ಸ್ವರೂಪಾನಂದ ಎಂ. ಕೊಟ್ಟೂರು

ತರಕಾರಿ ಬೆಳೆ ಖಾಯಂ

ಅಜ್ಜಣ್ಣ ಅವರು ಕೃಷಿಯ ಜೊತೆಗೆ ಕೇಬಲ್‌ ಅಪರೇಟರ್‌ ಕೆಲಸವನ್ನೂ ಮಾಡುತ್ತಾರೆ. ಮೂರು ದಶಕದಿಂದ ಮಳೆ ಆಶ್ರಿತ ಬೆಳೆ, ಕೊಳವೆ ಬಾವಿ ಆಧಾರಿತ ತೋಟಗಾರಿಕೆ ಬೆಳೆ ಬೆಳೆಯುತ್ತಾರೆ. ಇದರೊಟ್ಟಿಗೆ ಕಾಯಿ-ಪಲ್ಲೆ ಬೆಳೆಯುವ ಉಮೇದು ಇವರದ್ದು. ಅದೆಷ್ಟೋ ಬಾರಿ ಮುಖ್ಯ ಬೆಳೆಗಳಿಗಿಂತ ತರಕಾರಿಯೇ ಇವರ ಕೈ ಹಿಡಿದಿದೆ. ಹೀಗಾಗಿ ಪ್ರತಿ ಸಲ ತರಕಾರಿ ಬೆಳೆಗೆ ಸ್ವಲ್ಪ ಜಾಗ ಮೀಸಲಿಟ್ಟು, ಖಾಯಂ ಆಗಿ ಒಂದಲ್ಲ ಒಂದು ವಿಧದ ತರಕಾರಿ ಬೆಳೆಯುತ್ತಾರೆ. ಈ ವರ್ಷ ಈರುಳ್ಳಿ ಜೊತೆಗೆ ಅರ್ಧ ಎಕರೆ ಹುರುಳಿಕಾಯಿ ಬೆಳೆದಿದ್ದಾರೆ.

ಭತ್ತದ ಇಳುವರಿ ಹೆಚ್ಚಿಸಲು ಅಜೋಲಾ!

ವೈಜ್ಞಾನಿಕ ಮಾದರಿಯಲ್ಲಿ ಬೆಳೆ

ಸುತ್ತಲಿನ ಹಳ್ಳಿಗಳಲ್ಲೆಲ್ಲೂ ಬೀನ್ಸ್‌ ಬೆಳೆದ ರೈತರಿಲ್ಲ. ಅಜ್ಜಣ್ಣ ಅವರಿಗೂ ಇದು ಹೊಸ ಅನುಭವ. ಪ್ರಾರಂಭದಲ್ಲಿ ಒಳಗೊಳಗೇ ಅಂಜಿಕೆ ಇತ್ತು. ಉಳುಮೆ ಕ್ರಮ, ಬೆಳೆಯುವ ಪದ್ಧತಿ, ನಿರ್ವಹಣೆ, ಬಾಧಿಸುವ ರೋಗಗಳು.. ಇತ್ಯಾದಿಗಳ ಬಗ್ಗೆ ಮಾಹಿತಿ ಕಲೆ ಹಾಕಿದರು. ಎರಡು ಕೆ.ಜಿ ಬೀನ್ಸ್‌ ಬೀಜ ತಂದು ಊರಿದರು. ಗೂಟ ಊರಿ ತಂತಿ ಕಟ್ಟಿಚಪ್ಪರದ ಪದ್ಧತಿಗೆ ಬೀನ್ಸ್‌ ಬಳ್ಳಿ ಹಬ್ಬಿಸಿದರು. ಅಜ್ಜಣ್ಣ ಪ್ರತಿ ಸಾರಿ ಬೆಳೆಗಳ ಪರಿವರ್ತನೆ ಮಾಡುತ್ತಿರುವ ಫಲವಾಗಿ ಭೂಮಿ ಫಲವತ್ತಾಗಿದೆ. ಇದರೊಂದಿಗೆ ಮಿತವಾಗಿ ರಾಸಾಯನಿಕ ಗೊಬ್ಬರ, ಕಾಲ ಕಾಲಕ್ಕೆ ನೀರು ಕೊಟ್ಟರು. ಮಳೆಗಾಲದಲ್ಲಿ ಬೀನ್ಸ್‌ ಬೆಳೆಯುವ ಕಾರಣ ಅಜ್ಜಣ್ಣ ಕೆಲ ಮುಂಜಾಗ್ರತೆ ಕ್ರಮ ಅನುಸರಿದ್ದರು. ಏರು ಮಡಿಗಳನ್ನು ಮಾಡಿ ಮಳೆಗಾಲದಲ್ಲಿ ಬಳ್ಳಿಯ ಬೇರುಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ಕೊಟ್ಟರು. ಹೆಚ್ಚಾದ ಮಳೆ ನೀರು ತೋಟದಿಂದ ಹೊರ ಹೋಗುವ ವ್ಯವಸ್ಥೆ ಮಾಡಿದರು. ಸಾಲಿನಿಂದ ಸಾಲಿಗೆ, ಬಳ್ಳಿಯಿಂದ ಬಳ್ಳಿಯಿಂದ ವೈಜ್ಞಾನಿಕವಾಗಿ ಅಂತರ ಕಾಯ್ದುಕೊಂಡರು. ಇದರಿಂದ ಬಳ್ಳಿಯ ನಡುವೆ ಗಾಳಿ ಸಲೀಸಾಗಿ ಹರಿದಾಡಿ ರೋಗಗಳು ಅಷ್ಟಾಗಿ ಭಾದಿಸಲ್ಲ. ಇದನ್ನೆಲ್ಲ ಇವರೇ ಕಂಡುಕೊಂಡದ್ದು. ಈಗ ತೋಟವೆಲ್ಲಾ ಥೇಟ್‌ ಹಸಿರು ಚಪ್ಪರದಂತಿದೆ. ಒಂದೂವರೆ ತಿಂಗಳಲ್ಲಿ ಬೀನ್ಸ್‌ ಬಳ್ಳಿ ಫಲ ಕೊಡಲು ಆರಂಭಿಸಿತು. ಬಳ್ಳಿಯಲ್ಲಿ ಎಲೆಗಳಿಗಿಂತ ಕಾಯಿಗಳೇ ಹೆಚ್ಚಾಗಿದ್ದವು.

ರೋಗ ಬಾಧೆ ಇತ್ತು

ವಿಪರೀತ ಮಳೆಯಿಂದ ಬೀನ್ಸ್‌ ಬಳ್ಳಿ ಹಬ್ಬುವಿಕೆ ಕುಂಠಿತವಾಯ್ತು. ತತ್‌ಕ್ಷಣ ಆರೈಕೆ ಮಾಡಿದ ಫಲವಾಗಿ ಸುಧಾರಿಸಿತು. ಬಳಿಕ ಕಾಯಿ ಕೊರಕ, ಚಿಟ್ಟೆಹುಳು ಇತ್ಯಾದಿ ಬಾಧೆ ಬೆಳೆಗೆ ಕಾಡಿತು. ಅನುಭವಸ್ಥರ ಸಲಹೆಯಂತೆ ಔಷಧಿ ಸಿಂಪಡಿಸಿ ಪರಿಹಾರ ಕಂಡುಕೊಂಡರು. ಬಳ್ಳಿಗಳ ಆರೈಕೆ, ಕಾಯಿ ಕಟಾವು ಇತ್ಯಾದಿ ಕೆಲಸ ಮನೆಯವರೇ ಮಾಡುವುದರಿಂದ ಆದಾಯ ಹೆಚ್ಚಿದೆ.

ತಾರಸಿಯಲ್ಲಿ ಪ್ಲಾಸ್ಟಿಕ್ ಟ್ರೇನಲ್ಲೇ ಗಂಧಸಾಲೆ ಭತ್ತ ಬೆಳೆದ ಕೃಷಿ ಪ್ರೇಮಿ ಕೃಷ್ಣಪ್ಪ ಗೌಡ್ರು!

ಈರುಳ್ಳಿ ನಷ್ಟಬೀನ್ಸ್‌ ತುಂಬಿತು..!

ಈರುಳ್ಳಿಗೆ ಸುಮಾರು 50,000 ರು. ಖರ್ಚು ಮಾಡಿದ್ದರು ಅಜ್ಜಣ್ಣ. ಆದರೆ ಕಿಸೆ ತುಂಬಿಸಬೇಕಾಗಿದ್ದ ಈರುಳ್ಳಿ ಜೇಬು ತೂತು ಮಾಡಿತ್ತು! ಮೇಲು ಖರ್ಚಿಗೆ ಹಾಕಿದ್ದ ಬೀನ್ಸ್‌ ಈರುಳ್ಳಿ ನಷ್ಟವನ್ನು ತುಂಬುದರ ಜೊತೆಗೆ ಲಾಭವನ್ನೂ ನೀಡುತ್ತಿದೆ. ಮೊದಲ ವಾರದಲ್ಲೇ 80-90 ಕೆ.ಜಿ ಬೀನ್ಸ್‌ ಸಿಕ್ಕಿದೆ. ಅದೃಷ್ಟಕ್ಕೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಯೂ ಇತ್ತು. ಮೂರು ತಿಂಗಳ ಬೀನ್ಸ್‌ ಬಳ್ಳಿಯಿಂದ ಈಗಾಗಲೇ 50,000 ರು. ಗಳಿಸಿದ್ದಾರೆ. ವಾರದಿಂದ ವಾರಕ್ಕೆ ಇಳುವರಿ ಏರಿಕೆಯಾಗುತ್ತಲೇ ಇದೆ. ‘ಈಗ ಸೀಜನ್‌ ಬೇರೆ ಶುರುವಾಗಿದೆ. ಸಹಜವಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಮೊದಲೂ ಮಾರುಕಟ್ಟೆಯಲ್ಲಿ ಒಳ್ಳೆಯ ರೇಟ್‌ ಸಿಕ್ತು. ಇನ್ನೂ ಕನಿಷ್ಟಐದಾರು ವಾರ ಬೀನ್ಸ್‌ ಸಿಗುತ್ತೆ. ಮುಂದೆ 60 ಸಾವಿರ ರು. ಗಳಿಸುವ ವಿಶ್ವಾಸವಿದೆ ’ ಎನ್ನುತ್ತಾರೆ ಅಜ್ಜಣ್ಣ.

ಹುಂಡಗುತ್ತಿಗೆ ಬಿತ್ತು ಬ್ರೇಕ್‌..

ಅಜ್ಜಣ್ಣ ಪ್ರಾರಂಭದಲ್ಲಿ ಬೀನ್ಸ್‌ನ್ನು ಪಕ್ಕದಲ್ಲಿ ನಡೆಯುವ ಸಂತೆಗಳಿಗೆ ಒಯ್ಯುತ್ತಿದ್ದರು. ಆಗ ಅಲ್ಲಿನ ದಲ್ಲಾಳಿಗಳು, ವ್ಯಾಪಾರಸ್ಥರು ತೂಕಕ್ಕೆ ಖರೀದಿಸದೇ ಹುಂಡಗುತ್ತಿಗೆಗೆ ಬೀನ್ಸ್‌ ಖರೀದಿಸಿದರು. ಇದರಿಂದ ನಷ್ಟವಾಯಿತು. ಈಗ ಸ್ಥಳೀಯ ಸಂತೆ ಬಿಟ್ಟು ಎರಡು ದಿನಕ್ಕೊಮ್ಮೆ ಹ ಬೋ ಹಳ್ಳಿ, ಹೊಸಪೇಟೆ ಮಾರುಕಟ್ಟೆಗೆ ಹೋಗಿ, ತೂಕ ಲೆಕ್ಕದಲ್ಲಿ ಬೀನ್ಸ್‌ ಮಾರುತ್ತಾರೆ. ಈ ಪಾರದರ್ಶಕ ವ್ಯಾಪಾರದಿಂದ ಆದಾಯದ ಪ್ರಮಾಣ ಹೆಚ್ಚಾಗಿದೆ.

ಜೇನುಕೃಷಿ ಮಾಡಿ ಲಕ್ಷ ಎಣಿಸುವ ಅರವಿಂದ್!

ಈಗ ನಾರಪ್ಪರ ಅಜ್ಜಣ್ಣ ಸುತ್ತಲಿನ ಹತ್ತು ರೈತರಿಗೆ ಮಾದರಿ ಆಗಿದ್ದಾರೆ. ಬೀನ್ಸ್‌ ಬೆಳೆಯುವುದು ಹೇಗೆ? ಎಂದು ಈಗಾಗಲೇ ಅನೇಕರು ಬಂದು ನೋಡಿ, ತಿಳಿದುಕೊಂಡು ಹೋಗಿದ್ದಾರೆ. ಅಜ್ಜಣ್ಣ ಅವರ ಮೊಬೈಲ್‌ ಸಂಖ್ಯೆ 9380839003.

ಬೀನ್ಸ್‌ ಬೆಳೆಯ ಇತರೆ ಪ್ರಯೋಜನಗಳು

ಬೀನ್ಸ್‌ ಹಣ್ಣೆಲೆಗಳು ಉದುರಿದಾಗ ಹಸಿರೆಲೆ ಗೊಬ್ಬರವಾಗುತ್ತೆ. ಬಳ್ಳಿ ದಟ್ಟವಾಗಿ ಹಬ್ಬಿವ ಕಾರಣ ಕಳೆ ಕಡಿಮೆ. ಬೆಳೆ ಮುಗಿದಾಗ ಬಳ್ಳಿಯ ಪ್ರತಿ ಭಾಗವೂ ಮಣ್ಣಿಗೆ ಸೇರಿ ಫಲವತ್ತತೆ ಹೆಚ್ಚುತ್ತೆ. ಇದೇ ಜಾಗದಲ್ಲಿ ಮತ್ತೆ ಶೂನ್ಯ ಖರ್ಚಿನಲ್ಲಿ ಹಾಗಲ, ಟೊಮ್ಯಾಟೊ, ಹೀರೆಕಾಯಿ ಬೆಳೆಯಬಹುದು.

10 ಲಕ್ಷ ಸಂಬಳದ ಕೆಲಸ ಬಿಟ್ಟು ಗುಲಾಬಿ ಕೃಷಿಗಿಳಿದ ಇಂಜಿನಿಯರ್‌!