Kitchen Tips: ಉಪವಾಸಕ್ಕೆ ಸಾಬೂದಾನ ಖರೀದಿ ಮಾಡ್ತಿದ್ರೆ ಈ ವಿಷ್ಯ ನೆನಪಿಡಿ
ಸಾಬೂದಾನ ಬಳಸುವವರ ಸಂಖ್ಯೆ ಭಾರತದಲ್ಲಿ ಹೆಚ್ಚಿದೆ. ಉಪವಾಸ ಸಂದರ್ಭದಲ್ಲಿ ಮನೆಗೆ ಸಾಬೂದಾನ ಬಂದೇ ಬರುತ್ತೆ. ಆದ್ರೆ ಗುಣಮಟ್ಟದ ಸಾಬೂದಾನ ಯಾವುದು ಎಂಬ ಗೊಂದಲ ಅನೇಕರಿಗಿರುತ್ತದೆ. ನೀವೂ ಈ ಸಮಸ್ಯೆಯಲ್ಲಿದ್ದರೆ ನಿಮಗೊಂದಿಷ್ಟು ಟಿಪ್ಸ್ ಇದೆ.
ಸಾಬೂದಾನದಿಂದ ವೆರೈಟಿ ಖಾದ್ಯಗಳನ್ನು ತಯಾರಿಸಬಹುದು. ಸಾಬೂದಾನ ಪಾಯಸ, ಸಾಬೂದಾನ ಖಿಚಡಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಉಪವಾಸದ ಸಂದರ್ಭದಲ್ಲಿ ಬಹುತೇಕರು ಸಾಬೂದಾನ ಖಿಚಡಿ ಬಳಸ್ತಾರೆ. ನವರಾತ್ರಿ ಸೇರಿದಂತೆ ಯಾವುದೇ ಹಬ್ಬಗಳು ಬರಲಿ, ಉಪವಾಸ ಮಾಡುವವರು ಸಾಬೂದಾನ ಕೊಂಡೊಯ್ತಾರೆ. ಇದೇ ಕಾರಣಕ್ಕೆ ಹಬ್ಬದ ಸಂದರ್ಭದಲ್ಲಿ ಸಾಬೂದಾನಕ್ಕೆ ಹೆಚ್ಚಿನ ಬೇಡಿಕೆಯಿದೆ. ಸಾಬೂದಾನ ಟೇಸ್ಟಿ ಮಾತ್ರವಲ್ಲ ಆರೋಗ್ಯಕ್ಕೂ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಮಾರುಕಟ್ಟೆಯಲ್ಲಿ ಭಿನ್ನ ಪ್ರಕಾರದ ಸಾಬೂದಾನ ಸಿಗುತ್ತದೆ. ಯಾವುದು ಒಳ್ಳೆಯ ಸಾಬೂದಾನ ಎಂದು ಪತ್ತೆ ಮಾಡುವುದು ಕಷ್ಟವಾಗುತ್ತದೆ. ಮೇಲಿಂದ ಚೆನ್ನಾಗಿ ಕಾಣುವ ಸಾಬೂದಾನದ ಖರೀದಿ ಮಾಡಿ ಮನೆಗೆ ತಂದ್ರೆ ಒಳಗೆ ಪೊಳ್ಳಿರುತ್ತದೆ. ದುಬಾರಿ ಬೆಲೆಗೆ ಕಲಬೆರಿಕೆ ಸಾಬೂದಾನವನ್ನು ಖರೀದಿಸುವ ಸಂದರ್ಭ ಕೂಡ ಬರುತ್ತದೆ.
ಮಾರುಕಟ್ಟೆಯಲ್ಲಿ ಸಾಬೂದಾನ (Sabudana) ಖರೀದಿ ವೇಳೆ ಬಣ್ಣ, ಆಕಾರದ ಬಗ್ಗೆ ಗಮನ ನೀಡ್ಬೇಕು. ಪರಿಪೂರ್ಣ ಸಾಬೂದಾನ ಖರೀದಿ ಸಾಧ್ಯವಿಲ್ಲವೆಂದ್ರೂ ಸ್ವಲ್ಪ ಎಚ್ಚರಿಕೆ ವಹಿಸಿದ್ರೆ ಒಳ್ಳೆ ಗುಣಮಟ್ಟದ ಸಾಬೂದಾನ ಖರೀದಿ ಮಾಡಬಹುದು.
ಸಾಬೂದಾನ ಖರೀದಿ ವೇಳೆ ಇರಲಿ ಗಮನ :
ಸಾಬೂದಾನದ ಬಣ್ಣ ಗಮನಿಸಿ : ಸಾಬೂದಾನದ ಬಣ್ಣ ಬಿಳಿ (White) ಮತ್ತು ತಿಳಿ ಹಳದಿ ಇದ್ದರೆ ಒಳ್ಳೆ ಗುಣಮಟ್ಟದ ಸಾಬೂದಾನ ಎಂಬ ಭ್ರಮೆಯಲ್ಲಿ ಕೆಲ ಮಹಿಳೆಯರಿರ್ತಾರೆ. ಆದ್ರೆ ತಿಳಿ ಹಳದಿ ಸಾಬೂದಾನಕ್ಕೆ ಕೃತಕ ಬಣ್ಣವನ್ನು ಬಳಸುವ ಸಾಧ್ಯತೆ ಹೆಚ್ಚಿರುತ್ತದೆ. ಇದ್ರ ಸೇವನೆ ಮಾಡಿದ್ರೆ ನಮ್ಮ ಆರೋಗ್ಯ (Health) ಹಾಳಾಗುವ ಸಾಧ್ಯತೆಯಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ತಿಳಿ ಬಿಳಿ ಬಣ್ಣದ ಸಾಬೂದಾನ ಖರೀದಿಗೆ ಆದ್ಯತೆ ನೀಡಿ.
ಸಾಬೂದಾನದ ಗಾತ್ರ ಹೇಗಿರಬೇಕು ಗೊತ್ತಾ? : ಸಾಬೂದಾನದ ಗಾತ್ರದ ಬಗ್ಗೆಯೂ ನಾವು ಗಮನ ಹರಿಸಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಸಣ್ಣ ಹಾಗೂ ದೊಡ್ಡ ಎರಡು ರೀತಿಯ ಸಾಬೂದಾನ ಲಭ್ಯವಿದೆ. ನೀವು ಮಾರುಕಟ್ಟೆಗೆ ಹೋದಾಗ ದೊಡ್ಡ ಮತ್ತು ಮುತ್ತಿನ ಆಕಾರದ ಸಾಬೂದಾನವನ್ನು ಖರೀದಿ ಮಾಡಿ. ಯಾಕೆಂದ್ರೆ ಹಾಳಾದ ಮತ್ತು ಸಣ್ಣ ಸಾಬೂದಾನ ಆಹಾರದ ರುಚಿಯನ್ನು ಕೆಡಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಆಹಾರದ ರುಚಿ ಹೆಚ್ಚಿಸಲು ಉಪ್ಪು ಬೇಡ, ಈ ವಸ್ತುಗಳನ್ನು ಬಳಸಿ
ನೈಲಾನ್ (Nylon) ಸಾಬೂದಾನ ಮತ್ತು ಸಾಮಾನ್ಯ ಸಾಬೂದಾನಕ್ಕಿರುವ ವ್ಯತ್ಯಾಸವೇನು ? : ನೈಲಾನ್ ಸಾಬೂದಾನ ದೊಡ್ಡದಾಗಿರುತ್ತದೆ. ಇದನ್ನು ಸಾಮಾನ್ಯವಾಗಿ ಒಡೆ ತಯಾರಿಸಲು ಬಳಸ್ತಾರೆ. ಸಣ್ಣ ಸಾಬೂದಾನವನ್ನು ಖೀರ್, ಪಾಯಸ ತಯಾರಿಸಲು ಬಳಸ್ತಾರೆ. ಇದು ಖೀರಿಗೆ ಉತ್ತಮ ಎಂದು ಹೇಳಲಾಗುತ್ತದೆ. ಮಾರುಕಟ್ಟೆಯಲ್ಲಿ ನಿಮಗೆ ಎರಡೂ ರೀತಿಯ ಸಾಬೂದಾನ ಲಭ್ಯವಿದೆ. ನಿಮ್ಮ ಅಗತ್ಯಕ್ಕೆ ಹಾಗೂ ಬೆಲೆಯನ್ನು ಗಮನಿಸಿ ನೀವು ಸಾಬೂದಾನವನ್ನು ಖರೀದಿ ಮಾಡ್ಬೇಕು.
ಸಾಬೂದಾನ ತಯಾರಾಗುವುದು ಹೇಗೆ ? : ಸಾಬೂದಾನ ಯಾವುದೇ ಧಾನ್ಯದಿಂದ ತಯಾರಿಸುವಂತಹದ್ದಲ್ಲ. ತಾಳೆ ಮರದಂತಹ ಒಂದು ಮರದಿಂದ ಇದನ್ನು ತಯಾರಿಸಲಾಗುತ್ತದೆ. ಇದು ಪೂರ್ವ ಆಫ್ರಿಕಾದ ಸಸ್ಯವಾಗಿದೆ.
ಸಾಬೂದಾನ ಸೇವನೆಯಿಂದ ಆಗುವ ಲಾಭಗಳು : ಸಾಬೂದಾನದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿದೆ. ಇದು ಮೂಳೆಗಳನ್ನು ಬಲಪಡಿಸುವ ಕೆಲಸ ಮಾಡುತ್ತದೆ. ಹಾಗೆಯೇ ಇದ್ರಲ್ಲಿ ಮ್ಯಾಗ್ನೀಸಿಯಂ ಪ್ರಮಾಣ ಕೂಡ ಸಾಕಷ್ಟಿದ್ದು, ಇದು ಮೂಳೆಗಳಿಗೆ ಒಳ್ಳೆಯದು. ಇದಲ್ಲದೆ ಬೆಳಗಿನ ಆಹಾರವಾಗಿ ಸಾಬೂದಾನ ಸೇವನೆ ಮಾಡುವುದ್ರಿಂದ ದಿನವಿಡಿ ನೀವು ಚಟುವಟಿಕೆಯಿಂದ ಇರಬಹುದು. ಇದು ದೇಹಕ್ಕೆ ಶಕ್ತಿ ನೀಡುವ ಕೆಲಸವನ್ನು ಮಾಡುತ್ತದೆ. ಸಾಬೂದಾನದಲ್ಲಿ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್ ಹೆಚ್ಚಿನ ಪ್ರಮಾಣದಲ್ಲಿದೆ. ಸಾಬೂದಾನ ಹೊಟ್ಟೆ ಸಮಸ್ಯೆಗೆ ಒಳ್ಳೆಯ ಆಹಾರವಾಗಿದೆ. ಗ್ಯಾಸ್, ಅಜೀರ್ಣ ಇತ್ಯಾದಿ ಜೀರ್ಣಕ್ರಿಯೆ ಸಮಸ್ಯೆಗಳನ್ನು ಹೋಗಲಾಡಿಸುವ ಕೆಲಸವನ್ನು ಸಾಬೂದಾನ ಮಾಡುತ್ತದೆ.
24 ಗಂಟೆಯಲ್ಲಿ ಎಷ್ಟು ಬಾರಿ ಆಹಾರ ಸೇವಿಸ್ಬೇಕು ? ಆರ್ಯುವೇದ ಏನ್ ಹೇಳುತ್ತೆ ?
ಆದ್ರೆ ಮಧುಮೇಹ ರೋಗಿಗಳು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬಾರದು. ಅಲ್ಲದೆ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವ ಜನರು ಕೂಡ ಸಾಬೂದಾನವನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡ್ಬೇಕು.