ಮುಟ್ಟಾದಾಗ ಈ ತಪ್ಪು ಮಾಡಿದ್ರೆ ಹೆಚ್ಚುತ್ತೆ ಸಮಸ್ಯೆ
ಪಿರಿಯಡ್ಸ್ ವೇಳೆ ಮಹಿಳೆ ಕೆಲ ವಿಷ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆಕೆಯ ಹಾರ್ಮೋನ್ ನಲ್ಲಿ ಏರುಪೇರಾಗುವ ಕಾರಣ ಅನೇಕ ಸಮಸ್ಯೆ ಕಾಡುತ್ತದೆ. ಸ್ವಚ್ಛತೆ ಜೊತೆ ಸೇವಿರುವ ಆಹಾರದ ಬಗ್ಗೆಯೂ ಆಕೆಗೆ ಗಮನವಿರಬೇಕು.
ಮಹಿಳೆಯಾದ್ಮೇಲೆ ಮುಟ್ಟನ್ನು ಎದುರಿಸ್ಲೇಬೇಕು. ಮುಟ್ಟೊಂದು ನೈಸರ್ಗಿಕ ಕ್ರಿಯೆ. ಪಿರಿಯಡ್ಸ್ ಸಮಯದಲ್ಲಿ ಎಷ್ಟು ಮಹಿಳೆಯರು ಸಮಸ್ಯೆ ಎದುರಿಸ್ತಾರೆ ಎಂಬ ಪ್ರಶ್ನೆ ಕೇಳಿದ್ರೆ ಎಲ್ಲರೂ ಕೈ ಎತ್ತುತ್ತಾರೆ. ಮುಟ್ಟಿನ ಸಮಯದಲ್ಲಿ ಎಲ್ಲ ಮಹಿಳೆಯರಿಗೂ ಒಂದೇ ರೀತಿ ನೋವು ಕಾಡಬೇಕೆಂದೇನೂ ಇಲ್ಲ. ಅವರವರ ದೇಹ ಪ್ರಕೃತಿಗೆ ತಕ್ಕಂತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಪಿರಿಯಡ್ಸ್ (Periods) ಸಮಯದಲ್ಲಿ ಕೆಲ ಮಹಿಳೆಯರು ವಿಪರೀತ ರಕ್ತಸ್ರಾವ (Bleeding) ದ ಸಮಸ್ಯೆ ಎದುರಿಸುತ್ತಾರೆ. ಮತ್ತೆ ಕೆಲವರಿಗೆ ಕಿಬ್ಬೊಟ್ಟೆ ನೋವು ಕಾಡುತ್ತದೆ. ಮತ್ತೆ ಕೆಲವರಿಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ವಾಕರಿಕೆ, ವಾಂತಿ ಬರುವವರಿದ್ದಾರೆ. ಬೇಧಿ ಸೇರಿದಂತೆ ತಲೆ ಸುತ್ತು, ಬೆನ್ನು ನೋವು ಹೀಗೆ ನಾನಾ ಸಮಸ್ಯೆ ಕಾಡುತ್ತದೆ. ಮುಟ್ಟಿನ ಸಮಯದಲ್ಲಿ ದೈಹಿಕ (Physical ) ನೋವಿನ ಜೊತೆ ಮಾನಸಿಕ ಸಮಸ್ಯೆ ಮಹಿಳೆಯರನ್ನು ಬಿಡೋದಿಲ್ಲ. ಕೋಪ, ಅಳು, ಖಿನ್ನತೆ (Depression) ಕೆಲವರನ್ನು ಕಾಡುತ್ತದೆ. ಮುಟ್ಟಾದ ಮಹಿಳೆಗೆ ವಿಶ್ರಾಂತಿ ಅಗತ್ಯವಿರುತ್ತದೆ. ಒಂದೇ ಸಮನೆ ಕೆಲಸ ಮಾಡಿದ್ರೆ ಆಕೆ ಸಮಸ್ಯೆ ಮತ್ತಷ್ಟು ಉಲ್ಪಣಗೊಳ್ಳುತ್ತದೆ. ಅನೇಕ ಬಾರಿ ಪಿರಿಯಡ್ಸ್ ಸಮಯದಲ್ಲಿ ಮಹಿಳೆ ಕೆಲ ತಪ್ಪುಗಳನ್ನ ಮಾಡ್ತಾಳೆ. ತಿಳಿದೋ, ತಿಳಿಯದೆಯೋ ಆಕೆ ಮಾಡಿದ ತಪ್ಪು ಅವಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಾವಿಂದು ಪಿರಿಯಡ್ಸ್ ನಲ್ಲಿ ಮಹಿಳೆ ಏನು ಮಾಡ್ಬಾರದು ಎಂಬುದನ್ನು ಹೇಳ್ತೇವೆ.
ಪಿರಿಯಡ್ಸ್ ಕಿರಿಕಿರಿ ಅನ್ಬೇಡಿ, ಸರಿಯಾದ ಪ್ಯಾಡ್ ಬಳಸಿದ್ರೆ ಆರಾಮವಾಗಿರ್ಬೋದು
ಮುಟ್ಟಿನ ಸಮಯದಲ್ಲಿ ಮಹಿಳೆಯರು ಮಾಡಬಾರದು ಈ ಕೆಲಸ :
ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ : ಮುಟ್ಟಿನ ಸಮದಯಲ್ಲಿ ಕೆಲ ಮಹಿಳೆಯರು ನೀರಿನ ಸೇವನೆಯನ್ನು ಕಡಿಮೆ ಮಾಡ್ತಾರೆ. ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗುವುದು ತೊಂದರೆ ಎನ್ನುವ ಕಾರಣಕ್ಕೆ ನೀರು ಕುಡಿಯೋದಿಲ್ಲ. ಆದ್ರೆ ಈ ಸಂದರ್ಭದಲ್ಲಿ ಹೆಚ್ಚು ನೀರು ಸೇವನೆ ಮಾಡ್ಬೇಕು. ದೇಹವನ್ನು ಹೈಡ್ರೇಟೆಡ್ ಆಗಿಡಬೇಕು. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದ್ರೆ ಅವಧಿಯ ನೋವು ಮತ್ತು ಸಮಸ್ಯೆ ಹೆಚ್ಚು ಕಾಡುತ್ತವೆ. ನಿಂಬೆ ಹಣ್ಣಿನ ಜ್ಯೂಸ್, ಸೌತೆಕಾಯಿ, ಎಳ ನೀರು, ಜ್ಯೂಸ್ ಇತ್ಯಾದಿಗಳನ್ನು ಮಹಿಳೆಯರು ಕುಡಿಯಬೇಕು.
ಕಾಂಡೋಮ್ ಇಲ್ಲದೆ ದೈಹಿಕ ಸಂಬಂಧ : ಪಿರಿಯಡ್ಸ್ ನಲ್ಲಿ ಗರ್ಭಧಾರಣೆ ಸಾಧ್ಯವಿಲ್ಲ ಎಂದು ಅನೇಕರು ನಂಬಿದ್ದಾರೆ. ಆದ್ರೆ ಇದು ಸುಳ್ಳು. ಯಾವುದೇ ರಕ್ಷಣೆಯಿಲ್ಲದೆ ದೈಹಿಕ ಸಂಬಂಧ ಬೆಳೆಸಿದ್ರೆ ಗರ್ಭಧರಿಸುವ ಸಾಧ್ಯತೆಯಿರುತ್ತದೆ. ಅದ್ರೆ ಜೊತೆಗೆ ಲೈಂಗಿಕವಾಗಿ ಹರಡುವ ರೋಗದ ಅಪಾಯ ಹೆಚ್ಚು. ಪಿರಿಯಡ್ಸ್ ಆಗಿರುವ ವೇಳೆ ಸಂಭೋಗ ಬೆಳೆಸಬೇಕೆಂದ್ರೆ ಕಾಂಡೋಮ್ ಬಳಕೆ ಮಾಡುವುದು ಬಹಳ ಮುಖ್ಯ. ನೀವು ನೈರ್ಮಲ್ಯದ ಬಗ್ಗೆಯೂ ಕಾಳಜಿವಹಿಸಬೇಕು.
ಆಹಾರದ ಬಗ್ಗೆ ಇರಲಿ ಕಾಳಜಿ : ಪಿರಿಯಡ್ಸ್ ಸಮಯದಲ್ಲಿ ಹೊಟ್ಟೆ ಸಾಕಷ್ಟು ಉಬ್ಬುತ್ತದೆ. ಗ್ಯಾಸ್ಟ್ರಿಕ್ ಸೇರಿದಂತೆ ಕೆಲ ಸಮಸ್ಯೆ ಕಾಡುತ್ತದೆ. ಹಾಗಾಗಿ ಮುಟ್ಟಿನ ಸಮಯದಲ್ಲಿ ಹೊಟ್ಟೆ ಉಬ್ಬುವ ಆಹಾರವನ್ನು ಸೇವಿಸಬೇಡಿ. ಕಾಫಿ, ಕಾರ್ಬೊನೇಟೆಡ್ ಪಾನೀಯ ಕುಡಿಯದಿರುವುದು ಒಳ್ಳೆಯದು. ಸೋಡಿಯಂ ಅಧಿಕವಾಗಿರುವ ತ್ವರಿತ ಆಹಾರವನ್ನು ಸೇವಿಸಬೇಡಿ. ಹೆಚ್ಚು ಮಸಾಲೆಯುಕ್ತ ಹಾಗೂ ಉಪ್ಪಿರುವ ಆಹಾರದಿಂದ ದೂರವಿರಿ.
ಮುಟ್ಟಿನ ಸಮಯದಲ್ಲಿ ಮೌನವೇ ಬಂಗಾರ : ಮೊದಲೇ ಹೇಳಿದಂತೆ ಪಿರಿಯಡ್ಸ್ ಸಮಯದಲ್ಲಿ ಕೋಪ ಹೆಚ್ಚಿರುತ್ತದೆ. ಚಿಕ್ಕ ಚಿಕ್ಕ ವಿಷ್ಯಕ್ಕೆ ಕೋಪ ಬರುತ್ತದೆ. ಅಳು ಬರುತ್ತದೆ. ಹಾರ್ಮೋನ್ ಬದಲಾವಣೆಯಿಂದ ನಿಮ್ಮ ಮನಸ್ಥಿತಿ ಸ್ಥಿರವಾಗಿರುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ಸುಮ್ಮನಿರುವುದು ಒಳ್ಳೆಯದು. ಸಿಟ್ಟಿಗೆ ಬುದ್ದಿ ನೀಡಿದ್ರೆ ಸಂಬಂಧ ಹಾಳಾಗಬಹುದು. ಸಿಟ್ಟು ಬಂದ್ರೆ ಜಾಗ ಬದಲಿಸಿ. ಸ್ವಲ್ಪ ಸಮಯ ಶಾಂತವಾಗಿ ನಡೆದಾಡಿ.
ಮುಖದ ಮೇಲೆ ಕಾಣಿಸಿಕೊಳ್ಳೋ ಕಪ್ಪು ಕಲೆಗೆ ಇಲ್ಲಿವೆ ಸಿಂಪಲ್ Home Remedies
ಆಲೋಚನೆಗೆ ಕಡಿವಾಣ ಹಾಕಿ : ಮುಟ್ಟಿನ ಸಮಯದಲ್ಲಿ ನಮ್ಮನ್ನು ನಾವು ಕೆಳ ಮಟ್ಟದಲ್ಲಿ ನೋಡುವ ಸಾಧ್ಯತೆಯಿರುತ್ತದೆ. ಅನವಶ್ಯಕ ಆಲೋಚನೆಗಳು ನಮ್ಮ ಮನಸ್ಸನ್ನು ಹಾಳು ಮಾಡುತ್ತವೆ. ಉದಾಹರಣೆಗೆ ಮುಟ್ಟಿನ ಸಮಯದಲ್ಲಿ ಕಾಡುವ ಮೊಡವೆ ನಮ್ಮ ಸೌಂದರ್ಯ ಹಾಳು ಮಾಡ್ತಿದೆ ಎಂಬ ಬೇಸರ ನಿಮ್ಮನ್ನು ಕಾಡಬಹುದು. ಇನ್ನು ಕೆಲವರಿಗೆ ಯಾವುದೇ ಸಾಧನೆ ಮಾಡಿಲ್ಲ ಎಂಬ ನೋವು ಬರಬಹುದು. ಇದು ನಿಮ್ಮನ್ನು ಮೂರು ದಿನ ಕಾಡಬಹುದು. ಹಾಗಾಗಿ ಅದ್ರ ಬಗ್ಗೆ ಹೆಚ್ಚು ಆಲೋಚನೆ ಮಾಡಲು ಹೋಗ್ಬೇಡಿ. ನಿಮ್ಮ ಮೇಲೆ ನಂಬಿಕೆಯಿಡಿ.