Bengaluru lifestyle expenses in Kannada: ಬೆಂಗಳೂರಿನ ಜೀವನ ವೆಚ್ಚ ಆಕಾಶಕ್ಕೆ ಏರಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಪಾರ್ಟಿ ಅಥವಾ ಕ್ಲಬ್ಬಿಂಗ್ ಮಾಡದಿದ್ದರೂ ಒರ್ವ ಐಟಿ ಉದ್ಯೋಗಿಯ ತಿಂಗಳ ಖರ್ಚು ₹74,000 ದಾಟುತ್ತದೆಯೇ? ಹೌದು ಎನ್ನುತ್ತಾರೆ ವಾಲ್ಮಾರ್ಟ್ ಇಂಜಿನಿಯರ್ ಆಯುಷ್ ಠಾಕೂರ್.
ಬೆಂಗಳೂರಿನಲ್ಲಿ ವಾಸಿಸುವುದು ಅನೇಕರ ಕನಸು. ಆದರೆ ಇಲ್ಲಿನ ಖರ್ಚು ಮಾತ್ರ ಅಷ್ಟು ಸುಲಭವಲ್ಲ. ಇತ್ತೀಚೆಗೆ ವಾಲ್ಮಾರ್ಟ್ (Walmart) ಸಂಸ್ಥೆಯಲ್ಲಿ ಮಷಿನ್ ಲರ್ನಿಂಗ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಆಯುಷ್ ಠಾಕೂರ್ ಎಂಬುವವರು ಹಂಚಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಾವು ಯಾವುದೇ ಪಾರ್ಟಿ ಅಥವಾ ಪಬ್‌ಗಳಿಗೆ ಹೋಗದಿದ್ದರೂ ತಿಂಗಳಿಗೆ ಬರೋಬ್ಬರಿ ₹74,000 ಖರ್ಚು ಮಾಡುವುದಾಗಿ ಅವರು ವಿವರಿಸಿದ್ದಾರೆ.
ಆಯುಷ್ ಅವರ ತಿಂಗಳ ಬಜೆಟ್ ಲೆಕ್ಕಾಚಾರ ಇಂತಿದೆ
ಆಯುಷ್ ತಮ್ಮ ಖರ್ಚುಗಳನ್ನು ಐದು ಪ್ರಮುಖ ವಿಭಾಗಗಳಾಗಿ ವಿಂಗಡಿಸಿದ್ದಾರೆ
ಮನೆ ಬಾಡಿಗೆ ₹18,000
ಗ್ರಾಸರಿ ಮತ್ತು ಪ್ರೋಟೀನ್ ಸಪ್ಲಿಮೆಂಟ್ಸ್ ₹12,000
ಮನೆ ಕೆಲಸದವರಿಗೆ (House Help) ₹3,000
ವೈಫೈ, ಕರೆಂಟ್ ಮತ್ತು ಸಬ್‌ಸ್ಕ್ರಿಪ್ಷನ್‌ಗಳು ₹1,000
ರ‍್ಯಾಂಡಮ್ ಶಾಪಿಂಗ್ (ಅಮೆಜಾನ್ ಇತ್ಯಾದಿ) ₹10,000
ಹೂಡಿಕೆ ಮತ್ತು SIP (ಉಳಿತಾಯ) ₹30,000
ಒಟ್ಟು ಮೊತ್ತ ₹74,000
ಬಾಡಿಗೆ ಮತ್ತು ಆಫೀಸ್ ಸೌಲಭ್ಯಗಳು
ಬೆಂಗಳೂರಿನಲ್ಲಿ ₹18,000ಕ್ಕೆ ಉತ್ತಮ ರೂಮ್ ಸಿಗುವುದು ಇಂದಿನ ದಿನಗಳಲ್ಲಿ ಸವಾಲೇ ಸರಿ. ಆದರೆ ಆಯುಷ್ ಅದನ್ನು ಮ್ಯಾನೇಜ್ ಮಾಡಿದ್ದಾರೆ. ಇನ್ನು ಆಫೀಸ್ ಸೌಲಭ್ಯಗಳ ಬಗ್ಗೆ ಮಾತನಾಡುತ್ತಾ, ಆಯುಷ್ ತಮಗೆ ಕಂಪನಿಯಿಂದ ಉಚಿತ ಕ್ಯಾಬ್ ಮತ್ತು ಊಟದ ಸೌಲಭ್ಯ ಇರುವುದರಿಂದ ಪ್ರಯಾಣ ಮತ್ತು ಮಧ್ಯಾಹ್ನದ ಊಟಕ್ಕೆ ಒಂದು ರೂಪಾಯಿಯೂ ಖರ್ಚಾಗುವುದಿಲ್ಲ ಎಂದು ತಿಳಿಸಿದ್ದಾರೆ. "ಇದೇ ಕಾರಣಕ್ಕೆ ನಾನು ನನ್ನ 9 ರಿಂದ 5 ರ ಕೆಲಸವನ್ನು ಇಷ್ಟಪಡುತ್ತೇನೆ" ಎಂದು ಅವರು ತಮಾಷೆಯಾಗಿ ಹೇಳಿದ್ದಾರೆ.
ಹೂಡಿಕೆ ಮತ್ತು ಮಧ್ಯರಾತ್ರಿಯ ಶಾಪಿಂಗ್
ಆಯುಷ್ ಅವರ ಲೆಕ್ಕಾಚಾರದ ಪ್ರಕಾರ, ₹30,000 ಅನ್ನು ಅವರು ನೇರವಾಗಿ ಹೂಡಿಕೆ (SIP) ಮಾಡುತ್ತಾರೆ. "ಬ್ಯಾಂಕ್ ಖಾತೆಯಲ್ಲಿ ಸುಮ್ಮನೆ ಬಿದ್ದಿರುವ ಹಣದ ವಿಷಯದಲ್ಲಿ ನಾನು ನನ್ನನ್ನೇ ನಂಬುವುದಿಲ್ಲ, ಹಾಗಾಗಿ ಬಂದ ತಕ್ಷಣ ಹೂಡಿಕೆ ಮಾಡುತ್ತೇನೆ" ಎಂಬುದು ಅವರ ತರ್ಕ. ಉಳಿದಂತೆ ₹10,000 ಅವರ ರ‍್ಯಾಂಡಮ್ ಶಾಪಿಂಗ್‌ಗೆ ಹೋಗುತ್ತದೆ. ಇದರಲ್ಲಿ ಬಟ್ಟೆಗಳು, ಶೂಗಳು ಮತ್ತು ರಾತ್ರಿ 2 ಗಂಟೆಗೆ ಅಮೆಜಾನ್‌ನಲ್ಲಿ ಮಾಡುವ ಆರ್ಡರ್‌ಗಳು ಸೇರಿವೆ.
ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿಧವಿಧವಾಗಿ ಕಮೆಂಟ್ ಮಾಡಿದ್ದಾರೆ
"SIP ಎನ್ನುವುದು ಖರ್ಚಲ್ಲ, ಅದು ಉಳಿತಾಯ. ಹಾಗಾಗಿ ನಿಮ್ಮ ಅಸಲಿ ಖರ್ಚು ₹44,000 ಮಾತ್ರ" ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ "ಅಣ್ಣನ ತಿಂಗಳ ಖರ್ಚು, ನಾನು ಪರ್ಮನೆಂಟ್ ಆದ ಮೇಲೆ ಸಿಗುವ ಸಂಬಳಕ್ಕಿಂತ ಜಾಸ್ತಿ ಇದೆ!" ಎಂದು ಇಂಟರ್ನ್ ಒಬ್ಬರು ಕಮೆಂಟ್ ಮಾಡಿದ್ದಾರೆ. "ಬ್ರೋ ₹74,000 ತುಂಬಾ ಕಡಿಮೆ, ನನ್ನ ಖರ್ಚು ಪ್ರತಿ ತಿಂಗಳು ₹3 ಲಕ್ಷ ದಾಟುತ್ತದೆ" ಎಂದು ಮತ್ತೋರ್ವರು ಹೇಳಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಕೊನೆಯದಾಗಿ ಆಯುಷ್ ಹೇಳುವಂತೆ, ಬೆಂಗಳೂರಿನಂತಹ ಮಹಾನಗರಗಳಲ್ಲಿ 'ಅಡಲ್ಟಿಂಗ್' (Adulting) ಎಂದರೆ ಅದು ಪ್ರತಿ ತಿಂಗಳು ದೊಡ್ಡ ಮೊತ್ತದ ಬಿಲ್ ಪಾವತಿಸುವುದೇ ಆಗಿದೆ.
ಇಲ್ಲಿದೆ ನೋಡಿ ವಿಡಿಯೋ