ಮೂವತ್ತರ ಹರೆಯದ ಮಹಿಳೆಯರು ಆರೋಗ್ಯಕರ ಜೀವನಕ್ಕಾಗಿ ಸಕ್ಕರೆ, ಜಂಕ್ ಫುಡ್, ಅತಿಯಾದ ಉಪ್ಪು, ಮೈದಾ, ಪ್ಯಾಕ್ ಮಾಡಿದ ಪಾನೀಯಗಳು, ಕೆಫೀನ್ ಮತ್ತು ಕರಿದ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು. ಇವು ಮಧುಮೇಹ, ಹೃದ್ರೋಗ, ಹಾರ್ಮೋನ್ ಅಸಮತೋಲನ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಆರೋಗ್ಯವೇ ಭಾಗ್ಯ.

Woman Health: ಮಹಿಳೆ ಆರೋಗ್ಯವಾಗಿದ್ದರೆ ಮಾತ್ರ ಎಲ್ಲಾ ಸಾಧನೆಗೂ ಪೂರಕವಾಗಿರುತ್ತದೆ. ತಾನು ಆರೋಗ್ಯವಾಗಿದ್ದು ಸಂಸಾರ ಮತ್ತು ಸಮುದಾಯವನ್ನು ಮುನ್ನಡೆಸುವ ಮಹಿಳೆ ಎಂದಿಗೂ ಕ್ರಿಯಾಶೀಲವಾಗಿರುತ್ತಾಳೆ . ಹಾಗಾಗಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ವಯಸ್ಸು 30 ಆದ್ಮೇಲೆ ತಾವು ಏನು ಸೇವಿಸುತ್ತಿದ್ದೇವೆ ಮತ್ತು ಎಷ್ಟು ಪ್ರಮಾಣದಲ್ಲಿ ಆಹಾರ ತೆಗೆದುಕೊಳ್ಳುತ್ತಿದ್ದೇವೆ ಎಂಬುದರ ಗಮನವಿರವಬೇಕು. ಇಲ್ಲವಾದ್ರೆ 30ರ ಹೊಸ್ತಿಲಿನಲ್ಲಿಯೇ ಮಧುಮೇಹ, ರಕ್ತದೊತ್ತಡ ಸಮಸ್ಯೆಗಳು ನಿಮ್ಮ ದೇಹವನ್ನು ಸೇರಿಕೊಳ್ಳುತ್ತವೆ. ಆದ್ದರಿಂದ ಅನಾರೋಗ್ಯಕ್ಕೆ ತುತ್ತಾಗುವ ಮೊದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರಿಂದ ಇಡೀ ಜೀವನವನ್ನು ಸಂತೋಷವಾಗಿ ಕಳೆಯಬಹುದು. ನಿಮ್ಮ ವಯಸ್ಸು 30 ಆಗಿದ್ರೆ, ಇಂದಿನಿಂದಲೇ ಈ ಆಹಾರ ಸೇವನೆಯನ್ನು ಕಡಿಮೆಗೊಳಿಸಬೇಕು. 

ಒಂದೇ ದಿನ ಈ ಎಲ್ಲಾ ಆಹಾರ ತ್ಯಜಿಸೋದು ಕಷ್ಟಕರ. ಆದ್ದರಿಂದ ಹಂತ ಹಂತವಾಗಿ ಸೇವಿಸುವ ಪ್ರಮಾಣವನ್ನು ಕಡಿಮೆಗೊಳಿಸಬಹುದು. ಮುಂದೊಂದು ದಿನ ಸಂಪೂರ್ಣವಾಗಿ ದೇಹ ಮತ್ತು ಆರೋಗ್ಯಕ್ಕೆ ಹಾನಿಯುಂಟು ಮಾಡುವ ಆಹಾರದಿಂದ ದೂರವಾಗುತ್ತೀರಿ. ಮಹಿಳೆಯರು ಆರೋಗ್ಯವಾಗಿದ್ದರೆ ಇಡೀ ಕುಟುಂಬವೇ ಆರೋಗ್ಯವಾಗಿರುತ್ತದೆ . 30ರ ನಂತರ ಮಹಿಳೆಯರು ಈ ಏಳು ಆಹಾರಗಳಿಂದ ದೂರವಿರಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. 

1.ಸಕ್ಕರೆ: ಅತಿಯಾದ ಸಕ್ಕರೆ ಸೇವನೆ ದೇಹದಲ್ಲಿ ಉರಿಯೂಟ ಮತ್ತು ಇನ್ಸುಲಿನ್ ಪ್ರತಿರೋಧವನ್ನು ಉತ್ತೇಜಿಸುತ್ತದೆ. ಇದರಿಂದ ದೇಹದ ತೂಕ ಹೆಚ್ಚಾಗಿ ಹಾರ್ಮೊನ್‌ಗಳಲ್ಲಿ ಅಸಮತೋಲ ಉಂಟಾಗುತ್ತದೆ. ಆದ್ದರಿಂದ ಸಕ್ಕರೆ ಮತ್ತು ಸಿಹಿ ಪದಾರ್ಥ, ಸಂಸ್ಕರಿಸಿದ ಆಹಾರದಿಂದ ದೂರವಿರಬೇಕು. 

2.ಜಂಕ್ ಫುಡ್: ಬರ್ಗರ್, ಚಿಪ್ಸ್, ನೂಡಲ್ಸ್ ಸೇರಿದಂತಹ ವಿವಿಧ ಜಂಕ್ ಫುಡ್ ಮತ್ತು ಸಂಸ್ಕರಿಸಿದ ಆಹಾರಗಳಿಂದ ದೂರವಿರಬೇಕು. ಈ ಆಹಾರಗಳಲ್ಲಿ ಟ್ರಾನ್ಸ್ ಕೊಬ್ಬು ಮತ್ತು ಹೆಚ್ಚು ಉಪ್ಪಿನ ಅಂಶಗಳನ್ನು ಹೊಂದಿರುತ್ತವೆ. ಇವುಗಳ ಸೇವನೆಯಿಂದ ಹೃದಯ ಮತ್ತು ಯಕೃತ್ತಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 

3.ಅತ್ಯಧಿಕ ಉಪ್ಪು: ಕೆಲವರು ಎಲ್ಲಾ ಆಹಾರದಲ್ಲಿ ಅಧಿಕವಾಗಿ ಉಪ್ಪು ಬಳಸುತ್ತಾರೆ. ಅತಿಯಾದ ಉಪ್ಪು ಸೇವನೆ ಸಹ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಚ್ಚು ಉಪ್ಪಿನ ಆಹಾರ ಸೇವನೆ ಮೂಳೆಗಳ ಕ್ಯಾಲ್ಸಿಯಂ ಅಂಶ ಕಡಿಮೆಗೊಳಿಸುತ್ತೆ ಮತ್ತು ಆಸ್ಟಿಯೊಪೊರೋಸಿಸ್ ಅಪಾಯದ ಪ್ರಮಾಣವನ್ನು ಹೆಚ್ಚಿಸುತ್ತದೆ. 

4.ಸಂಸ್ಕರಿಸಿದ ಹಿಟ್ಟು ಅಥವಾ ಮೈದಾ: ಪಿಜ್ಜಾ, ಬ್ರೆಡ್ ಸೇರಿದಂತೆ ಈ ಮಾದರಿಯ ಆಹಾರಗಳನ್ನು ಸಂಸ್ಕರಿಸಿ ಹಿಟ್ಟಿನಿಂದ ಅಥವಾ ಮೈದಾದಿಂದ ಸಿದ್ಧಪಡಿಸಲಾಗುತ್ತದೆ. ಮೈದಾ ಸೇವನೆ ಜೀರ್ಣಾಂಗ ವ್ಯವಸ್ಥೆ ಮೇಲೆ ನೇರ ಪರಿಣಾಮ ಬೀರುತ್ತದೆ. ಅಜೀರ್ಣತೆ ಮಾದರಿಯ ಸಮಸ್ಯೆಗಳು ಆರಂಭವಾಗಿ ಭವಿಷ್ಯದಲ್ಲಿ ದೊಡ್ಡಮಟ್ಟದ ಅಪಾಯಕ್ಕೆ ಕಾರಣವಾಗುತ್ತದೆ. 

ಇದನ್ನೂ ಓದಿ: ಕೇವಲ 30 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ಸ್ಲಿಮ್; ಮಹಿಳೆ ಕುಡಿದ ಸೂಪರ್ ಡ್ರಿಂಕ್ಸ್ ಯಾವುದು ಗೊತ್ತಾ?

5.ತಂಪು ಪಾನೀಯ ಮತ್ತು ಪ್ಯಾಕಡ್ ಹಣ್ಣಿನ ರಸಗಳು: ಈ ಪಾನೀಯ ಅಥವಾ ಹಣ್ಣಿನ ಜ್ಯೂಸ್‌ನಲ್ಲಿ ಅತಿಯಾದ ಫ್ರಕ್ಟೋಸ್ ಕಾರ್ನ್ ಸಿರಪ್ ಇರುತ್ತದೆ. ಇದು ಕೊಬ್ಬಿನ ಯಕೃತ್ತು ಮತ್ತು ಬೊಜ್ಜುತನಕ್ಕೆ ಕಾರಣವಾಗುತ್ತದೆ. 

6.ಕೆಫಿನ್: ವಯಸ್ಸು 30 ಆದ್ಮೇಲೆ ಚಹಾ ಮತ್ತು ಕಾಫಿಗಳಿಂದ ಅಂತರ ಕಾಯ್ದುಕೊಳ್ಳಬೇಕು. ಅತಿಯಾದ ಕಾಫಿ, ಟೀ ಸೇವನೆ ನಿದ್ರಾಹೀನತೆಯನ್ನುಂಟು ಮಾಡುತ್ತದೆ. ಇದರಿಂದ ಹಾರ್ಮೋನ್‌ಗಳಲ್ಲಿ ಅಸಮತೋಲನ ಉಂಟಾಗಿ ಇಡೀ ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. 

7.ಕರಿದ ಪದಾರ್ಥ: ಎಣ್ಣೆಯಲ್ಲಿ ಕರಿದ ಪದಾರ್ಥಗಳು ಎಂದಿಗೂ ಆರೋಗ್ಯಕ್ಕೆ ಒಳ್ಳೆಯದಲ್ಲ. ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿಸಿ, ಹೃದಯ ಸಂಬಂಧಿ ಕಾಯಿಲೆಗಳಿಗೆ ಈ ಆಹಾರಗಳು ಮೂಲ ಕಾರಣವಾಗಿವೆ.

ಇದನ್ನೂ ಓದಿ: ಸೊಂಪಾದ ರೇಷ್ಮೆಯಂತಹ ಹೊಳೆಯುವ ಕೂದಲಿಗಾಗಿ ಬಳಸಿ ಈರುಳ್ಳಿ ಎಣ್ಣೆ: ಇಲ್ಲಿದೆ ರೆಸಿಪಿ