Women Health: ಈ ಸಮಯದಲ್ಲಾಗುತ್ತೆ ಹೆಚ್ಚು ಗರ್ಭಪಾತ..! ಗರ್ಭಧಾರಣೆ ಮುನ್ನ ತಿಳಿಯಿರಿ
ಗರ್ಭಪಾತದ ನೋವನ್ನು ಹೇಳೋಕೆ ಸಾಧ್ಯವಿಲ್ಲ. ಮಗುವಿನ ನಿರೀಕ್ಷೆಯಲ್ಲಿರುವವರಿಗೆ ಗರ್ಭ ಬರಿದಾದ್ರೆ ನೋವಾಗುತ್ತದೆ. ಗರ್ಭಪಾತಕ್ಕೆ ಅನೇಕ ಕಾರಣವಿದೆ. ಅದ್ರಲ್ಲಿ ಋತು ಕೂಡ ಒಂದು ಎನ್ನುತ್ತಾರೆ ತಜ್ಞರು. ಯಾವ ಋತುವಿನಲ್ಲಿ ಗರ್ಭಪಾತ ಹೆಚ್ಚು ಎಂಬುದನ್ನು ನಾವಿಂದು ಹೇಳ್ತೇವೆ.
ಗರ್ಭದಲ್ಲಿರುವ ಶಿಶು ಸುರಕ್ಷಿತವಾಗಿ ಹೊರಗೆ ಬರಬೇಕೆಂದು ಎಲ್ಲ ಮಹಿಳೆಯರು ನೂರಾರು ದೇವರಿಗೆ ಹರಕೆ ಹೊತ್ತಿರುತ್ತಾರೆ. ಯಾವಾಗ್ಲೂ ತೆಗೆದುಕೊಳ್ಳದ ಕಾಳಜಿಯನ್ನು ಗರ್ಭಿಣಿ (pregnant) ಯಾದಾಗ ತೆಗೆದುಕೊಳ್ತಾರೆ. ಆರೋಗ್ಯ (health) ದ ಬಗ್ಗೆ ಅತಿ ಹೆಚ್ಚು ಗಮನ ನೀಡ್ತಾರೆ. ಆದ್ರೆ ಅನೇಕರು ಬಯಸಿದಂತೆ ಆಗೋದಿಲ್ಲ. ಮಗು (Child ) ಹೊರಗೆ ಬರುವ ಮೊದಲೇ ಗರ್ಭಪಾತ (Miscarriage) ವಾಗಿರುತ್ತದೆ. ಈ ಗರ್ಭಪಾತ ಯಾವ ಸಮಯದಲ್ಲಿ ಹೆಚ್ಚು ಎಂಬುದನ್ನು ಸಮೀಕ್ಷೆಯೊಂದು ಹೇಳಿದೆ. ಹೆಚ್ಚು ಗರ್ಭಪಾತವಾಗುವ ತಿಂಗಳಲ್ಲಿ ಗರ್ಭಧರಿಸಲು ಹೋಗ್ಬೇಡಿ ಎಂದು ಸಮೀಕ್ಷೆ ವರದಿಯಲ್ಲಿ ಹೇಳಲಾಗಿದೆ.
ಗರ್ಭಪಾತದ ಬಗ್ಗೆ ಸಮೀಕ್ಷೆ ಏನು ಹೇಳುತ್ತೆ ? : ಬೇಸಿಗೆ ಸಮಯದಲ್ಲಿ ಗರ್ಭಪಾತದ ಅಪಾಯ ಹೆಚ್ಚು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಅಮೆರಿಕಾ ತಂಡವೊಂದು ಸುಮಾರು 8 ವರ್ಷಗಳ ಕಾಲ ಸಮೀಕ್ಷೆ ನಡೆಸಿ ನಂತ್ರ ಈ ವರದಿಯನ್ನು ನೀಡಿದೆ. ಸಮೀಕ್ಷೆ ಪ್ರಕಾರ, ಅಮೆರಿಕಾ ಹವಾಮಾನದ ಪ್ರಕಾರ, ಜೂನ್, ಜುಲೈ ಮತ್ತು ಆಗಸ್ಟ್ ನಲ್ಲಿ ಅಂದ್ರೆ ಅಲ್ಲಿನ ಬೇಸಿಗೆಯಲ್ಲಿ ಗರ್ಭಪಾತ ಹೆಚ್ಚು ಎಂಬುದನ್ನು ಹೇಳಲಾಗಿದೆ. ಫೆಬ್ರವರಿಗೆ ಹೋಲಿಕೆ ಮಾಡಿದ್ರೆ ಆಗಸ್ಟ್ ನಲ್ಲಿ ಗರ್ಭಪಾತದ ಸಂಖ್ಯೆ ಶೇಕಡಾ 44ರಷ್ಟು ಹೆಚ್ಚಾಗಿತ್ತೆಂದು ಸಮೀಕ್ಷೆ ವರದಿಯಲ್ಲಿ ಹೇಳಲಾಗಿದೆ.
ಗರ್ಭಪಾತದ ಸಮಯ : ಗರ್ಭಧರಿಸಿ 8 ವಾರಗಳ ಒಳಗೆ ಗರ್ಭಪಾತವಾದ ಪ್ರಕರಣ ಹೆಚ್ಚಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಭ್ರೂಣದ ಗಾತ್ರ ಒಂದು ರಾಸ್ಪ್ಬೆರಿಯಷ್ಟಿರುತ್ತದೆ. ಬೇಸಿಗೆ ಕಾಲದಲ್ಲಿ ಗರ್ಭಪಾತವಾಗಲು ಮುಖ್ಯ ಕಾರಣ ಹೆಚ್ಚು ಹೀಟ್ ಹಾಗೂ ಜೀವನಶೈಲಿಯಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ್ರೆ ಇದೇ ಹೌದು ಎನ್ನಲು ಸಾಧ್ಯವಿಲ್ಲ. ಈ ಬಗ್ಗೆ ಇನ್ನಷ್ಟು ಸಂಶೋಧನೆ, ಅಧ್ಯಯನ ಆಗಬೇಕೆಂದು ತಜ್ಞರು ಹೇಳಿದ್ದಾರೆ. ಕಡಿಮೆ ಅವಧಿಯಲ್ಲೇ ಗರ್ಭಪಾತವಾಗುವ ಸಂಖ್ಯೆ ಬೇಸಿಗೆಯಲ್ಲಿಯೇ ಹೆಚ್ಚು ಎಂಬುದು ನಮಗೆ ಸಮೀಕ್ಷೆ ನಂತ್ರ ಪತ್ತೆಯಾಗಿದೆ ಎಂದು ಬೋಸ್ಟನ್ ವಿಶ್ವವಿದ್ಯಾಲಯದ ಅಧ್ಯಯನ ಲೇಖಕಿ ಡಾ ಅಮೆಲಿಯಾ ವೆಸೆಲಿಂಕ್ ಹೇಳಿದ್ದಾರೆ. ಬೇಸಿಗೆ ಬಿಸಿಲಿನ ಕಾರಣಕ್ಕೆ ಗರ್ಭಿಣಿಯರಿಗೆ ಗರ್ಭಪಾತ ಮಾತ್ರವಲ್ಲ ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಅವರು. ಸಮಯಕ್ಕಿಂತ ಮೊದಲೇ ಮಗುವಿನ ಜನನ, ಹೆರಿಗೆ ವೇಳೆ ಮಗುವಿನ ತೂಕ ಕಡಿಮೆಯಿರುವುದು ಅಲ್ಲದೆ ಹೆರಿಗೆ ಸಂದರ್ಭದಲ್ಲಿ ಮಗುವಿನ ಸಾವು ಈವೆಲ್ಲವೂ ಬೇಸಿಗೆಯಲ್ಲಿಯೇ ಹೆಚ್ಚು ಎನ್ನುತ್ತಾರೆ ಅವರು.
ಸಮೀಕ್ಷೆ ವೇಳೆ ಗರ್ಭಪಾತವಾದ ಮಹಿಳೆಯರನ್ನು ಮಾತನಾಡಿಸಿದ್ದಾರೆ. ಹಾಗೆಯೇ ಹೆರಿಗೆಗೆ ಎಷ್ಟು ಸಮಯವಿರುವ ವೇಳೆ ಗರ್ಭಪಾತವಾಗಿದೆ ಎಂಬ ಮಾಹಿತಿ ಕಲೆ ಹಾಕಿದ್ದಾರೆ. ಅಷ್ಟೆ ಅಲ್ಲ ಗರ್ಭಧರಿಸಲು ಪ್ರಯತ್ನ ನಡೆಸುತ್ತಿರುವ ಮಹಿಳೆಯರ ಜೊತೆಯೂ ತಜ್ಞರು ಮಾತನಾಡಿದ್ದಾರೆ.
ಇದನ್ನೂ ಓದಿ: ಉಗುರು ಕಚ್ಚೋ ಅಭ್ಯಾಸ ಹಲ್ಲನ್ನೂ ಹಾಳು ಮಾಡುತ್ತೆ
ಗರ್ಭಪಾತಕ್ಕೊಳಗಾದ ಹೆಚ್ಚಿನ ಮಹಿಳೆಯರು ಹೆಚ್ಚು ಬಿಸಿಲಿರುವ ಪ್ರದೇಶದಲ್ಲಿ ವಾಸವಾಗಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ರೆ ಬೇಸಿಗೆಗೂ ಗರ್ಭಪಾತಕ್ಕೂ ಏನು ಸಂಬಂಧ ಎಂಬುದು ತಜ್ಞರಿಗೆ ಸರಿಯಾಗಿ ತಿಳಿದುಬಂದಿಲ್ಲ. ಬೇಸಿಗೆಯಲ್ಲಿ ದೇಹದಲ್ಲಿರುವ ನೀರಿನ ಅಂಶ ಕಡಿಮೆಯಾಗಿ ಅದು ಗರ್ಭಕ್ಕೆ ತೊಂದರೆ ನೀಡಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಇದಲ್ಲದೆ ಬೇಸಿಗೆಯಲ್ಲಿ ಗರ್ಭಾಶಯದಲ್ಲಿ ಕಳಪೆ ರಕ್ತ ಪರಿಚಲನೆಯುಂಟಾಗುವ ಕಾರಣ ಬೇರೆ ಋತುವಿಗಿಂತ ಈ ಋತುವಿನಲ್ಲಿ ಹೆಚ್ಚು ಗರ್ಭಪಾತವಾಗುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಇದನ್ನೂ ಓದಿ: ಸ್ಮೋಕ್ ಮಾಡ್ಬೇಡಿ, ಕೂದಲು ಉದುರುತ್ತೆ ! ಮಧ್ಯೆಯಿರೋ ಲಿಂಕ್ ಏನು ?
ಗರ್ಭಧಾರಣೆಯಾದ 23 ವಾರಗಳಲ್ಲಿ ಗರ್ಭಪಾತ ಸಂಭವಿಸುತ್ತದೆ. ಯೋನಿ ರಕ್ತಸ್ರಾವ, ಸೆಳೆತ ಅಥವಾ ಹೊಟ್ಟೆಯ ಕೆಳಭಾಗದಲ್ಲಿ ನೋವು ಇದು ಗರ್ಭಪಾತದ ಲಕ್ಷಣವಾಗಿದೆ. ಮೂರಕ್ಕಿಂತ ಹೆಚ್ಚು ಬಾರಿ ಗರ್ಭಪಾತವಾದ್ರೆ ಅದನ್ನು ಗಂಭೀರವೆಂದು ಪರಿಗಣಿಸಲಾಗುತ್ತದೆ. ಗರ್ಭಪಾತ ಅಸಹಜ ವರ್ಣತಂತುಗಳಿಂದ ಉಂಟಾಗುತ್ತದೆ. ಗರ್ಭಧಾರಣೆ ನಂತ್ರ ಧೂಮಪಾನ, ಮದ್ಯಪಾನ ಹಾಗೂ ನಶೆಯ ಪದಾರ್ಥದಿಂದ ದೂರವಿರುವ ಮೂಲಕ ಗರ್ಭಪಾತವನ್ನು ತಪ್ಪಿಸಬಹುದು.