ರೇಷ್ಮೆ ಬೆಳೆಯಿಂದ 5.60ಲಕ್ಷ ಎಣಿಸುತ್ತಿರುವ ಬಳ್ಳಾರಿ ಕೊಟ್ರಮ್ಮ!
ಆರ್ಥಿಕ ಪರಿಸ್ಥತಿ ಹದಗೆಟ್ಟಿತ್ತು. ಜೊತೆಗಿದ್ದ ಪತಿ ಅಸುನೀಗಿದ್ದರು. ಪ್ರಾಯವೂ ಮಾಗುತ್ತಾ ಬಂದಿತ್ತು. ಇಂಥಾ ಸಮಯದಲ್ಲಿ ತಾನು ರೇಷ್ಮೆ ಕೃಷಿ ಮಾಡಿಯೇ ತೀರುತ್ತೇನೆ ಎಂಬ ಛಲಕ್ಕೆ ಬಿದ್ದ ಹೆಣ್ಮಗಳ ಹೆಸರು ಕೊಟ್ರಮ್ಮ. ಈಗ ರೇಷ್ಮೆ ಕೃಷಿ ಬಗ್ಗೆ ನಿರರ್ಗಳವಾಗಿ ಮಾತನಾಡುವ, ಇದರಿಂದಲೇ ಲಕ್ಷ ಲಕ್ಷ ಸಂಪಾದಿಸಿ ನೆಮ್ಮದಿಯ ನಾಳೆಗಳನ್ನು ಕಾಣುತ್ತಿರುವ ಕೊಟ್ರಮ್ಮ ಕೃಷಿಯ ಹಾದಿ ಇಲ್ಲಿದೆ ...
ಜಿ. ಚಂದ್ರಕಾಂತ ಕಲಬುರಗಿ
ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಶೀಗೇನಹಳ್ಳಿಯ ಕೃಷಿಕ ಮಹಿಳೆ ಕೆ.ಕೊಟ್ರಮ್ಮ ಸಂಗಪ್ಪ. ಕಳೆದ 13 ವರ್ಷಗಳಿಂದ 3 ಎಕರೆಯಲ್ಲಿ ವರ್ಷಕ್ಕೆ ಹತ್ತು ರೇಷ್ಮೆ ಬೆಳೆ ಬೆಳೆದು ಲಕ್ಷಗಟ್ಟಲೆ ದುಡಿಯುತ್ತಿದ್ದಾರೆ. ಒಂದೂವರೆ ಎಕರೆಯ ಕೃಷಿಭೂಮಿಯನ್ನು 2 ವಿಭಾಗಗಳಾಗಿ ವಿಂಗಡಿಸಿ, ಪ್ರತಿ ಬೆಳೆಗೆ 300 ಮೊಟ್ಟೆಗಳನ್ನು ಚಾಕಿ ಮಾಡಿ ವಾರ್ಷಿಕ ಸರಾಸರಿ ಪ್ರತಿ ನೂರು ಮೊಟ್ಟೆಯಲ್ಲಿ 80ಕೆ.ಜಿ. ರೇಷ್ಮೆಗೂಡನ್ನು ಉತ್ಪಾದಿಸಿ ಮಾದರಿ ರೇಷ್ಮೆ ಬೆಳೆಗಾರರಾಗಿದ್ದಾರೆ.
ರೇಷ್ಮೆ ಬೆಳೆದು ಬದುಕು ಬದಲಿಸಿಕೊಂಡರು ಒಟ್ಟು ಆರೂವರೆ ಎಕರೆ ಜಮೀನಿದ್ದರೂ ಕೊಟ್ರಮ್ಮ ಅವರ ಆರ್ಥಿಕ ಸ್ಥಿತಿ ಆರಂಭದಲ್ಲಿ ಸರಿಯಾಗಿರಲಿಲ್ಲ. ಆ ಹೊತ್ತಿಗೆ ಸಂಬಂಧಿಕರಲ್ಲಿ ಬೆಳೆಯುತ್ತಿದ್ದ ರೇಷ್ಮೆ ಕಣ್ಣಿಗೆ ಬಿತ್ತು. ತಾವೂ ರೇಷ್ಮೆ ಬೆಳೆಯುವ ದೃಢಸಂಕಲ್ಪ ಮಾಡಿದರು. ರೇಷ್ಮೆ ಇಲಾಖೆಯಿಂದ ಆಯೋಜಿಸಿದ ತರಬೇತಿಯಲ್ಲಿ ಭಾಗವಹಿಸಿ ಸಂಪೂರ್ಣ ವಿವರ ಪಡೆದರು. ಮಕ್ಕಳ ಸಹಕಾರದೊಂದಿಗೆ ರೇಷ್ಮೆ ಇಲಾಖೆಯ ಮಾರ್ಗದರ್ಶನದಲ್ಲಿ ಮೂರು ಎಕರೆಯಲ್ಲಿ ವ್ಹಿ-1 ತಳಿಯ ಹಿಪ್ಪುನೇರಳೆ ನಾಟಿ ಮಾಡಿದರು. 4*4 ಅಡಿ ಅಂತರದಲ್ಲಿ ಏಕಕಾಂಡ ಪದ್ಥತಿ ಮತ್ತು ನೀರಾವರಿ ಅಳವಡಿಸಿಕೊಂಡರು. ವಾರ್ಷಿಕ 30 ಟ್ರ್ಯಾಕ್ಟರ್ ಕೆರೆಹೂಳು ಹಾಗೂ 10 ಕೊಟ್ಟಿಗೆ ಗೊಬ್ಬರ ಹಾಕಿ ಗುಣಮಟ್ಟದ ಹಿಪ್ಪುನೇರಳೆಯಿಂದ ರೇಷ್ಮೆಹುಳುಗಳನ್ನು ಸಾಕತೊಡಗಿದರು. ಮುಂದಿನ ಹಂತವಾಗಿ ರೇಷ್ಮೆ ಹುಳು ಸಾಕಣೆಯ ಮನೆ ನಿರ್ಮಾಣವಾಯ್ತು. 57*21ಅಡಿ ಉದ್ದಗಲದ ಈ ಮನೆಗೆ 5 ಲಕ್ಷ ರು. ಖರ್ಚಾಗಿದೆ. ಇದರ ಬದಿಗಳಲ್ಲಿ 7 ರಂತೆ 14 ಅಟ್ಟ ನಿರ್ಮಿಸಿದ್ದಾರೆ.
ಮೆಕ್ಕೆಜೋಳದಲ್ಲಿ ಹೋದ ಹಣ ತರಕಾರಿಯಲ್ಲಿ ಬಂತು!
ರೇಷ್ಮೆ ಬಗ್ಗೆ ನಿಖರ ಮಾಹಿತಿ ಪಡೆದೇ ಕೃಷಿಗೆ ಮುಂದಾದ ಕಾರಣ ಮೊದಲ ವರ್ಷವೇ 1.27 ಲಕ್ಷ ರು. ಆದಾಯ ಬಂತು. ಆ ವರ್ಷ 359 ಕೆ.ಜಿಗಳಷ್ಟು ರೇಷ್ಮೆಗೂಡು ಉತ್ಪಾದಿಸಿ ದ್ದರು. 2017-18ನೇ ಸಾಲಿನಲ್ಲಿ 1052ಕೆ.ಜಿ. ರೇಷ್ಮೆಗೂಡಿ ನಿಂದ ನಿವ್ವಳ 5.60 ಲಕ್ಷ ರೂ. ಮತ್ತು 2018-19ನೇ ಸಾಲಿನಲ್ಲಿ 786 ಕೆ.ಜಿ. ರೇಷ್ಮೆಗೂಡಿನಿಂದ ನಿವ್ವಳ 3.09 ಲಕ್ಷ ರೂ. ಲಾಭ ಪಡೆದಿದ್ದು ಮತ್ತೊಂದು ದಾಝಲೆ.
ತೋಟ ವಿಸ್ತರಣೆ
ಪ್ರಾರಂಭದಿಂದಲೂ ರಾಮನಗರದಲ್ಲಿ ರೇಷ್ಮಗೂಡನ್ನು ಮಾರಾಟ ಮಾಡುತ್ತಿದ್ದಾರೆ. ಪ್ರತಿ ಕೆ.ಜಿ. ರೇಷ್ಮೆಗೆ ಸರಾಸರಿ 400ರೂ. ಪಡೆದಿದ್ದಾರೆ. ಕಳೆದ ಸೆಪ್ಟಂಬರ್‌ನಲ್ಲಿ 250 ಮೊಟ್ಟೆಗೆ ಸರಾಸರಿ 88 ಕೆ.ಜಿ.ಯಂತೆ 220 ಕೆ.ಜಿ. ರೇಷ್ಮೆಗೂಡು ಉತ್ಪಾದಿಸಿ ಪ್ರತಿ ಕೆ.ಜಿ.ಗೆ 460ರೂ. ದರದಂತೆ 1.01 ಲಕ್ಷ ರೂ. ಪಡೆದಿದ್ದಾರೆ. ರೇಷ್ಮೆಯ ಆದಾಯದಿಂದಲೇ ತೋಟದ ಹತ್ತಿರವಿರುವ 15 ಎಕರೆ ಭೂಮಿ ಖರೀದಿಸಿ ತುಂಗಭದ್ರಾ ನದಿ ನೀರಿನಿಂದ 10 ಎಕರೆಯಲ್ಲಿ ಶೇಂಗಾ ಮತ್ತು 5 ಎಕರೆಯಲ್ಲಿ ಬತ್ತ ಬೆಳೆಯುತ್ತಿದ್ದಾರೆ.
ರೈತ ಮಹಿಳೆಗೆ ಭರಪೂರ ಸಮ್ಮಾನ
2017-18ನೇ ಸಾಲಿನ ರೇಷ್ಮೆ ಇಲಾಖೆಯ ರಾಜ್ಯ ಮಟ್ಟದ ಕೃಷಿ ಸಾಧಕಿಯರಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಚಿತ್ರದುರ್ಗಜಿಲ್ಲೆ ಮುತ್ತಿಗಾರಹಳ್ಳಿಯ ಸಿ.ವಿ.ವೀರಮ್ಮ ಪ್ರಶಸ್ತಿ, ಮಂಡ್ಯ ಜಿಲ್ಲೆಯ ಹೆಮ್ಮಿಗೆಯ ದೇವಮ್ಮ ನೆನಪಿನ ಬಹುಮಾನ ಗಳಿಸಿದ್ದಾರೆ. ಕೊಟ್ರಮ್ಮ ಅವರ ಕಿರಿಯ ಮಗ ಕೃಷ್ಣ 2014ರಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಸಂಪನ್ಮೂಲ ಬೆಳೆಗಾರರೆಂದು ವಿಶೇಷ ತರಬೇತಿ ಪಡೆದಿದ್ದು, ವಿವಿಧ ರೈತರ ತರಬೇತಿ ಕಾರ್ಯಕ್ರಮಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಹಾಗೂ ತರಬೇತಿದಾರರಾಗಿ ಭಾಗವಹಿಸುತ್ತಿದ್ದಾರೆ. ಕೃಷ್ಣ ಅವರ ಮೊಬೈಲ್ ಸಂಖ್ಯೆ 8722126607.
ಈರುಳ್ಳಿಯಿಂದ ಕಮರಿದ ಬದುಕು ಬೀನ್ಸ್‌ನಿಂದ ಅರಳಿತು!