ಮೆಕ್ಕೆಜೋಳದಲ್ಲಿ ಹೋದ ಹಣ ತರಕಾರಿಯಲ್ಲಿ ಬಂತು!
ತಡವಾಗಿ ಆರಂಭವಾದ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ರೋಹಿಣಿ ಮಳೆಗೆ ಭೂಮಿ ಹದ ಮಾಡಿ, ಮೂರು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತಿ ಕೈ ಸುಟ್ಟುಕೊಂಡು ನಂತರ ಅದೇ ಭೂಮಿಯಲ್ಲಿ ತರಕಾರಿ ಬೆಳೆಯಲು ಮುಂದಾಗಿ ಯಶಸ್ವಿಯಾದ ರೈತನೊಬ್ಬನ ಯಶೋಗಾಥೆ ಇದು.
ರಾಜ ಸಿರಿಗೆರೆ
ಈ ಬಾರಿ ಮುಂಗಾರು ಲೇಟ್. ಚಿತ್ರದುರ್ಗದ ಸಿರಿಗೆರೆ ಸಮೀಪದ ಚಿಕ್ಕಬೆನ್ನೂರಿನ ಯುವರೈತ ಬಸವರಾಜಪ್ಪ ತಮ್ಮ 3 ಎಕರೆ ಹೊಲದಲ್ಲಿ ಸಾಂಪ್ರದಾಯಿಕ ಮೆಕ್ಕೆಜೋಳ ಬೆಳೆಯಲು ಮುಂದಾದರು. ಆ ಹೊತ್ತಿಗೆ ಮಳೆ ಕೈಕೊಟ್ಟಿತು. ಬೆಳೆ ಕೈ ಕೊಟ್ಟಿತು. ಹತ್ತಾರು ಸಾವಿರ ರು. ನಷ್ಟ ಅನುಭವಿಸಿದ ರೈತನಿಗೆದಿಕ್ಕು ತೋಚಲಿಲ್ಲ. ಮಳೆ ಬಂದಮೇಲೆ ಮತ್ತೆ ಜೋಳ ಬಿತ್ತುವ ಯೋಚನೆಯಲ್ಲಿ ಸಿದ್ಧತೆ ಮಾಡುವಾಗಲೇ ಸಿಕ್ಕಿದ್ದು ತರಕಾರಿ ಬೆಳೆಗಳ ಮಾಹಿತಿ.
ಆ ಊರಲ್ಲಿ ಬೇರ‌್ಯಾರೂ ಮಾಡದ ಸಾಹಸ. ಹೊಸ ಪ್ರಯೋಗದ ಬೆನ್ನು ಹತ್ತಿದ ಯುವಕ ತೋಟಗಾರಿಕಾ ಇಲಾಖೆ ಸಹಾಯದೊಂದಿಗೆ ತರಕಾರಿ ಕುಂಟೆ ಹೊಡೆದೇ ಬಿಟ್ಟರು. ಈ ಬಗ್ಗೆ ಸಾಕಷ್ಟು ಮಾಹಿತಿಯನ್ನೂ ಸಂಗ್ರಹಿಸಿದರು. ಒಂದೂವರೆ ಎಕರೆಯಲ್ಲಿ ಟೊಮೆಟೋ ಹಾಗೂ ಒಂದೂವರೆ ಎಕರೆಯಲ್ಲಿ ಬದನೆ ಕೃಷಿ ಆರಂಭವಾಯ್ತು. ಹೆಚ್ಚು ಆರೈಕೆ ಮಾಡದೆ, ರಸಾಯನಿಕ ಗೊಬ್ಬರವಿಲ್ಲದಿದ್ದರೂ ತರಕಾರಿ ಬೆಳೆಗಳು ಚೆನ್ನಾಗಿ ಬಂದವು. ಎಂಟು ಸಾವಿರ ಬದನೆ ಸಸಿಗಳನ್ನು ನಾಟಿ ಮಾಡಿದ್ದು ಈಗ ಅವೆಲ್ಲಾ ಫಲಭರಿತವಾಗಿವೆ. ಟೊಮೆಟೋ ಕೂಡ ಕೈ ಹಿಡಿದಿದೆ. ಬದನೆ ಕೃಷಿಗೆ ಸುಮಾರು 35 ಸಾವಿರ ರೂ. ಖರ್ಚು ಮಾಡಿದ್ದು ಒಂದೂವರೆ ಲಕ್ಷ ರು. ಆದಾಯದ ನಿರೀಕ್ಷೆ ಇದೆ.
ತಾರಸಿಯಲ್ಲಿ ಪ್ಲಾಸ್ಟಿಕ್ ಟ್ರೇನಲ್ಲೇ ಗಂಧಸಾಲೆ ಭತ್ತ ಬೆಳೆದ ಕೃಷಿ ಪ್ರೇಮಿ ಕೃಷ್ಣಪ್ಪ ಗೌಡ್ರು!
ಟೊಮ್ಯಾಟೋದಿಂದ 3 ಲಕ್ಷ ರು. ಲಾಭದ ನಿರೀಕ್ಷೆಯಲ್ಲಿದ್ದಾರೆ. ರೋಗ ನಿಯಂತ್ರಣಕ್ಕೆ ಬಹಳ ಕಡಿಮೆ ಪ್ರಮಾಣದಲ್ಲಿ ಔಷಧ ಸಿಂಪಡಿಸಿದ್ದಾರೆ. ತುಂತುರು ನೀರಿನ ವ್ಯವಸ್ಥೆ ಇದ್ದರೂ ಈ ಬೆಳೆಗಳು ಮಳೆಯಾಶ್ರಿತವಾಗಿ ಬೆಳೆದಿರುವುದೇ ವಿಶೇಷ. ‘ಇದೇ ಭೂಮಿಯಲ್ಲಿ ಮೆಕ್ಕೆಜೋಳ ಬೆಳೆದಿದ್ದರೆ ಗರಿಷ್ಠ 60 ಚೀಲ ಬೆಳೆಯಬಹುದಿತ್ತು. ಅಂದಾಜು 1.20 ಲಕ್ಷರು.ಗಳಷ್ಟು ಆದಾಯ ಬರುತ್ತಿತ್ತು. ಆದರೆ ಅರ್ಧ ಹಣ ನಿರ್ವಹಣೆಗೇ ಖರ್ಚಾಗುತ್ತಿತ್ತು. ಈಗ ನೋಡಿ ನಾನು ಏನಿಲ್ಲವೆಂದರೂ 3 ಲಕ್ಷರು.ಗಳ ಆದಾಯ ಗಳಿಸುತ್ತಿದ್ದೇನೆ ಎಂದು ಬಸವರಾಜಪ್ಪ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಲ್ಲದೆ ಶ್ರಮಜೀವಿಗಳಾದ ರೈತರು ಇಂತಹ ಬೆಳೆಗಳನ್ನು ಬೆಳೆಯುವತ್ತ ಮನಸ್ಸು ಮಾಡಬೇಕೆಂದು ಸಲಹೆ ಮಾಡುತ್ತಾರೆ.