Asianet Suvarna News Asianet Suvarna News

women empowerment: ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಒಡಿಶಾದ ಆಶಾ ಕಾರ್ಯಕರ್ತೆ

 ಫೋರ್ಬ್ಸ್‌ ಪ್ರತಿ ವರ್ಷ ವಿಶ್ವದ ಪ್ರಭಾವಶಾಲಿ ನಾಯಕರು, ಮಹಿಳೆಯರು ಹಾಗೂ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡುತ್ತದೆ.  ವಿಶ್ವದ ಪ್ರತಿಷ್ಠಿತ ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಗಳಿಸುವುದು ಅಷ್ಟು ಸುಲಭವಲ್ಲ. ಆದರೆ ಒಡಿಶಾ ಮೂಲದ ಆಶಾ ಕಾರ್ಯಕರ್ತೆಯೊಬ್ಬರು ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. 
 

Odisha tribal ASHA worker featured in Forbes India akb
Author
Bhubaneswar, First Published Nov 29, 2021, 12:22 PM IST

ಭುವನೇಶ್ವರ(ನ.29): ತಿಂಗಳಿಗೆ ಕೇವಲ 4,500 ರೂ ಸಂಬಳ ಪಡೆಯುವ ಒಡಿಶಾ ಮೂಲದ ಆದಿವಾಸಿ ಸಮುದಾಯದ ಆಶಾ ಕಾರ್ಯಕರ್ತೆಯೊಬ್ಬರು ವಿಶ್ವದ ಪ್ರತಿಷ್ಠಿತ ಫೋರ್ಬ್ಸ್‌ನ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ. 45  ವರ್ಷದ ಆಶಾ ಕಾರ್ಯಕರ್ತೆ ಮತಿಲ್ದಾ ಕುಲ್ಲು(Matilda Kullu) ಒಡಿಶಾದ ಸುಂದರ್‌ಗರ್‌(Sundargarh) ಜಿಲ್ಲೆಯವರು. ಇವರು ತೆಹ್ಸಿಲ್‌ನ 964 ಜನರಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಕಳೆದ 15 ವರ್ಷಗಳಿಂದ ಇವರು ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಕೆಲಸಗಳಿಂದ ಗುರುತಿಸಲ್ಪಟ್ಟಿದ್ದಾರೆ. 

ಇವರು ತಮ್ಮ ಉತ್ತಮ ಕಾರ್ಯಗಳಿಂದ ಫೋರ್ಬ್ಸ್‌ನ 2021ರ ಭಾರತದ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.  ಮತಿಲ್ದಾ ಕುಲ್ಲು ಬರಗಾನ್‌ ತೆಹ್ಸಿಲ್‌ನಲ್ಲಿರುವ ಗರ್ಗಡ್‌ಬಹಲ್‌ ಗ್ರಾಮ(Gargadbahal village)ದವರು.  ಆಶಾ ದೀದೀಯೆಂದು ಕೂಡ ಕರೆಯಲ್ಪಡುವ ಇವರು ಕೋವಿಡ್-19ಗೆ ಸಂಬಂಧಿಸಿದ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಹಾಗೂ ಚಿಕಿತ್ಸೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2021ರ ಫೋರ್ಬ್ಸ್‌ ಪಟ್ಟಿಯಲ್ಲಿ ಮತಿಲ್ದಾ ಕುಲ್ಲು ಅಲ್ಲದೇ ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾದ  ಮಾಜಿ ಅಧ್ಯಕ್ಷರಾದ ಅರುಂಧತಿ ಭಟ್ಟಾಚಾರ್ಯ ಸೇರಿ 21 ಮಹಿಳೆಯರು ಸ್ಥಾನ ಪಡೆದಿದ್ದಾರೆ. ತಿಂಗಳಿಗೆ ಕೇವಲ  4,500 ರೂ. ಗಳಿಸುತ್ತಿದ್ದರೂ ತನ್ನ ಜೀವನವನ್ನು 964 ಜನರ ಕಾಳಜಿಗೆ ಮುಡಿಪಿಟ್ಟ ಮತಿಲ್ದಾ ಕಾರ್ಯವನ್ನು ಫೋರ್ಬ್ಸ್‌ ಗುರುತಿಸಿದೆ. 

Forbes' ಪಟ್ಟಿಯಲ್ಲಿ ಕನ್ನಡದ ಇಬ್ಬರು ಸ್ಟಾರ್ಸ್‌ಗೆ ಅಗ್ರ ಸ್ಥಾನ!

ಮುಂಜಾನೆ 5 ಗಂಟೆಗೆ ತನ್ನ ದಿನಚರಿ ಶುರು ಮಡುವ ಮತಿಲ್ದಾ ಕುಲು ತನ್ನೆಲ್ಲಾ ಮನೆಕೆಲಸಗಳನ್ನು ಮುಗಿಸಿ ತನ್ನ ಕುಟುಂಬದ ನಾಲ್ವರು ಸದಸ್ಯರಿಗೆ ಆಹಾರವನ್ನು ತಯಾರಿಸುತ್ತಾಳೆ. ಜೊತೆಗೆ ಮನೆಯಲ್ಲಿರುವ ನಾಲ್ಕು ದನಗಳಿಗೂ ಆಹಾರ ನೀಡುವ ಆಕೆ ಇಡೀ ಗ್ರಾಮವನ್ನೇ ತನ್ನ ಕುಟುಂಬವೆಂದು ಭಾವಿಸಿದ್ದಾರೆ.  ಮತಿಲ್ದಾ ಕುಲ್ಲು ತಾವು ಆಶಾಕರ್ತೆಯಾದ ಆರಂಭದ ದಿನಗಳಲ್ಲಿ, ಹಳ್ಳಿಯ ಜನರು ಆರೋಗ್ಯ ಹಾಳಾದ ಕೂಡಲೇ, ವೈದ್ಯರ ಬಳಿ ಹೋಗುವ ಬದಲು ಮಾಟಗಾರರು ಅಥವಾ ಮಾಂತ್ರಿಕರ ಬಳಿ ತೆರಳುವುದನ್ನು ಗಮನಿಸಿದ್ದರು.  ಹಳ್ಳಿಯ ಜನರಲ್ಲಿ ಜಾಗೃತಿ ಮೂಡಿಸಿ ಅವರ ಈ ಮನಸ್ಥಿತಿಯನ್ನು ಬದಲಾಯಿಸುವಲ್ಲಿ ಮತಿಲ್ದಾ ಕುಲ್ಲು ನಿರ್ಣಾಯಕ ಪಾತ್ರ ವಹಿಸಿದ್ದರು. ಯಾವುದೇ ಅನಾರೋಗ್ಯಕ್ಕೂ ಮಾಂತ್ರಿಕರ ಬಳಿ ತೆರಳದೇ ವೈದ್ಯಕೀಯ ಚಿಕಿತ್ಸೆ ಹಾಗೂ ವೈದ್ಯರ ಸಲಹೆಯನ್ನೇ ಪಡೆಯುವಂತೆ ಅವರು ಹಳ್ಳಿಗರ ಮನವೊಲಿಸಿದರು.

ಪ್ರತಿದಿನ ತನ್ನ ಸೈಕಲ್‌ನಲ್ಲಿ ತೆರಳುವ ಮತಿಲ್ದಾ ಗ್ರಾಮದಲ್ಲಿ ಪ್ರತಿ ಮನೆ ಬಾಗಿಲುಗಳಿಗೆ ಹೋಗಿ ಜನರ ಆರೋಗ್ಯದ ಕುರಿತಾದ ಮಾಹಿತಿಯನ್ನು ಪಡೆಯುತ್ತಿದ್ದರು. ಅದರ ಜೊತೆ  ನವಜಾತ ಮತ್ತು ಹದಿಹರೆಯದ ಹೆಣ್ಣು ಮಕ್ಕಳಿಗೆ ಲಸಿಕೆ ಹಾಕುವುದು, ಪ್ರಸವಪೂರ್ವ ತಪಾಸಣೆ ನಡೆಸುವ ಬಗ್ಗೆ, ಹೆರಿಗೆಗೆ ಸಿದ್ಧತೆ ನಡೆಸುವ ಬಗ್ಗೆ, ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ನೀಡುವುದು ಸೇರಿದಂತೆ ಹೀಗೆ ಹಲವಾರು ಸಲಹೆಗಳನ್ನು ಗ್ರಾಮಸ್ಥರಿಗೆ ಇವರು ನೀಡುತ್ತಾರೆ. ಮಧ್ಯರಾತ್ರಿ ಹೆರಿಗೆ ನೋವು ಅನುಭವಿಸುವ ಮಹಿಳೆಯರಿಗೆ ಚಿಕಿತ್ಸೆಯನ್ನು ಇವರು ನೀಡಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್‌ ಹಿಂದಿಕ್ಕಿದ ರಶ್ಮಿಕಾ  ನಂಬರ್ 1!

ಕೋವಿಡ್‌ನ ಸಂದರ್ಭದಲ್ಲಿ ಕೋವಿಡ್ ಲಸಿಕೆ ಪಡೆಯುವಂತೆ ಇವರು ಗ್ರಾಮಗಳಲ್ಲಿ ವ್ಯಾಪಕವಾದ ಜಾಗೃತಿಯನ್ನು ಮೂಡಿಸಿದ್ದರು. ಕೋವಿಡ್‌ ಪರೀಕ್ಷೆ ಮಾಡುವ ಸಲುವಾಗಿ  ಪ್ರತಿದಿನ 50ರಿಂದ 60 ಮನೆಗಳಿಗೆ ಇವರು ಭೇಟಿ ನೀಡುತ್ತಿದ್ದರು. ಜೊತೆಗೆ ವಯಸ್ಸಾದವರನ್ನು ಲಸಿಕಾ ಕೇಂದ್ರಕ್ಕೆ ಕರೆದೊಯ್ಯಲು ವಾಹನ ವ್ಯವಸ್ಥೆಯನ್ನು ಕೂಡ ಮಾಡಿದ್ದರು.

ತಮ್ಮ ಕಾರ್ಯದ ಬಗ್ಗೆ ಮಾಧ್ಯಮಗಳು ಗುರುತಿಸಿ ಈ ಬಗ್ಗೆ ಕೇಳಿದಾಗ, ನಾನು ಆಶಾ ಕಾರ್ಯಕರ್ತೆಯಾಗಿ ತುಂಬಾ ಖುಷಿಯಾಗಿದ್ದೇನೆ. ಇದು ನನಗೆ ಸಾಕಷ್ಟು ಪ್ರಧಾನ್ಯತೆ ನೀಡಿದೆ. ಮನೆಯನ್ನು ಸಮರ್ಪಕವಾಗಿ ನಡೆಸುವ ಮಹಿಳೆ ಸಮಾಜವನ್ನು ಉದ್ಧರಿಸಲು ಸಾಧ್ಯವಿಲ್ಲವೇ? ಮಹಿಳೆಗೆ ಮನೆಯ ಜೊತೆ ಇಡೀ ಸಮಾಜವನ್ನು ನೋಡಿಕೊಳ್ಳುವ ಶಕ್ತಿ ಇದೆ ಎಂದರು.  ಇವತ್ತಿನ ದಿನ ಆಶಾ ಕಾರ್ಯಕರ್ತೆ ಎಂಬ ಹುದ್ದೆ ಇಡೀ ಗ್ರಾಮಕ್ಕೆ ಮುಖ್ಯಸ್ಥರಿದ್ದಂತೆ ಎಂದು ಅವರು ಹೇಳಿದರು.
 

Follow Us:
Download App:
  • android
  • ios