ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಯವಾದ ಮಹಿಳೆಯನ್ನು ಮದುವೆಯಾದ ಬೆಂಗಳೂರಿನ ಉದ್ಯಮಿಯೊಬ್ಬರು, ಆಕೆ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದು, ಈಗಾಗಲೇ ಮೂರು ಬಾರಿ ವಿವಾಹವಾಗಿದ್ದ ಸತ್ಯ ತಿಳಿದು ಆಘಾತಕ್ಕೊಳಗಾಗಿದ್ದಾರೆ. ಪತ್ನಿ ಮನೆಯಿಂದ 18 ಲಕ್ಷ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಉದ್ಯಮಿ ಆಕೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ವಂಚನೆ, ಕಳ್ಳತನ ಮತ್ತು ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ.
ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಯವಾಗಿ ಮದುವೆಯ ಆಮಿಷ ಒಡ್ಡಿ ಶ್ರೀಮಂತರನ್ನು ದೋಚುವುದು ಒಂದೆಡೆಯಾದರೆ, ಮದುವೆಯಾಗಿ ಆ ಬಳಿಕ ಗಂಡನಿಗೆ ಇನ್ನಿಲ್ಲದ ಟಾರ್ಚರ್ ಕೊಡುವ ಘಟನೆಗಳು ಆಗಾಗ್ಗೆ ನಡೆಯುವುದು ಉಂಟು. ಮದುವೆಗಾಗಿ ಹುಡುಕುತ್ತಿರುವ ಪುರುಷರು ಇಂಥ ವೆಬ್ಸೈಟ್ಗಳಲ್ಲಿ ಹೆಣ್ಣುಗಳನ್ನು ನೋಡಿ ಮೋಸ ಹೋಗಬೇಡಿ ಎಂಬ ಎಚ್ಚರಿಕೆ ಆಗಾಗ್ಗೆ ಪೊಲೀಸ್ ಇಲಾಖೆಯಿಂದ ಬರುವುದೂ ಉಂಟು. ವಿಚಿತ್ರ ಎಂದರೆ, ಈ ವೆಬ್ಸೈಟ್ ನೋಡಿ ಹಳ್ಳಕ್ಕೆ ಬೀಳುವವರ ಪೈಕಿ ಪುರುಷರೇ ಹೆಚ್ಚು ಎನ್ನುವ ವರದಿಗಳು ಆಗಾಗ್ಗೆ ಕೇಳಿಬರುತ್ತಲೇ ಇರುತ್ತವೆ. ಅಂಥದ್ದೇ ಒಂದು ಪ್ರಕರಣದಲ್ಲಿ ಬೆಂಗಳೂರಿನ ಉದ್ಯಮಿ ಈಗ ಪತ್ನಿಯಿಂದ ಭಾರಿ ಮೋಸ ಹೋಗಿರುವುದಾಗಿ ಆರೋಪಿಸಿದ್ದಾರೆ.
ಪತ್ನಿ ವಿರುದ್ಧ ದೂರು
ಮಾರತ್ತಹಳ್ಳಿಯ ಉದ್ಯಮಿಯೊಬ್ಬರು ಈಗ ಪತ್ನಿಯ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಸಿಕ್ಕ ಸ್ವಾಮಿ ಎಂಬಾಕೆಯನ್ನು 2022ರ ಫೆಬ್ರವರಿಯಲ್ಲಿ ಮದುವೆಯಾಗಿದ್ದರು ಈ ಉದ್ಯಮಿ. ಅವರಿಗೆ 51 ವರ್ಷ ವಯಸ್ಸು, ಹಾಗೂ ಸ್ವಾತಿಗೆ 37 ವರ್ಷ ವಯಸ್ಸು. ಮದುವೆಯಾಗುತ್ತಿದ್ದಂತೆಯೇ ಹಣದ ಬೇಡಿಕೆ ಇಡುತ್ತಾ ಬಂದಿದ್ದಾಳೆ. ಮೊದಲಿಗೆ 50 ಲಕ್ಷ ಹಣದ ಬೇಡಿಕೆ ಇಟ್ಟಿದ್ದಾಳೆ. ಹಣ ನೀಡದಿದ್ದರೆ ಹೆಚ್‌ಐವಿ/ಏಡ್ಸ್ ಇದೆ ಹಾಗೂ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಸುಳ್ಳು ಪ್ರಚಾರ ಮಾಡುವುದಾಗಿ ಬೆದರಿಸುತ್ತಿದ್ದಾಳೆ, ತನಗೆ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯವಿದ್ದು, ಅವರ ಮೂಲಕವೇ ಈ ಕೇಸ್ ಹಾಕುವುದಾಗಿ ಬೆದರಿಕೆ ಹಾಕುತ್ತಿರುವುದಾಗಿ ಉದ್ಯಮಿ ದೂರಿದ್ದಾರೆ.
ಇದಾಗಲೇ ಪತ್ನಿ, ಮನೆಯಿಂದ 18 ಲಕ್ಷ ನಗದು, ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾಳೆ. ಕಾರು ಕೂಡ ಡುಪ್ಲಿಕೇಟ್ ಕೀ ಬಳಸಿ ತೆಗೆದುಕೊಂಡು ಹೋಗಿದ್ದಾಳೆ. ಚೆಕ್‌ಗೆ ನಕಲಿ ಸಹಿ ಹಾಕಿ ಬ್ಯಾಂಕ್ ಖಾತೆಯಿಂದ 83 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾಳೆ ಎಂದು ಉದ್ಯಮಿ ದೂರಿದ್ದಾರೆ.
ಮೂರು ಮದುವೆ
ಇದಾಗಲೇ ಆಕೆಗೆ ಮೂರು ಮದುವೆಯಾಗಿರುವುದು ತಿಳಿದಿದೆ. ಮಗ ಕೂಡ ಇದ್ದಾನೆ. ನನ್ನ ಹಣವನ್ನು ಬಳಸಿಕೊಂಡು ಮಗನ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದ್ದಾಳೆ. ಈಗ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ ಎಂದಿರುವ ಉದ್ಯಮಿ, ಸ್ವಾತಿ ಬಿ. ವಿರುದ್ಧ ವಂಚನೆ, ನಂಬಿಕೆ ದ್ರೋಹ, ಕಳವು, ಸುಲಿಗೆ, ಮಾನಹಾನಿ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


