ಇಂಜಿನಿಯರಿಂಗ್‌ ಬಿಟ್ಟು ಕಲೆಯತ್ತ ಮುಖ ಮಾಡಿದ ಕೀರ್ತಿ ಗೋಯಲ್, ಕಣ್ಮರೆಯಾಗುತ್ತಿದ್ದ ಥಥೇರಾ ಕರಕುಶಲ ಕಲೆಯನ್ನು ಪುನರುಜ್ಜೀವನಗೊಳಿಸಿ P-TAL ಕಂಪನಿ ಸ್ಥಾಪಿಸಿದರು. ಈಗ 80ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತಿರುವ ಕಂಪನಿಯ ವಾರ್ಷಿಕ ವಹಿವಾಟು 36 ಕೋಟಿ ರೂ. ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲೂ ಕೀರ್ತಿ ಯಶಸ್ಸು ಕಂಡಿದ್ದಾರೆ. 50 ಕುಶಲಕರ್ಮಿ ಕುಟುಂಬಗಳಿಗೆ ಉದ್ಯೋಗ ನೀಡಿದ್ದಾರೆ.

ಯುವ ಸ್ಟಾರ್ಟ್ ಅಪ್ ಉದ್ಯಮಿ (Start-up entrepreneur)ಗಳಿಗೆ ಅಮೃತಸರ ನಿವಾಸಿ ಕೀರ್ತಿ ಗೋಯಲ್ (Kirti Goyal) ಸ್ಫೂರ್ತಿಯಾಗ್ತಾರೆ. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಸಾಧನೆ ಶಿಖರವನ್ನು ಏರಿರುವ ಅವರು, ಅನೇಕ ಕಲಾತ್ಮಕ ಕುಟುಂಬಕ್ಕೆ ದಾರಿ ದೀಪವಾಗಿದ್ದಾರೆ. P-TAL ಎಂಬ ನವೋದ್ಯಮ ಶುರು ಮಾಡಿರುವ ಕೀರ್ತಿ ಗೋಯಲ್ ನಡೆದು ಬಂದ ದಾರಿ ಸುಲಭವಾಗಿರಲಿಲ್ಲ. ಕಣ್ಮರೆಯಾಗುತ್ತಿರುವ ಥಥೇರಾ ಕಲೆಯನ್ನು ಪುನರುಜ್ಜೀವನಗೊಳಿಸುವುದು ಕೀರ್ತಿ ಮೂಲ ಉದ್ದೇಶವಾಗಿತ್ತು. ಅದನ್ನು ಕೀರ್ತಿ ಮಾಡಿ ತೋರಿಸಿದ್ದಾರೆ. ಯಶಸ್ವಿ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ. 

ಶಿಕ್ಷಕರ ಸಲಹೆಯಿಂದ ಬದಲಾಯ್ತು ಕೀರ್ತಿ ಜೀವನ : ಬಾಲ್ಯದಲ್ಲಿಯೇ ವೈದ್ಯರಾಗ್ಬೇಕು, ಇಂಜಿನಿಯರ್ ಆಗ್ಬೇಕು ಎಂದು ಕನಸು ಕಾಣುವ ಅನೇಕರು ಅದನ್ನು ಸಾಧಿಸ್ತಾರೆ. ಮತ್ತೆ ಕೆಲವರ ಕನಸು ಬೇರೆ ಅವರು ನಡೆಯುವ ದಾರಿ ಬೇರೆಯಾಗಿರುತ್ತದೆ. ತಮ್ಮ ಇಷ್ಟದ ದಾರಿ ಯಾವ್ದು ಎಂಬುದನ್ನು ಗುರುತಿಸಲು ಮಾರ್ಗದರ್ಶಕರ ಅವಶ್ಯಕತೆ ಇರುತ್ತದೆ. ಕೀರ್ತಿಗೆ ಅವರ ಶಿಕ್ಷಕರು ಮಾರ್ಗದರ್ಶಕರಾದ್ರು. ಅವರು ನೀಡಿದ ಸಲಹೆಯನ್ನು ಚಾಚು ತಪ್ಪದೆ ಪಾಲಿಸಿದ ಕೀರ್ತಿ ಈಗ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.

ಖಾಸಗಿ ಕಂಪನಿಯ ಕೆಲಸ ಬಿಟ್ಟು , 3 ತಿಂಗಳಲ್ಲಿ 35 ಲಕ್ಷ ಸಂಪಾದಿಸಿದ ರೈತ

ಕೀರ್ತಿ ತಮ್ಮೆಲ್ಲ ಸ್ನೇಹಿತರಂತೆ ಇಂಜಿನಿಯರಿಂಗ್ (Engineering) ಸೇರಿದ್ರು. ಆದ್ರೆ ಇದು ತಮಗೆ ಯೋಗ್ಯವಲ್ಲ ಎಂಬುದು ಅವರ ಅರಿವಿಗೆ ಬಂದಿತ್ತು. ಅದಾದ್ಮೇಲೆ ಕೀರ್ತಿ ಶಿಕ್ಷಕರ ಸಲಹೆಯಂತೆ ಕಲೆಯತ್ತ ಒಲವು ತೋರಿಸಿದ್ರು. ಕೀರ್ತಿ ಪರ್ಲ್ ಅಕಾಡೆಮಿಗೆ ಅರ್ಜಿ ಸಲ್ಲಿಸಿದ್ದರು. ಅದೃಷ್ಟವಶಾತ್, ಅವರಿಗೆ ಅಲ್ಲಿ ಪ್ರವೇಶ ಸಿಕ್ತು. ಇದು ಅವರ ದಾರಿಯನ್ನು ಮತ್ತಷ್ಟು ಸುಲಭಗೊಳಿಸಿತ್ತು. ಎರಡನೇ ವರ್ಷದ ತರಬೇತಿಯಲ್ಲಿ, ಕೀರ್ತಿ ಗೋಯಲ್ ಭಾರತೀಯ ಕರಕುಶಲ ವಸ್ತುಗಳನ್ನು ಆಧರಿಸಿದ ಯೋಜನೆಯಲ್ಲಿ ಕೆಲಸ ಮಾಡಲು ಶುರು ಮಾಡಿದ್ರು. ಅವರಿಗೆ ಚಂಬಾ ರುಮಾಲ್ ಕಲಾವಿದರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅದೊಂದು ಅದ್ಭುತ ಅನುಭವವಾಗಿತ್ತು. ನಂತರ, ಕೀರ್ತಿ ಯುನೆಸ್ಕೋ ಪ್ರಮಾಣೀಕೃತ ಕರಕುಶಲ ಥಥೇರಾ ಬಗ್ಗೆ ತಿಳಿದುಕೊಂಡರು. ಥಥೇರಾ ಕರಕುಶಲ ಕಲೆ (Thathera Handicrafts)ಯು ಸಾಂಪ್ರದಾಯಿಕ ಹಿತ್ತಾಳೆ (Brass) ಮತ್ತು ತಾಮ್ರದ ಅಡುಗೆ ಪಾತ್ರೆಗಳನ್ನು ಕೈಯಿಂದ ತಯಾರಿಸುವುದನ್ನು ಒಳಗೊಂಡಿದೆ. ಥಥೇರಾ ಕಲೆ ನೋಡಿದ ನಂತ್ರ ಕೀರ್ತಿ ಗುರಿ ಅಂತಿಮವಾಗಿತ್ತು. ಕೀರ್ತಿ ಗೋಯಲ್ ಈ ಕುಶಲಕರ್ಮಿಗಳೊಂದಿಗೆ 2016 ರಲ್ಲಿ P-TAL ಕಂಪನಿ ಸ್ಥಾಪಿಸಿದರು.

ಕಂಪನಿ ಶುರು ಮಾಡುವ ಮುನ್ನ ಕೀರ್ತಿ ಅದ್ರ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದರು. ಈಗ ಕೀರ್ತಿ ಮುನ್ನಡೆಸುತ್ತಿರುವ ಕಂಪನಿಯಲ್ಲಿ ಅಡುಗೆ ಸಾಮಾನುಗಳು, ಊಟದ ಸಾಮಾನುಗಳು ಮತ್ತು ಟೇಬಲ್ ಸೇರಿದಂತೆ 80 ಕ್ಕೂ ಹೆಚ್ಚು ರೀತಿಯ ಉತ್ಪನ್ನಗಳನ್ನು ತಯಾರಿಸುತ್ತದೆ. ಇವುಗಳಲ್ಲಿ ತಟ್ಟೆ, ಲೋಟ, ಹಿತ್ತಾಳೆಯ ಲ್ಯಾಡಲ್‌, ತಾಮ್ರದ ಬೇಕಿಂಗ್ ಟ್ರೇ ಸೇರಿವೆ. ಕಂಪನಿಯು ಸುಮಾರು 50 ಕುಶಲಕರ್ಮಿ ಕುಟುಂಬಗಳೊಂದಿಗೆ ಕೆಲಸ ಮಾಡುತ್ತದೆ.

ಮಹಾ ಕುಂಭ ಮೇಳದಲ್ಲಿ ಬ್ಯುಸಿನೆಸ್, ಕಡಿಮೆ ಬಂಡವಾಳ ಲಕ್ಷಾಂತರ ಸಂಪಾದನೆ !

ಕೀರ್ತಿ ತನ್ನ ಕೆಲಸಗಾರರಿಗೆ ಉತ್ತಮ ಸಂಬಳ ನೀಡ್ತಿದ್ದಾರೆ. ಕೀರ್ತಿ ಜೊತೆ ಕೆಲಸ ಮಾಡುವ ಕುಶಲಕರ್ಮಿಗಳು ತಿಂಗಳಿಗೆ 25,000 ರಿಂದ 50,000 ರೂಪಾಯಿ ಸಂಪಾದನೆ ಮಾಡ್ತಿದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಕಂಪನಿಯು ಪ್ರಸ್ತುತ ವಾರ್ಷಿಕ 36 ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿದೆ. ಕೀರ್ತಿ ಗೋಯಲ್ ಅವರ ಕಂಪನಿಯು ಇತ್ತೀಚೆಗೆ ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಕಾಣಿಸಿಕೊಂಡಿತ್ತು. ಅಲ್ಲಿ ಅವರು ಆಲ್-ಶಾರ್ಕ್ ಒಪ್ಪಂದ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.