Asianet Suvarna News Asianet Suvarna News

ಒತ್ತಡಮುಕ್ತ ಅಮ್ಮನಾಗಲು ಇಲ್ಲಿವೆ ಗೋಲ್ಡನ್ ಟಿಪ್ಸ್

ಮಗುವಾದ ಮೇಲೆ ಬಹುತೇಕ ತಾಯಂದಿರು ಬಹಳಷ್ಟು ಒತ್ತಡಕ್ಕೊಳಗಾಗುತ್ತಾರೆ. 24/7 ಮಗುವಿನ ಬೇಕುಬೇಡಗಳ ಯೋಚನೆಯೇ ಒಂದಿಷ್ಟು ಒತ್ತಡ ಹೊತ್ತು ತಂದರೆ, ನಿದ್ರೆಯಿಲ್ಲದ ರಾತ್ರಿಗಳು, ಸಮಯಕ್ಕೆ ಸರಿಯಾಗಿ ಆಗಬೇಕಾದ ಕೆಲಸಗಳು ಎಲ್ಲವೂ ಸೇರಿ ಒತ್ತಡ ಹೆಚ್ಚುತ್ತದೆ. 

Golden Tips to Become a StressFree Mom
Author
Bangalore, First Published May 26, 2020, 5:01 PM IST

ತಾಯ್ತನವೆಂಬುದು ಎಷ್ಟು ಸಂತಸ ಹಂಚುತ್ತದೋ ಅಷ್ಟೇ ಜವಾಬ್ದಾರಿಗಳನ್ನು ಹೆಗಲಿಗೆ ಹಾಕುತ್ತದೆ ಕೂಡಾ. ಏನಾಗುತ್ತಿದೆ ಎಂದು ತಿಳಿವ ಮುನ್ನವೇ ನನ್ನದು ಎಂಬ ಸಮಯ ಮಾಯವಾಗಿರುತ್ತದೆ, ಶಾಪಿಂಗ್ ಕಾರ್ಟ್ ತುಂಬಾ ಕೇವಲ ಮಗುವಿನ ಬಟ್ಟೆ, ಆಟಿಕೆ ಇತರೆ ಅಗತ್ಯಗಳು ತುಂಬಿರುತ್ತವೆ. ನಮ್ಮ ಆನ್‌ಲೈನ್ ಸರ್ಚ್‌ಗಳು ಮಗುವಿನ ಬೆಳವಣಿಗೆಗೆ ಏನೇನು ಬೇಕೆಂಬ ಜಾಹಿರಾತುಗಳಿಂದ ತುಂಬಿರುತ್ತವೆ. ಪ್ರತಿ ಕ್ಷಣ ಮಗುವಿನ ಬೇಕುಬೇಡಗಳ ಯೋಚನೆಯಲ್ಲೇ ಕಳೆದುಹೋಗುತ್ತದೆ. ಮಗು ಏನು ಮಾಡುತ್ತದೆ, ಮಾಡುತ್ತಿಲ್ಲ ಎಂಬುದರ ತುಲನೆ ಬೇರೆ ಮಕ್ಕಳೊಂದಿಗೆ ಶುರುವಾಗುತ್ತದೆ. ನಿದ್ರೆ ಎಂಬುದು ಮರೀಚಿಕೆಯಾಗುತ್ತಲೇ, ಸೆಲ್ಫ್ ಕೇರ್ ಎಂಬುದು ಗತವೈಭವವಾಗಿ ಕಾಣುತ್ತದೆ.

ಇವೆಲ್ಲವೂ ತಾಯಿಯನ್ನು ಒತ್ತಡಕ್ಕೆ ದೂಡುತ್ತವೆ. ಅಂಥ ಒತ್ತಡದ ಕಪಿಮುಷ್ಠಿಯಲ್ಲಿ ಸಿಲುಕಿದ್ದಾಗಲೂ ಪ್ರತಿ ತಾಯಿಯೂ ತನ್ನ ಮಗು ದೊಡ್ಡದಾಗದಿರಲಿ... ಅದರ ಬಾಲ್ ಇನ್ನಷ್ಟು ಹಿಗ್ಗಲಿ ಎಂದೇ ಬಯಸುತ್ತಾಳೆಂಬುದು ಬೇರೆ ಮಾತು. ಆದರೂ ಕೂಡಾ ಒತ್ತಡರಹಿತ ತಾಯ್ತನವಾದರೆ ಈ ಸಮಯವನ್ನು, ಮಗುವಿನೊಡನೆಯ ಸುಂದರ ಕ್ಷಣಗಳನ್ನು ಮತ್ತಷ್ಟು ಎಂಜಾಯ್ ಮಾಡಬಹುದಲ್ಲವೇ? ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಒತ್ತಡಮುಕ್ತ ತಾಯಿಯ ಜೊತೆ ಮಗುವೂ ಸಂತೋಷವಾಗಿ ಬೆಳೆಯುತ್ತದೆ. ಹೀಗಾಗಿ, ತಾಯ್ತನದ ಸ್ಟ್ರೆಸ್ ದೂರ ಮಾಡಲು ಇಲ್ಲಿವೆ ಕೆಲ ಸುಲಭ ಟಿಪ್ಸ್.  

ಗರ್ಭದಲ್ಲಿರುವ ಶಿಶು ಮೇಲೆ ಹೀಗೆ ಅಟ್ಯಾಕ್ ಮಾಡುತ್ತೆ ಕೊರೋನಾ!

ನಿಮ್ಮ ಮಗುವಿಗೆ ಸಂವಹನ ಗೊತ್ತು!
ಮಗುವಿಗೆ ಮಾತು ಬರದಿರಬಹುದು. ಆದರೂ ಕೂಡಾ ಅದು ತನಗೆ ಬೇಕಾದುದನ್ನು, ಬೇಡದಿರುವುದನ್ನು ಸಂವಹಿಸಬಲ್ಲದು. ಮನಃಶಾಸ್ತ್ರಜ್ಞರ ಪ್ರಕಾರ, ಮಗು ಹುಟ್ಟಿದ ದಿನದಿಂದಲೇ ತನ್ನ ಬೇಕುಬೇಡಗಳನ್ನು ಹೇಳುತ್ತದೆ. ನಾವು ಅದನ್ನು ಅರ್ಥ ಮಾಡಿಕೊಳ್ಳಲು ಆರಂಭಿಸಿದರೆ, ಮಗುವಿಗೆ ಏನು ಬೇಕೋ ಬೇಡವೋ ಎಂದು ತಲೆ ಕೆಡಿಸಿಕೊಳ್ಳುತ್ತಾ ಕೂರುವ ಅಗತ್ಯವಿಲ್ಲ. ಅವು ಅಳುವುದು, ಕೂಗುವುದು, ನಗುವುದು, ಮೈಮುರಿಯುವುದು ಮುಂತಾದ ದೇಹಭಾಷೆಯನ್ನು ಬಳಸಿ ನಮ್ಮೊಂದಿಗೆ ಸಂವಹನ ನಡೆಸುತ್ತವೆ. ಹಾಗಾಗಿ, ನಾವು ತಾಯಂದಿರು, ಮಗುವಿನ ಮನಸ್ಸು, ಯೋಚನೆಗಳೆಲ್ಲವೂ ನಮ್ಮದೇ ಎಂಬಂತೆ ವರ್ತಿಸಬೇಕಿಲ್ಲ, ಮಕ್ಕಳಿಗೇ ಸಂವಹಿಸಲು ಅವಕಾಶ ಮಾಡಿಕೊಟ್ಟರೆ ಸಾಕು. 

ಪ್ರತಿ ಮಗುವೂ ವಿಭಿನ್ನ
ಪ್ರತಿ ಪ್ರಗ್ನೆನ್ಸಿ ಹೇಗೆ ವಿಭಿನ್ನವೋ, ಪ್ರತೀ ಮಗುವೂ ಹಾಗೆಯೇ ವಿಭಿನ್ನ. ಮಗು ಹುಟ್ಟಿದ ಬಳಿಕ ಇತರೆ ಎಲ್ಲ ಮಕ್ಕಳೊಡನೆ ಹೋಲಿಸುತ್ತಾ, ಅಥವಾ ಇಂಥ ಸಮಯಕ್ಕೆ ಹೀಗಾಗಬೇಕಿತ್ತು ಎಂಬುದನ್ನು ಓದಿಕೊಂಡು ಅದಾಗುತ್ತಿಲ್ಲ ಎಂದು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇಷ್ಟಕ್ಕೂ ನೀವೇನು ಯಾವುದೋ ಮೈಲ್‌ಸ್ಟೋನ್ ಸ್ಪರ್ಧೆಯಲ್ಲಿ ಜಿದ್ದಿಗೆ ಬಿದ್ದಿಲ್ಲ. ಎರಡು ತಿಂಗಳಿಗೆ ನಗಲೇಬೇಕು, ಐದು ತಿಂಗಳಿಗೆ ಎದ್ದು ಕೂರಲೇಬೇಕೆಂಬ ನಿಯಮವೇನಿಲ್ಲ. ಮಗುವು ತನ್ನ ಅವಧಿ ಬಂದಾಗ ಹೊಸ ಹೊಸ ಮೈಲ್‌ಸ್ಟೋನ್ ಸಾಧಿಸುತ್ತದೆ. ಅದಕ್ಕೆ ಗಡಿಬಿಡಿ ಮಾಡಬೇಡಿ. ಅದು ಸಾಧಿಸಿದಾಗ ಖುಷಿ ಪಟ್ಟು ಬೆಂಬಲಿಸಿ. ಇದಕ್ಕಾಗಿ ನೀವೇಕೆ ಒತ್ತಡ ಮಾಡಿಕೊಳ್ಳಬೇಕು?

ಮಗುವನ್ನು ಅರ್ಥ ಮಾಡಿಕೊಳ್ಳಿ
ತಾಯಿಯಾಗುತ್ತಿದ್ದಂತೆಯೇ ಇತರೆ ಅನುಭವಸ್ಥರು, ಲೇಖನಗಳು, ವಿಡಿಯೋಗಳು ದೊಡ್ಡ ಟು ಡು ಲಿಸ್ಟನ್ನೇ ನೀಡುತ್ತವೆ. ಹೀಗೆ ಮಾಡಿ ಹಾಗೆ ಮಾಡಿ, ಪ್ಯಾಸಿಫೈಯರ್ ಕೊಡಿ, ಮಸಾಜ್ ಮಾಡಿ, ಇಂಥ ಆಹಾರ ತಿನ್ನಿಸಿ ಇತ್ಯಾದಿ. ಈ ಲಿಸ್ಟ್‌ಗೆ ಕೊನೆಯೇ ಇರುವುದಿಲ್ಲ. ಪ್ರತಿಯೊಬ್ಬರೂ ನಿಮ್ಮ ಮಗುವಿನ ಬಗ್ಗೆ ನಿಮಗಿಂತ ಹೆಚ್ಚು ಗೊತ್ತಿರುವವರಂತೆಯೇ ಮಾತನಾಡುತ್ತಾರೆ. ಆದರೆ, ಅದು ಸಾಧ್ಯವಿಲ್ಲ ಅಲ್ಲವೇ? ನಿಮ್ಮ ಮಗುವಿಗೆ ಏನು ಮುಖ್ಯ, ಯಾವುದು ಒಳ್ಳೆಯದು ಎಂಬುದನ್ನು ನೀವೇ ನಿರ್ಧರಿಸಿ. ಮಗುವಿನೊಂದಿಗೆ ಸಂತಸದ ಸಮಯ ಕಳೆಯಿರಿ. ಈ ಸಂದರ್ಭದಲ್ಲಿ ಅದರ ಪ್ರತಿಕ್ರಿಯೆಗಳು, ಯಾವಾಗ ಏನು ಬೇಕು, ಯಾವುದನ್ನು ಎಂಜಾಯ್ ಮಾಡುತ್ತದೆ ಎಂಬುದೆಲ್ಲ ತಿಳಿಯುತ್ತದೆ. ನಂತರದಲ್ಲಿ ಮಗುವಿನ ಅಗತ್ಯಗಳನ್ನು ನೀವೇ ಕಂಡುಕೊಳ್ಳಿ. ಪ್ರತಿಯೊಬ್ಬರ ಸಲಹೆ ಕೇಳುತ್ತಾ ಹೋದರೆ ಅದೇ ದೊಡ್ಡ ಸ್ಟ್ರೆಸ್ ಆಗಿ ನಿಮ್ಮ ತಲೆ ಮೇಲೆ ಕುಳಿತುಬಿಡುತ್ತದೆ. 

ಧೃತರಾಷ್ಟ್ರನ ಪುತ್ರ ವ್ಯಾಮೋಹ ನಿಮ್ಮಲ್ಲೂ ಇರಬಹುದು! ಚೆಕ್ ಮಾಡ್ಕೊಳ್ಳಿ

ಮಿ ಟೈಂ ಇರಲಿ
ಮಕ್ಕಳನ್ನು ನೋಡಿಕೊಳ್ಳುವುದು ಸುಲಭದ ಕೆಲಸ ಖಂಡಿತಾ ಅಲ್ಲ. ಹಾಗಂಥ ದಿನದ 24 ಗಂಟೆಯೂ ನಿಮ್ಮ ಗಮನವನ್ನು ಅವರಿಗೆ ನೀಡಬೇಕಾಗಿಲ್ಲ. ಅವರಿಗೂ ಒಂದಿಷ್ಟು ಮಿ ಟೈಂ ಕೊಡಿ. ಅವರ ಪಾಡಿಗೆ ಅವರು ವಸ್ತುಗಳನ್ನು, ಆಟಿಕೆಗಳನ್ನು ಎಕ್ಸ್‌ಪ್ಲೋರ್ ಮಾಡಲು ಅವಕಾಶ ಕೊಡಿ. ಈ ಸಂದರ್ಭದಲ್ಲಿ ಸಿಗುವ ಸಮಯವನ್ನು ನಿಮ್ಮ ಸಮಯವಾಗಿಸಿಕೊಂಡು ಅದನ್ನು ಸೆಲ್ಫ್ ಕೇರ್‌ಗೆ, ನಿಮ್ಮ ಮನರಂಜನೆ, ವ್ಯಾಯಾಮ, ನೃತ್ಯ, ಹವ್ಯಾಸಗಳಿಗೆ ಕೊಟ್ಟುಕೊಳ್ಳಿ. 

ಮಮ್ಮಾಸ್ ಗ್ರೂಪ್‌ಗೆ ಸೇರಿ
ನಿಮ್ಮದೇ ಫೇಸ್‌ನಲ್ಲಿರುವ ತಾಯಂದಿರ ಗುಂಪುಗಳಿಗೆ ಸೇರಿಕೊಳ್ಳಿ. ಆ್ಯಪ್, ಸೋಷ್ಯಲ್ ವೇದಿಕೆಗಳ ಮುಖಾಂತರವಾದರೂ ಸರಿ, ಮನೆಯ ನೆರೆಹೊರೆಯವರಾದರೂ ಸರಿ- ಒಂದೇ ರೀತಿಯ ಅನುಭವಗಳನ್ನು ಹಂಚಿಕೊಂಡಾಗ ಮನಸ್ಸಿಗೆ ಸಮಾಧಾನ ಸಿಗುತ್ತದೆ. ಅವರೊಂದಿಗೆ ಬೇರೆ ವಿಷಯಗಳನ್ನೂ ಮಾತನಾಡಿ, ಹೊಸ ಸ್ನೇಹ ಸಂಪಾದಿಸಿ. ಇವೆಲ್ಲವೂ ನಿಮ್ಮನ್ನು ಒತ್ತಡಮುಕ್ತವಾಗಿಸದಿದ್ದರೆ ಕೇಳಿ. 
 

Follow Us:
Download App:
  • android
  • ios