ಅಹಮದಾಬಾದ್‌ನಲ್ಲಿರುವ ಒಂದು ವಿಶಿಷ್ಟ ಕೆಫೆಯು ಟಾಯ್ಲೆಟ್ ಬಳಸಿದವರಿಗೆ 2 ರೂಪಾಯಿ ನೀಡುತ್ತಿದೆ. ಮಹಾತ್ಮ ಗಾಂಧೀಜಿಯವರ ನೈರ್ಮಲ್ಯದ ಬೋಧನೆಗಳನ್ನು ಪ್ರತಿಪಾದಿಸುವ ಈ ಕೆಫೆಯು, 'ಮಿಸ್ಟರ್ ಟಾಯ್ಲೆಟ್' ಎಂದೇ ಪ್ರಸಿದ್ಧರಾದ ಈಶ್ವರಭಾಯಿ ಪಟೇಲ್‌ರವರಿಂದ ಸ್ಥಾಪಿತವಾಗಿದೆ.
ಎಲ್ಲಾ ಕಡೆ ಸಾರ್ವಜನಿಕ ಟಾಯ್ಲೆಟ್‌ಗಳಲ್ಲಿ ನೀವೇನು ಮಾಡ್ತೀರಿ ಹೇಳಿ- ಏನ್ ಮಾಡೋದು, ಅದೇ ಅಂತೀರಾ. ಅದು ಸರಿ. ಮೂತ್ರ ಮಾಡಿ ಅಥವಾ ಮಲ ವಿಸರ್ಜಿಸಿ, 2 ಅಥವಾ 5 ರೂಪಾಯಿ ಕಾಸು ಕೊಡಬೇಕು ತಾನೆ? ಇಲ್ಲಿ ನೋಡಿ, ಇಲ್ಲೊಂದು ವಿಶಿಷ್ಟ ಕೆಫೆಯಿದೆ. ಈ ಕೆಫೆಯ ಟಾಯ್ಲೆಟ್‌ನಲ್ಲಿ ನೀವು ಮಲ ವಿಸರ್ಜಿಸಿದರೆ ನಿಮಗೇ 2 ರೂಪಾಯಿ ಕೊಡ್ತಾರೆ! ಇದು ನಾವು ಇದುವರೆಗೆ ಅಂದುಕೊಂಡಿರುವ ʼಪೇ ಆಂಡ್ ಯೂಸ್ʼ ಪರಿಕಲ್ಪನೆಯನ್ನು ಉಲ್ಟಾ ಮಾಡುವಂತಿದೆ ಅಲ್ವೇ?
ಹೌದು, ಇದೊಂದು ಸಣ್ಣ ಕೆಫೆ. ಶುಚಿತ್ವದ ಅರಿವು ಮೂಡಿಸುವುದೇ ಇದರ ಉದ್ದೇಶ. ತೈವಾನ್ ತನ್ನ ಆಧುನಿಕ ಶೌಚಾಲಯ ಥೀಮ್‌ನ ಕೆಫೆಗಳನ್ನು ಜನಪ್ರಿಯ ಮಾಡಿರಬಹುದು. ಆದರೆ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಈ ಕಲ್ಪನೆಯನ್ನು ಬಳಸುತ್ತಿರುವ ಕೆಫೆ ಇರುವುದು ಗುಜರಾತಿನ ಅಹಮದಾಬಾದ್‌ನಲ್ಲಿ. ಇಲ್ಲಿ ವಾಶ್‌ರೂಮ್ ಬಳಸಿದರೆ ನಿಮಗೆ 2 ರೂಪಾಯಿ ಲಭ್ಯ.
ಮಹಾತ್ಮ ಗಾಂಧಿ ಅವರ ಸಬರಮತಿ ಆಶ್ರಮದ ಪಕ್ಕದಲ್ಲಿರುವ ಕಟ್ಟಡದಲ್ಲಿದೆ ಈ ʼಟಾಯ್ಲೆಟ್ ಗಾರ್ಡನ್ʼ. ಜಗತ್ತಿನಲ್ಲೇ ಇಂಥದು ಬೇರೆಲ್ಲೂ ಇಲ್ಲ. ಸುತ್ತ ಹಸಿರು ಮತ್ತು ಸಿಮೆಂಟ್ ನೆಲ. ಒಂದು ಕಪ್ ಬಿಸಿ ಕಾಫಿಯನ್ನು ಆನಂದಿಸಲು ನೀವು ಇಲ್ಲಿ ಕಮೋಡ್ ಡಿಸೈನ್‌ನ ಸೀಟುಗಳ ಮೇಲೆ ಕೂರಬೇಕು.
"ಬಡತನವು ನೈರ್ಮಲ್ಯಕ್ಕೆ ಅಡ್ಡಿಯಲ್ಲ" ಎಂಬಂತಹ ಚಿಂತನಶೀಲ ಕೋಟ್‌ಗಳು ಇದರ ಗೋಡೆಗಳ ಮೇಲಿವೆ. ಒಂದು ಶತಮಾನಕ್ಕೂ ಹಿಂದೆ, ಭಾರತದಲ್ಲಿ ನೈರ್ಮಲ್ಯವನ್ನು ಆದ್ಯತೆಯನ್ನಾಗಿ ಮಾಡಲು ಬಯಸಿದ ಮಹಾತ್ಮ ಗಾಂಧಿಯವರ ಬೋಧನೆಗಳನ್ನು ಇದು ಪ್ರತಿಪಾದಿಸುತ್ತದೆ. "ನೈರ್ಮಲ್ಯವು ರಾಜಕೀಯ ಸ್ವಾತಂತ್ರ್ಯಕ್ಕಿಂತ ಹೆಚ್ಚು ಮುಖ್ಯ" , "ಪ್ರತಿಯೊಂದು ಶೌಚಾಲಯವೂ ಡ್ರಾಯಿಂಗ್ ರೂಮಿನಂತೆಯೇ ಸ್ವಚ್ಛವಾಗಿರಬೇಕು" ಎಂದು ಗಾಂಧಿಯವರು ಹೇಳುತ್ತಿದ್ದರು.
ಇದನ್ನು ಸ್ಥಾಪಿಸಿದವರು ಈಶ್ವರಭಾಯಿ ಪಟೇಲ್. ಈ ಕೆಫೆಯ ಸ್ಥಾಪನೆಯ ಬೀಜವನ್ನು 70 ವರ್ಷಗಳ ಹಿಂದೆ, ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹಾಕಲಾಯಿತು. ಆಗ 10 ವರ್ಷ ವಯಸ್ಸಿನ ಈಶ್ವರಭಾಯಿ ಪಟೇಲ್, ತಮ್ಮ ಶಿಕ್ಷಕ ಗೋಪಾಲ್ ದಾದಾ ಅವರು ತರಗತಿಯಲ್ಲಿ ಹೇಳುತ್ತಿದ್ದ ಶೌಚದ ಸಮಸ್ಯೆಯ ಅನುಭವಗಳಲ್ಲಿ ಆಲಿಸಿ ದಿಗ್ಭ್ರಮೆಗೊಂಡಿದ್ದರು. ಬಯಲು ಮಲವಿಸರ್ಜನೆ, ಕೈಯಿಂದ ಮಲ ಎತ್ತುವ ಸಮುದಾಯದ ಕಷ್ಟ, ರಾತ್ರಿ ಆ ಮಣ್ಣನ್ನು ಸ್ವಚ್ಛಗೊಳಿಸುವ ಸಮುದಾಯವನ್ನು ಸಾರ್ವಜನಿಕರು ನಡೆಸಿಕೊಳ್ಳುವ ರೀತಿ- ಇದೆಲ್ಲದರ ಬಗ್ಗೆ ತಿಳಿದು ಕಸಿವಿಸಿಗೊಂಡರು.
1950ರ ದಶಕದ ಉತ್ತರಾರ್ಧದಲ್ಲಿ ಕಾಲೇಜಿನಿಂದ ಪದವಿ ಪಡೆದ ನಂತರ, ಈಶ್ವರಭಾಯಿ ತಮ್ಮ ಹೃದಯದ ಮಾತನ್ನು ಅನುಸರಿಸಲು ನಿರ್ಧರಿಸಿದರು. ಸಾವಿರಾರು ನೈರ್ಮಲ್ಯ ಕಾರ್ಮಿಕರ ಜೀವನವನ್ನು ಬದಲಾಯಿಸಲು ಅವರು ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಮಾಡಿದ ಕೆಲಸಗಳಿಗಾಗಿ ಅವರನ್ನು 'ಮಿಸ್ಟರ್ ಟಾಯ್ಲೆಟ್' ಎಂದು ಗುರುತಿಸಲಾಯಿತು. ಅವರು ಜಾತಿ ವ್ಯವಸ್ಥೆಯನ್ನು ಕೊನೆಗೊಳಿಸಲು ಮತ್ತು ದೇವಾಲಯಗಳಿಗೆ ಅಸ್ಪೃಶ್ಯರಿಗೆ ಪ್ರವೇಶವನ್ನು ಪಡೆಯಲು ಸಹ ಪ್ರಯತ್ನಿಸಿದರು.
50 ವರ್ಷಗಳಿಗೂ ಹೆಚ್ಚು ಕಾಲ ಅವರು ದೇಶದ ಉದ್ದಗಲಕ್ಕೂ ಪ್ರಯಾಣಿಸಿದರು, ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಅರ್ಥಮಾಡಿಕೊಂಡರು ಮತ್ತು ನೈರ್ಮಲ್ಯದ ಸಂದೇಶವನ್ನು ಹರಡಿದರು. ಡಿಸೆಂಬರ್ 26, 2010 ರಂದು, ಅವರು 77ನೇ ವಯಸ್ಸಿನಲ್ಲಿ ನಿಧನರಾದರು. ನೈರ್ಮಲ್ಯದ ಮೇಲೆ ಕೇಂದ್ರೀಕರಿಸುವ ಪರಂಪರೆಯನ್ನು ಬಿಟ್ಟುಹೋದರು.
60 ಕೋಟಿ ಜನರು ಬಯಲಿನಲ್ಲಿ ಮಲವಿಸರ್ಜನೆ ಮಾಡುವ ಭಾರತ ದೇಶದಲ್ಲಿ, ನೈರ್ಮಲ್ಯದ ಬಗ್ಗೆ ಅರಿವು ಇನ್ನೂ ಎಲ್ಲೆಡೆ ಹರಡಿಲ್ಲ. ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿಯ ಇತ್ತೀಚಿನ ಸ್ವಚ್ಛತಾ ಸ್ಥಿತಿ ವರದಿಯ ಪ್ರಕಾರ, ಗ್ರಾಮೀಣ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು (ಶೇಕಡಾ 52.1) ಜನರು ಇನ್ನೂ ಬಯಲಿನಲ್ಲಿ ಮಲವಿಸರ್ಜನೆ ಮಾಡುತ್ತಿದ್ದಾರೆ. ಇದು ಪ್ರಮುಖ ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯ ಸಮಸ್ಯೆ.
ನೈಟ್ ಶಿಫ್ಟ್‌ಅಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಅಸ್ತಮಾ ಅಪಾಯ ಹೆಚ್ಚು ಎಂದ ವರದಿ!
ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆಯಾದ 2019ರ ವೇಳೆಗೆ ಭಾರತವನ್ನು ಸಂಪೂರ್ಣ ಸ್ವಚ್ಛಗೊಳಿಸುವುದು ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರವ್ಯಾಪಿ ಸ್ವಚ್ಛತಾ ಅಭಿಯಾನದ ಉದ್ದೇಶವಾಗಿತ್ತು. ಅದು ಈಡೇರಿಲ್ಲ. ಹೆಚ್ಚಿನೆಡೆ ಶೌಚಾಲಯಗಳನ್ನು ನಿರ್ಮಿಸಿ ಬಯಲು ಮಲವಿಸರ್ಜನೆಯನ್ನು ಕೊನೆಗೊಳಿಸಲು ಮತ್ತು ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದರೂ ಕೆಲಸವಿನ್ನೂ ಸಾಕಷ್ಟು ಬಾಕಿ ಇದೆ. ಈ ಪುಟ್ಟ ಕೆಫೆ ತನ್ನ ಕೆಲಸವನ್ನು ಮಾಡುತ್ತಿದೆ. ಈ ಕೆಫೆ ವಾರಕ್ಕೆ ಎರಡು ಬಾರಿ ತೆರೆದಿರುತ್ತದೆ. ಮುಖ್ಯವಾಗಿ ಆಶ್ರಮ ಅಥವಾ ಸಫಾಯಿ ವಿದ್ಯಾಲಯ ಆಯೋಜಿಸುವ ಕಾರ್ಯಕ್ರಮಗಳಿಗಾಗಿ.
