ಕಾಂಗ್ರೆಸ್ಸಿಗರೇಕೆ ಮೋದಿ ಅಪ್ಪನ ಬಗ್ಗೆ ಕೇಳ್ತಿದ್ದಾರೆ ಅಂದ್ರೆ...
ಪ್ರಸಿದ್ಧವಲ್ಲದ ಅಪ್ಪ-ಅಮ್ಮನ ಮಗನಾದ ಮೋದಿ ಹಾಗೂ ಅಪ್ಪ-ಅಮ್ಮನಿಂದಲೇ ಪ್ರಸಿದ್ಧನಾಗಿರುವ ಮಗನ ಮಧ್ಯೆ ಮುಂದಿನ ಚುನಾವಣೆ ನಡೆಯಬೇಕು ಎಂದು ಕಾಂಗ್ರೆಸ್ ಪಕ್ಷ ಬಯಸಿದರೆ ಬಿಜೆಪಿ ಖುಷಿಯಿಂದ ಆ ಸವಾಲು ಸ್ವೀಕರಿಸುತ್ತದೆ.
ಪ್ರಧಾನಿ ಮೋದಿಯವರ ತಾಯಿಯ ವಯಸ್ಸಿನ ಬಗ್ಗೆ ಆಡಿಕೊಳ್ಳುತ್ತಿದ್ದ ಕಾಂಗ್ರೆಸ್ ಪಕ್ಷದವರೀಗ ಮೋದಿಯವರ ತಂದೆ ಯಾರೆಂದು ಕೇಳುವ ಮೂಲಕ ಸೆಲ್ಫ್ ಗೋಲ್ ಹೊಡೆದಿದ್ದಾರೆ. ಕೊನೆಗೂ ತಮಗೆ ಅಪ್ಪ-ಅಮ್ಮಂದಿರು ಮುಖ್ಯವಾಗಿರುವ ವಂಶಪಾರಂಪರ್ಯ ರಾಜಕಾರಣವೇ ಬೇಕು ಎಂದು ಅವರು ಕೇಳುತ್ತಿದ್ದಾರೆ. ಅವರಿಗೆ ಚೆನ್ನಾಗಿ ಕೆಲಸ ಮಾಡುವ ಪ್ರಧಾನಿಗಿಂತ ದೊಡ್ಡ ಸರ್‌ನೇಮ್‌ನ ಬ್ರ್ಯಾಂಡ್ ಹೊಂದಿರುವ ರಾಜಕಾರಣಿಗಳ ಮಕ್ಕಳೇ ಬೇಕು ಎಂಬುದು ಹೊಸ ವಿಷಯವೇನಲ್ಲ.
ಕಾಂಗ್ರೆಸಿಗರ ಈ ತರ್ಕ ಕೇಳಿದ ಮೇಲೆ ನಾನು ನನ್ನ ಸ್ನೇಹಿತರ ಬಳಿ ಮೂರು ಪ್ರಶ್ನೆ ಕೇಳಿದೆ.
1. ಗಾಂಧೀಜಿಯವರ ತಂದೆಯ ಹೆಸರೇನು?
2. ಸರ್ದಾರ್ ಪಟೇಲರ ತಂದೆಯ ಹೆಸರೇನು?
3. ಸರ್ದಾರ್ ಪಟೇಲರ ಪತ್ನಿ ಯಾರು?
ನನ್ನ ಸ್ನೇಹಿತರಲ್ಲಿ ಯಾರ ಬಳಿಯೂ ಇದಕ್ಕೆ ಖಚಿತ ಉತ್ತರವಿರಲಿಲ್ಲ. ಗಾಂಧೀಜಿ ನಮ್ಮ ದೇಶಕ್ಕೆ ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ಸಿಗುವಂತೆ ಮಾಡಿದವರಲ್ಲಿ ಪ್ರಮುಖರು. ಸರ್ದಾರ್ ಪಟೇಲರು 550 ರಾಜ ಸಂಸ್ಥಾನಗಳು ಭಾರತ ಸರ್ಕಾರದ ಅಧೀನಕ್ಕೆ ಬರುವಂತೆ ಮಾಡಿದವರು. ಇವರಿಬ್ಬರ ಸಾಧನೆ ದೇಶದ ಇತಿಹಾಸದಲ್ಲಿ ಬಹಳ ದೊಡ್ಡದು. ಆದರೂ ಇವರ ಕುಟುಂಬದವರ ಬಗ್ಗೆ ಜನರಿಗೆ ಜಾಸ್ತಿ ಗೊತ್ತಿಲ್ಲ. ಗಾಂಧೀಜಿಯವರ ತಂದೆ ಕರಂಚಂದ್ ಉತ್ತಮಚಂದ್ ಗಾಂಧಿ, ಸರ್ದಾರ್ ಪಟೇಲರ ತಂದೆ ಝವೇರ್‌ಭಾಯ್ ಪಟೇಲ್ ಮತ್ತು ಪತ್ನಿ ದಿವಾಲಿ ಬಾ. ಪಟೇಲರ ಪತ್ನಿಯ ಫೋಟೋ ಇಲ್ಲಿಯವರೆಗೆ ಎಲ್ಲೂ ಸಿಕ್ಕಿಲ್ಲ.
ಅವರಿಗೆ ನಿಜವಾದ ನಾಯಕರು ಬೇಕಿಲ್ಲ
ಇದಕ್ಕೆ ಕಾರಣ ಸರಳ. ದಶಕಗಳ ಕಾಲ ಕಾಂಗ್ರೆಸ್ ಪಕ್ಷವು ರಸ್ತೆಗಳು, ಬಡಾವಣೆಗಳು, ನಗರ, ಸೇತುವೆ, ವಿಮಾನನಿಲ್ದಾಣ, ರೈಲ್ವೆ ನಿಲ್ದಾಣ, ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಹಾಗೂ ಸ್ಟೇಡಿಯಂಗಳಿಗೆ ಒಂದು ಕುಟುಂಬದ ಹೆಸರಿಡುವಲ್ಲಿ ಬ್ಯುಸಿಯಾಗಿತ್ತ. ಗಾಂಧಿಗಳು ಭಾರತದ ರಾಜರು ಎಂಬಂತೆ ಬಿಂಬಿಸಿತು. ಸರ್ದಾರ್ ಪಟೇಲರು ಮುಂಬೈನಲ್ಲಿ ಮೃತಪಟ್ಟಾಗ ಪ್ರಧಾನಿ ನೆಹರು ತಮ್ಮ ಸಂಪುಟದ ಸಚಿವರಿಗೆ ಅಂತ್ಯಕ್ರಿಯೆಗೆ ಹೋಗದೆ ಆ ದಿನ ಹೆಚ್ಚು ಕೆಲಸ ಮಾಡಿ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ಹೇಳಿದ್ದರು. ಹೆಚ್ಚಿನ ಸಚಿವರು ಅವರ ಮಾತು ಕೇಳಲಿಲ್ಲ. ನಂತರ ವಿಜಯ ಚೌಕದಲ್ಲಿ ಪಟೇಲರ ಪ್ರತಿಮೆ ಸ್ಥಾಪಿಸುವ ಪ್ರಸ್ತಾವನೆ ತಿರಸ್ಕರಿಸಿದರು. ಕೊನೆಗೆ, ಟ್ರಾಫಿಕ್‌ನಿಂದ ಗಿಜಿಗುಡುವ ಪಾರ್ಲಿಮೆಂಟ್ ಸ್ಟ್ರೀಟ್‌ನಲ್ಲಿ ಪಟೇಲರ ಪ್ರತಿಮೆಗೆ ಈ ದೇಶ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಪಟೇಲರು ಬಾರ್ಡೋಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರಿಂದ ಅವರೊಬ್ಬ ರೈತ ನಾಯಕ ಎಂದೇ ಅನೇಕರು ಭಾವಿಸಿದ್ದಾರೆ. ಆದರೆ, ಅವರು ಅಹಮದಾಬಾದ್‌ನ ಯಶಸ್ವಿ ವಕೀಲರಾಗಿದ್ದರು. ಇನ್ನು, ನೆಹರು ತಮ್ಮ ಬದುಕಿನಲ್ಲಿ ಒಂದೇ ಒಂದು ಕೋರ್ಟ್ ಕೇಸಿನಲ್ಲಿ ವಾದ ಮಾಡದಿದ್ದರೂ ಅವರೊಬ್ಬ ಪ್ರಸಿದ್ಧ ವಕೀಲ ಎಂದು ಬಿಂಬಿಸಲಾಗಿದೆ. ಕೆಂಪುಕೋಟೆಯಲ್ಲಿ ದಂಗೆ ನಡೆಸಿದ ಆರೋಪದ ಮೇಲೆ 3 ಐಎನ್‌ಎ ಅಧಿಕಾರಿಗಳ ವಿರುದ್ಧ ಹೂಡಲಾಗಿದ್ದ ಪ್ರಕರಣದ ವಿಚಾರಣೆ ನಡೆಯುವಾಗ ಹಿರಿಯ ವಕೀಲ ಭೋಲಾಭಾಯಿ ದೇಸಾಯಿ ಅವರ ಹಿಂದೆ ಕುಳಿತುಕೊಳ್ಳಲು ಒಮ್ಮೆ ಮಾತ್ರ ನೆಹರು ಕೋರ್ಟ್‌ಗೆ ಹೋಗಿದ್ದರು.
ಇದನ್ನೂ ಓದಿ: ’ರಾಹುಲ್ ವಂಶವೇ ಗೊತ್ತು, ಮೋದಿಯ ಅಪ್ಪ ಯಾರು?’: ಕೈ ನಾಯಕನ ವಿವಾದಾತ್ಮಕ ಹೇಳಿಕೆ
ಇದರಿಂದ ಯಾರಿಗೆ ಲಾಭ? ಯಾರಿಗೆ ನಷ್ಟ?
ಹೀಗೆ ದೇಶಕ್ಕೆ ನಿಜವಾದ ಕೊಡುಗೆ ನೀಡಿದವರನ್ನು ಕಡೆಗಣಿಸಿ ಒಂದು ಕುಟುಂಬದ ಬಗ್ಗೆ ವರ್ಣರಂಜಿತ ಕತೆಗಳನ್ನು ಹೆಣೆಯುವುದರಿಂದ ದೇಶ ಹಾಗೂ ಪಕ್ಷ ಎರಡಕ್ಕೂ ನಷ್ಟ. ಕತೆ ಕಟ್ಟಿಹೀರೋ ಮಾಡಿದ ನಾಯಕನ ಸಿದ್ಧಾಂತವನ್ನೇ ಪಕ್ಷ ತನ್ನ ಸಿದ್ಧಾಂತವನ್ನಾಗಿ ಮಾಡಿಕೊಂಡುಬಿಡುತ್ತದೆ. ನೆಹರು ತಮ್ಮ ಪುತ್ರಿಯನ್ನು ಉತ್ತರಾಧಿಕಾರಿ ಮಾಡಿದಾಗ ಈ ದೇಶಕ್ಕೆ ಡೈನಾಮಿಕ್ ಪ್ರಜಾಪ್ರಭುತ್ವವನ್ನು ನೀಡಲು ಅಡಿಗಲ್ಲು ಹಾಕಿದರು ಎಂದು ನಂಬಿಸಲಾಯಿತು. ಅವರ ಪುತ್ರಿ 1975ರಲ್ಲಿ ಸರ್ವಾಧಿಕಾರಿಯಾಗಿ ಬದಲಾದಾಗ ಅದನ್ನು ಈ ದೇಶದ ಪ್ರಜಾಪ್ರಭುತ್ವಕ್ಕೆ ಶಿಸ್ತು ತರುವ ಪ್ರಕ್ರಿಯೆ ಎಂದು ನಂಬಿಸಲಾಯಿತು. 1984ರಲ್ಲಿ ಸಿಖ್ಖರ ಮಾರಣಹೋಮ ನಡೆಸಿದಾಗ ಅದೊಂದು ಚುನಾವಣಾ ತಂತ್ರ ಎಂದು ಕಾಂಗ್ರೆಸ್‌ನ ಕಾರ್ಯಕರ್ತರ ತಲೆಗೆ ತುಂಬಲಾಯಿತು.
ಇಂತಹ ವಂಶಪಾರಂಪರ್ಯ ರಾಜಕಾರಣಕ್ಕೆ ದೇಶ ಬೆಲೆ ತೆರಬೇಕಾಗುತ್ತದೆ. ಜಮ್ಮು ಕಾಶ್ಮೀರದ ಭವಿಷ್ಯದ ಜೊತೆಗೆ ಕಳೆದ 71 ವರ್ಷಗಳಿಂದ ಮೂರು ಕುಟುಂಬಗಳು ಆಟ ಆಡುತ್ತಿವೆ. ಕಾಂಗ್ರೆಸ್‌ನ ನಾಯಕತ್ವದ ಮಾದರಿಯನ್ನು ಅನುಕರಿಸಲು ಹೋಗಿ ಇನ್ನೂ ಹಲವಾರು ಪಕ್ಷಗಳು ವಂಶಪಾರಂಪರ್ಯ ರಾಜಕಾರಣಕ್ಕೆ ಜೋತುಬಿದ್ದಿವೆ. ಅಂತಹ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ, ಸೈದ್ಧಾಂತಿಕ ತತ್ವಗಳು ಇರುವುದಿಲ್ಲ. ಅವು ಆಂಧ್ರಪ್ರದೇಶದ ನಾಯಕನಂತೆ ತಮ್ಮ ಅನುಕೂಲಕ್ಕಾಗಿ ಅತ್ತಿಂದಿತ್ತ ಜಿಗಿಯುತ್ತಿರುತ್ತಾರೆ.
ಸರ್‌ನೇಮ್ ಮುಖ್ಯವೋ ಸಾಮರ್ಥ್ಯವೋ?
ಈ ಮಾದರಿಯ ರಾಜಕೀಯದ ದೊಡ್ಡ ಸಮಸ್ಯೆ ಏನೆಂದರೆ, ಪಕ್ಷದ ಶಕ್ತಿಯು ವಂಶಪಾರಂಪರ್ಯ ನಾಯಕನ ಶಕ್ತಿ ಎಷ್ಟೋ ಅಷ್ಟೇ ಆಗಿಬಿಡುತ್ತದೆ. ಅವನಲ್ಲಿ ನಿಜವಾದ ನಾಯಕತ್ವದ ಶಕ್ತಿಯಿಲ್ಲದಿದ್ದರೆ ಈಗ ಆಗಿರುವಂತೆ 44 ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಅಥವಾ ಸ್ವಲ್ಪ ಕಡಿಮೆ ಲೋಕಸಭೆ ಸೀಟುಗಳಿಗೆ ತೃಪ್ತಿಪಡಬೇಕಾಗುತ್ತದೆ. ಆ ನಾಯಕ ನೀಡುವ ನಗೆಪಾಟಲಿನ ಹೇಳಿಕೆಗಳೇ ಪಕ್ಷದ ಸಿದ್ಧಾಂತವಾಗುತ್ತವೆ.
ಆದರೆ, ಭಾರತೀಯ ಮಧ್ಯಮ ವರ್ಗದ ಜನಸಾಮಾನ್ಯರ ಚಿಂತನೆ ಬದಲಾಗುತ್ತಿದೆ ಎಂಬುದು ನಮ್ಮ ಮುಂದಿರುವ ಆಶಾಕಿರಣ. ನಮ್ಮ ಮಧ್ಯಮ ವರ್ಗದವರು ರಾಜಕೀಯ ನಾಯಕರಿಂದ ಹೆಚ್ಚೆಚ್ಚು ನಿರೀಕ್ಷಿಸುತ್ತಿದ್ದಾರೆ. ಅವರು ಪಕ್ಷಗಳನ್ನೂ ಅವುಗಳ ನಾಯಕರನ್ನೂ ಕಠಿಣವಾಗಿ ಪರೀಕ್ಷಿಸುತ್ತಾರೆ. ತಮ್ಮ ಮೇಲೆ ಹೇರಿದವರನ್ನೆಲ್ಲ ಅವರು ಒಪ್ಪುವುದಿಲ್ಲ. ಅವರು ಕಷ್ಟಕರ ಪ್ರಶ್ನೆ ಕೇಳುತ್ತಾರೆ. ನಾಯಕನ ಆಯ್ಕೆಗೆ ಕಠಿಣ ಮಾನದಂಡ ಬಳಸುತ್ತಾರೆ. ಪ್ರಾಮಾಣಿಕ ಹಾಗೂ ಸಮರ್ಥ ನಾಯಕನನ್ನು ಹುಡುಕುತ್ತಾರೆ. ದೇಶವನ್ನು ಮುನ್ನಡೆಸುವ ಶಕ್ತಿಯಿರುವ ನಾಯಕನನ್ನೇ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರಿಗೆ ಸರ್‌ನೇಮ್‌ಗಳು ಮುಖ್ಯವಲ್ಲ, ದಕ್ಷತೆ ಹಾಗೂ ಸಾಮರ್ಥ್ಯ ಮುಖ್ಯ.
ವೈಭವೀಕರಿಸಿದ ಕುಟುಂಬಗಳ ಚರಿಷ್ಮಾ ಮಣ್ಣುಪಾಲಾಗಿ, ನಿಜವಾದ ಶಕ್ತಿಯಿರುವ ನಾಯಕರು ಪ್ರಜಾಸತ್ತಾತ್ಮಕ ರೀತಿಯಲ್ಲಿ ಮೇಲೆ ಬಂದಾಗಲೇ ಭಾರತದ ಪ್ರಜಾಪ್ರಭುತ್ವದ ನೈಜ ಸೌಂದರ್ಯವನ್ನು ನೋಡಬಹುದು. 2014ರಲ್ಲಿ ಒಮ್ಮೆ ಇದು ಸಾಬೀತಾಗಿದೆ. ಆಗ ವಂಶಪಾರಂಪರ್ಯ ಪಕ್ಷಗಳೆಲ್ಲ ನೆಲಕಚ್ಚಿದ್ದವು. 1971ರ ಭಾರತವೇ ಬೇರೆ 2019ರ ಭಾರತವೇ ಬೇರೆ. 2019ರ ಚುನಾವಣೆಯು ಪ್ರಸಿದ್ಧವಲ್ಲದ ಅಪ್ಪ-ಅಮ್ಮನ ಮಗನಾದ ಪ್ರಧಾನಿ ಮೋದಿ ಹಾಗೂ ತನ್ನ ಅಪ್ಪ-ಅಮ್ಮನಿಂದಲೇ ಪ್ರಸಿದ್ಧನಾಗಿರುವ ಮಗನ ಮಧ್ಯೆ ನಡೆಯಬೇಕು ಎಂದು ಕಾಂಗ್ರೆಸ್ ಪಕ್ಷ ಬಯಸಿದರೆ ಬಿಜೆಪಿ ಖುಷಿಯಿಂದ ಆ ಸವಾಲು ಸ್ವೀಕರಿಸುತ್ತದೆ. ಮುಂದಿನ ಲೋಕಸಭೆ ಚುನಾವಣೆಯ ಅಜೆಂಡಾ ಇದೇ ಆಗಲಿ.
-ಅರುಣ್ ಜೇಟ್ಲಿ, ಕೇಂದ್ರ ವಿತ್ತ ಸಚಿವ