ನಿಕರಾಗುವಾದ ಜೋಸಿ ಪ್ಯೂಕರ್ಟ್ ಎಂಬ ಮಹಿಳೆ, ವೈದ್ಯಕೀಯ ಸಹಾಯವಿಲ್ಲದೆ ಸಮುದ್ರ ತೀರದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಸಹಜ ಹೆರಿಗೆಯ ಕನಸನ್ನು ನನಸಾಗಿಸಲು, ಪತಿಯ ನೆರವಿನೊಂದಿಗೆ ಕಡಲತೀರಕ್ಕೆ ತೆರಳಿ ಆರೋಗ್ಯವಂತ ಗಂಡು ಮಗುವನ್ನು ಹೆತ್ತಿದ್ದು, ಈ ಘಟನೆ ವೈರಲ್ ಆಗಿದೆ.
ಆಸ್ಪತ್ರೆ, ವೈದ್ಯರೇ ಇಲ್ಲದ ದಿನಗಳಲ್ಲಿ ಮಹಿಳೆಯರು ಸಹಜವಾಗಿ 10-15 ಮಕ್ಕಳನ್ನು ಹೇರುತ್ತಿದ್ದರು. ಅಷ್ಟೇ ಏಕೆ, ನಮ್ಮ ಅಜ್ಜಿ- ಮುತ್ತಜ್ಜಿಯರೇ ಇದಕ್ಕೆ ಸಾಕ್ಷಿಯೂ ಆಗಿದ್ದಾರೆ. ಇನ್ನು ಈಗಿನ ವಿಷಯಕ್ಕೆ ಬರುವುದಾದರೆ, ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕ ಹೆಣ್ಣುಮಕ್ಕಳು ಕೂಡ ಕೆಲವೊಮ್ಮೆ ಅಲ್ಲಿಯೇ ಹೆತ್ತು, ತಮ್ಮ ಕಾಯಕವನ್ನು ಮುಂದುವರೆಸುವುದು ಇದೆ. ಆ ಮಕ್ಕಳು ಅದೇ ಮಣ್ಣಿನಲ್ಲಿ ಬೆಳೆದು, ನೈಸರ್ಗಿಕವಾಗಿಯೇ ಬಲಿಷ್ಠರಾಗಿ, ಸುಂದರವಾಗಿ ಇರುವುದನ್ನು ನೋಡಿದಾಗ ಮಲ್ಟಿ ಸ್ಪೆಷ್ಯಾಲಿಟಿ ಆಸ್ಪತ್ರೆಗಳಲ್ಲಿ ಲಕ್ಷ ಲಕ್ಷ ಕೊಟ್ಟು ಹೆರಿಗೆ ಮಾಡಿಸಿಕೊಳ್ಳುವವರು, ಮಗುವಾದ ಮೇಲೆ ಆ ಮಗುವನ್ನು ಜಾಗೃತೆ ಮಾಡಲು ಮತ್ತಷ್ಟು ಲಕ್ಷ ಸುರಿಯುವವರು ಕೂಡ ಅಚ್ಚರಿ ಪಡುವಂತೆ ಕಾಣಿಸುತ್ತದೆ.
ಸಹಜ ಹೆರಿಗೆ ಮರೀಚಿಕೆ
ಸಹಜ ಹೆರಿಗೆ ಎನ್ನುವುದೇ ಎಷ್ಟೋ ಆಸ್ಪತ್ರೆಗಳಲ್ಲಿ ಮರೀಚಿಕೆ ಆಗಿಬಿಟ್ಟಿವೆ. ಕೆಲವು ಆಸ್ಪತ್ರೆಗಳನ್ನು ಬಿಟ್ಟರೆ ಮತ್ತೆ ಹಲವಲ್ಲಿ ಸಹಜ ಹೆರಿಗೆ ಆಗುವುದಿದ್ದರೂ ಹಣಕ್ಕಾಗಿ ಸಿಸರಿಯನ್ ಮಾಡುವುದು ಇದೆ. ಕೆಲವೊಮ್ಮೆ, ಸಹಜ ಹೆರಿಗೆಯ ಭಯವನ್ನು ಹೆಣ್ಣುಮಕ್ಕಳಲ್ಲಿ ಹುಟ್ಟಿಸಿ, ಅವರೇ ಖುದ್ದಾಗಿ ಶಸ್ತ್ರಚಿಕಿತ್ಸೆಯ ಮೊರೆ ಹೋಗುವುದೂ ಇದೆ. ಹೆರಿಗೆ ಎನ್ನುವುದು ಎಷ್ಟೋ ಮಂದಿ ಹುಡುಗಿಯರಲ್ಲಿ ಭಯ ಹುಟ್ಟಿಸುತ್ತಿರುವ ಕಾರಣಕ್ಕಾಗಿಯೇ ಇಂದು ಮದುವೆಯಾಗುವುದೇ ಬೇಡ ಎನ್ನುವವರೂ ಇದ್ದಾರೆ, ಮದುವೆಯಾದರೆ ಮಕ್ಕಳನ್ನಂತೂ ಹೆರುವುದಿಲ್ಲವಪ್ಪ ಎನ್ನುವ ಜೆನ್ ಜೀಗಳು ಎಷ್ಟು ಮಂದಿ ಬೇಕು ಹೇಳಿ?
ಮಹಿಳೆ ವೈರಲ್
ಇವೆಲ್ಲಕ್ಕೂ ಸೆಡ್ಡು ಹೊಡೆದು ಇದೀಗ ಇಲ್ಲೊಬ್ಬ ಮಹಿಳೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಅದಕ್ಕೆ ಕಾರಣ, ನೈಸರ್ಗಿಕವಾಗಿಯೇ ಮಗುವನ್ನು ಹೆರುವ ಸಲುವಾಗಿ ವೈದ್ಯರು, ಆಸ್ಪತ್ರೆಗಳ ಸಹಾಯವಿಲ್ಲದೇ ಸಮುದ್ರ ತೀರಕ್ಕೆ ಹೋಗಿ ಮಗು ಹೆತ್ತಿದ್ದಾಳೆ! ನಿಕರಾಗುವಾದಿಂದ ಬಂದ ಮಹಿಳೆ ಜೋಸಿ ಪ್ಯೂಕರ್ಟ್ ಇಂಥದ್ದೊಂದು ಸಾಹಸಕ್ಕೆ ಕೈಹಾಕಿದ್ದು, ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸುತ್ತಿದೆ.
ಬೋಧಿ ಎಂದು ನಾಮಕರಣ
ಜೋಸಿ ಪ್ಯೂಕರ್ಟ್ ಮತ್ತು ಆಕೆಯ ಗಂಡ ಬೆನ್ನಿ ಕಾರ್ನೆಲಿಯಸ್ ತಮ್ಮ ಮಗ ಬೋಧಿಯನ್ನು ಸ್ವಾಗತಿಸಲು ಬೀಚ್‌ಗೆ ಹೋಗಿದ್ದರು. ಇವರು ಹೆರಿಗೆಗೆ ಅವಶ್ಯಕವಾಗಿರುವ ಮೂಳ ಕಿಟ್ ಅನ್ನು ಮಾತ್ರ ತಮ್ಮ ಜೊತೆಗೆ ತೆಗೆದುಕೊಂಡು ಹೋಗಿದ್ದರು. ಅಲ್ಲಿಯೇ ಹೆರಿಗೆಯಾಗಿದೆ. ಮೂರುವರೆ ಕೆ.ಜಿ. ತೂಕವುಳ್ಳ ಮಗ ಹುಟ್ಟಿದ್ದಾನೆ. ಈ ಬಗ್ಗೆ ಮಾತನಾಡಿರುವ ಮಹಿಳೆ, ನನ್ನ ಮೇಲೆ, ನನ್ನ ದೇಹದ ಮೇಲೆ ನನಗೆ ನಂಬಿಕೆ ಇತ್ತು. ಇದೇ ರೀತಿ ನೈಸರ್ಗಿಕವಾಗಿ ಡೆಲವರಿ ಆಗುವ ಕನಸು ಕಂಡಿದ್ದು, ನನ್ನ ಮನಸ್ಸನ್ನು ಹಾಗೂ ದೇಹವನ್ನು ಇದಕ್ಕಾಗಿ ಸಿದ್ಧಗೊಳಿಸಿದ್ದೆ. ನನ್ನೊಂದಿಗೆ, ಟೆವೆಲ್‌ಗಳು, ಗಾಜಿನ ಪಾತ್ರೆ, ಟಿಶ್ಯೂ ಪೇಪರ್ಸ್ ಮತ್ತು ಕೆಲವು ಬಟ್ಟಲುಗಳನ್ನು ಕೊಂಡೊಯ್ದಿದ್ದೆ. ನನ್ನ ಪತಿ ಹೆರಿಗೆಗೆ ಸಹರಿಸಿದರು. ಹೆರಿಗೆ ನಂತರ, ಅದೇ ನೀರಿನಲ್ಲಿ ನನ್ನನ್ನು ಮತ್ತು ಮಗುವನ್ನು ತೊಳೆದು, ಶುದ್ಧ ಬಟ್ಟೆ ಹಾಕಿದ್ದೆ ಎಂದು ಹೇಳಿಕೊಂಡಿದ್ದಾರೆ.


