನೆ ಹಂತದಲ್ಲಿದೆ ಅಂತ ನಮ್ಮಪ್ಪ, ಅಮ್ಮನಿಗೆ ಹೇಳಬೇಡಿ ಪ್ಲೀಸ್​. ನನಗೇನಾಗಿದೆ ಅಂತ ಐಪ್ಯಾಡ್​​ನಲ್ಲಿ ಓದಿಕೊಂಡಿದ್ದೀನಿ. ನಾನು ಹೆಚ್ಚು ದಿನ ಬದುಕೋದಿಲ್ಲ ಅಂತ ಗೊತ್ತಿದೆ. ಆದ್ರೆ, ನಮ್ಮಪ್ಪ, ಅಮ್ಮನಿಗೆ ಅದು ಗೊತ್ತಿಲ್ಲ, ಅವರು ನನ್ನನ್ನು ತುಂಬಾ ಪ್ರೀತಿಸ್ತಾರೆ. ನಾನೆಂದ್ರೆ ಪ್ರಾಣ, ಅವರಿಗೆ ಹೇಳಬೇಡಿ ಪ್ಲೀಸ್’ ಎಂದಾಗ ಡಾ. ಸುಧೀರ್​ ಕುಮಾರ್ ದಿಂಗ್ಮೂಢರಾಗಿಬಿಟ್ರು. ಕ್ಷಣಹೊತ್ತು ಕತ್ತಲು ಕವಿದ ಸ್ಥಿತಿ. 

ಸ್ತನದ ಕ್ಯಾನ್ಸರ್‌ ಗೆದ್ದು 38ನೇ ಹುಟ್ಟುಹಬ್ಬದ ದಿನ ಕೆಲಸಕ್ಕೆ ಮರುಳಿದ ನಟಿ ಹಂಸ ನಂದಿನಿ!

ವ್ಹೀಲ್​ಚೇರ್​ನಲ್ಲಿ ಕುಳಿತಿದ್ದ ಬಾಲಕನ ಮುಖದಲ್ಲಿ ಹುಂ, ಯಾವುದೇ ಬದಲಾವಣೆ ಇಲ್ಲ. ಮುಗುಳ್ನಗೆ ಮಾಸಿರಲಿಲ್ಲ.  ಆತನ ಕಣ್ಣಲ್ಲಿ ಕಾಂತಿ, ಮುಖದಲ್ಲೊಂದು ದಿವ್ಯಕಳೆ. ಕೆಲ ಹೊತ್ತಿನ ಬಳಿಕ ಸುಧಾರಿಸಿಕೊಂಡ ಡಾ. ಸುಧೀರ್, ‘ನಿಮ್ಮ ತಂದೆ-ತಾಯಿಗೆ ಏನೂ ಹೇಳಲ್ಲ, ಪ್ರಾಮಿಸ್​ ’ ಎಂದು ಬಿಟ್ಟರು. ಆದ್ರೆ, ಆ ಶಾಕ್​​ ತಡೆದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ ಡಾ. ಸುಧೀರ್​. ಸಮರ್ಥ್ ಪೋಷಕರನ್ನು ಕರೆದು, ಮಗನಿಗೆ ಕ್ಯಾನ್ಸರ್​ ವಿಷಯ ತಿಳಿದಿದೆ ಅನ್ನೋ ವಿಷಯ ಹೇಳಿಬಿಟ್ಟರು. ಇಂಥ ಸೂಕ್ಷ್ಮ ವಿಷಯವನ್ನು ಹೆತ್ತವರಿಂದ ಮುಚ್ಚಿಡಬಾರದೆಂಬುದು ಡಾ. ಸುಧೀರ್​ ನಿಲುವು. 

ಅಂದು ಹೋದ ಸಮರ್ಥ್ ಪೋಷಕರು, 9 ತಿಂಗಳ ಬಳಿಕ ಡಾ. ಸುಧೀರ್ ಭೇಟಿಗೆ ಬಂದರು. ತಾವು ಸಮರ್ಥ್ ಪೋಷಕರು ಎಂದು ನೆನಪಿಸಿದ್ರು. ಸಮರ್ಥ್​ ತಿಂಗಳ ಹಿಂದೆ ಕೊನೆಯುಸಿರೆಳೆದ ವಿಷಯ ಹೇಳುತ್ತಿದ್ದಂತೆ ಡಾ. ಸುಧೀರ್​ ಗೆ ಕರುಳು ಚುರ್ ಎಂದು ಬಿಟ್ಟಿತು. ‘ನಿಮ್ಮ ಭೇಟಿ ಬಳಿಕ, ಸಮರ್ಥ್​ಗೆ ಕ್ಯಾನ್ಸರ್​ ಇರುವುದು ಗೊತ್ತಿದೆ ಅನ್ನೋ ವಿಚಾರ ತಿಳಿದು, ನಾವು ಮೂವರು ನಿರಾಳರಾದೆವು. ಸಮರ್ಥ್ ಜತೆ ಕಾಲ ಕಳೆದೆವು. ಅವನ ಒಂದೊಂದೇ ಆಸೆಗಳನ್ನು ಈಡೇರಿಸಿದೆವು. ಈಗ್ಗೆ ತಿಂಗಳ ಹಿಂದೆ ಸಮರ್ಥ್​ ನಮ್ಮನ್ನು ಬಿಟ್ಟು ಹೊರಟೇ ಹೋದ. ಆದ್ರೆ, 8 ತಿಂಗಳು ಆತನೊಂದಿಗೆ ಕಳೆದ ಸಮಯ ಅಮೂಲ್ಯ. ಇದಕ್ಕೆ ಕಾರಣರಾದ ನಿಮಗೆ ಥ್ಯಾಂಕ್ಸ್ ಹೇಳೋಕೆ ಬಂದೆವು’ ಎಂದು ಬಿಕ್ಕಳಿಸುತ್ತಲ್ಲೇ ಎದ್ದು ಹೋದರು. ಡಾ. ಸುಧೀರ್​ ಮಾತಿಲ್ಲದೇ ಕುಳಿತಿದ್ದರು. 

ಸಮರ್ಥ್​ ಎದುರು ಸಾವು ಬಾಗಿಲು ತೆರೆದು ನಿಂತಿತ್ತು. ಆದ್ರೆ, ಸಾವಿಗೆ ಹೆದರದೇ,  ಬೆನ್ನು ತೋರದೇ, ನಿಂತಿದ್ದ ಬಾಲಕ. ಆದರೆ, ತನ್ನ ಸಾವು ಇನ್ನೇನು ಸಮೀಪಿಸುತ್ತಿದೆ ಎನ್ನುವಾಗಲೂ, ಆ ಬಾಲಕನಿಗೆ ಇದ್ದದ್ದು ಹೆತ್ತವರ ಚಿಂತೆ, ಹೆತ್ತೊಡಲಿಗೆ ಬೆಂಕಿ ಇಡಬಾರದೆಂಬ ಪ್ರೀತಿ.
ಆದರೆ, ಕರುಳ ಕುಡಿ ಹೆತ್ತವರ ಕಣ್ಣೆರುದೇ ಉಸಿರು ಚೆಲ್ಲುವುದಿದೆಯಲ್ಲ, ಅದು ಶಾಪ ಅಲ್ಲದೇ ಮತ್ತೇನು..?

Follow Us:
Download App:
  • android
  • ios