ಚೆಂದ ಕಾಣಿಸುವುದಕ್ಕಾಗಿ ನೀವು ಮಾಡಿಕೊಳ್ಳುವ ಮೇಕಪ್​ನಿಂದ ವಿದೇಶದ ಪ್ರವಾಸವನ್ನೂ ತಪ್ಪಿಸಿಕೊಳ್ಬೋದು ಹುಷಾರ್​. ಈ ಯುವತಿಗೆ ಏನಾಯ್ತು ನೋಡಿ!

'ಜೀವನಾದ್ರೂ ಬಿಡ್ತೇನೆ, ಮೇಕಪ್​ ಬಿಡೋಕೆ ಆಗಲ್ಲ' ಎಂದು ಹೇಳುವ ದೊಡ್ಡ ವರ್ಗವೇ ಇಂದು ಇದೆ. ಅದು ಹೆಣ್ಣು-ಗಂಡು ಎಂಬ ಭೇದವಿಲ್ಲದೇ ಬಹುತೇಕರಿಗೆ ಮೇಕಪ್​ ಇಲ್ಲದ ಜೀವನವೇ ಇಲ್ಲ ಎನ್ನುವಂತಾಗಿದೆ. ತಮಗೆ ಅದು ಹೇಗೆ ಕಾಣಿಸುತ್ತದೆ, ತಮ್ಮ ಮುಖಕ್ಕೆ ಮ್ಯಾಚ್​ ಆಗುತ್ತಾ ಇಲ್ವಾ, ಅಥವಾ ತಮಗೆ ಅದರ ಅನಿವಾರ್ಯತೆ ಇದೆಯೇ ಎಂಬುದನ್ನು ಏನನ್ನೂ ನೋಡದೇ ಅವರಿಗೆ ಚೆನ್ನಾಗಿ ಕಾಣಿಸತ್ತೆ, ಅದಕ್ಕಾಗಿ ನನಗೂ ಬೇಕು ಎನ್ನುವ ಮನಸ್ಥಿತಿ ಇದೆ. ಅದರಲ್ಲಿಯೂ ಹೆಚ್ಚಿನ ಮಹಿಳೆಯರಿಗೆ ಇದೊಂದು ರೀತಿಯಲ್ಲಿ ಚಟವಾಗಿಯೂ ಪರಿಣಮಿಸಿದೆ. ವಯಸ್ಸಿನ ಅಂತರವಿಲ್ಲದೇ ಎಲ್ಲ ವಯೋಮಾನದವರಿಗೂ ಮೇಕಪ್​ ಬೇಕಾಗಿದೆ. ದೈವದತ್ತವಾಗಿ ಬಂದಿರುವ ಸುಂದರ ಮುಖವನ್ನು ಇನ್ನೂ ಸುಂದರ ಮಾಡಬೇಕು ಎನ್ನುವ ಮನಸ್ಥಿತಿಯಿಂದಲೂ ಮೇಕಪ್​ ಮಾಡಿಕೊಂಡು ಮುಖವನ್ನು ಹಾಳು ಮಾಡಿಕೊಳ್ಳುವವರೂ ಇದ್ದಾರೆ. ಈ ಮೇಕಪ್​ನಲ್ಲಿ ಇರುವ ರಾಸಾಯನಿಕಗಳಿಂದ ಕ್ಯಾನ್ಸರ್​ನಂಥ ಮಹಾ ರೋಗಗಳಿಗೆ ತುತ್ತಾಗುವುದು ವರದಿಯಾಗುತ್ತಿದ್ದರೂ ಮೇಕಪ್​ ಬೇಕೇ ಬೇಕು ಎನ್ನುವ ಮನಸ್ಥಿತಿ.

ಆದರೆ, ಈ ಮೇಕಪ್​ ಎನ್ನೋದು ಪಾಪ ಇಲ್ಲೊಬ್ಬ ಯುವತಿಗೆ ಭಾರಿ ತೊಂದರೆ ತಂದು ವಿಮಾನದಲ್ಲಿ ಪ್ರಯಾಣ ಬೆಳೆಸಲು ಅವಕಾಶವೇ ಇಲ್ಲದಂತಾಗಿಬಿಟ್ಟಿದೆ! ಕೆಲ ದಿನಗಳ ಹಿಂದೆ ನಟ ಉಪೇಂದ್ರ ಅವರ ಪತ್ನಿ ನಟಿ ಪ್ರಿಯಾಂಕಾ ಉಪೇಂದ್ರ ಅವರು ರಿಯಾಲಿಟಿ ಷೋ ಒಂದರಲ್ಲಿ ತಮಾಷೆ ಮಾಡುತ್ತಾ, ಮೇಕಪ್​ ಇಲ್ಲದಿದ್ದರೆ ನನ್ನ ಫೋನ್​ ರಿಕಗ್ನೈಸ್​ ಮಾಡೋದೇ ಇಲ್ಲ, ಅದಕ್ಕೆ ಉಪೇಂದ್ರ ಯಾವಾಗ್ಲೂ ಒಂದೋ ಮೇಕಪ್​ ಮಾಡಿಕೊಂಡು ಲಾಕ್ ಮಾಡು ಇಲ್ಲವೇ ರಿಯಲ್​ ಮುಖವನ್ನು ಫೋನ್​ಗೆ ತೋರಿಸು. ಅದೊಮ್ಮೆ ಇದೊಮ್ಮೆ ಮಾಡಿ ಫೋನ್​ಗೆ ಕನ್​ಫ್ಯೂಸ್​ ಮಾಡ್ಬೇಡ ಎನ್ನುತ್ತಾರೆ ಎಂದು ತಮಾಷೆ ಮಾಡಿದ್ದರು.

ಆದರೆ ಇಲ್ಲಿ ರಿಯಲ್​ ಆಗಿಯೂ ಹಾಗೆಯೇ ಆಗಿಬಿಟ್ಟಿದೆ. ಯುವತಿಯೊಬ್ಬಳು ಫುಲ್​ ಮೇಕಪ್​ ಮಾಡಿಕೊಂಡು ಏರ್​ಪೋರ್ಟ್​ಗೆ ಹೋಗಿದ್ದಾಳೆ. ಆದರೆ ಆಕೆಯ ಪಾಸ್​ಪೋರ್ಟ್​ನಲ್ಲಿ ಸಾದಾ ಸೀದಾ ಮುಖ ಇರುವ ಕಾರಣ, ಯುವತಿಯ ಮೇಕಪ್​ ಮುಖ ಅದಕ್ಕೆ ಮ್ಯಾಚ್​ ಆಗಲೇ ಇಲ್ಲ. ಚೆನ್ನೈನ ಶಾಂಘೈ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ಯುವತಿಯ ವಧುವಿನ ಮೇಕಪ್ ಮಾಡಿಕೊಂಡಿದ್ದಳು ಎನ್ನಲಾಗಿದೆ. ಅವಳು ಆ ಪಾಸ್​ಪೋರ್ಟ್​ನಲ್ಲಿ ಇರುವುದು ನಾನೇ ಎಂದರೂ ವಿಮಾನ ನಿಲ್ದಾಣದ ಸಿಬ್ಬಂದಿ ಬಿಡಲಿಲ್ಲ. ಕೊನೆಗೆ ಪಾಪ ಈ ಯುವತಿ ತನ್ನ ಮೇಕಪ್​ ಅನ್ನೆಲ್ಲಾ ತೆಗೆದು ಅವಳು ನಾನೇ ಎಂದು ಸಾಬೀತು ಪಡಿಸಬೇಕಾಯಿತು. ಆದ್ದರಿಂದ ಕೊನೆ ಕ್ಷಣದ ತೊಂದರೆ ತಪ್ಪಿಸುವ ಬದಲು ಫೋಟೊ ಹೇಗಿದ್ಯೋ ಹಾಗೆ ಹೋದರೆ ಒಳಿತು ಅಲ್ಲವೆ?

ಇನ್ನು ಮೇಕಪ್​ ವಿಷಯಕ್ಕೆ ಬರುವುದಾದರೆ,, ಬಹುತೇಕ ಮಂದಿ ಲಿಪ್​ಸ್ಟಿಕ್​ ಹಚ್ಚುವುದು ಮಾಮೂಲು. ಆದರೆ ಇತ್ತೀಚಿನ ಅಧ್ಯಯನ ವರದಿಯಲ್ಲಿ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಲಿಪ್​ಸ್ಟಿಕ್​ನಲ್ಲಿ ಕ್ಯಾಡ್ಮಿಯಂನಂತಹ ಲೋಹದ ಅಂಶ ಇರುತ್ತದೆ. ಕ್ಯಾಡ್ಮಿಯಮ್ ಎಂಬುದು ಶ್ವಾಸಕೋಶದ ಕ್ಯಾನ್ಸರ್ ಮತ್ತು ಮೂತ್ರಪಿಂಡದ ಹಾನಿಗೆ ಸಂಬಂಧಿಸಿದ ಕ್ಯಾನ್ಸರ್ ಕಾರಕವಾಗಿದೆ. ಲಿಪ್​ಸ್ಟಿಕ್​ ಹಚ್ಚಿದ ಸಂದರ್ಭದಲ್ಲಿ, ಉಸಿರಾಟವಾಡುವಾಗ ಅಥವಾ ಬಣ್ಣ ಬಳಿದುಕೊಂಡ ತುಟಿಯಿಂದಲೇ ಏನಾದರೂ ತಿನ್ನುವಾಗ ಅದು ಹೊಟ್ಟೆಗೆ ಹೋದ ಸಂದರ್ಭದಲ್ಲಿ, ಈ ಅಂಶ ಕ್ಯಾನ್ಸರ್​ಗೆ ತಿರುಗಬಹುದು ಎಂದು ಅಧ್ಯಯನ ಹೇಳಿದೆ. ಕೆಲವು ಲಿಪ್‌ಸ್ಟಿಕ್‌ಗಳಲ್ಲಿ ಕಂಡುಬರುವ ಕ್ಯಾಡ್ಮಿಯಂನ ಸಾಂದ್ರತೆಯು ಸಾಮಾನ್ಯವಾಗಿ ಕಡಿಮೆ ಪ್ರಮಾಣದಲ್ಲಿ ಇರುತ್ತದೆ, ಆದರೆ ದಿನನಿತ್ಯವೂ ಸ್ವಲ್ಪ ಸ್ವಲ್ಪ ವಿಷ ಹೊಟ್ಟೆಗೆ ಹೋದರೆ ಅದೇ ದೊಡ್ಡದಾಗುತ್ತದೆ ಎಂದು ಇದರಲ್ಲಿ ತಿಳಿಸಲಾಗಿದೆ!

View post on Instagram