Asianet Suvarna News Asianet Suvarna News

ಗಂಡನ ಸೆಕ್ಸ್ ಕಾಟಕ್ಕೆ ನೊಂದು ಬೆಂಕಿ ಹಚ್ಚಿಕೊಂಡು, ಬೆಂದು ಬಂದಳು..!

ಗರ್ಭದಲ್ಲಿದ್ದ ಕಂದನಿಗೆ ಪತ್ರ ಬರೆದು ಬೆಂಕಿ ಹಚ್ಚಿಕೊಂಡವಳ ಕಥೆ..! ಬೆಂಕಿಯಲ್ಲಿ ಬೆಂದವಳು ನೊಂದವರ ಪಾಲಿಗೆ ಹೂವಾದಳು..!

Husband Sexual Harrasament, Woman Burn Herself with fire when she is Pregnant Vin
Author
First Published Jan 20, 2023, 2:39 PM IST

-ಎಂ.ಸಿ.ಶೋಭಾ, ಏಷ್ಯಾನೆಟ್ ಸುವರ್ಣ ನ್ಯೂಸ್

ದಾಂಪತ್ಯದ ಬಗ್ಗೆ ನೂರಾರು ಕನಸು ಕಂಡು, ಹಸೆಮಣೆ ಏರಿದ್ದಳು. ಅಮ್ಮ- ಅಪ್ಪ ನೋಡಿದ ಹುಡುಗನನ್ನೇ ತನ್ನ ರಾಜಕುಮಾರ ಎಂದುಕೊಂಡು ತಾಳಿ ಕಟ್ಟಿಸಿಕೊಂಡಿದ್ದಳು. ಆದರೆ, ಮದುವೆಯಾದ ಎರಡೇ ವಾರಕ್ಕೆ ಆಕೆಯ ಕನಸುಗಳೆಲ್ಲ ನುಚ್ಚು ನೂರಾಗಿತ್ತು. ಆಕೆಯ ಬದುಕು ಬೆಂಕಿಯಲ್ಲಿ ಬೆಂದಿತ್ತು.

ಇದು ಹೈದರಾಬಾದ್​ನ ಸುಮಾಳ (ಹೆಸರು ಬದಲಿಸಲಾಗಿದೆ) ಕಥೆ. ಮಧ್ಯಮ ವರ್ಗದ ಸುಮಾ ಸುಂದರಿ. ತಾನಾಯ್ತು, ಕಾಲೇಜು, ಓದು ಎಂದುಕೊಂಡಿದ್ದವಳಿಗೆ, ಅಮ್ಮ- ಅಮ್ಮ ಮದುವೆ (Marriage) ಆತುರ ತೋರಿದ್ದರು. ಹೆತ್ತವರ ಆಸೆಯಂತೆಯೇ ಅವರೇ ತೋರಿಸಿದ ಹುಡುಗನನ್ನು ಒಪ್ಪಿಕೊಂಡು ಹಸೆಮಣೆ ಏರಿದ್ದಳು. ಮೊದಲ ರಾತ್ರಿಯಿಂದಲೇ ಶುರುವಾಯ್ತು ಗಂಡನ ಕಿರಿಕಿರಿ. ಎರಡೇ ವಾರಕ್ಕೆ ಸುಮಳಾ ದಾಂಪತ್ಯದ ಸುಂದರ ಕನಸು, ಗಂಡನ (Husband) ಅನುಮಾನದ ಸ್ವಭಾವದಿಂದ ಭೀಕರ ಅನ್ನಿಸತೊಡಗಿತ್ತು.

ಅರೆ..ಇದೆಂಥಾ ವಿಚಿತ್ರ, ಹುಡುಗರ ಸಹವಾಸಾನೇ ಬೇಡಾಂತ ಹಾಸಿಗೆಯನ್ನೇ ವರಿಸಿದ ಮಹಿಳೆ!

‘ನೋಡೋಕೆ ನೀನು ಸುಂದರಿ, ಆದರೂ ನಿಂಗ್ಯಾಕೆ ಬಾಯ್​ ಫ್ರೆಂಡ್ ಇಲ್ಲ’.‘ನಿನಗೆ ಸೆಕ್ಸ್ ಮಾಡೋದಕ್ಕೆ ಬರೋದೇ ಇಲ್ವಾ ? ಹಾಸಿಗೆಯಲ್ಲಿ ಹೇಗಿರಬೇಕಂತ ನಿನಗೆ ಗೊತ್ತೇ ಇಲ್ಲ!’ - ಗಂಡನದ್ದು ಇಂಥದ್ದೇ ಲೇವಡಿಯ ಮಾತುಗಳು. ಗಂಡನ ಹಿಂಸೆಯಿಂದ ಮಾನಸಿಕವಾಗಿ ಸುಮಾ ನೊಂದಳು, ಹಿಂಸೆ ಅನುಭವಿಸಿದಳು. ಅಪ್ಪ-ಅಮ್ಮನ ಬಳಿ ತನ್ನ ದುಃಖ ತೋಡಿಕೊಂಡ ಸುಮಾಗೆ , ಅಮ್ಮ ಹೇಳಿದ್ದು ‘ಅವನು ಗಂಡಸು, ಹೀಗೆಲ್ಲ ಮಾತಾಡೋದು ಸಹಜ. ಒಂದು ಮಗು ಆಗಿಬಿಟ್ರೆ ಎಲ್ಲ ಸರಿ ಹೋಗುತ್ತೆ’ ಅಂತ. ದಿಕ್ಕು ತೋಚದ ಸುಮಾ, ಮತ್ತದೇ ನರಕದ ಮನೆಗೆ ವಾಪಸ್ಸಾದಳು. ಗಂಡನ ಸೆಕ್ಸ್ ಕಾಟವನ್ನು ಸಹಿಸಿಕೊಂಡಿದ್ದ ಸುಮಾಳಿಗೆ ಅದೊಂದು ದಿನ, ತೀರಾ ಅವಮಾನ ಅನುಭವಿಬಿಟ್ಟಳು. 
ಬೆಳಗಾಗುತ್ತಲೇ ಸುಮಾಳ ಮುಖದ ಮೇಲೆ 100 ರೂ. ಎಸೆದ ಗಂಡ, ನಿನ್ನೆ ರಾತ್ರಿ ನೀನು ಕೊಟ್ಟ ಸುಖಕ್ಕೆ ಇಷ್ಟೇ ಬೆಲೆ’ ಎಂದು ರಕ್ಕಸ ನಗೆ ನಕ್ಕು ಹೋದಾಗ, ಸುಮಾ ಆಘಾತದಿಂದ ಕುಸಿದು ಬಿಟ್ಟಳು. 

ಇನ್ನು ಈ ಮದುವೆ ಸಾಕು ಎಂಬ ನಿರ್ಧಾರಕ್ಕೆ (Decision) ಬಂದವಳೇ, ನೇರವಾಗಿ ಅಮ್ಮನ ಮನೆಗೆ ನಡೆದುಬಿಟ್ಟಳು. ಮನೆಯಲ್ಲಿ ಮತ್ತದೇ ಮಾತು, ಎಲ್ಲ ಸರಿಯಾಗುತ್ತೆ, ಗಂಡನ ಜತೆ ಬಾಳು. ಆದ್ರೆ, ಗಂಡನದ್ದು ಮಾತ್ರ ಪೈಶಾಚಿಕ ವರ್ತನೆ, ಮನೆಗೆ ವಾಪಸ್ಸು ಬಾ, ನನಗೊಬ್ಬಳು ಸುಂದರ ಹುಡುಗಿ ತೋರಿಸು’ ಎಂಬ ಅಸಹ್ಯಕರ ಬೇಡಿಕೆ. ಇನ್ನು ತನ್ನ ಬದುಕಿನಿಂದ ಗಂಡ ಎಂಬ ವ್ಯಕ್ತಿಯನ್ನು ಕಿತ್ತೆಸೆದ ಸುಮಾ, ಅಮ್ಮನ ಮನೆಯಲ್ಲೇ ಆಶ್ರಯಪಡೆದಳು. ಇದೆಲ್ಲದರ ಮಧ್ಯೆ, ಸುಮಾಳ ಬದುಕು ಅರಳಿಸಿದ್ದು ಗರ್ಭದಲ್ಲಿ ಅರಳುತ್ತಿದ್ದ ಕಂದ (Baby). ಗರ್ಭಿಣಿ ಎಂಬ ವಿಷಯ ತಿಳಿದು ಸುಮಾ, ತಾಯ್ತನದ ಖುಷಿಯಲ್ಲಿದ್ರೆ, ಹಿಂದೆಯೇ ಮನಸ್ಸಲ್ಲಿ ಆತಂಕ, ಭಯ ಮನೆ ಮಾಡಿತು. ಹೆಣ್ಣು ಮಗುವಾಗಿ ಬಿಟ್ಟರೆ? ನನ್ನಂತೆ ನೋವು, ಕಷ್ಟ ಅನುಭವಿಸುವಂತಾರೆ? ಎಂಬ ನೂರೆಂಟು ಭಯ ಕಾಡತೊಡಗಿತು.

ಜೈನ ಸನ್ಯಾಸ ದೀಕ್ಷೆ ಪಡೆದ ಯುವತಿ: ಇಪ್ಪತ್ತರ ಹರೆಯದಲ್ಲೇ ಆಧ್ಯಾತ್ಮದತ್ತ ಒಲವು

ಇಂಥ ಬದುಕು ಬದುಕೋಕ್ಕಿಂತ ನಾನೂ, ನನ್ನ ಕಂದಮ್ಮ ಸಾಯೋದೇ ಉತ್ತಮ ಎಂಬ ನಿರ್ಧಾರಕ್ಕೆ ಬಂದ ಸುಮಾ, ಅದೊಂದು ದಿನ ಮನೆಯಲ್ಲೇ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಬಿಟ್ಟಳು. ಅದೃಷ್ಟವಶಾತ್, ಅಪ್ಪ ಮನೆಯಲ್ಲೇ ಇದ್ದಿದ್ದರಿಂದ, ತಕ್ಷಣವೇ ಬೆಂಕಿ ಆರಿಸಿ, ಸುಮಾಳನ್ನು ಆಸ್ಪತ್ರೆಗೆ ದಾಖಲಿಸಿದ್ರು. ಬೆಂಕಿಯಿಂದಾಗಿ ಸುಮಾಳ ದೇಹ (Body) ಶೇ.55ರಷ್ಟು ಬೆಂದು ಹೋಗಿತ್ತು. 

ಸುಂದರ ಮುಖದಲ್ಲೂ ಬೆಂಕಿಯ ಜ್ವಾಲೆ ತನ್ನ ಗುರುತು ಬಿಟ್ಟಿತ್ತು. ಬೆಂಕಿಯಿಂದ ನೊಂದು ಬೆಂದವಳಿಗೆ ಮತ್ತೊಂದು ಆಘಾತ ಕಾದಿತ್ತು. ಗರ್ಭದಲ್ಲಿ ಅರಳುತ್ತಿದ್ದ ಕಂದಮ್ಮ ಬೆಂಕಿಯಲ್ಲಿ ಬೆಂದು ಹೋಗಿತ್ತು. ತನ್ನ ನಿರ್ಧಾರದಿಂದಾಗಿಯೇ ಮಗು ಬಲಿಯಾಯ್ತು ಎಂಬ ಪಶ್ಚಾತ್ತಾಪದ ಬೇಗೆಯಲ್ಲಿ ಬೆಂದಳು. ತಿಂಗಳಾನುಗಟ್ಟಲೆ ಮನೆಯಲ್ಲೇ ಅಡಗಿ ಕುಳಿತಳು. ಜನರನ್ನು ಎದುರಿಸಲಾರದೇ ನಲುಗಿ ಹೋದಳು.

ಆದರೆ, ಅಪ್ಪ- ಅಮ್ಮನ ಧೈರ್ಯದ ಮಾತುಗಳಿಂದ ಹೊರ ಬಂದ ಸುಮಾ, ಹೊಸ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದಳು. ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಳು.  ಈ ಸಮಯದಲ್ಲಿ ಸ್ನೇಹಿತರೊಬ್ಬರ ಸಹಾಯದಿಂದ ಹೈದ್ರಾಬಾದ್​ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರಿದಳು. ವೈದ್ಯರು, ಆರೋಗ್ಯ ಇಲಾಖೆ ಸಂಪರ್ಕ ಹೆಚ್ಚುತ್ತಿದ್ದಂತೆ ಸುಮಾ, ಬೆಂಕಿ ಅನಾಹುತದಲ್ಲಿ ನೊಂದವರ ನೆರವಿಗೆ ನಿಲ್ಲುವ ಬಗ್ಗೆ ಯೋಚಿಸತೊಡಗಿದಳು . ಒಂದೇ ವರ್ಷದಲ್ಲಿ Burn Survivor Mission Savior Trust  ಸ್ಥಾಪಿಸಿದಳು. ಬಡ ಹೆಣ್ಣು ಮಕ್ಕಳಿಗೆ ಉಚಿತ ಪ್ಲಾಸ್ಟಿಕ್ ಸರ್ಜರಿ ಮಾಡುವ ಕೈಂಕರ್ಯ ಆರಂಭಿಸಿದಳು. ದೇಶಾದ್ಯಂತ ಈವರೆಗೂ 140 ಜನರಿಗೆ ಉಚಿತ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದು, ನೂರಾರು ಜನರಿಗೆ ಕೌನ್ಸಿಲಿಂಗ್ ಮಾಡಿದ್ದಾಳೆ ಸುಮಾ. 

ಬದುಕಿನಲ್ಲಿ ಗೆಲ್ಲಬೇಕೆಂದು ನಿಂತಾಗಲೆಲ್ಲ ಸುಮಾಳನ್ನು ಜಗ್ಗಿ ನಿಲ್ಲಿಸುತ್ತಿದ್ದದ್ದು ಜನರು, ಸಂಬಂಧಿಕರ ಕೊಂಕು ಮಾತು, ಗಂಡ ಬಿಟ್ಟವಳು ಎಂಬ ಮೂದಲಿಕೆ.  ‘ಪ್ರತಿಬಾರಿಯೂ ಇನ್ನೇನೂ ಬಿದ್ದೇ ಬಿಟ್ಟೆ ಅಂದುಕೊಂಡಾಗಲೆಲ್ಲ ನನಗೆ ನಾನೇ ಧೈರ್ಯ ತುಂಬಿಕೊಂಡು, ಎದ್ದು ನಿಲ್ಲುತ್ತಿದ್ದೆ. ಎಲ್ಲರ ದಾರಿ ಬಿಟ್ಟು ನನ್ನದೇ ಸ್ವಂತ ದಾರಿಯಲ್ಲಿ ನಡೆಯತೊಡಗಿದೆ. ಮುಗಿದೇ ಹೋಯ್ತು ಎಂದುಕೊಂಡ ನೂರಾರು ಬದುಕಿಗೆ ಟಾನಿಕ್​ ರೀತಿ ಕೆಲಸ ಮಾಡ್ತಿದ್ದೇನೆ, ಅದರಲ್ಲೇ ಸಾರ್ಥಕತೆ ಕಾಣುತ್ತಿದ್ದೇನೆ,’ ಎನ್ನುತ್ತಿದ್ದಾಳೆ ಸುಮಾ. 

ಎಷ್ಟೇ ಆಗಲಿ ಸುಮಾ, ಬೆಂಕಿಯಲ್ಲಿ ಬೆಂದವಳು. ಈಗ ತನ್ನಂಥ ನೊಂದು, ಬೆಂದ ನೂರಾರು ಹೆಣ್ಮಕ್ಕಳ ಬದುಕು ಅರಳಿಸುತ್ತಿರುವವರು.

Follow Us:
Download App:
  • android
  • ios