ನಾವೆಲ್ಲರೂ ಪ್ರತಿ ದಿನ ದೇವರಿಗಾಗಿ ತಾಜಾ ಹೂವನ್ನು ಬಳಸುತ್ತೇವೆ. ವಿಶೇಷ ಹಬ್ಬಹರಿದಿನಗಳು, ಮದುವೆ ಮುಂತಾದ ಕಾರ್ಯಕ್ರಮಗಳಿದ್ದಾಗಲಂತೂ ಹೂವಿನ ಅಂಗಡಿಯೇ ಮನೆಗೆ ಬಂದಿರುತ್ತದೆ. ಆದರೆ, ಈ ಹೂವಿನ ಆಯಸ್ಸು ಒಂದೇ ದಿನ. ಒಂದು ಚೆಂದದಿ ಬೀಗಿದ ಹೂಗುಳು ಮರುದಿನಕ್ಕೆ ಬಾಡಿ ಕಸದ ಬುಟ್ಟಿ ಸೇರುತ್ತವೆ. ಆದರೆ, ಈ ಹೂವುಗಳನ್ನು ಕೂಡಾ ರಿಸೈಕಲ್ ಮಾಡಬಹುದೆಂಬುದು ನಿಮಗೆ ಗೊತ್ತಾ?

ಮುಂಬೈನ ಡಿಸೈನರ್ ಹೌಸೊಂದು ಹತ್ತಿರದ ಸಿದ್ದಿವಿನಾಯಕ ದೇವಸ್ಥಾನದಿಂದ ಪ್ರತಿದಿನ ತ್ಯಾಜ್ಯವಾಗಿ ಹೊರಬೀಳುವ ಹೂವುಗಳನ್ನೇ ಬಳಸಿಕೊಂಡು ಚೆಂದದ ಡಿಸೈನರ್ ವೇರ್ ಬಟ್ಟೆಗಳನ್ನು ತಯಾರಿಸುತ್ತಿದೆ ಎಂದರೆ ಎಂಥ ಆಶ್ಚರ್ಯವಲ್ಲವೇ? ಅವರಿಂದ ನಾವು ಸ್ವಲ್ಪ ಸ್ಪೂರ್ತಿ ಪಡೆದು ಮನೆಯಲ್ಲಿಯೇ ಈ ಫ್ಲೋರಲ್ ವೇಸ್ಟನ್ನು ಹೇಗೆ ಮರುಬಳಕೆ ಮಾಡಬಹುದೆಂದು ನೋಡೋಣ.

Fact Check: 400 ವರ್ಷಕ್ಕೊಮ್ಮೆ ಅರಳುವ ಅಪರೂಪದ ಹೂವು!

ಏರ್ ಫ್ರೆಶನರ್

ಒಣಗಿದ ಹೂವನ್ನು ಬಿಸಿಲಲ್ಲಿಟ್ಟು ಮತ್ತೆರಡು ದಿನ ಚೆನ್ನಾಗಿ ಒಣಗಿಸಿ. ಇದನ್ನು ನಿಮ್ಮ ಫೇವರೇಟ್ ಸ್ಪೈಸ್‌ನೊಂದಿಗೆ ಮಿಕ್ಸ್ ಮಾಡಿ. ಅಂದರೆ ದಾಲ್ಚೀನಿ, ಸ್ಟಾರ್ ಅನೈಸ್, ಲವಂಗ, ಒಣಗಿಸಿದ ಸಿಟ್ರಸ್ ಪೀಲ್ ಮುಂತಾದ ಮಸಾಲೆ ಪದಾರ್ಥಗಳೊಂದಿಗೆ ಇದನ್ನು ಮಿಕ್ಸ್ ಮಾಡಿ ಜಾರ್‌ನಲ್ಲಿ ಹಾಕಿಡಿ. ಇದಕ್ಕೆ ಅರೋಮಾಥೆರಪಿಗೆ ಬಳಸುವ ಪರಿಮಳದ ಎಣ್ಣೆಯ ಅಥವಾ ನಿಮ್ಮ ಪರ್ಫ್ಯೂಮ್‌ನ ಒಂದೆರಡು ಹನಿಗಳನ್ನು ಹಾಕಿ. ನಂತರ ಮುಚ್ಚಳ ಹಾಕಿಡಿ. 10 ದಿನಗಳ ಬಳಿಕ ನಿಮ್ಮ ಏರ್ ಫ್ರೆಶನರ್ ರೆಡಿ. ಅಥಿತಿಗಳು ಬರುವ ದಿವಸ ನೋಡಿ ಮನೆಯೆಲ್ಲ ಸ್ಪ್ರೇ ಮಾಡಿ. 

ನೆಲ ಒರೆಸಲು

ಅರ್ಧ ಕಪ್ ಒಣಗಿದ ಅಥವಾ ಕೊಳೆತ ಹೂವುಗಳನ್ನು 1 ಕಪ್ ಬೇಕಿಂಗ್ ಸೋಡಾಕ್ಕೆ ಮಿಕ್ಸ್ ಮಾಡಿ. ಇದಕ್ಕೆ 1 ಚಮಚ ಉಪ್ಪು ಸೇರಿಸಿ. ಈಗ ಪರಿಮಳಯುಕ್ತ ಫ್ಲೋರ್ ಮಾಪಿಂಗ್ ಸೊಲ್ಯೂಶನ್ ಸಿದ್ಧವಾಯಿತು. ಪ್ರತಿದಿನ ನೆಲ ಒರೆಸುವ ನೀರಿಗೆ ಇದನ್ನು ಬೆರೆಸಿದರೆ ಬೇರೆ ರೂಮ್ ಫ್ರೆಶನರ್ ಅಗತ್ಯವೇ ಬೀಳುವುದಿಲ್ಲ.

ಚೆಂಡು ಹೂವು ಬೆಳೆದು ಲಕ್ಷ ಲಕ್ಷ ಎಣಿಸುತ್ತಿರುವ ಚುಂಚನೂರಿನ ಮೇಷ್ಟ್ರು!

ಬಟ್ಟೆಗೆ ನೈಸರ್ಗಿಕ ಬಣ್ಣ

ನಿಮ್ಮ ಬಳಿ ಯಾವುದಾದರೂ ತಿಳಿ ಬಣ್ಣದ ಸ್ಕಾರ್ಫ್ ಇದ್ದರೆ ಅದಕ್ಕೆ ಹೂವಿನ ನೈಸರ್ಗಿಕ ಬಣ್ಣವನ್ನು ಸೇರಿಸಿ, ಎಕೋಫ್ರೆಂಡ್ಲಿ ವಿನ್ಯಾಸದ ಸ್ಕಾರ್ಫ್ ಮಾಡಿಕೊಳ್ಳಬಹುದು.  ಬಳಸಿದ ಹೂವುಗಳನ್ನು ಎರಡು ದಿನಗಳ ಕಾಲ ಚೆನ್ನಾಗಿ ಒಣಗಿಸಿ. ನೀವು ಬಣ್ಣ ಹಾಕಬೇಕೆಂದಿರು ಬಟ್ಟೆಯನ್ನು ಕೆಲ ನಿಮಿಷಗಳ ಕಾಲ ಬಿಸಿನೀರಿನಲ್ಲಿ ನೆನೆಸಿಡಿ. ಇದನ್ನು ಹಿಂಡಿ ನೆಲದ ಮೇಲೆ ಹರಡಿಕೊಳ್ಳಿ. ಇಡೀ ಬಟ್ಟೆಯ ತುಂಬಾ ಹೂವನ್ನು ಹರಡಿ. ನಂತರ ಬಟ್ಟೆಯನ್ನು ಹಲವು ಮಡಕೆ ಮಡಚಿರಿ. ಈಗ ಮಡಚಿದ ಬಟ್ಟೆಗೆ ಪ್ರತಿ ಸೈಡ್‌ಗೆ 15 ನಿಮಿಷಗಳ ಕಾಲ ಸ್ಟೀಮ್ ಮಾಡಿ. ಇದರ ಬಳಿಕ ಬಟ್ಟೆಯನ್ನು ಬಿಚ್ಚಿ ಹೂವಿನ ದಳಗಳು ತಾವಾಗಿಯೇ ಉದುರುವವರೆಗೆ ಕಾಯಿರಿ. ಬಟ್ಟೆಯನ್ನು ಒಣಗಿಸಿ ನೋಡಿ. ಸುಂದರವಾದ ಎಕೋ-ಡೈ ಹೊಂದಿದ ಸ್ಕಾರ್ಫ್ ನಿಮ್ಮದಾಗಿರುತ್ತದೆ. 

ಸೋಪ್

ಹೋಲಿ ವೇಸ್ಟ್ ಎಂಬ ಸ್ಟಾರ್ಟಪ್ ಒಂದು ಹೀಗೆ ದೇವಸ್ಥಾನಗಳಲ್ಲಿ ಬಳಸಿದ ಬಳಿಕ ತ್ಯಾಜ್ಯವಾಗುವ ಹೂವುಗಳನ್ನೇ ತಂದು ಸ್ಥಳೀಯ ಬಡ ಹೆಂಗಸರ ಸಹಾಯ ಪಡೆದು ಸುಗಂಧಯುಕ್ತ ಸೋಪ್‌ಗಳನ್ನು ತಯಾರಿಸುತ್ತಿದೆ. ಈ ಸೋಪ್‌ಗಳು ಸಂಪೂರ್ಣ ಕೆಮಿಕಲ್ ರಹಿತ ಎಂಬುದರ ಜೊತೆಗೆ, ಹೂವಿನ ತ್ಯಾಜ್ಯವೂ ಸದ್ಭಳಕೆಯಾಯಿತು. ಸ್ಥಳೀಯ ಹೆಂಗಸರ ಸಬಲೀಕರಣವೂ ಆಯಿತು. ಅಷ್ಟೇ ಅಲ್ಲ, ಈ ಸೋಪ್‌ಗಳಿಗೆ ಬಳಸಿದ ಸೀರೆಯನ್ನೇ ಸಣ್ಣ ಸಣ್ಣದಾಗಿ ಕತ್ತರಿಸಿ ಪ್ಯಾಕೆಟ್ ಮಾಡಲಾಗುತ್ತಿದೆ. ಪ್ರತೀ ಸೋಪಿನ ಜೊತೆ ಸಂದೇಶವಿರುವ ಸಣ್ಣ ಚೀಟಿಯೂ ಇಡುತ್ತಾರೆ. ಎಷ್ಟು ಒಳ್ಳೆಯ ಐಡಿಯಾ ಅಲ್ಲವೇ? ಕಡಿಮೆ ಖರ್ಚಿನಲ್ಲಿ ಉದ್ಯಮ ನಡೆಸಿದಂತಾಯಿತು. ಇದನ್ನೇ ನಾವು ಮನೆಯಲ್ಲೇ ಸಣ್ಣದಾಗಿ ಪ್ರಯೋಗಿಸಬಹುದು. ಸೋಪ್ ಮಾಡುವ ಹವ್ಯಾಸವಿರುವವರು ಈ ಬಳಸಿದ ಹೂಗಳನ್ನು ಬಳಸಿಕೊಳ್ಳಬಹುದು.

ಊದುಬತ್ತಿ

ಹೂವಿನ ಪರಿಮಳವನ್ನು ಚೆನ್ನಾಗಿ ಬಳಸಿಕೊಂಡು ಅಗರಬತ್ತಿ ಕೂಡಾ ತಯಾರಿಸಬಹುದು. ಇವುಗಳ ಹೊಗೆ ಕೆಮಿಕಲ್‌ರಹಿತವಾಗಿರುವ ಲಾಭವೂ ಸಿಕ್ಕುತ್ತದೆ. ಕಲ್ಲಿದ್ದಲು ಹಾಗೂ ಹೂವನ್ನು ಬಳಸಿ ಅಗರಬತ್ತಿ ತಯಾರಿಸಿದರೆ ಹಣದ ಉಳಿತಾಯ ಜೊತೆಗೆ ಎಕೋಫ್ರೆಂಡ್ಲಿ ಕೂಡಾ. ನಿಮ್ಮ ಮನೆಗೆ ಬೇಕಾದಷ್ಟು ಅಗರಬತ್ತಿಯನ್ನು ನೀವೇ ತಯಾರಿಸಿಕೊಳ್ಳಬಹುದು. 

ಪಾಳು ಭೂಮಿಯಲ್ಲಿ ಹೂವು ಬೆಳೆದ ಲಾಯರ್‌!

ಗೊಬ್ಬರ

ಹೂವುಗಳನ್ನು ಸಗಣಿ ಹಾಗೂ ಎರೆಹುಳ ಬಳಸಿ ಗೊಬ್ಬರಕ್ಕೆ ಬಳಕೆ ಮಾಡಬಹುದು. 30-40  ದಿನಗಳಲ್ಲಿ ಅತ್ಯುತ್ತಮ ಗುಣಮಟ್ಟದ ಗೊಬ್ಬರ ದೊರಕುತ್ತದೆ. ಮನೆಯ ಗಿಡಗಳಿಗೆ ಇದನ್ನೇ ಬಳಸುವ ಜೊತೆಗೆ, ಮಾರಾಟವನ್ನೂ ಮಾಡಬಹುದು. 

ಈ ಕೆಲಸವನ್ನೇ ಸಾರ್ವಜನಿಕ ಸಂಸ್ಥೆಗಳು, ಸ್ಟಾರ್ಟಪ್‌ಗಳು ದೊಡ್ಡ ಮಟ್ಟದಲ್ಲಿ ಆರಂಭಿಸಿದಲ್ಲಿ ವೇಸ್ಟ್ ಮ್ಯಾನೇಜ್‌ಮೆಂಟ್ ಜೊತೆಗೆ ಹಲವರಿಗೆ ಕೆಲಸವೂ ದೊರೆಯುತ್ತದೆ. ಸುಲಭವಾಗಿ ಲಾಭವನ್ನೂ ಮಾಡಿಕೊಳ್ಳಬಹುದು.