ಉತ್ತರಕನ್ನಡದ ಹಾಲಕ್ಕಿ ಮಹಿಳೆಯ ಸಮಾಜಮುಖಿ ಕಾರ್ಯಕ್ಕೆ ಮನಸೋತ ಉದ್ಯಮಿ ಆನಂದ್ ಮಹೀಂದ್ರಾ
ಹಾಲಕ್ಕಿ ಸಮುದಾಯದ ಮಹಿಳೆಯೊಬ್ಬರ ಪರಿಸರ ಕಾಳಜಿ ಈಗ ಉದ್ಯಮಿ ಆನಂದ್ ಮಹೀಂದ್ರಾ ಅವರ ಗಮನ ಸೆಳೆದಿದೆ. ಮಹಿಳೆ ಕಸವನ್ನು ಹೆಕ್ಕಿ ಕಸದ ಬುಟ್ಟಿಗೆ ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರವಾರ: ಕೆಲವರಿಗೆ ಶಿಕ್ಷಣ ಇರುತ್ತದೆ. ಆದರೆ ಯಾವುದೇ ಸಾಮಾನ್ಯ ನಡವಳಿಕೆ, ಮಾನವೀಯತೆ, ಮಾನವೀಯ ಮೌಲ್ಯಗಳ ಅರಿವು ಸ್ವಲ್ಪವೂ ಇರುವುದಿಲ್ಲ. ಸುಶಿಕ್ಷಿತರೇ ಹೆಚ್ಚಾಗಿ ಪ್ಲಾಸ್ಟಿಕ್ ಕಸ ಮುಂತಾದವನ್ನು ಎಲ್ಲೆಂದರಲ್ಲಿ ಎಸೆದು ಪರಿಸರದ ನಾಶಕ್ಕೆ ಮಣ್ಣಿನ ವಿನಾಶಕ್ಕೆ ಕೊಡುಗೆ ನೀಡುತ್ತಿದ್ದಾರೆ. ಮುಂದಿನ ತಲೆಮಾರಿಗೆ ಸ್ವಚ್ಛ ಸುಂದರ ಪರಿಸರವನ್ನು ಉಳಿಸಬೇಕು ಎಂದು ಸರ್ಕಾರ ಸಂಘಸಂಸ್ಥೆಗಳು ಜಾಗೃತಿ ಮೂಡಿಸುತ್ತಿದ್ದರೂ, ಚಾಕೋಲೇಟ್, ಚಿಪ್ಸ್‌ಗಳನ್ನು ತಿಂದು ಲಕೋಟೆಯನ್ನು ಕಸದ ಬುಟ್ಟಿಗೆ ಹಾಕುವ ಬದಲು ಬಸ್‌ನ ಕಿಟಕಿಯಿಂದ ಹೊರಗೆ ಹಾಕುವವರೇ ಹೆಚ್ಚು. ಹೀಗಿರುವಾಗ ಹಳ್ಳಿಯ ಹೆಣ್ಣು ಮಗಳೊಬ್ಬಳು (ಅಕ್ಷರ ಜ್ಞಾನ ಇದೆಯೋ ಇಲ್ಲವೋ ತಿಳಿಯದು) ತನ್ನ ಜೀವನ ಬಂಡಿಯನ್ನು ಎಳೆಯುತ್ತಿರುವುದ ಜೊತೆ ಪರಿಸರ ಭೂಮಿಯ ಕಾಳಜಿ ತೋರುತ್ತಿದ್ದಾಳೆ. ಅಲ್ಲಲ್ಲಿ ಯಾರೋ ಎಸೆದು ಹೋದ ಕಸವನ್ನು ತಂದು ಕಸದ ಬುಟ್ಟಿಗೆ ತುಂಬುತ್ತಿದ್ದಾಳೆ. ಈಕೆಯ ಪರಿಸರ ಕಾಳಜಿ ಈಗ ಉದ್ಯಮಿ ಆನಂದ್ ಮಹೀಂದ್ರಾ ಅವರ ಗಮನ ಸೆಳೆದಿದೆ. ಮಹಿಳೆ ಕಸವನ್ನು ಹೆಕ್ಕಿ ಕಸದ ಬುಟ್ಟಿಗೆ ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲೇನಿದೆ?
ವೀಡಿಯೋದಲ್ಲಿ ಬುಡಕಟ್ಟು ಹಾಲಕ್ಕಿ ಸಮುದಾಯದ ಸಂಪ್ರದಾಯಿಕ ಧಿರಿಸು ಹಾಗೂ ಆಭರಣ ಧರಿಸಿರುವ ಮಹಿಳೆಯೊಬ್ಬರು ಅಂಕೋಲಾ ಬಸ್ ನಿಲ್ದಾಣದಲ್ಲಿ ಯಾರೋ ಎಸೆದು ಹೋದ ಕಸವನ್ನು ತೆಗೆದುಕೊಂಡು ಹೋಗಿ ಕಸದ ಬುಟ್ಟಿಗೆ ತೆಗೆದುಕೊಂಡು ಹಾಕುತ್ತಾರೆ. ಮೂಲತಃ ಈ ವಿಡಿಯೋವನ್ನು ಆದರ್ಶ ಹೆಗ್ಡೆ ಎಂಬುವವರು ಟ್ವಿಟ್ಟರ್‌ನಲ್ಲಿ ಮೊದಲು ಪೋಸ್ಟ್ ಮಾಡಿದ್ದು, ' ಈ ಮಹಿಳೆ ಹಣ್ಣು ಮಾರಾಟಗಾರಳಾಗಿದ್ದು, ಅಂಕೋಲಾ ಬಸ್ ನಿಲ್ದಾಣದಲ್ಲಿ ಎಲೆಗಳಲ್ಲಿಯೇ ಸುತ್ತಿ ಹಣ್ಣುಗಳನ್ನು ಮಾರಾಟ ಮಾಡುತ್ತಾಳೆ. ಕೆಲವರು ಹಣ್ಣನ್ನು ತಿಂದು ಕಸವನ್ನು ಬಸ್ಸಿನ ಕಿಟಕಿಯಿಂದ ಹೊರಗೆ ಎಸೆದಿದ್ದಾರೆ. ಇದನ್ನು ಹೆಕ್ಕಿದ ಮಹಿಳೆ ಕಸವನ್ನು ತೆಗೆದುಕೊಂಡು ಹೋಗಿ ಕಸದ ಬುಟ್ಟಿಗೆ ಹಾಕಿದ್ದಾಳೆ. ಹಾಗಂತ ಕಸವನ್ನು ಹೆಕ್ಕಿ ಸ್ವಚ್ಛ ಮಾಡುವುದು ಅವಳ ಕೆಲಸವಲ್ಲ. ಆದರೂ ಆಕೆ ಮಾಡುತ್ತಿದ್ದಾಳೆ' ಎಂದು ಅವರು ಬರೆದುಕೊಂಡಿದ್ದಾರೆ.
Uttara Kannada: ಹೋಳಿಯ ಸಂಭ್ರಮ ಹೆಚ್ಚಿಸಿದ ಹಾಲಕ್ಕಿ ಸುಗ್ಗಿ
ಈ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ ರಿಟ್ವಿಟ್ ಮಾಡಿಕೊಂಡಿದ್ದು, ಆ ಮಹಿಳೆಯನ್ನು ಕೊಂಡಾಡಿದ್ದಾರೆ. ಇವರು ನಮ್ಮ ಸ್ವಚ್ಛ ಭಾರತ ಅಭಿಯಾನವನ್ನು ಕಾರ್ಯರೂಪಕ್ಕೆ ತರುತ್ತಿರುವ ನಿಜವಾದ ಕಟ್ಟಾಳುಗಳು. ಆಕೆಯ ಶ್ರಮ ಎಲ್ಲೂ ಗುರುತಿಸದೇ ಹೋಗಬಾರದು ಎಂದು ನಾನು ಬಯಸುತ್ತೇನೆ. ಹಾಗೂ ಆಕೆಯ ಮೌಲ್ಯಯುತ ಕಾರ್ಯವನ್ನು ನಾನು ಶ್ಲಾಘಿಸುತ್ತೇನೆ. ನಾನು ಅದನ್ನು ಹೇಗೆ ಮಾಡಬಹುದು ಎಂದು ನೀವು ಸೂಚಿಸುತ್ತೀರಿ ಎಂದು ಮೂಲ ಪೋಸ್ಟ್ ಹಾಕಿದ ಆದರ್ಶ ಹೆಗ್ಡೆ ಎಂಬುವವರಿಗೆ ವಿಡಿಯೋ ಟ್ಯಾಗ್ ಮಾಡಿರುವ ಆನಂದ್ ಮಹೀಂದ್ರಾ, ಆ ಪ್ರದೇಶದಲ್ಲಿ ವಾಸಿಸುವ ಯಾರಾನ್ನಾದರು ನೀವು ಸಂಪರ್ಕಿಸಿ ಆಕೆಯನ್ನು ಹುಡುಕಬಹುದೇ ಎಂದು ಆದರ್ಶ ಹೆಗ್ಡೆ ಅವರಿಗೆ ಕೇಳಿದ್ದಾರೆ.
ಅಂದಹಾಗೆ ಈ ವಿಡಿಯೋ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾಲಕ್ಕಿ ಬುಡಕಟ್ಟು ಸಮುದಾಯ ಮಹಿಳೆಯೊಬ್ಬರದ್ದು, ಹಾಲಕ್ಕಿ ಬುಡಕಟ್ಟು ಸಮುದಾಯದ ಈ ಜನ ಕಾಡನ್ನೇ ತಮ್ಮ ಹೊಟ್ಟೆ ಪಾಡಿನ ಮೂಲವಾಗಿಸಿಕೊಳ್ಳುವುದರ ಜೊತೆ ಕಾಡಿನ ಜೊತೆ ಜೊತೆಯೇ ಸಮರಸದ ಜೀವನ ನಡೆಸುವ ಮಂದಿ. ಕಾಡಿನಲ್ಲಿ ಸಿಕ್ಕ ಹಣ್ಣು ಹಂಪಲುಗಳು, ಕಾಡಿನ ಇತರ ಉತ್ಪನ್ನಗಳನ್ನು ಕಾಡಿನಿಂದ ನಾಡಿಗೆ ತಂದು ಮಾರಾಟ ಮಾಡಿ ಬದುಕುವ ಈ ಸಮುದಾಯ ಅಂತಹ ದೊಡ್ಡ ಸುಶಿಕ್ಷಿತ ಸಮುದಾಯವೇನಲ್ಲ. ಆದರೂ ಆ ಸಮುದಾಯದ ಮಹಿಳೆಯ ಪರಿಸರ ಕಾಳಜಿ ನೋಡಿ ಹೇಗಿದೆ ಅಂತ. ಪಟ್ಟಣದ, ಸುಶಿಕ್ಷಿತರೆನಿಸಿದ ಜನ ಎಸೆದ ಕಸವನ್ನು ಆಕೆ ಹೆಕ್ಕಿ ತಂದು ಕಸದ ಬುಟ್ಟಿಗೆ ಹಾಕಿದ್ದಾರೆ. ಹಾಗಿದ್ದಲ್ಲಿ ಇಲ್ಲಿ ಸಂಸ್ಕಾರ ಹಾಗೂ ಮೌಲ್ಯಯುತವಾದ ಶಿಕ್ಷಣ ಬೇಕಾಗಿರುವುದು ಯಾರಿಗೆ ಸುಶಿಕ್ಷಿತರಿಗೋ ಅಥವಾ ಕಾಡಿನ ಮಕ್ಕಳಿಗೋ ಎಂಬ ಪ್ರಶ್ನೆ ಈ ವಿಡಿಯೋ ನೋಡುವವರ ಮನದಲ್ಲಿ ಮೂಡದಿರದು.
ಹಾಲಕ್ಕಿಗಳ ಪ. ಪಂಗಡಕ್ಕೆ ಸೇರ್ಪಡೆಗೆ ಅಮಿತ್ ಶಾಗೆ ಆಗ್ರಹಿಸಿದ ರೂಪಾಲಿ
ಉದಾಹರಣೆಗೆ ನಮ್ಮ ಬೆಂಗಳೂರಿನಲ್ಲೇ ಕಸವನ್ನು ವಿಂಗಡಿಸಿ ನೀಡಿ ಎಂದು ಬಿಬಿಎಂಪಿ ಹಲವು ವರ್ಷಗಳಿಂದ ಜಾಗೃತಿ ಮೂಡಿಸುತ್ತಿದ್ದರು. ಅತ್ಯಂತ ಹೆಚ್ಚು ಸುಶಿಕ್ಷಿತರಿರುವ ಈ ನಗರದಲ್ಲಿ ಅದನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಲಾಗುತ್ತಿಲ್ಲ. ಎಲ್ಲರೂ ಸುಶಿಕ್ಷಿತರೇ ಇದ್ದರೂ ಈ ಪರಿಸ್ಥಿತಿ ಇದೆ. ಈ ಕಾರಣಕ್ಕೆ ಈ ಹಾಲಕ್ಕಿ ಮಹಿಳೆ ಬಹಳ ಉದಾತ್ತವಾಗಿ ಎದ್ದು ಕಾಣುತ್ತಾಳೆ. ಶಿಕ್ಷಣವಿದ್ದು ನೈತಿಕ ಮೌಲ್ಯಗಳು ನಿಮ್ಮಲ್ಲಿಲ್ಲದಿದ್ದರೆ ನೀವು ಪಡೆದ ದೊಡ್ಡ ದೊಡ್ಡ ಡಿಗ್ರಿ ಸರ್ಟಿಫಿಕೇಟ್‌ಗಳಿಗೆ ಕೇವಲ ಕಾಗದದ ಹಾಳೆಗಳಷ್ಟೇ ಮೌಲ್ಯ ಎಂಬುದನ್ನು ಈಕೆಯ ಕಾರ್ಯ ಹೇಳುತ್ತಿದೆ.