Asianet Suvarna News Asianet Suvarna News

Bengaluru Rains: ಪ್ರಾಣ ಉಳಿಸಲು ಸಾರ್ವಜನಿಕ ಸ್ಥಳದಲ್ಲೇ ಉಟ್ಟ ಸೀರೆ ಬಿಚ್ಚಿಕೊಟ್ಟ ಮಹಾತಾಯಿ!

ಬೆಂಗಳೂರಿನ ಕೆ.ಆರ್. ಸರ್ಕಲ್‌ ಬಳಿಯ ಅಂಡರ್‌ಪಾಸ್‌ನ ನೀರಿನಲ್ಲಿ ಕಾರು ಮುಳುಗಿ ಯುವತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅಪ್‌ಡೇಟ್‌ಗಳು ತಿಳಿದುಬರುತ್ತಿದೆ. ಹಾಗೆಯೇ ಪ್ರಾಣ ಉಳಿಸಲು ಮಹಿಳೆಯೊಬ್ಬರು ಉಟ್ಟ ಸೀರೆ ಬಿಚ್ಚಿಕೊಟ್ಟಿದ್ದರು ಎಂಬ ವಿಚಾರ ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ. 

Bengaluru Rains, Woman gives her saree in public places for Rescue people Vin
Author
First Published May 23, 2023, 1:36 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸುರಿದ ಮಳೆಗೆ ಕೆ.ಆರ್. ಸರ್ಕಲ್‌ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಆಂಧ್ರಪ್ರದೇಶ ಮೂಲದ ಇನ್ಫೋಸಿಸ್‌ ಉದ್ಯೋಗಿ ಯುವತಿ ಸಾವನ್ನಪ್ಪಿದ ಪ್ರಕರಣದ ಬಗ್ಗೆ ಹಲವು ಮಾಹಿತಿಗಳು ಹೊರಬೀಳುತ್ತಿವೆ. ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾನುರೇಖಾಳನ್ನು ನೋಡಲು ಅವರ ಕುಟುಂಬ ಸದಸ್ಯರು ಬೆಂಗಳೂರಿಗೆ ಬಾಡಿಗೆ ಕಾರು ಮಾಡಿಕೊಂಡು ಬಂದಿದ್ದರು.  ಭಾನುವಾರ ರಜಾ ದಿನವಾದ್ದರಿಂದ ಕಬ್ಬನ್‌ಪಾರ್ಕ್‌ ನೋಡಲು ಕುಟುಂಬದ 6 ಜನ ಸದಸ್ಯರು ಹಾಗೂ ಡ್ರೈವರ್‌ ಸೇರಿ ಏಳು ಮಂದಿ ಕಾರಿನಲ್ಲಿ ಅಂಡರ್‌ಪಾಸ್‌ ದಾಟಿಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಕಾರು ಮುಳುಗಿ ಡೋರ್‌ ಲಾಕ್ ಆಗಿ ಎಲ್ಲರೂ ನೀರಿನಲ್ಲಿ ಮುಳುಗಡೆಯಾಗಿದ್ದಾರೆ.

ಡ್ರೈವರ್‌ ಕಾರಿನ ಕಿಟಕಿಯನ್ನು ಸ್ವಲ್ಪ ತೆರೆದುಕೊಂಡಿದ್ದರಿಂದ ಕೈ ಹೊರಗೆ ಹಾಕಿ ಡೋರ್‌ ತೆಗರೆದುಕೊಂಡು ಹೊರಗೆ ಬಂದಿದ್ದಾರೆ. ನಂತರ ಒಬ್ಬೊಬ್ಬರನ್ನೇ ಕಾರಿನಿಂದ ಹೊರಗೆ ಎಳೆದುಕೊಂಡು ರಕ್ಷಣೆ (Rescue) ಮಾಡಲು ಮುಂದಾಗಿದ್ದಾನೆ. ನಂತರ ಸ್ಥಳೀಯರು ಕೂಡ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆ (Woman)ಯೊಬ್ಬರು ಕಾರಿನಲ್ಲಿದ್ದ ಜನರನ್ನು ರಕ್ಷಿಸಲು ತಾನು ಉಟ್ಟಿದ್ದ ಸೀರೆಯನ್ನೇ (Saree) ಬಿಚ್ಚಿಕೊಟ್ಟಿದ್ದರು ಎಂಬ ವಿಚಾರ ಎಲ್ಲೆಡೆ ಸುದ್ದಿಯಾಗ್ತಿದೆ. 

Bengaluru: ಡ್ರೈವರ್‌ ಮಾತನ್ನ ಉಡಾಫೆ ಮಾಡಿದ ಕುಟುಂಬ: ಮಗಳನ್ನು ನೀರಲ್ಲಿ ಮುಳುಗಿಸಿ ಕಣ್ಣೀರು

ದೇವರ ರೂಪದಲ್ಲಿ ಬಂದು ನೆರವಾದ ಕರುಣಾಮಯಿ
ಹೌದು ಅಂಥಹದ್ದೊಂದು ಅನಾಹುತವಾದಾಗ ಎಲ್ಲರಿಗೂ ಏನು ಮಾಡಬೇಕೆಂದು ತೋಚದೆ ಸುಮ್ಮನಾಗಿಬಿಡುತ್ತಾರೆ. ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಡೆಯಾದಾಗಲೂ ಹಾಗೆಯೇ ಆಗಿತ್ತು. ಎಲ್ಲರೂ ರಕ್ಷಣೆಗಾಗಿ ಒದ್ದಾಡಿದರು. ಇನ್ನು ಕೆಲವರು ಏನು ಮಾಡಬೇಕೆಂದು ತಿಳಿಯದೆ ಸುಮ್ಮನಾದರು. ಈ ಸಂದರ್ಭದಲ್ಲಿ ಅಂಡರ್‌ಪಾಸ್‌ನ ಹೊರಗಡೆ ನಿಂತಿದ್ದ ಮಹಿಳೆ ಈ ಅರಚಾಟ, ಕೂಗಾಟವನ್ನು ಕೇಳಿ ರಕ್ಷಣೆಗಾಗಿ ತಾವು ಉಟ್ಟಿದ್ದ ಸೀರೆಯನ್ನೇ ಬಿಚ್ಚಿಕೊಟ್ಟಿದ್ದಾರೆ. ಹೀಗೆ ಮಾಡಲು ಅವರು ಒಂದು ಕ್ಷಣವೂ ಯೋಚಿಸಲ್ಲಿಲ್ಲ. ಇದನ್ನು ಕಂಬಕ್ಕೆ ಕಟ್ಟಿ ಕೆಳಗೆ ಇದ್ದವರಿಗೆ ಕೊಡಿ. ಸೀರೆ ಹಿಡ್ಕೊಂಡು ಮೇಲೆ ಬರಲಿ ಅಂದು ಬಿಟ್ಟರಂತೆ. ಮಹಿಳೆಯ ತಕ್ಷಣದ ನಿರ್ಧಾರಕ್ಕೆ (Decision) ಅಲ್ಲಿದ್ದ ಜನರೆಲ್ಲಾ ಮೂಕವಿಸ್ಮಿತರಾಗಿದ್ದಾರೆ.

ನಂತರ ಸೀರೆಯನ್ನು ಅಂಡರ್ ಪಾಸ್ ನ ಕಬ್ಬಿಣದ ಸರಳುಗಳಿಗೆ ಕಟ್ಟಲಾಯಿತು. ಹಾಗಾಗಿ ಎಲ್ಲರೂ ಆ ಸೀರೆಯನ್ನು ಹಿಡಿದುಕೊಂಡು ಹೊರಗೆ ಬಂದರು. ನಂತರ ಅಲ್ಲಿದ್ದ ಇನ್ನುಳಿದ ಕೆಲ ಮಹಿಳೆಯರು ಸೀರೆ ಬಿಚ್ಚಿಕೊಟ್ಟ ಮಹಿಳೆಗೆ ದುಪ್ಪಟ್ಟಾವನ್ನು ಕೊಟ್ಟಿದ್ದಾರೆ. ಮಾತ್ರವಲ್ಲ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬ ಶರ್ಟ್‌ ಬಿಚ್ಚಿಕೊಟ್ಟು ಆಕೆಯನ್ನು ಆಟೋದಲ್ಲಿ ಕೂರಿಸಿ ಮನೆಗೆ ಕಳುಹಿಸಿದ್ದಾರೆ. ಆಕೆ ಯಾರೆಂದು ಯಾರಿಗೂ ಗೊತ್ತಾಗಿಲ್ಲ. ಆದರೆ ಆಕೆ ನೀಡಿದ ಸೀರೆ ಆಗಬಹುದಾದ ದುರಂತವನ್ನು ತಪ್ಪಿಸಿದೆ. ಅಪಾಯದಲ್ಲಿದ್ದ ಜೀವಗಳನ್ನು ಕಾಪಾಡಿದೆ. ನಂತರ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತು.

ಮಹಿಳೆಯ ಸಮಯಪ್ರಜ್ಞೆ ಮತ್ತು ಅಪಾಯದ ಸಮಯದಲ್ಲಿ ಮಾನವನ್ನು ಲೆಕ್ಕಿಸದೇ ನೆರವು ನೀಡ್ದದನ್ನು ಹಲವರು ಪ್ರಶಂಸಿಸಿದರು.  ಅದೇನೆ ಇರ್ಲಿ, ಈ ಘಟನೆ ಮಾತ್ರ ಸಮಾಜದಲ್ಲಿ ಅದೆಷ್ಟೋ ಕೆಟ್ಟ ಘಟನೆಗಳು ನಡೆದರೂ ಮಾನವೀಯತೆ (Humaity) ಅನ್ನೋದು ಇಂದಿಗೂ ಜೀವಂತವಾಗಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಕಷ್ಟಕಾಲದಲ್ಲಿ ದೇವರು ಯಾವುದಾದರೂ ರೂಪದಲ್ಲಿ ಬಂದು ನೆರವಾಗ್ತಾನೆ ಅಂತಾರಲ್ಲ. ಬಹುಶಃ ಅದು ಇದೇ ಇರ್ಬೇಕು.  

Bengaluru- ಯುವತಿ ಸಾವಿಗೆ ಕಾರಣವಾದ ಕಾರು ಚಾಲಕ ಅರೆಸ್ಟ್‌: ಬಿಬಿಎಂಪಿ ಅಧಿಕಾರಿಗಳ ಅರೆಸ್ಟ್‌ ಯಾವಾಗ?

ಕಣ್ಣು ಬಿಡು ಮಗಳೇ..ಮಗಳ ಮೃತದೇಹದ ಹೊಟ್ಟೆ ಒತ್ತಿ ನೀರು ಹೊರತೆಗೆಯುತ್ತಿದ್ದ ತಾಯಿ
ಅಂಡರ್‌ಪಾಸ್‌ನಲ್ಲಿ ಮುಳುಗಿದ್ದ ಕಾರಿನಲ್ಲಿದ್ದ ಭಾನುರೇಖಾ ನೀರು ಕುಡಿದು ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದರು. ತಕ್ಷಣವೇ ಆಟೋದಲ್ಲಿ ಭಾನುರೇಖಾನ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ಬಂದಿದ್ದೇ ವೈದ್ಯರು ನೋಡಿದಾಗ ಭಾನುರೇಖಾ ಸಾವನ್ನಪ್ಪಿದ್ದರು. ಕುಟುಂಬ ಸದಸ್ಯರು ಇದನ್ನು ನಂಬಲು ಸಿದ್ಧವಿರಲ್ಲಿಲ್ಲ. ಹೆತ್ತ ತಾಯಿಯ ಅಳುವಂತೂ ಮುಗಿಲುಮುಟ್ಟಿತ್ತು. ತಾಯಿ ಮಗಳನ್ನು ಅಲ್ಲಾಡಿಸಿ ಏಳುವಂತೆ ಕೂಗಿ ಕೂಗಿ ಹೇಳುವ ದೃಶ್ಯ ಕಲ್ಲೆದೆಯನ್ನೂ ಕರಗಿಸುವಂತಿತ್ತು. ತಾಯಿ ಅಳುತ್ತಾ ಮೃತದೇಹದ ಹೊಟ್ಟೆ ಒತ್ತಿ ನೀರು ಹೊರತೆಗೆಯುತ್ತಿದ್ದರು. 

Latest Videos
Follow Us:
Download App:
  • android
  • ios