2025ರಲ್ಲಿ ಜಾಗತಿಕವಾಗಿ ಮಹಿಳೆಯರ ಪ್ರಗತಿ ಕಂಡುಬಂದರೂ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಯಡಿಯಲ್ಲಿ ಅವರ ಸ್ಥಿತಿ ಶೋಚನೀಯವಾಗಿದೆ. ಶಿಕ್ಷಣ, ಉದ್ಯೋಗ, ಸಾರ್ವಜನಿಕ ಭಾಗವಹಿಸುವಿಕೆ ನಿಷೇಧಿಸಲಾಗಿದೆ. ಮಾತನಾಡುವ ಹಕ್ಕು ಕೂಡ ಕಸಿದುಕೊಳ್ಳಲಾಗಿದೆ. ಕಠಿಣ ಇಸ್ಲಾಮಿಕ್ ಕಾನೂನುಗಳನ್ನು ಹೇರಲಾಗಿದ್ದು, ಮಹಿಳೆಯರ ಮೂಲಭೂತ ಹಕ್ಕುಗಳನ್ನು ನಿರ್ದಯವಾಗಿ ನಿಗ್ರಹಿಸಲಾಗುತ್ತಿದೆ. ವಿರೋಧಿಸಿದರೆ ಕಠಿಣ ಶಿಕ್ಷೆ.

ನಾವು 2025ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಒಂದ್ಕಡೆ ಭಾರತ ಸೇರಿದಂತೆ ಕೆಲ ದೇಶಗಳು ವೇಗದಲ್ಲಿ ಅಭಿವೃದ್ಧಿ ಪಥದತ್ತ ಸಾಗ್ತಿವೆ. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಕಾಣಿಸಿಕೊಳ್ತಿದ್ದಾರೆ. ಮಹಿಳೆಯರ ಬಲ ಹೆಚ್ಚಾಗ್ತಿದೆ. ಆದ್ರೆ ಕೆಲ ದೇಶಗಳಲ್ಲಿ ಇನ್ನೂ ಮಹಿಳೆಯರಿಗೆ ಸರಿಯಾದ ಸ್ವಾತಂತ್ರ್ಯವಿಲ್ಲ. ಸಾರ್ವಜನಿಕರ ಮುಂದೆ ಬರೋದಿರಲಿ, ಪರಸ್ಪರ ಮಾತನಾಡುವ ಅಧಿಕಾರವನ್ನೂ ಅಫ್ಘಾನಿಸ್ತಾನಿ (Afghani) ಮಹಿಳೆಯರು ಕಳೆದುಕೊಂಡಿದ್ದಾರೆ. ತಾಲಿಬಾನ್ ಆಳ್ವಿಕೆ (Taliban rule) ನಂತ್ರ ಅಫ್ಘಾನಿಸ್ತಾನಿ ಮಹಿಳೆಯರ ಸ್ಥಿತಿ ಗಂಭೀರವಾಗಿದೆ. ಮಹಿಳೆಯರ ಪ್ರತಿಯೊಂದು ಹಕ್ಕನ್ನು ತಾಲಿಬಾನ್ ಆಡಳಿತ ಕಸಿದುಕೊಂಡಿದೆ.

ತಾಲಿಬಾನಿ ಆಳ್ವಿಕೆ ನಂತ್ರ ಅಫ್ಘಾನಿಸ್ತಾನಿ ಮಹಿಳೆಯರು ಉಸಿರು ಬಿಗಿಹಿಡಿದು ಜೀವನ ನಡೆಸುವಂತಾಗಿದೆ. ಶಿಕ್ಷಣದಿಂದ ಹಿಡಿದು ಮಾತಿನವರೆಗೆ ಎಲ್ಲ ಹಕ್ಕಗಳನ್ನು ಹಿಂಪಡೆಯಲಾಗಿದೆ. ಸ್ವಾತಂತ್ರ್ಯ (independence) ವಿಲ್ಲದ ಜೀವನವನ್ನು ಮಹಿಳೆಯರು ನಡೆಸುತ್ತಿದ್ದಾರೆ. ಪ್ರೌಢಶಾಲೆ ನಂತ್ರ ಹುಡುಗಿಯರು ಶಾಲೆಗೆ ಹೋಗುವಂತಿಲ್ಲ. ಉನ್ನತ ಶಿಕ್ಷಣವನ್ನು ಹುಡುಗಿಯರಿಗೆ ಸಂಪೂರ್ಣ ನಿಷೇಧಿಸಲಾಗಿದೆ. ಇದ್ರಿಂದ ಶಿಕ್ಷಣ ಹಾಗೂ ವೃತ್ತಿ ಕನಸನ್ನು ಹುಡುಗಿಯರು ಸಂಪೂರ್ಣ ಮರೆತಿದ್ದಾರೆ.

ಹಿತ್ತಾಳೆ, ತಾಮ್ರದ ಪಾತ್ರೆ ಮಾರಿ ಕೋಟಿ ಗಳಿಸ್ತಿದ್ದಾಳೆ ಈ ಇಂಜಿನಿಯರ್ ಮಹಿಳೆ

ಮಹಿಳೆಯರು ಯಾವ ಕೆಲಸ ಮಾಡ್ಬೇಕು, ಯಾವ ಕೆಲಸ ಮಾಡ್ಬಾರದು ಎಂಬ ಕಠಿಣ ನಿಯಮವನ್ನು ಅಲ್ಲಿ ವಿಧಿಸಲಾಗಿದೆ. ಹಿಂದಿದ್ದ ಬ್ಯೂಟಿ ಪಾರ್ಲರ್ ಗಳನ್ನು ತಾಲಿಬಾನಿ ಸರ್ಕಾರ ಬಂದ್ ಮಾಡಿದೆ. ಮಹಿಳೆಯರು ಪಾರ್ಕ್ ಮತ್ತು ಜಿಮ್‌ಗಳಂತಹ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವಂತಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಸೀಮಿತಗೊಳಿಸಲಾಗಿದೆ. ಅವರು ಯಾವುದೇ ಹಾಡು, ನೃತ್ಯ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ನಿಷಿದ್ಧ. ಅಕ್ಟೋಬರ್ 2024 ರಲ್ಲಿ, ತಾಲಿಬಾನ್‌ನ ಸದ್ಗುಣ ಪ್ರಚಾರ ಮತ್ತು ದುರ್ಗುಣ ತಡೆಗಟ್ಟುವಿಕೆ ಸಚಿವಾಲಯ ಮಹಿಳೆಯರು ಪರಸ್ಪರ ಮಾತನಾಡಬಾರದು ಎಂದಿದೆ. ಪ್ರಾರ್ಥನೆಯ ಸಮಯದಲ್ಲಿ ಇತರ ಮಹಿಳೆಯರ ಜೊತೆ ಮಾತನಾಡುವುದನ್ನು ನಿಷೇಧಿಸಿದೆ. ಮಹಿಳೆಯ ಧ್ವನಿಯನ್ನು ಅವ್ರಾ ಅಂದ್ರೆ ಮುಚ್ಚಿಡಬೇಕಾದ ವಿಷಯ ಎಂದು ಪರಿಗಣಿಸಲಾಗುತ್ತದೆ.

2021 ರಲ್ಲಿ ಅಧಿಕಾರಕ್ಕೆ ಬಂದ ನಂತರ ತಾಲಿಬಾನ್ ಸರ್ಕಾರ, ಇಸ್ಲಾಮಿಕ್ ಕಾನೂನನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡ್ತಿದೆ. ಇದೇ ವೇಳೆ ಮಹಿಳೆಯರಿಗೆ ಅನೇಕ ನಿಯಮಗಳನ್ನು ವಿಧಿಸಿದೆ. ಇದರಲ್ಲಿ ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ಮುಖ ಮತ್ತು ದೇಹವನ್ನು ಮುಚ್ಚಿಕೊಂಡು ಹೋಗೋದು ಕಡ್ಡಾಯ. ದೊಡ್ಡ ಧ್ವನಿಯಲ್ಲಿ ಮಹಿಳೆಯರು ಮಾತನಾಡುವಂತಿಲ್ಲ. ಅಷ್ಟೇ ಅಲ್ಲ, ಮಹಿಳೆಯರು ಅನವಶ್ಯಕವಾಗಿ ಮನೆಯಿಂದ ಹೊರಗೆ ಬರುವಂತಿಲ್ಲ. ಅತ್ಯವಶ್ಯಕತೆ ಇದ್ದಲ್ಲಿ ಮಾತ್ರ ಮನೆಯಿಂದ ಹೊರಗೆ ಬರಲು ಅವರಿಗೆ ಅನುಮತಿ ನೀಡಲಾಗುತ್ತದೆ. ಇವುಗಳಲ್ಲದೆ ಅಲ್ಲಿನ ಜನರಿಗೆ ನಮಾಜ್ ಮಾಡುವುದು ಕಡ್ಡಾಯವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಂಗೀತ ನುಡಿಸುವುದು ಮತ್ತು ಮುಸ್ಲಿಮೇತರರಂತೆ ರಜಾದಿನಗಳನ್ನು ಆಚರಿಸುವುದನ್ನು ಸಹ ನಿಷೇಧಿಸಲಾಗಿದೆ. ಕಾನೂನು ಉಲ್ಲಂಘಿಸಿದ್ರೆ ಅವರಿಗೆ ದಂಡ ಅಥವಾ ಬಂಧನದ ಶಿಕ್ಷೆ ವಿಧಿಸಲಾಗುವುದು.

ಸೇನೆಯಲ್ಲಿ ಮಹಿಳೆಯರೂ ಸೇವೆ ಸಲ್ಲಿಸುವುದಕ್ಕೆ ಕಾರಣರಾದ ದಿಟ್ಟ ಮಹಿಳೆ ಈಕೆ

ಅಫ್ಫಾನಿ ಮಹಿಳೆಯರಿಗೆ ನರ್ಸಿಂಗ್ ಮಾಡಲು ಹಿಂದೆ ಅವಕಾಶವಿತ್ತು. ಪುರುಷರು ಮಹಿಳೆಯರಿಗೆ ಚಿಕಿತ್ಸೆ ನೀಡುವಂತಿಲ್ಲ. ಹಾಗಾಗಿ ನರ್ಸಿಂಗ್ ಕ್ಷೇತ್ರದಲ್ಲಿ ಹುಡುಗಿಯರು ಕಾಣಿಸಿಕೊಳ್ತಿದ್ದರು. ಆದ್ರೆ ಈಗ ಮಹಿಳಾ ನರ್ಸ್ ಗಳ ಸಂಖ್ಯೆ ಬಹಳ ಕಡಿಮೆ ಆಗಿದೆ. ಇದ್ರಿಂದಾಗಿ ಚಿಕಿತ್ಸೆ ಪಡೆಯಲು ಮಹಿಳೆಯರು ಕಷ್ಟಪಡ್ತಿದ್ದಾರೆ. ಈ ಕೋರ್ಸ್‌ಗಳಲ್ಲಿ 17,000 ಮಹಿಳೆಯರು ತರಬೇತಿ ಪಡೆಯುತ್ತಿದ್ದರು. ಆದ್ರೆ ಮಹಿಳೆಯರಿಗೆ ಉನ್ನತ ಶಿಕ್ಷಣವನ್ನು ಈಗ ನಿಷೇಧಿಸಿರುವ ಕಾರಣ ಮಹಿಳೆಯರು ಈ ಶಿಕ್ಷಣದಿಂದಲೂ ವಂಚಿತರಾಗಿದ್ದಾರೆ. ಮಹಿಳೆಯರ ಮೇಲೆ ನಡೆಯುತ್ತಿರುವ ಈ ಹಿಂಸೆಯನ್ನು ವಿರೋಧಿಸಿದವರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗ್ತಿದೆ. ಅನಿಯಂತ್ರಿತ ಬಂಧನ ಮತ್ತು ಚಿತ್ರಹಿಂಸೆ ಸೇರಿದಂತೆ ಭೀಕರ ಪರಿಣಾಮಗಳನ್ನು ಅವರು ಎದುರಿಸುತ್ತಿದ್ದಾರೆ. ಸರಿಯಾಗಿ ಹಿಜಾಬ್ ಧರಿಸಿಲ್ಲ ಎಂಬ ಆರೋಪದ ಮೇಲೆ ಮಹಿಳೆಯರು ಮತ್ತು ಹುಡುಗಿಯರನ್ನು ವ್ಯಾಪಕವಾಗಿ ಬಂಧಿಸಲಾಗ್ತಿದೆ.