ಎನ್‌.ಜಿ.ಗೋಪಾಲ್‌, ನೆಲಮಂಗಲ

ಹೊತ್ತು ಹೋಗದ ಮುನ್ನ..

ಮೃತ್ಯು ಮುಟ್ಟದ ಮುನ್ನ..

ತತ್ತು ಸೇವೆಯ ಮಾಡಿ....!!

ಅಂದರೆ ಸಮಯ ಮತ್ತು ಸಾವು ಮನುಷ್ಯನ ಅವಿಭಾಜ್ಯ ಅಂಗ. ಅದು ಯಾರಿಗೂ ಕಾಯುವುದಿಲ್ಲ, ನಾವು ಇರುವ ಕಾಲದಲ್ಲಿ ಅದನ್ನು ದಾಖಲಿಸುವ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕು. ಕಾಲವನ್ನು ಶಾಶ್ವತ ಸಾರ್ಥಕ ಕಾರ್ಯಗಳ ಮೂಲಕ ಕೆಲವರು ಕಾಲಾತೀತರಾಗುತ್ತಾರೆ. ಅಂತಹವರಲ್ಲಿ ಮಡಿಕೇರಿ ಕೊಡಗಿನ ಭಾಗಮಂಡಲದ ಕುವರಿ ಮಿಲನ ಕೆ ಭರತ್‌ ಅಗ್ರಗಣ್ಯರು.

ಸಮಯದ ಮಿತಿಯಲ್ಲಿ ಸ್ವಯಂ ಸ್ಫೂರ್ತಿಯಿಂದ ನಿಶ್ಯಬ್ದವಾಗಿ ಸೇವೆ ಸಲ್ಲಿಸುತ್ತಿರುವ ಸಾಂಸ್ಕೃತಿಕ ರಾಯಭಾರಿಯೂ ಆಗಿರುವ ಮಿಲನ ಕೆ ಭರತ್‌ ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಮೀನುಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈಗೇನು ಮಾಡುತ್ತಿದ್ದಾರೆ IAS, IPS ಸಾಧಕಿ ಗರೀಮಾ ಸಿಂಗ್?

ಸರ್ಕಾರಿ ಕೆಲಸ ಸಿಕ್ಕರೆ ಸಾಕು ಹುಟ್ಟಿದ್ದಕ್ಕೂ ಜೀವನ ಸಾರ್ಥಕವಾದಂತೆ, ಪೂರ್ಣವಾದಂತೆ ಎನ್ನುವವರ ಮಧ್ಯೆಯಲ್ಲಿ ಮಿಲನ ಕೆ.ಭರತ್‌ ಅವರ ಕರ್ತವ್ಯವು ಅವರ ಬದುಕಿನ ಸಾಕ್ಷಿಪ್ರಜ್ಞೆ ಎನ್ನಬಹುದು. ಅದರಲ್ಲೂ ಸರ್ಕಾರಿ ಕೆಲಸ, ಅದರಲ್ಲಿ ಸಿಗುವ ರಜೆಗಳನ್ನು ಆನುಭವಿಸಿಕೊಂಡು ಅಧಿಕಾರದ ದರ್ಪದೊಂದಿಗೆ ಕಾಲ ಕಳೆಯುವ ಅನೇಕರ ಮಧ್ಯದಲ್ಲಿ ಅಪರೂಪದ ವ್ಯಕ್ತಿತ್ವದ ಕೆಲವರು ನಮ್ಮ ಮಧ್ಯದಲ್ಲಿದ್ದಾರೆ.

ಸರ್ಕಾರಿ ಸೇವೆಯನ್ನು ಜನಸೇವೆ ಮಾಡಲು ಸಿಕ್ಕಿರುವ ಸಮಾನ ಅವಕಾಶವೆಂದು ವೃತ್ತಿಯೊಂದಿಗೆ ಸಾಂಸ್ಕೃತಿಕ ಪ್ರವೃತ್ತಿಯನ್ನು ಜೋಡಿಸಿಕೊಂಡು ಸೃಜನಶೀಲತೆ ಮತ್ತು ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿರುವ ಮಿಲನ ಅವರು ಕೊಡಗಿನ ಭಾಗದಲ್ಲಿನ ಯುವ ಚೇತನಗಳಿಗೆ ಸಾಂಸ್ಕತಿಕ ಪ್ರತಿಭೆಯನ್ನು ಧಾರೆ ಎರೆಯುತ್ತಾ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ. ಸಮಯವನ್ನು ವ್ಯರ್ಥ ಮಾಡದೆ ಅವಕಾಶಗಳಿಗೆ ಸೆಣಸಾಡಬೇಕು ಎನ್ನುವ ರವೀಂದ್ರರ ಮಾತಿನಲ್ಲಿ ಬಹುಶಃ ನಂಬಿಕೆಯಿಟ್ಟವರು ಮಿಲನ.

ವೃತ್ತಿ ಮತ್ತು ಪ್ರವೃತ್ತಿಯಿಂದ ಮೀನುಗಾರಿಕೆ ವಿಷಯದಲ್ಲಿ ಪದವಿ ಮತ್ತು ಮಾರುಕಟ್ಟೆನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ರಾರ‍ಯಂಕ್‌ ನೊಂದಿಗೆ ಮೈಗಂಟಿಕೊಂಡು ಬಂದಿರುವ ಮಿಲನ ಯಕ್ಷಗಾನ, ಅಭಿನಯ, ಭರತನಾಟ್ಯ, ನೃತ್ಯದಲ್ಲಿ ಪರಿಣತಿ ಪಡೆದು ಇತರರಿಗೆ ಆ ಗೀಳು ಅಂಟಿಸುವ ಹಂಬಲದವರು. ಅದಕ್ಕಾಗಿಯೇ ಕೊಡಗಿನ ಭಾಗಮಂಡಲದಲ್ಲಿ 2006ರಲ್ಲಿ ‘ಅಭಿನಯ ಕಲಾ ಮಿಲನ ಚಾರಿಟೇಬಲ್‌ ಟ್ರಸ್ಟ್‌’ ಪ್ರಾರಂಭಿಸಿ ತನ್ಮೂಲಕ ‘ನಾಟ್ಯ ಮಿಲನ ನೃತ್ಯ ಶಾಲೆ’ ಆರಂಭಿಸಿ ಉಚಿತ ನೃತ್ಯ ತರಬೇತಿ ತರಗತಿಯನ್ನು ನೀಡುತ್ತಿದ್ದಾರೆ.

22 ವರ್ಷಕ್ಕೇ IPS, 7 ಸಮುದ್ರದಾಚೆ ಅವಿತಿದ್ದ ರೇಪಿಸ್ಟ್ ಎಳೆತಂದ ಗಟ್ಟಿಗಿತ್ತಿ!

ತಿಂಗಳ ಸಂಬಳದ ಶೇ.30 ಟ್ರಸ್ಟ್‌ಗೆ

ತರಬೇತಿ ಪಡೆದವರಿಂದ ರಾಜ್ಯದ ಮೂಲ ಮೂಲೆಗಳಲ್ಲಿ ಪ್ರದರ್ಶನ ನೀಡಿ ಕಲಾಸಕ್ತರಿಗೆ ಉತ್ತೇಜನ ನೀಡುತ್ತಿದ್ದಾರೆ. ಸರ್ಕಾರದ ಯಾವುದೇ ಸಹಾಯಧನವನ್ನು ಪಡೆಯದೆ ತಮ್ಮ ತಿಂಗಳ ಸಂಬಳದಲ್ಲಿ ಶೇ.30%ರಷ್ಟುಹಣವನ್ನು ತಮ್ಮ ಟ್ರಸ್ಟಿನ ಖಾತೆಗೆ ಸೇರಿಸಿ ಸ್ವಾವಲಂಭಿ ತರಬೇತಿ ಕೇಂದ್ರವಾಗಿಸಿದ್ದಾರೆ. ಸಾಹಿತ್ಯಕ್ಕೂ ಕೊಡುಗೆ ನೀಡುತ್ತಿರುವ ಇವರನ್ನು ಪ್ರೇಮಕವಿ ಹೃದಯಿ ಎನ್ನುವುದುಂಟು.

ಮಿಲನ ಕೆ ಭರತ್‌ ಈ ಟಿವಿ ವಾಹಿನಿ ಕೊಡಗಿನ ಪ್ರತಿನಿಧಿಯೆನ್ನಿಸಿಕೊಂಡು ಪಬ್ಲಿಕ್‌ ಹೀರೋ, ಮಹಿಳಾ ಸಾಧಕಿ, ನೃತ್ಯ ಸರಸ್ವತಿ, ಕಿರುತೆರೆಯ ಮಿಸ್‌ ಟ್ಯಾಲೆಂಟ್‌ ಮತ್ತು ಮಿಸ್‌ ವಿವೆಲ್‌ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದರೂ ಕೂಡ ಬಿಗುಮಾನವಿಲ್ಲದೆ ನಾಡು ನುಡಿ, ಕಲೆ ಸಂಸ್ಕೃತಿ, ಸಾಹಿತ್ಯ ಆರಾಧಕಿಯಾಗಿದ್ದಾರೆ. ಇತ್ತೀಚೆಗೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವೃತ್ತಿ ತತ್ವದಡಿಯಲ್ಲಿ ನಡೆಯುತ್ತಿರುವ ಮಿಲನ ಅವರು ಭಾಗಮಂಡಲದ ಭಾಗವಾಗಿದ್ದಾರೆ.

ಸರ್ಕಾರಿ ಅಧಿಕಾರಿಯಾಗಿಯೂ ಸಮರ್ಥ ಸೇವೆ, ಗೃಹಿಣಿಯಾಗಿಯೂ ಸಾರ್ಥಕ ಸೇವೆ ಹಾಗೂ ನೃತ್ಯ ಗುರು ಮತ್ತು ಸಾಹಿತಿ ಆಗಿಯೂ ಅನುಪಮ ಸೇವೆ ಮಾಡುತ್ತಿರುವ ಇವರ ಜೀವನ ಯುವ ತಲೆಮಾರಿಗೆ ಸ್ಫೂರ್ತಿ.