ಸ್ಟ್ರೆಚ್ ಮಾರ್ಕ್ ಬಗ್ಗೆ ಚಿಂತೆ ಬೇಡ, ಈ ಮನೆಮದ್ದು ಟ್ರೈ ಮಾಡಿ...
ದಪ್ಪಗಾಗಿ ಸಣ್ಣಗಾದಾಗ, ಮಗು ಹೆತ್ತಾಗ ಸ್ಟ್ರೆಚ್ ಮಾರ್ಕ್‌ಗಳಾಗುವುದು ಸಾಮಾನ್ಯ. ಈ ಕಾರಣಕ್ಕೆ ಕೆಲವು ಉಡುಗೆ ಹಾಕೋದಕ್ಕೂ ಮುಜುಗರ ಆಗೋದುಂಟು. ಇಲ್ಲಿ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸುವ ಮನೆಮದ್ದುಗಳಿವೆ. ಟ್ರೈ ಮಾಡಬಹುದು.
ಮಗುವಾದ ಮೇಲೆ ಹೆತ್ತವಳ ದೇಹವನ್ನು ಎಣ್ಣೆಯಿಂದ ಮಸಾಜ್ ಮಾಡಿ ಮೈಗೆ ಬಿಸಿ ನೀರು ಎರೆಯುತ್ತಾರೆ. ಮೈ ಕೈ ನೋವು ಹೋಗಲಿ, ಮೈಗೆ ಶಕ್ತಿ ಬರಲಿ ಅಂತ. ಲೈಟಾಗಿರುವ ಸ್ಟ್ರೆಚ್ ಮಾರ್ಕ್‌ಗಳು ಇದರಿಂದ ಮಾಯವಾಗುತ್ತವೆ. ಸಾಂಪ್ರದಾಯಿಕ ಹಿನ್ನೆಲೆ ಇರುವ ಮನೆಗಳಲ್ಲಿ ಬಾಣಂತಿಯರಿಗೆ ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ ಇತ್ಯಾದಿ ಎಣ್ಣೆ ಹಚ್ಚುತ್ತಾರೆ. ಆಧುನಿಕ ಕಾಲದಲ್ಲಿ ಆಲಿವ್ ಎಣ್ಣೆ ಹಚ್ಚುತ್ತಾರೆ. ಆದರೆ ಸ್ಟ್ರೆಚ್ ಮಾರ್ಕ್ ಹೋಗಬೇಕು ಅನ್ನೋದೇ ಉದ್ದೇಶ ಆದರೆ ಆಲಿವ್ ಆಯಿಲ್ ಉತ್ತಮ. ಇದು ಚರ್ಮದಲ್ಲಿ ಆರ್ದ್ರತೆ ಉಳಿಸುತ್ತದೆ. ರಕ್ತಪರಿಚಲನೆಯನ್ನು ಸರಾಗಗೊಳಿಸುತ್ತದೆ. ಈ ಎಣ್ಣೆಯನ್ನು ಸ್ಟ್ರೆಚ್‌ಮಾರ್ಕ್ ಇರುವ ಜಾಗಕ್ಕೆ ಹಾಕಿ ನಿಧಾನವಾಗಿ ಮಸಾಜ್ ಮಾಡಬೇಕು. ಅರ್ಧ ಹಾಗೇ ಬಿಡಬೇಕು. ಈ ಹೊತ್ತಿಗೆ ಎಣ್ಣೆಯಲ್ಲಿರುವ ವಿಟಮಿನ್ ಎ, ಡಿ ಅಂಶ ಚರ್ಮದ ಕಲೆ ಅಳಿಸುತ್ತವೆ, ಅರ್ಧಗಂಟೆಯ ಬಳಿ ಉಗುರು ಬೆಚ್ಚಗೆ ನೀರಲ್ಲಿ ಸ್ನಾನ ಮಾಡಿ. ನಿಯಮಿತವಾಗಿ ಇದನ್ನು ಮಾಡುತ್ತಿದ್ದಲ್ಲಿ ಸ್ಟ್ರೆಚ್ ಮಾರ್ಕ್ ಹೋಗುತ್ತದೆ.
ವಿಟಮಿನ್ ಇ ಆಯಿಲ್ ಸ್ಟ್ರೆಚ್‌ಮಾರ್ಕ್ (Stretch mark) ನಿವಾರಿಸುವ ಪರಿಣಾಮಕಾರಿ ಮದ್ದು. ವಿಟಮಿನ್ ಇ ಕ್ಯಾಪ್ಸೂಲ್‌ನಿಂದ ತೈಲವನ್ನು ತೆಗೆದು ಅದನ್ನು ನೀವು ಮಾಮೂಲಿಯಾಗಿ ಹಚ್ಚುವ ಮಾಯಿಶ್ಚರೈಸರ್‌ನೊಂದಿಗೆ ಮಿಶ್ರಣ ಮಾಡಿ, ಸ್ಟ್ರೆಚ್‌ಮಾರ್ಕ್ ಇರುವ ಜಾಗಕ್ಕರ ಹಚ್ಚಿ. ಇದನ್ನು ನಿಯಮಿತವಾಗಿ ಮಾಡುತ್ತಾ ಬಂದಲ್ಲಿ ಸ್ಟ್ರೆಚ್‌ಮಾರ್ಕ್ ಇಲ್ಲದಂತೆ ಮಾಡಬಹುದು.
ಸ್ಟ್ರೆಚ್‌ಮಾರ್ಕ್ ಇರುವ ಜಾಗಕ್ಕೆ ಹರಳೆಣ್ಣೆಯಿಂದ ನಿಧಾನವಾಗಿ ವೃತ್ತಾಕಾರವಾಗಿ ಮಸಾಜ್ ಮಾಡಿ. ನಂತರ ಪ್ಲಾಸ್ಟಿಕ್ ಶೀಟ್‌ನಿಂದ ಕವರ್ ಮಾಡಿ, ನಂತರ ಅದರ ಮೇಲೆ ಬಿಸಿ ನೀರಿನ ಪ್ಯಾಕ್ ಇಟ್ಟುಕೊಳ್ಳಿ ಅಥವಾ ಬಿಸಿ ನೀರಿನಲ್ಲಿ ಟವಲ್ ಅದ್ದಿ ಅದನ್ನೂ ಹೊಟ್ಟೆಯ ಸುತ್ತ ಕಟ್ಟಿಕೊಳ್ಳಬಹುದು. ಶಾಖವು ಚರ್ಮದ ರಂಧ್ರಗಳನ್ನು ತೆರೆಯುವ ಮೂಲಕ ತೈಲವನ್ನು ಹೀರಿಕೊಳ್ಳುತ್ತದೆ. ನಂತರ ಸ್ನಾನ ಮಾಡಿ. ಸುಮಾರು ಒಂದು ತಿಂಗಳವರೆಗೆ ಪ್ರತಿದಿನ ಈ ರೀತಿ ಮಾಡಿದರೆ ಸ್ಟ್ರೆಚ್ ಮಾರ್ಕ್ ಕಡಿಮೆ ಆಗುತ್ತದೆ.
ಬಾದಾಮಿ, ಎಳ್ಣೆಣ್ಣೆ ಅಥವಾ ತೆಂಗಿನೆಣ್ಣೆಗೆ ಗುಲಾಬಿ, ಜೆರೇನಿಯಂ, ಲ್ಯಾವೆಂಡರ್, ಮಿರ್ಹ್ ಅಥವಾ ಹೆಲಿಕ್ರಿಸಮ್ ಮುಂತಾದ ಎಸೆನ್ಸಿಯಲ್ ತೈಲಗಳ ಕೆಲವು ಹನಿಯನ್ನು ಬೆರೆಸಿ, ಈ ಮಿಶ್ರಣವನ್ನು ಸ್ಟ್ರೆಚ್ ಮಾರ್ಕ್ ಇರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿ. ಇದು ಬೇಗನೆ ಸ್ಟ್ರೆಚ್ ಮಾರ್ಕ್ ನಿವಾರಿಸಲು ಸಹಾಯ ಮಾಡುತ್ತದೆ.ತ
ಇದನ್ನೂ ಓದಿ: Women Health: ಈ ಸಮಯದಲ್ಲಾಗುತ್ತೆ ಹೆಚ್ಚು ಗರ್ಭಪಾತ..! ಗರ್ಭಧಾರಣೆ ಮುನ್ನ ತಿಳಿಯಿರಿ
ಮೊಟ್ಟೆಯ ಬಿಳಿ ಭಾಗ
ಮೊಟ್ಟೆಯ ಬಿಳಿಭಾಗ ಪ್ರೋಟೀನ್‌ಭರಿತವಾಗಿರುತ್ತದೆ. ಇದು ಚರ್ಮದ ಕಲೆ ನಿವಾರಿಸಲು ಸಹಾಯ ಮಾಡುತ್ತೆ. ಜೊತೆಗೆ ಚರ್ಮವು ಹೊಳೆಯುವಂತೆ ಮಾಡುತ್ತೆ. ಸ್ಟ್ರೆಚ್‌ಮಾರ್ಕ್ ಇರುವ ಕಡೆ ಮೊಟ್ಟೆಯ ಬಿಳಿ ಭಾಗವನ್ನು ಹಚ್ಚಿ. ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ನಂತರ ಚರ್ಮವನ್ನು ಮೃದುವಾಗಿಸಲು ಆಲಿವ್ ಆಯಿಲ್ ಹಚ್ಚಿ.
ಅಲೋವೆರಾ
ಮಾರುಕಟ್ಟೆಯಲ್ಲಿ ಸಿಗುವ ಜೆಲ್‌ಗಿಂತ ತಾಜಾ ಅಲೋವೆರಾದ ಲೋಳೆಯನ್ನು ಬಳಸಿ ನೇರವಾಗಿ ಚರ್ಮದ ಮೇಲೆ ಉಜ್ಜಬಹುದು. ಹದಿನೈದು ನಿಮಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡುತ್ತಾ ಬಂದಲ್ಲಿ ಸ್ಟ್ರೆಚ್‌ಮಾರ್ಕ್‌ನ ಕಲೆಗಳು ಮಾಯವಾಗುವುದು.
ಇದನ್ನೂ ಓದಿ: ಸ್ತನದಲ್ಲಿ ಕಾಣಿಸುವ ಇಂಥ ಸಮಸ್ಯೆಗೇನೂ ಟೆನ್ಷನ್ ಮಾಡಿಕೊಳ್ಳೋದು ಬೇಡ!
ಜೇನುತುಪ್ಪ
ಜೇನುತುಪ್ಪದಲ್ಲಿರುವ ನಂಜುನಿರೋಧಕ ಗುಣವು ಸ್ಟ್ರೆಚ್‌ಮಾರ್ಕ್ ಕಡಿಮೆ ಮಾಡುತ್ತದೆ. ಹತ್ತಿಯಲ್ಲಿ ಜೇನುತುಪ್ಪವನ್ನು ಅದ್ದಿ, ಸ್ಟ್ರೆಚ್‌ಮಾರ್ಕ್ ಇರುವ ಜಾಗದಲ್ಲಿ ಇರಿಸಿ, ಅದು ಒಣಗುವವರೆಗೆ ಹಾಗೆ ಬಿಡಿ, ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇನ್ನೊಂದು ವಿಧಾನವನ್ನು ಹೇಳುವುದಾದರೆ ಜೇನುತುಪ್ಪವನ್ನು ಉಪ್ಪು ಮತ್ತು ಗ್ಲಿಸರಿನ್‌ನೊಂದಿಗೆ ಬೆರೆಸಿ, ಈ ಮಿಶ್ರಣವನ್ನು ಸ್ಟ್ರೆಚ್‌ಮಾರ್ಕ್‌ಇರುವ ಜಾಗಕ್ಕೆ ಲೇಪಿಸಿ, ಒಣಗಿದ ನಂತರ ನೀರಿನಿಂದ ತೊಳೆಯಿರಿ. ಇದು ಉತ್ತಮ ಮಾಯಿಶ್ಚರೈಸರ್ ಕೂಡಾ ಆಗಿದ್ದು ತ್ವಚೆಯ ಪೋಷಣೆಗೆ ಸಹಕಾರಿ.
ಸಕ್ಕರೆ
ಒಂದು ಚಮಚ ಸಕ್ಕರೆಗೆ ಸ್ವಲ್ಪ ಬಾದಾಮಿ ಎಣ್ಣೆ ಮತ್ತು ಕೆಲವು ಹನಿ ನಿಂಬೆ ರಸ ಬೆರೆಸಿ ಮಿಶ್ರಣ ಮಾಡಿ. ಇದನ್ನು ಸ್ಕ್ರಬ್‌ನಂತೆ ತಿಕ್ಕಿ.. ಒಂದು ತಿಂಗಳ ಕಾಲ ಪ್ರತಿದಿನ ಇದನ್ನು ಹೀಗೆ ತಿಕ್ಕಿದರೆ ಸ್ಟ್ರೆಚ್‌ಮಾರ್ಕ್‌ನಿಂದ ಪರಿಹಾರ ಪಡೆಯಬಹುದು.
ಇದಲ್ಲದೇ ನಿಂಬೆ ರಸವನ್ನು ಕಲೆ ಇರುವ ಜಾಗದ ಮೇಲೆ ಉಜ್ಜಿ, ಹತ್ತು ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆದರೂ ಪರಿಣಾಮವಿದೆ. ನಿಂಬೆರಸ ಮತ್ತು ಸೌತೆಕಾಯಿ ರಸವನ್ನು ಸಮಯಪ್ರಮಾಣದಲ್ಲಿ ತೆಗೆದುಕೊಂಡು ಈ ಮಿಶ್ರಣವನ್ನು ಸ್ಟ್ರೆಚ್‌ಮಾರ್ಕ್ ಮೇಲೆ ಹಚ್ಚಿದರೂ ಪ್ರಯೋಜನವಿದೆ. ಒಣಗಿದ ನಂತರ ತೊಳೆಯಿರಿ. ಚೆನ್ನಾಗಿ ನೀರು ಕುಡಿದರೂ ಚರ್ಮದ ಆರೋಗ್ಯ ಚೆನ್ನಾಗಿರುತ್ತದೆ.