Aerobics ಗರ್ಭಿಣಿಯರ ಹೈಪೋಥೈರಾಯ್ಜಿಸಮ್‌ಗೆ ಆಗುತ್ತೆ ಮದ್ದು
ಥೈರಾಯ್ಡ್ ಗ್ರಂಥಿಯ ಕಾರ್ಯದಲ್ಲಿ ಏರುಪೇರಾದಾಗ ಥೈರಾಯ್ಡ್ ಹಾರ್ಮೋನ್ ಸ್ರವಿಕೆಯಲ್ಲಿ ಕುಸಿತವಾಗಬಹುದು, ಹೆಚ್ಚಾಗಲೂಬಹುದು. ಕುಸಿತವಾಗುವ ಸಮಸ್ಯೆಯನ್ನು ಹೈಪೋಥೈರಾಯ್ಡಿಸಮ್ ಎನ್ನಲಾಗುತ್ತದೆ. ಇದು ಗರ್ಭಿಣಿಯರಲ್ಲೂ ಸಾಮಾನ್ಯ ಸಮಸ್ಯೆ. ಏರೋಬಿಕ್ ವ್ಯಾಯಾಮದ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.
ಚಿಟ್ಟೆಯ ಆಕಾರದ ಪುಟ್ಟ ಗ್ರಂಥಿ(Gland)ಯೊಂದು ಇಡೀ ದೇಹದ ವ್ಯವಸ್ಥೆಯನ್ನೇ ಅಲುಗಾಡಿಸುತ್ತದೆ ಎಂದರೆ ಇದರ ಸಾಮರ್ಥ್ಯದ ಬಗ್ಗೆ ತಿಳಿಯಬಹುದು. ಅದೇ ಥೈರಾಯ್ಡ್ (Thyroid) ಗ್ರಂಥಿ. ನೀವು ಗರ್ಭಿಣಿಯಾಗಿದ್ದು, ಥೈರಾಯ್ಡ್ ಸಮಸ್ಯೆಯ ಕುರಿತು ಚಿಂತಿತರಾಗಿದ್ದರೆ ಈಗಲೇ ಅದನ್ನು ದೂರಮಾಡಿ. ಏಕೆಂದರೆ, ಜಗತ್ತಿನಲ್ಲಿ ಥೈರಾಯ್ಡ್ ಸಮಸ್ಯೆ ಉಳ್ಳವರು ನೀವೊಬ್ಬರೇ ಅಲ್ಲ. ಅದರಲ್ಲೂ ಗರ್ಭ (Pregnancy) ಧರಿಸಿದಾಗ ಹೈಪೋಥೈರಾಯ್ಡಿಸಮ್ (Hypothyroidism) ಕಾಣಿಸಿಕೊಳ್ಳುವುದು ಅತಿ ಸಾಮಾನ್ಯ. ಥೈರಾಯ್ಡ್ ಗ್ರಂಥಿ ಸಾಕಷ್ಟು ಪ್ರಮಾಣದಲ್ಲಿ ಥೈರಾಯ್ಡ್ ಹಾರ್ಮೋನ್ (Harmone) ಅನ್ನು ಸ್ರವಿಕೆ ಮಾಡದಿರುವಾಗ ಇಡೀ ದೇಹದ ಮೆಟಬಾಲಿಸಮ್ ಅಂದರೆ ಚಯಾಪಚಯ ವ್ಯವಸ್ಥೆ ಹಳಿ ತಪ್ಪುತ್ತದೆ. ಇದರಿಂದ ದೇಹದ ಬೆಳವಣಿಗೆಗೆ ಧಕ್ಕೆಯಾಗುತ್ತದೆ. ಆದರೂ ಇದನ್ನು ಸೂಕ್ತ ಔಷಧ ಹಾಗೂ ಜೀವನಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆ (Change) ಮಾಡಿಕೊಂಡು ನಿಯಂತ್ರಿಸಿಕೊಳ್ಳಬಹುದು.
ಹೈಪೋಥೈರಾಯ್ಡಿಸಮ್ ಅನ್ನು ನಿಯಂತ್ರಿಸಲು ಏರೋಬಿಕ್ (Aerobics) ವ್ಯಾಯಾಮ ಅತ್ಯಂತ ಸೂಕ್ತ ಎನ್ನುವುದು ತಜ್ಞರ ಅಭಿಪ್ರಾಯ. ಗರ್ಭಿಣಿಯಾಗಿದ್ದಾಗ ಥೈರಾಯ್ಡ್ ಗ್ರಂಥಿಯ ಕಾರ್ಯದಲ್ಲಿ ಏರಿಳಿತವಾಗುತ್ತದೆ. ಕೇಂದ್ರ ನರಮಂಡಲ ಮತ್ತು ಸಂತಾನೋತ್ಪತ್ತಿ (Reproductive) ವ್ಯವಸ್ಥೆಯಲ್ಲಿ ಥೈರಾಯ್ಡ್ ಹಾರ್ಮೋನ್ ಪ್ರಭಾವ ಅಧಿಕ. ಗರ್ಭ ಧರಿಸಿದಾಗ ಕೆಲವು ರೀತಿಯ ಮಾನಸಿಕ ಬದಲಾವಣೆಯಾಗುವುದು ಸಹಜ. ಜತೆಗೆ, ಈಸ್ಟ್ರೋಜೆನ್ ಹಾರ್ಮೋನ್ ಅತಿ ಹೆಚ್ಚು ಪ್ರಮಾಣದಲ್ಲಿ ರಕ್ತದಲ್ಲಿ ಸಂಚರಿಸುತ್ತದೆ. ಈ ಸಮಯದಲ್ಲಿ ಥೈರಾಯ್ಡ್ ಹಾರ್ಮೋನ್ ಬಿಡುಗಡೆಯಲ್ಲೂ ವ್ಯತ್ಯಾಸವಾಗುತ್ತದೆ. ಇದೆಲ್ಲವೂ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಗಾಗಿ ನಡೆಯುವಂಥ ಕ್ರಿಯೆ. ಆದರೂ ಕೆಲವೊಮ್ಮೆ ಹಾರ್ಮೋನ್ ಸ್ರವಿಕೆ ಬೇಕಾದ ಪ್ರಮಾಣದಲ್ಲಿರದೆ ಇಳಿಕೆಯಾಗುತ್ತದೆ. ಇದನ್ನೇ ಹೈಪೋಥೈರಾಯ್ಡಿಸಮ್ ಎನ್ನಲಾಗುತ್ತದೆ. ಅಧ್ಯಯನಗಳ ಪ್ರಕಾರ, ಭಾರತೀಯ ಮಹಿಳೆಯರಲ್ಲಿ ಗರ್ಭ ಧರಿಸಿದ ಸಮಯದಲ್ಲಿ ಹೈಪೋಥೈರಾಯ್ಡಿಸಮ್ ಗೆ ಒಳಗಾಗುವ ಪ್ರಮಾಣ ಶೇ.13ರಷ್ಟು. ಮೊದಲ ಮೂರು ವಾರಗಳಲ್ಲಿ ಸಂಭವಿಸುವುದು ಹೆಚ್ಚು. ಇದಕ್ಕೆ ಹಲವಾರು ಕಾರಣಗಳಿರಬಹುದು.
ಕೊರೋನಾ ಗೆದ್ದವರಿಗೆ ಹೊಸ ಥೈರಾಯ್ಡ್ ಸಮಸ್ಯೆ
ಗರ್ಭಿಣಿಯರಲ್ಲಿ ಹೈಪೋಥೈರಾಯ್ಡಿಸಮ್ ನ ಲಕ್ಷಣಗಳೇನು?
• ಸುಸ್ತು(Fatigue), ಅತಿಯಾದ ಬಳಲಿಕೆ
• ದೇಹದ ತೂಕ (Weight) ಹೆಚ್ಚುವುದು
• ಮಾಂಸಖಂಡ ಕ್ಯಾಚ್ (Catch) ಆಗುವ ಸಮಸ್ಯೆ
• ವ್ಯಾಯಾಮ ಮಾಡುವ ಸಾಮರ್ಥ್ಯ ಕಡಿಮೆಯಾಗುವುದು
• ಕೈ ಅಥವಾ ಮೊಣಕೈಯಲ್ಲಿ ನೋವು
• ಮಲಬದ್ಧತೆ (Constipation)
• ಮುಖ ಊದುವುದು
• ದನಿಯಲ್ಲಿ ಬದಲಾವಣೆ
• ಹೃದಯದ ಬಡಿತ (Heart Rate) ಕಡಿಮೆಯಾಗುವುದು
• ಚರ್ಮ ಶುಷ್ಕ(Dry Skin)ವಾಗುವುದು ಹಾಗೂ ಕೂದಲು ವಿಪರೀತ ಉದುರುವುದು (Hair Fall)
ಏರೋಬಿಕ್ಸ್ ಪರಿಹಾರ
ಗರ್ಭಿಣಿಯರು ಏರೋಬಿಕ್ ವ್ಯಾಯಾಮದ ಮೂಲಕ ಈ ಸಮಸ್ಯೆಗೆ ಬಹಳಷ್ಟು ಪರಿಹಾರ ಕಂಡುಕೊಳ್ಳಬಹುದು. ಏರೋಬಿಕ್ ಎಂದಾಕ್ಷಣ ಅತಿಯಾಗಿ ಕುಣಿಯಬೇಕಾಗುತ್ತದೆ ಎಂದು ಭಾವಿಸಬೇಡಿ. ಇದು ಅತ್ಯುತ್ತಮ ದೈಹಿಕ ಚಟುವಟಿಕೆಯಾಗಿದ್ದು, ದೇಹದ ಅಗತ್ಯಕ್ಕೆ ತಕ್ಕಂತೆ ಆಮ್ಲಜನಕ (Oxygen) ಪೂರೈಕೆ ಮಾಡಲು ಅನುಕೂಲವಾಗಿದೆ. ಇದರಿಂದ ರಕ್ತದೊತ್ತಡ (Blood Pressure) ಕಡಿಮೆಯಾಗುತ್ತದೆ. ಶ್ವಾಸಕೋಶ ಸದೃಢಗೊಳ್ಳುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣವಾಗುತ್ತದೆ. ತೂಕ ಹೆಚ್ಚದಿರಲು ಸಹಾಯವಾಗುತ್ತದೆ. ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಮೂಡ್ (Mood) ಉತ್ತಮಪಡಿಸಿ ಖಿನ್ನತೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಇವೆಲ್ಲದರ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಥೈರಾಯ್ಡ್ ಹೋಗಿಸಲು ಸಹಕರಿಸೋ ಸೂಪರ್ ಫುಡ್ಸ್
ಅನಗತ್ಯ ತೂಕ ನಿಯಂತ್ರಣ
ಗರ್ಭಿಣಿಯರು ತೂಕ ಹೆಚ್ಚುವುದು ಸಾಮಾನ್ಯ. ಆದರೆ, ಅನಗತ್ಯವಾಗಿ ತೂಕ ಹೆಚ್ಚುವ ಅಗತ್ಯವಿರುವುದಿಲ್ಲ. ಈ ಸಮಯದಲ್ಲಿ ತೂಕವನ್ನು ನಿಯಂತ್ರಿಸಿಕೊಳ್ಳಲು ಏರೋಬಿಕ್ ಅತ್ಯಂತ ಸೂಕ್ತ. ರಕ್ತಪರಿಚಲನೆಯನ್ನು ಸುಗಮಗೊಳಿಸುವ ಏರೋಬಿಕ್ಸ್ ಮೂಲಕ ಹೈಪೋಥೈರಾಯ್ಡಿಸಮ್ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಸೂಕ್ತ ತಜ್ಞರ ಸಲಹೆ ಪಡೆದುಕೊಳ್ಳುವುದು ಮುಖ್ಯ.
ವ್ಯಾಯಾಮ ಮಾಡುವ ಮುನ್ನ ದೇಹಕ್ಕೆ ಹಿತವಾಗುವಂತಹ ಉಡುಪು ಧರಿಸಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬೇಡಿ. ಸ್ವಲ್ಪ ನೀರು ಅಥವಾ ಜ್ಯೂಸ್ ಏನಾದರೂ ಸೇವಿಸಿದ ಕೆಲವು ಸಮಯದ ಬಳಿಕ ಮಾಡಿ. ವ್ಯಾಯಾಮ ಮಾಡುವಾಗ ಚೆನ್ನಾಗಿ ಉಸಿರಾಡಿಸಿ.