Asianet Suvarna News

ಇಂದು ಮೆನೆಸ್ಟ್ರುವಲ್ ಹೈಜಿನ್ ಡೇ; ಮುಜುಗರ ಬಿಟ್ಟು ಶುಚಿತ್ವಕ್ಕೆ ಒತ್ತು ನೀಡೋಣ

ಮುಟ್ಟಿನ ಸಮಯದಲ್ಲಿ ದೈಹಿಕ ಸ್ವಚ್ಛತೆ ಕಾಪಾಡೋದು ಎಷ್ಟು ಮುಖ್ಯ ಎಂಬ ಕುರಿತು ಹೆಣ್ಣುಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಗತ್ತಿನಾದ್ಯಂತ ಮೇ 28ರಂದು ಮೆನೆಸ್ಟ್ರುವಲ್ ಹೈಜಿನ್ ಡೇ ಆಚರಿಸಲಾಗುತ್ತದೆ. ಕೊರೋನಾ ಪೆಂಡಾಮಿಕ್ ಹಿನ್ನೆಲೆಯಲ್ಲಿ ಈ ವರ್ಷ ಸಾಮಾಜಿಕ ಜಾಲತಾಣದಲ್ಲಷ್ಟೇ ಆಚರಣೆ ನಡೆಯುತ್ತಿದೆ.

Importance of menstrual hygiene day
Author
Bangalore, First Published May 28, 2020, 2:45 PM IST
  • Facebook
  • Twitter
  • Whatsapp

ಹೆಣ್ಣಿಗೆ ಪ್ರತಿ ತಿಂಗಳು ಮುಟ್ಟಿನ ಹೆಸರಿನಲ್ಲಿ ಒಂದಿಷ್ಟು ದೈಹಿಕ, ಮಾನಸಿಕ ಸಂಕಟಗಳು ತಪ್ಪಿದ್ದಲ್ಲ. ಜಗತ್ತಿನಲ್ಲಿ ಪ್ರತಿದಿನ ಸುಮಾರು 300 ಮಿಲಿಯನ್ ಬಾಲಕಿಯರು ಮೈ ನೆರೆಯುತ್ತಾರೆ. ಆದ್ರೆ ಈ ಸಮಯದಲ್ಲಿ ಕೈಗೊಳ್ಳಬೇಕಾದ ಸ್ವಚ್ಛತೆ ಹಾಗೂ ಶಾರೀರಿಕ ಬದಲಾವಣೆಗಳ ಕುರಿತು ಅನೇಕ ಹೆಣ್ಣುಮಕ್ಕಳಿಗೆ ಸಮರ್ಪಕವಾದ ಶಿಕ್ಷಣ ಸಿಗುತ್ತಿಲ್ಲ. ಅಷ್ಟೇ ಅಲ್ಲದೆ, ಸ್ಯಾನಿಟರಿ ಪ್ಯಾಡ್, ಟಾಯ್ಲೆಟ್, ನೀರು ಸೇರಿದಂತೆ ಆ ಸಮಯದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಅಗತ್ಯವಾದ ಸೌಲಭ್ಯಗಳಿಲ್ಲದೆ ಅನೇಕ ಹೆಣ್ಣುಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಮುಟ್ಟಿನ ಕುರಿತು ಜಗತ್ತಿನಾದ್ಯಂತ ನಾನಾ ಮೂಢನಂಬಿಕೆಗಳು, ಆಚರಣೆಗಳಿವೆ. ಇವುಗಳಿಂದಾಗಿಯೇ ಈಗಲೂ ಅದೆಷ್ಟೋ ಹೆಣ್ಣುಮಕ್ಕಳು ಪ್ರತಿ ತಿಂಗಳು ಆ ದಿನಗಳಂದು ಶಾಲೆ ಹಾಗೂ ಉದ್ಯೋಗಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಈ ಎಲ್ಲ ಕಾರಣಗಳನ್ನು ಗಂಭೀರವಾಗಿ ಪರಿಗಣಿಸಿದ ಜರ್ಮನ್ ಮೂಲದ ‘ವಾಷ್ ಯುನೈಟೆಡ್’ ಎಂಬ ಎನ್‍ಜಿಒ ‘ಮೆನೆಸ್ಟ್ರುವಲ್ ಹೈಜಿನ್ ಡೇ’ ಗೆ ಚಾಲನೆ ನೀಡಿತು. ಮೆನೆಸ್ಟ್ರುವಲ್ ಹೈಜಿನ್ ಡೇಯನ್ನು ಪ್ರತಿ ವರ್ಷ ಮೇ 28ರಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ.

ಗರ್ಭಿಣಿಯರಿಗೆ ಥೈರಾಯ್ಡ್‌ : ಭಯ ಬೇಕಾಗಿಲ್ಲ

ಈ ದಿನವೇ ಯಾಕೆ?
ಮೆನೆಸ್ಟ್ರುವಲ್ ಹೈಜಿನ್ ಡೇಯನ್ನು ಮೇ 28ರಂದೇ ಆಚರಿಸಲು ಕಾರಣವೂ ಇದೆ. ಋತುಚಕ್ರವು ಸಾಮಾನ್ಯವಾಗಿ 28 ದಿನಗಳ ಅವಧಿಯನ್ನು ಹೊಂದಿರುತ್ತದೆ. ಪ್ರತಿ ತಿಂಗಳು ಸ್ತ್ರೀ ಸರಾಸರಿ 5 ದಿನಗಳ ಕಾಲ ಋತುಸ್ರಾವವನ್ನು ಹೊಂದಿರುತ್ತಾಳೆ. ಈ ಹಿನ್ನೆಲೆಯಲ್ಲಿ 28-5 ಅನ್ನು ಆಯ್ಕೆ ಮಾಡಲಾಯಿತು. ಅಂದ್ರೆ 28 ದಿನಗಳು, ಐದನೇ ತಿಂಗಳು ಅದೇ ಮೇ 28.

ಈ ದಿನದ ಉದ್ದೇಶವೇನು?
ಮೆನೆಸ್ಟ್ರುವಲ್ ಹೈಜಿನ್ ಡೇ (ಎಂಎಚ್ ಡೇ) ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎನ್‍ಜಿಒಗಳು, ಸರ್ಕಾರಿ ಸಂಸ್ಥೆಗಳು, ವ್ಯಕ್ತಿಗಳು, ಖಾಸಗಿ ಸಂಸ್ಥೆಗಳು ಹಾಗೂ ಮಾಧ್ಯಮಗಳ ಧ್ವನಿ ಹಾಗೂ ಕಾರ್ಯಗಳಿಗೆ ವೇದಿಕೆ ಕಲ್ಪಿಸುವ ಮೂಲಕ ಮುಟ್ಟಿನ ಸಮಯದಲ್ಲಿನ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಹೆಣ್ಣುಮಕ್ಕಳಲ್ಲಿ ಮುಟ್ಟು ಹಾಗೂ ಆ ಸಮಯದಲ್ಲಿ ಕೈಗೊಳ್ಳಬೇಕಾದ ಶುಚಿತ್ವದ ಬಗ್ಗೆ ಅರಿವು ಮೂಡಿಸುವ ಜೊತೆಗೆ ಈ ಬಗ್ಗೆ ಸಮಾಜದಲ್ಲಿರುವ ಕೆಲವು ನಕಾರಾತ್ಮಕ ಆಚರಣೆಗಳನ್ನು ದೂರ ಮಾಡುವ ಗುರಿಗಳನ್ನು ಈ ದಿನ ಹೊಂದಿದೆ. ಅದ್ರಲ್ಲೂ ಮುಟ್ಟು ಅಂದ್ರೆ ಅಸಹ್ಯವಲ್ಲ,ಅದು ಹೆಣ್ಣಿನ ಶರೀರದ ನೈಸರ್ಗಿಕ ಪ್ರಕ್ರಿಯೆ ಎಂಬುದನ್ನು ಅರ್ಥ ಮಾಡಿಸಲು ಈ ದಿನವನ್ನು ಬಳಸಿಕೊಳ್ಳಲಾಗುತ್ತಿದೆ.

ಒತ್ತಡಮುಕ್ತ ಅಮ್ಮನಾಗಲು ಇಲ್ಲಿವೆ ಗೋಲ್ಡನ್ ಟಿಪ್ಸ್

ಈ ವರ್ಷದ ಧ್ಯೇಯವೇನು?
ಕೊರೋನಾ ವೈರಸ್ ತಾಂಡವವಾಡುತ್ತಿರುವ ಈ ಸಮಯದಲ್ಲಿ ಎಂಎಚ್ ಡೇ ಸೋಷಿಯಲ್ ಮೀಡಿಯಾದಲ್ಲಿ ಪಿರಿಯಡ್ಸ್ ಇನ್ ಪೆಂಡಾಮಿಕ್ಸ್ (#PeriodsInPandemics ) ಎಂಬ ಹ್ಯಾಶ್ ಟ್ಯಾಗ್ ಅಭಿಯಾನ ಪ್ರಾರಂಭಿಸಿದೆ. ಪೆಂಡಾಮಿಕ್ಸ್ನಲ್ಲೂ ಮುಟ್ಟು ನಿಲ್ಲೋದಿಲ್ಲ ಎಂಬುದನ್ನು ನೆನಪಿಸುವ ಮೂಲಕ ಈ ಸಮಯದಲ್ಲಿ ಮಹಿಳೆಯರಿಗೆ ಎದುರಾಗಿರುವ ಸವಾಲುಗಳ ಬಗ್ಗೆ ಬೆಳಕು ಚೆಲ್ಲಲು ಯತ್ನಿಸಿದೆ. ಲಾಕ್‍ಡೌನ್ ಅವಧಿಯಲ್ಲಿ 10ರಲ್ಲಿ 3 ಹುಡುಗಿಯರಿಗೆ ಸ್ಯಾನಿಟರಿ ಪ್ಯಾಡ್ ಸೇರಿದಂತೆ ಪಿರಿಯಡ್ಸ್ ಸಮಯದಲ್ಲಿ ಅಗತ್ಯವಾದ ಉತ್ಪನ್ನಗಳು ಸಿಗುತ್ತಿಲ್ಲ ಎಂಬುದು ಇತ್ತೀಚಿನ ಸಮೀಕ್ಷೆಯಲ್ಲಿ ಪತ್ತೆಯಾಗಿದೆ.
ಶಾಲೆಗಳು, ಸಮುದಾಯ ಕೇಂದ್ರಗಳು ಸೇರಿದಂತೆ ಹೆಣ್ಣುಮಕ್ಕಳಿಗೆ ಮುಟ್ಟಿನ ಶಿಕ್ಷಣ ನೀಡುತ್ತಿದ್ದ ಕೇಂದ್ರಗಳು ಲಾಕ್‍ಡೌನ್‍ನಿಂದಾಗಿ ಮುಚ್ಚಲ್ಪಟ್ಟಿವೆ. ಅಲ್ಲದೆ, ಮನೆಯಲ್ಲಿ ಮುಟ್ಟಿನ ಸಮಯದಲ್ಲಿ ಆಚರಿಸುವ ಕೆಲವು ಪದ್ಧತಿಗಳು ಈ ಸಮಯದಲ್ಲಿ ಮಹಿಳೆಗೆ ಇನ್ನಷ್ಟು ಸಂಕಷ್ಟ ತಂದಿಟ್ಟಿರುವ ಜೊತೆಗೆ ಆಕೆಯನ್ನು ಮುಜುಗರ ಹಾಗೂ ಅವಮಾನಕ್ಕೆ ತಳ್ಳುತ್ತಿವೆ.

ಮುಟ್ಟಾದಾಗ ಸ್ನಾನ ಮಾಡಿದ್ರೆ ಹೆಣ್ಣು ಬಂಜೆಯಾಗುತ್ತಾಳೆ!

ಎಂಎಚ್ ಡೇಯಲ್ಲಿ ಪಾಲ್ಗೊಳ್ಳೋದು ಹೇಗೆ?
ಎಂಎಚ್ ಡೇಗಾಗಿ ಪ್ರತಿವರ್ಷ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಶಾಲಾ-ಕಾಲೇಜುಗಳಲ್ಲಿ ಅಭಿಯಾನ, ರ್ಯಾಲಿ ಹಾಗೂ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದ್ರೆ ಈ ವರ್ಷ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಆನ್‍ಲೈನ್‍ನಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ #MHDAY2020 #ItsTimeForAction and #PeriodsInPandemics ಹ್ಯಾಶ್‍ಟ್ಯಾಗ್‍ಗಳನ್ನು ಕೂಡ ಬಳಸಿ ಎಂಎಚ್ ಡೇಗೆ ಬೆಂಬಲ ನೀಡಬಹುದು. ವಲ್ರ್ಡ್ ಅಸೋಸಿಯೇಷನ್ ಆಫ್ ಗರ್ಲ್ ಗೈಡ್ಸ್ ಆಂಡ್ ಗರ್ಲ್ ಸ್ಕೌಟ್ಸ್ ಕೂಡ ಈ ವರ್ಷ ಸೋಷಿಯಲ್ ಮೀಡಿಯಾದಲ್ಲಿ ‘ಮೆನೆಸ್ಟ್ರುವೇಷನ್ ಬ್ರೆಸ್‍ಲೇಟ್ ಚಾಲೆಂಜ್’ ಪ್ರಾರಂಭಿಸಿದ್ದು, ಋತುಚಕ್ರವನ್ನು ಬಿಂಬಿಸುವ ಕೆಂಪು ಬಣ್ಣವಿರುವ ಬ್ರೆಸ್‍ಲೇಟ್ ಸಿದ್ಧಪಡಿಸಿ, ಸೋಷಿಯಲ್ ಮೀಡಿಯಾದಲ್ಲಿ ಅದರ ಫೋಟೋ ಶೇರ್ ಮಾಡುವಂತೆ ಕೋರಿದೆ.  

Follow Us:
Download App:
  • android
  • ios