ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ತನ್ನಷ್ಟಕ್ಕೆ ತಾನು ಸಾಗುತ್ತಿದ್ದ ಹುಲಿಯನ್ನು ಜನರು ಬೆನ್ನಟ್ಟಿ ಕಲ್ಲೆಸೆದ ಘಟನೆ ನಡೆದಿದೆ. 

ಕೆಲ ಜನರಿಗೆ ಸುಮ್ಮನಿರಲಾರದೇ ಇರುವೆ ಬಿಟ್ಟುಕೊಳ್ಳುವುದು, ಸುಮ್ಮನಿರುವ ಯಾರನ್ನೋ ಕೆಣಕಿ ಅವರಿಂದ ಹೊಡೆತ ತಿನ್ನುವುದೆಂದರೆ ಅದೇನೋ ಖುಷಿ, ಅಂತಹವರು ಸುಮ್ಮನಿರುವ ಕಾಡುಪ್ರಾಣಿಗಳನ್ನು ಕೂಡ ಸುಮ್ಮನೇ ಬಿಡುವುದಿಲ್ಲ. ಅದೇ ರೀತಿ ಇಲ್ಲೊಂದು ಕಡೆ ತನ್ನಷ್ಟಕ್ಕೆ ತಾನು ಕಾಡಿನ ಮಧ್ಯೆ ಸಾಗಿ ಹೋಗುತ್ತಿದ್ದ ರಾಷ್ಟ್ರೀಯ ಪ್ರಾಣಿ ಹುಲಿಯೊಂದನ್ನು ಜನ ಹಿಂದಿನಿಂದ ಬೆನ್ನಟ್ಟುತ್ತಾ ಸಾಗಿ ಅದರ ಮೇಲೆ ಒಬ್ಬರಾದ ಮೇಲೊಬ್ಬರಂತೆ ಕಲ್ಲು ಎಸೆಯಲು ಆರಂಭಿಸಿದ್ದಾರೆ. ಜನರ ಆಟವನ್ನು ನೋಡುವಷ್ಟು ನೋಡಿ ತಾಳ್ಮೆ ಕಳೆದುಕೊಂಡ ಹುಲಿ ಹಿಂದೆ ತಿರುಗಿ ಜನರನ್ನು ಅಟ್ಟಿಸಲು ಶುರು ಮಾಡಿದೆ. ಈ ವೇಳೆ ಜನ ಹೆದರಿ ಬದುಕಿದ್ನೋ ಬಡಜೀವ ಎಂದುಕೊಂಡು ಓಡುತ್ತಿದ್ದಾರೆ. ಈ ಎಲ್ಲಾ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ಘಟನೆ

ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ಜೂನ್ 20ರಂದು ಈ ಘಟನೆ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಗೊಂಡಿಯಾ ಜಿಲ್ಲೆಯ ಅಮ್ಗೊನ್ ದಿಯೊರಿ ಪ್ರದೇಶದ ಅಂಜೊರಾ ಪ್ರದೇಶದಲ್ಲಿ ಘಟನೆ ನಡೆದಿದೆ. ವೀಡಿಯೋ ನೋಡಿದ ಅನೇಕರು ತನ್ನಷ್ಟಕ್ಕೆ ತಾನು ಸಾಗುತ್ತಿದ್ದ ಹುಲಿಯನ್ನು ಬೆನ್ನಟ್ಟಿ ಕಲ್ಲೆಸೆದ ಜನರ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ವರ್ತನೆಯಿಂದಾಗಿ ವನ್ಯಜೀವಿಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ.

ಸುಮ್ಮನಿದ್ದ ಹುಲಿಯನ್ನು ಕೆರಳಿಸಿದ ಜನ

ಬಹುತೇಕ ಯುವ ತರುಣರೇ ಇರುವ ಈ ಗುಂಪಿನಲ್ಲಿ ಅನೇಕರು ಕಾಡಿನ ಮಧ್ಯೆ ಸಾಗುತ್ತಿದ್ದ ಹುಲಿಯನ್ನು ದೊಡ್ಡ ವೀರರಂತೆ ಓಡಿಸುತ್ತಾ ಹೋಗಿದ್ದು, ಅದರ ಮೇಲೆ ಕಲ್ಲಸೆದಿದ್ದಾರೆ. ಮೊದಲಿಗೆ ಸುಮ್ಮನಿದ್ದ ಹುಲಿ ಜನರ ಹಾವಳಿ ವಿಪರೀತವಾದಾಗ ತಿರುಗಿ ನಿಂತು ತನ್ನ ಹಿಂದೆ ಬರುತ್ತಿದ್ದ ಜನರನ್ನು ಓಡಿಸಿ ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರ ಈ ಕೆಟ್ಟ ವರ್ತನೆ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇಂತಹ ಜನರ ವರ್ತನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಹ ಕಾನೂನು ಜಾರಿಯಾಗಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.