ವಿ. ಬಾಲಕೃಷ್ಣ ಶಿರ್ವ

ರಾಯಚೂರಿನಿಂದ 8 ಕಿ.ಮೀ. ಪಯಣಿಸಿದರೆ ‘ವೆಡ್ಲೂರು’ ಎಂಬ ಕುಗ್ರಾಮವಿದೆ. ಇಲ್ಲಿ ಸೂಗ ರೆಡ್ಡಿ ಅವರಿಗೆ 15 ಎಕ್ರೆ ಜಮೀನಿದೆ. ಇದರಲ್ಲಿ 2 ಎಕ್ರೆ ಕಲ್ಮಣ್ಣು ಅಥವಾ ಜೆಟ್ಟಿಮಣ್ಣಿನಿಂದ ಆವೃತ್ತವಾಗಿದ್ದು ಏನನ್ನೂ ಬೆಳೆಯಿಸದೆ ಖಾಲಿ ಬಿಟ್ಟಿದ್ದರು. ವೃತ್ತಿಯಲ್ಲಿ ಲಾಯರ್‌ ಆಗಿರುವ ಸೂಗ ರೆಡ್ಡಿಯವರಿಗೆ ಈ ಜಾಗದ್ದೇ ಚಿಂತೆ. ಸುಮ್ಮನೆ ಎರಡೆಕರೆ ಹಾಳು ಸುರಿಯುತ್ತಿದೆಯಲ್ಲಾ ಅಂತ. ಅದೇ ಹೊತ್ತಿಗೆ ಈ ಜಾಗದಲ್ಲಿ ಸುಗಂಧ ರಾಜ ಹೂವಿನ ಕೃಷಿ ಯಾಕೆ ಮಾಡಬಾರದು ಎಂಬ ಯೋಚನೆಯೂ ಬಂತು. ಬಳಿಕ ಈ ಕುರಿತು ತೋಟಗಾರಿಕಾ ಇಲಾಖೆಯ ವಿಜ್ಞಾನಿಗಳ ಜೊತೆಗೆ ಚರ್ಚಿಸಿದರು. ಅವರ ಸಲಹೆಯಂತೆ ಬೆಳೆ ಬೆಳೆಯಲು ನಿರ್ಧರಿಸಿದರು.

ಬೇಕಾಬಿಟ್ಟಿ ನೆಟ್ಟ ಗಿಡದಿಂದ ವಾರಕ್ಕೆ 2000 ರು. ಆದಾಯ

ಸಾವಯವ ಮಾದರಿ

ಬರಡಾಗಿದ್ದ ಜಾಗವನ್ನು ಉತ್ತು ಹದ ಮಾಡಲಾಯ್ತು. ಬಳಿಕ 2 ಅಡಿ ಆಳ, 2 ಅಡಿ ಅಗಲದ ಗುಂಡಿ ತೋಡಲಾಯ್ತು. ಗುಂಡಿಯ ಅರ್ಧದಷ್ಟಕ್ಕೆ ಸೆಗಣಿ, ಮಣ್ಣು ಮಿಶ್ರಣ ಮಾಡಿ ಸುರಿದರು. ಒಂದು ಗುಂಡಿಯಿಂದ ಇನ್ನೊಂದಕ್ಕೆ 2 ಅಡಿ ಅಂತರ. ಬಳಿಕ ಈ ಗುಂಡಿಗಳಲ್ಲಿ ಗುಲ್ಬರ್ಗಾ, ಕಮಲಾಪುರದ ರೈತರಿಂದ ತರಿಸಿದ ಸುಗಂಧರಾಜ ಪುಷ್ಪದ ಗೆಡ್ಡೆ ನಾಟಿ ಮಾಡಲಾಯು. ಇದನ್ನು ಮಣ್ಣು, ಸಾವಯವ ಗೊಬ್ಬರದಿಂದ ಮುಚ್ಚಿ, ತುಂತುರು ನೀರಾವರಿ ವ್ಯವಸ್ಥೆ ಮಾಡಿದರು. ನಾಟಿ ಮಾಡಿದ 1 ವಾರದ ನಂತರ ಟಿಸಿಲೊಡೆದು ತುದಿ ಚಿಗುರತೊಡಗಿದಾಗ ರೆಡ್ಡಿ ಅವರ ಮುಖದಲ್ಲಿ ನಗೆಯರಳಿತು.

ಕಂಗೆಡಿಸಿದ ಕಾಯಿಲೆ

ಇವರ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ನಳನಳಿಸುತ್ತಿದ್ದ ಚಿಗುರು ಕೆಲವೇ ದಿನದಲ್ಲಿ ಗೆಡ್ಡೆ ಸಮೇತ ಒಣಗಲಾರಂಭಿಸಿತು. ದಿಗ್ಭ್ರಮೆಯಿಂದ ಕೃಷಿ ಇಲಾಖೆಯನ್ನು ಸಂಪರ್ಕಿಸಿದರು. ಅಲ್ಲಿಂದ ಆಶಾದಾಯಕ ಪ್ರತಿಕ್ರಿಯೆ ಬರಲಿಲ್ಲ. ಕೊನೆಗೆ ನಿರಾಸೆಯಿಂದ ಕೈ ಚೆಲ್ಲಿ ಕುಳಿತಿದ್ದರು.

ಕಬ್ಬಿಗೆ ಆಗದಿರಲ್ಲಿ ಕಬ್ಬಿಣದ ಕೊರತೆ; ಈ ರೀತಿ ನಿಗವಹಿಸಿ!

ಯೂಟ್ಯೂಬ್‌ ವೀಡಿಯೋದಿಂದ ಬೆಳೆ ಉಳಿಯಿತು

ಮೊಬೈಲ್‌ನಲ್ಲಿ ಸುಮ್ಮನೆ ಯಾವುದೋ ವೀಡಿಯೋ ನೋಡುತ್ತಿದ್ದಾಗ ಅಚಾನಕ್‌ ಆಗಿ ಕಾಣಿಸಿದ್ದು ಸುಗಂಧ ರಾಜ ಹೂವಿಗೆ ಬರುವ ಕಾಯಿಲೆ, ನಿವಾರಣೋಪಾಯದ ಕುರಿತ ವೀಡಿಯೋ. ಅದನ್ನು ಎರಡೆರಡು ಬಾರಿ ನೋಡಿದ್ದೇ ಸೂಗರೆಡ್ಡಿಯವರ ಸುಗಂಧ ರಾಜ ಕೃಷಿಯ ಆಸೆ ಮತ್ತೆ ಚಿಗುರೊಡೆಯಿತು. ಆ ವೀಡಿಯೋದಲ್ಲಿರುವಂತೆ ಪೇಸ್ಟ್‌ ಮಾದರಿಯ ಔಷಧಿಯನ್ನು ಕೊಂಡು, ಅದನ್ನು 200 ಲೀಟರ್‌ ನೀರಿನಲ್ಲಿ ಮಿಶ್ರಣ ಮಾಡಿ, ಬೆಲ್ಲ ಬೆರೆಸಿ 1 ವಾರ ದಿನಕ್ಕೆರಡು ಬಾರಿ ಕದಡಿಸುತ್ತಾ ಇದ್ದು, ಈ ದ್ರವವನ್ನು ವಾರಕ್ಕೆರಡು ಬಾರಿ ಒಣಗಿದ ಗಡ್ಡೆಗಳಿಗೆ ಸಿಂಪಡಿಸಲಾಯ್ತು. ಅಚ್ಚರಿ ಎಂಬಂತೆ ಗಿಡ ಹಚ್ಚ ಹಸಿರಾಗಿ ಬೆಳೆಯತೊಡಗಿತು.

ಶ್ರೀಗಂಧ ಬೀಜ ಮಾರಿದ್ರೆ ಎಕ್ರೆಗೆ ಎರಡು ಲಕ್ಷ ಆದಾಯ!

ಮೂರು ತಿಂಗಳಲ್ಲೇ ಫಸಲು

ಹೀಗೆ ಚಿಗುರೊಡೆದು ಗಿಡವಾದ 3 ತಿಂಗಳಲ್ಲೇ ಪುಷ್ಪ ಅರಳತೊಡಗಿತು. ಇಳುವರಿ ಆರಂಭವಾದ ತಿಂಗಳಲ್ಲಿ ತಾವು ನಾಟಿ ಮಾಡಿದ 30 ಗುಂಟೆ ಜಾಗದಲ್ಲಿ 3 ರಿಂದ 4 ಕೆ.ಜಿ. ಕೊಯ್ಲು ಮಾಡಿದ್ದನ್ನು ಹೇಳಿಕೊಳ್ಳುತ್ತಾರೆ. 6 ತಿಂಗಳ ನಂತರ ದಿನಕ್ಕೆ 6 ರಿಂದ 8 ಕೆ.ಜಿ. ಯಷ್ಟುಸುಗಂಧ ರಾಜ ಹೂ ಪಡೆಯುತ್ತಿದ್ದಾರೆ. ಕೆ.ಜಿ.ಗೆ 80ರೂ ನಂತೆ ಮಾರಿದ್ದಾರೆ.

ಇದರಲ್ಲಿ ಹಾರ ನಿರ್ಮಿಸಿ ದುಪ್ಪಟ್ಟು ಲಾಭಗಳಿಸುತ್ತಾರೆ ಎಂಬುದು ಸೂಗ ರೆಡ್ಡಿಯವರ ಹೇಳಿಕೆ. ಹಾಗಾಗಿ ಎಷ್ಟಿದ್ದರೂ ನಮಗೆ ಕೊಡಿ, ನಾವು ಕೊಂಡುಕೊಳ್ಲುತ್ತೇವೆ ಎನ್ನುತ್ತಾರೆ ವ್ಯಾಪಾರಿಗಳು. ಸೂಗ ರೆಡ್ಡಿಯವರ ಪ್ರಕಾರ ಇತರ ಹೂಗಳು ಬೇಗನೆ ಬಾಡಿ ಹೋಗುತ್ತವೆ ಆದರೆ ಸುಗಂಧ ರಾಜ ಬಹಳ ಕಾಲ ತಾಜಾವಾಗಿರುತ್ತದೆ. ಜೊತೆಗೆ ತೋಟಕ್ಕೆ ದನ, ಕುರಿ ನುಗ್ಗಿದರೂ ಸುಗಂಧ ರಾಜ ಹೂವನ್ನು ಮುಟ್ಟುವುದಿಲ್ಲ ಎಂಬುದು ಅಚ್ಚರಿಯಾದರೂ ವಾಸ್ತವ. ಸುಗಂಧ ರಾಜ ಗೆಡ್ಡೆ ನಾಟಿ ಮಾಡಿ ಉಳಿದ ಜಾಗದಲ್ಲಿ ನುಗ್ಗೆ ಗಿಡ, ಸೀತಾಫಲ ನಾಟಿ ಮಾಡಿದ್ದಾರೆ. ಸುಗಂಧ ರಾಜ ಗಿಡದ ನಡುವೆ ಮಲ್ಲಿಗೆ ನೆಡುವ ಯೋಜನೆ ಇದೆ. ಹೆಚ್ಚಿನ ಮಾಹಿತಿಗೆ ಸೂಗ ರೆಡ್ಡಿಯವರ ಮೊಬೈಲ್‌ ನಂ. 9902115591 ಸಂಪರ್ಕಿಸಿ.