ಕೆಲವರು ಕೈಕಾಲುಗಳು ಸರಿ ಇಲ್ಲದಿದ್ದರೂ ಕಣ್ಣುಗಳೇ ಇಲ್ಲದಿದ್ದರೂ, ತಮ್ಮ ನ್ಯೂನ್ಯತೆಯಲ್ಲೇ ಅನನ್ಯತೆಯನ್ನು ಸಾಧಿಸುತ್ತಾ ತಾವು ಬದುಕುವುದಲ್ಲದೇ ಇನ್ನೊಬ್ಬರ ಬಾಳಿಗೂ ಬೆಳಕಾದ ಹಲವರು ನಮ್ಮ ಸಮಾಜದಲ್ಲಿ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಅಂತ ಮಹಾನ್ ವ್ಯಕ್ತಿಯೊಬ್ಬರ ಪರಿಚಯ ನಿಮಗಾಗಿ.

ನಮ್ಮಲನೇಕರು ಕೈಕಾಲು ಸರಿ ಇದ್ದು, ದುಡಿಯಲು ಶಕ್ತಿ, ಆರೋಗ್ಯ ಎಲ್ಲವೂ ಇದ್ದರೂ ಏನು ಇಲ್ಲ ಅವರಂತೆ ನಾವಿಲ್ಲ, ಅವರ ಬಳಿ ಇರೋದು ನಮ್ಮ ಬಳಿ ಇಲ್ಲ, ಎಂದು ಕೊರಗುವುದನ್ನು ನೀವು ನೋಡಬಹುದು. ಆದರೆ ಇನ್ನೂ ಕೆಲವರು ಕೈಕಾಲುಗಳು ಸರಿ ಇಲ್ಲದಿದ್ದರೂ ಕಣ್ಣುಗಳೇ ಇಲ್ಲದಿದ್ದರೂ, ತಮ್ಮ ನ್ಯೂನ್ಯತೆಯಲ್ಲೇ ಅನನ್ಯತೆಯನ್ನು ಸಾಧಿಸುತ್ತಾ ತಾವು ಬದುಕುವುದಲ್ಲದೇ ಇನ್ನೊಬ್ಬರ ಬಾಳಿಗೂ ಬೆಳಕಾದ ಹಲವರು ನಮ್ಮ ಸಮಾಜದಲ್ಲಿ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಅಂತ ಮಹಾನ್ ವ್ಯಕ್ತಿಯೊಬ್ಬರ ಪರಿಚಯ ನಿಮಗಾಗಿ.

ಅಂಹಾಗೆ ಇವರ ಹೆಸರು ಫಾಕೇನ್ ಶಾ, ಮೂಲತಃ ಬಿಹಾರದ ರಿಖೌಲಿಯವರು, ಹುಟ್ಟುತಲೇ ಸಹಜವಾಗಿಯೇ ಎರಡೂ ಕಣ್ಣುಗಳನ್ನು ಹೊಂದಿದ್ದ ಇವರು ಸುಮಾರು ಎರಡು ದಶಕದ ಹಿಂದೆ ಬಂದ ಜಾಂಡೀಸ್‌ನಿಂದಾಗಿ ತಮ್ಮೆರಡು ಕಣ್ಣುಗಳನ್ನು ಕಳೆದುಕೊಂಡರು. ಪರಿಣಾಮ ಬದುಕು ಅಂಧಾಕಾರಕ್ಕೆ ತಿರುಗಿತ್ತು. ಆಗ ಅವರ ವಯಸ್ಸು ಕೇವಲ 20, ಬಂದರೆ ಕಷ್ಟಗಳೆಲ್ಲಾ ಒಟ್ಟಿಗೆ ಬರುತ್ತೆ ಅನ್ನುವಂತೆ ಇದಾಗಿ ಸ್ವಲ್ಪ ಸಮಯದಲ್ಲೇ ಶಾ ತಮ್ಮ ಪತ್ನಿಯನ್ನು ಕಳೆದುಕೊಂಡರು. ಜೊತೆಗೆ ನಾಲ್ಕು ಪುಟ್ಟ ಮಕ್ಕಳ ಒಬ್ಬನೇ ಸಾಕಿ ಬೆಳೆಸುವ ಹೊಣೆಗಾರಿಕೆ ಅವರ ಹೆಗಲ ಮೇಲೆ ಬಿದ್ದಿತ್ತು. ಒಂದೆಡೆ ಕಣ್ಣುಗಳೇ ಇಲ್ಲ, ಮತ್ತೊಂದೆಡೆ ಹೆಗಲ ಮೇಲೆ ನಾಲ್ಕು ಮಕ್ಕಳ ಸಾಕುವ ಜವಾಬ್ದಾರಿಯ ಭಾರ. ಆದರೆ ಶಾ ತಮ್ಮ ಹಣೆಬರಹವನ್ನು ಹಳಿದುಕೊಂಡು ಸುಮ್ಮನೇ ಕೂರಲಿಲ್ಲ, ವಿಧಿಗೆ ಸೆಡ್ಡು ಹೊಡೆದ ಶಾ ಬದುಕುವ ದಿಟ್ಟ ನಿರ್ಧಾರ ಕೈಗೊಂಡರು.

ಫಾಕೇನ್ ಶಾ ಅವರಿಗೆ ದೃಷ್ಟಿ ಕಳೆದುಕೊಳ್ಳುವ ಮೊದಲೇ ಬಟ್ಟೆ ಹೊಲಿಯುವುದು ಹೇಗೆ ಎಂದು ಗೊತ್ತಿತ್ತು. ಹೀಗಾಗಿ ಅವರು ತಮ್ಮ ದೃಷ್ಟಿದೋಷದ ಹೊರತಾಗಿಯೂ ಈ ಬಟ್ಟೆಯನ್ನು ಕಣ್ಣು ಕಾಣದಿದ್ದರೂ ಅಂದಾಜಿನ ಮೇಲೆ ಹೊಲಿಯುವಂತಹ ಕೌಶಲ್ಯವನ್ನು ವೃದ್ಧಿಸಿಕೊಂಡರು. ಪರಿಣಾಮ ಫುಲ್ ಟೈಮ್‌ ಟೈಲರ್ ಆಗಿ ರೂಪುಗೊಂಡರು. ಬರೀ ಇಷ್ಟೇ ಅಲ್ಲ ಹೊಲಿಗೆ ಕಲಿಯಲು ಬಯಸುವ ತಮ್ಮ ಹಳ್ಳಿಯ ಮಹಿಳೆಯರಿಗೆ ತರಬೇತಿ ನೀಡಲು ಪ್ರಾರಂಭಿಸಿದರು. ಹೀಗಾಗಿ ಅವರ ಹೊಲಿಗೆ ತರಬೇತಿಯಿಂದಾಗಿ ಅವರ ಹಳ್ಳಿಯ ನೂರಾರು ಮಹಿಳೆಯರು ಇಂದು ಟೈಲರಿಂಗ್‌ ತರಬೇತಿ ಪಡೆದು ಬದುಕಿನಲ್ಲಿ ಸ್ವಾವಲಂಬಿಗಳಾಗಿದ್ದಾರೆ. ಹೆಮ್ಮ ಹಾಗೂ ಮೆಚ್ಚುವ ವಿಚಾರ ಎಂದರೆ ಫಾಕೆನ್ ಅವರು ಇಲ್ಲಿ ಮಹಿಳೆಯರಿಗೆ ಉಚಿತವಾಗಿ ತರಬೇತಿ ನೀಡುತ್ತಾರೆ ಎಂಬುದು.

ಜೊತೆಗೆ ಸಣ್ಣದೊಂದು ಗಾರ್ಮೆಂಟ್ ತೆರೆಯಬೇಕು ಎಂಬುದು ಅವರ ಕನಸು ಆದರೆ ದಿನಕ್ಕೆ 300 ರಿಂದ 500 ಆದಾಯದ ಸಂಪಾದನೆಯಲ್ಲಿ ಈ ಕನಸನ್ನು ನನಸು ಮಾಡುವುದು ಅಸಾಧ್ಯವಾದ ಕೆಲಸ. ಹೀಗಾಗಿ ಅವರು ತಮ್ಮ ಊರಿನ ಹೆಚ್ಚಿನ ಮಹಿಳೆಯರಿಗೆ ಉಚಿತವಾಗಿ ಟೈಲರಿಂಗ್ ತರಬೇತಿ ನೀಡುತ್ತಿದ್ದು ಮಹಿಳೆಯರನ್ನು ಸ್ವಾವಲಂಬಿಗಳಾಗಿಸುವ ಗುರಿಯನ್ನು ಹೊಂದಿದ್ದಾರೆ. ಶೂನ್ಯದಿಂದ ಸಾಧನೆ ಮಾಡುವುದು ಎಂದರೆ ಇದೇ ಅಲ್ಲವೇ, ಫಾಕೇನ್ ತಾವು ಬೆಳೆಯುವುದರ ಜೊತೆ ಊರಿನ ಮಹಿಳೆಯರಿಗೂ ಸ್ವಾಭಿಮಾನದ ಬದುಕಿನ ಪಾಠ ಮಾಡಿದ್ದು, ಬದುಕಿಗಾಗಿ ಸ್ಪೂರ್ತಿ ಹುಡುಕುವ ಅನೇಕರಿಗೆ ಮಾದರಿಯಾಗಿದ್ದಾರೆ. ದುಡಿದು ತಿನ್ನುವ ಆಸಕ್ತಿ, ಮನೋಸಂಕಲ್ಪದ ಮುಂದೆ ದೇಹದ ಯಾವ ನ್ಯೂನ್ಯತೆಗಳು ನ್ಯೂನ್ಯತೆಗಳಲ್ಲ ಅನನ್ಯತೆ ಎಂಬುದನ್ನು ಈ ಫಕೇನ್ ಶಾ ಸಾಧಿಸಿ ತೋರಿಸಿದ್ದು, ಕೈ ಕಾಲು ಎಲ್ಲವೂ ಸರಿ ಇದ್ದು, ನಮಗೇನು ಇಲ್ಲ, ಯಾರು ಇಲ್ಲ ಎಂದು ಅಳುವವರು ಇವರನ್ನು ನೋಡಿ ಬದುಕುವುದಕ್ಕೆ ಕಲಿಯಬೇಕಿದೆ. 

ಪ್ರಸಿದ್ಧ shethepeopletv ಇನ್ಸ್ಟಾಗ್ರಾಮ್‌ ಪೇಜ್ ಇವರ ಜೀನಗಾಥೆಯನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದೆ. ಸ್ವಾಭಿಮಾಣಿ ಫಾಕೇನ್ ಶಾ ಸಾಧನೆ ಬಗ್ಗೆ ನಿಮಗೇನನಿಸ್ತಿದೆ ಕಾಮೆಂಟ್ ಮಾಡಿ.

View post on Instagram