ಕರ್ನಾಟಕ ಸರ್ಕಾರವು ಮಹಿಳೆಯರ ಆರೋಗ್ಯ ಕಾಳಜಿಗೆ ಒತ್ತು ನೀಡುವ ಉದ್ದೇಶದಿಂದ ‘ಋತುತಾರೆ’ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಋತುಮತಿ ಹಾಗೂ ಮೆನೋಪಾಸ್ ಸಮಯದಲ್ಲಿ ಮಹಿಳೆಯರು ಎದುರಿಸುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದ್ದು, ನಟಿ ರಮ್ಯಾ ಅವರನ್ನು ಈ ಯೋಜನೆಗೆ ರಾಯಭಾರಿಯಾಗಿ ನೇಮಿಸಲಾಗಿದೆ.
ಬೆಂಗಳೂರು: ಋತುಮತಿ ಎನ್ನುವುದು ಪ್ರತಿಯೊಬ್ಬ ಹೆಣ್ಣಿನ ಜೀವನದಲ್ಲಿ ಮಹತ್ವದ ಘಟ್ಟ. ಅಮ್ಮನಾಗುವುದಕ್ಕೆ ಹೆಣ್ಣು ತಯಾರಿದ್ದಾಳೆ ಎನ್ನುವ ಪವಿತ್ರ ಘಟ್ಟವದು. ಆದರೆ ಇಂದು ಅದರ ಬಗ್ಗೆ ಮುಕ್ತವಾಗಿ ಮಾತನಾಡುವುದು ಕಷ್ಟ ಎನ್ನುವಂಥ ವಾತಾವರಣವೂ ಇದೆ. ಕಾಲ ಬದಲಾದರೂ ಇದರ ಬಗ್ಗೆ ಹೆಚ್ಚಿನ ಜನ ಮಾತನಾಡುವುದಕ್ಕೆ ಹಿಂಜರಿಕೆ ಹಾಕುವುದು ಇದೆ. ಅದರ ಜೊತೆಗೆ ಮೆನೋಪಾಸ್. ಅಂದರೆ ಮುಟ್ಟು ನಿಲ್ಲುವ ಅವಧಿ. ಈ ಸಮಯದಲ್ಲಿ ಅದೆಷ್ಟೋ ಮಹಿಳೆಯರು ಅನುಭವಿಸುವ ಮಾನಸಿಕ, ದೈಹಿಕ ಯಾತನೆ ಆ ದೇವರಿಗೇ ಪ್ರೀತಿ ಎನ್ನುವ ಹಾಗೆ ಇರುತ್ತದೆ. ಮೆನೋಪಾಸ್ ಸಮಯದ ಸುಮಾರು 10-12 ವರ್ಷಗಳ ಮುಂಚೆಯೇ ಕೆಲವರಿಗೆ ಸಮಸ್ಯೆ ಕಾಡುವುದು ಇದೆ. ಆದರೆ ಈ ಬಗ್ಗೆ ಕೂಡ ಮುಕ್ತವಾಗಿ ಮಾತನಾಡುವ, ಎಷ್ಟೋ ಮನೆಗಳಲ್ಲಿ ಮನೆಯಲ್ಲಿಯೇ ಚರ್ಚಿಸಲು ಸಾಧ್ಯವಾಗದ ಸ್ಥಿತಿ ಇದೆ. ಇದನ್ನೆಲ್ಲಾ ಅರಿತಿರುವ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ, ದೇಶದಲ್ಲಿಯೇ ಪ್ರಥಮ ಎನ್ನುವಂಥ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಮಹಿಳೆಯರ ಆರೋಗ್ಯ ಕಾಳಜಿಗೆ ಒತ್ತು ನೀಡುವ ಉದ್ದೇಶದಿಂದ ‘ಋತುತಾರೆ’ ಎಂಬ ಹೊಸ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ.
ರಾಜ್ಯ ಸರ್ಕಾರದಿಂದ ಮಹತ್ವದ ಹೆಜ್ಜೆ
ಮಹಿಳೆಯರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದ್ದು, ಈ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಹಾಗೂ ನಟಿ ರಮ್ಯಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಇದೀಗ ಈ ಯೋಜನೆಗೆ ಬ್ರ್ಯಾಂಡ್ ಅಂಬಾಸಿಡರ್ ಅರ್ಥಾತ್ ರಾಯಭಾರಿಯಾಗಿ ನಟಿ ರಮ್ಯಾ ಅವರನ್ನು ನೇಮಕ ಮಾಡಲಾಗಿದೆ. ಮಹಿಳೆಯರ ಆರೋಗ್ಯ ಸಂಬಂಧಿತ ಸಮಸ್ಯೆಗಳ ಅಧ್ಯಯನ ಮತ್ತು ಪರಿಹಾರ ಕ್ರಮಗಳಿಗಾಗಿ ಮಹಿಳಾ ತಜ್ಞೆ ಡಾ. ಜೋಸ್ನಾ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಾಮಾನ್ಯವಾಗಿ ಮಹಿಳೆಯರು 45ರಿಂದ 55 ವರ್ಷದ ಆಸುಪಾಸಿನಲ್ಲಿ ಋತುಬಂಧ ಅಥವಾ ಮೆನೋಪಾಸ್ ಹಂತವನ್ನು ತಲುಪುತ್ತಾರೆ. ಈ ನೈಸರ್ಗಿಕ ಪ್ರಕ್ರಿಯೆಯ ಸಮಯದಲ್ಲಿ ಅವರ ದೇಹದಲ್ಲಿ ಅನೇಕ ಹಾರ್ಮೋನ್‌ಗಳ ಬದಲಾವಣೆಗಳು ಉಂಟಾಗುತ್ತವೆ. ಇದರ ಪರಿಣಾಮವಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ಏರುಪೇರುಗಳಾಗುತ್ತವೆ. ಆದರೆ, ನಮ್ಮ ಸಮಾಜದಲ್ಲಿ ಈ ವಿಷಯದ ಬಗ್ಗೆ ಮುಕ್ತ ಚರ್ಚೆಗಳು ವಿರಳ. ಅನೇಕ ಮಹಿಳೆಯರಿಗೆ ತಾವು ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆಗಳು ಮೆನೋಪಾಸ್‌ನಿಂದಾಗಿ ಬಂದಿವೆ ಎಂಬ ಕನಿಷ್ಠ ಮಾಹಿತಿಯೂ ಇರುವುದಿಲ್ಲ. ಈ ಅರಿವಿನ ಕೊರತೆಯನ್ನು ನೀಗಿಸುವ ಪ್ರಮುಖ ಉದ್ದೇಶದಿಂದ ‘ಋತುತಾರೆ’ ಅಭಿಯಾನವನ್ನು ರೂಪಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ನಟಿ ರಮ್ಯಾ ಏನಂದ್ರು?
ಈ ಕುರಿತು ಮಾತನಾಡಿರುವ ನಟಿ ರಮ್ಯಾ, ಮೆನೋಪಾಸ್ ಸಮಸ್ಯೆ ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮೆನೋಪಾಸ್ ಬೇಗ ಕಾಣಿಸಿಕೊಳ್ಳುತ್ತದೆ. ಸಿಟಿಯಲ್ಲಿ ಅತಿ ಹೆಚ್ಚಿನ ಮಹಿಳೆಯರು ಮೆನೋಪಾಸ್ ಸಮಯದಲ್ಲಿ ಸಮಸ್ಯೆಯಿಂದ ಬಳಲುತ್ತಾರೆ. ಇದನ್ನು ಸಮರ್ಥವಾಗಿ ನಿಭಾಯಿಸಬೇಕು. ನಮ್ಮ ಮನವಿದೆ ಸ್ಪಂಧಿಸಿ ರಾಜ್ಯ ಸರ್ಕಾರ ಯೋಜನೆ ಜಾರಿಗೆ ತಂದಿದ್ದು ನನ್ನನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡಿರುವುದು ಖುಷಿ ಇದೆ ಎಂದು ಹೇಳಿದರು. ಋತುಬಂಧ ಎನ್ನುವುದು ಯಾವುದೇ ರೋಗವಲ್ಲ, ಬದಲಿಗೆ ಅದೊಂದು ಸಹಜ ದೈಹಿಕ ಪ್ರಕ್ರಿಯೆ. ಈ ಹಂತವನ್ನು ಮಹಿಳೆಯರು ಆತಂಕವಿಲ್ಲದೆ, ಆತ್ಮವಿಶ್ವಾಸದಿಂದ ಎದುರಿಸಲು ಕುಟುಂಬದ ಬೆಂಬಲ ಮತ್ತು ಸರಿಯಾದ ಮಾರ್ಗದರ್ಶನ ಅತ್ಯಗತ್ಯ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ‘ಋತುತಾರೆ’ ಆರಂಭಿಸಿರುವುದಾಗಿ ನಟಿ ಹೇಳಿದ್ದಾರೆ.
ಮುಂದಿನ ಆರು ತಿಂಗಳಿನಲ್ಲಿ ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಮೆನೋಪಾಸ್ ಕುರಿತು ಮಾಹಿತಿ ನೀಡಲಿದ್ದಾರೆ. ಮಹಿಳೆಯರು ಈ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು, ಪರಿಹಾರಗಳ ಬಗ್ಗೆ ಅವರು ಮಾಹಿತಿ ಕೊಡಲಿದ್ದಾರೆ. ಇದರ ಅರಿವು ಮೂಡಿಸುವ ಜೊತೆಗೆ, ಲೈಫ್ಸ್ಟೈಲ್ ಬದಲಾವಣೆ ಕುರಿತು ಮಾಹಿತಿ ನೀಡಲಿದ್ದಾರೆ.


