ಹುಲಿ ಆಹಾರ ಹುಡುಕಿ ಬಂದಾಗ ನಾಯಿ ಕಣ್ಣಿಗೆ ಬಿದ್ದಿದೆ. ಇನ್ನೇನು ನಾಯಿಯನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಎರಡೂ ಪ್ರಾಣಿಗಳು ಗುಂಡಿಗೆ ಬಿದ್ದಿದೆ. ಗುಂಡಿಗೆ ಬಿದ್ದ ಬೆನ್ನಲ್ಲೇ ಪಕ್ಕದಲ್ಲೇ ನಾಯಿ ಇದ್ದರೂ ಹುಲಿ ತಿಂದಿಲ್ಲ. ಬದಲು ರಕ್ಷಣೆಗಾಗಿ ನಾಯಿ ಹಾಗೂ ಹುಲಿ ಕೂಗಿಕೊಂಡ ಘಟನೆ ನಡೆದಿದೆ.

ಇಡುಕ್ಕಿ(ಜೂ.08) ಆಹಾರ ಅರಸಿಕೊಂಡು ಬಂದ ಹುಲಿಯೊಂದು ನಾಯಿಯನ್ನು ಅಟ್ಟಾಡಿಸಿಕೊಂಡು ಹೋಗಿದೆ. ಆದರೆ ಈ ದಾಳಿ ವೇಳೆ ನಾಯಿ ಹಾಗೂ ಹುಲಿ ಎರಡೂ ಗುಂಡಿಗೆ ಬಿದ್ದಿದೆ. ಗುಂಡಿಗೆ ಬಿದ್ದ ನಾಯಿ ತನ್ನ ಕತೆ ಇಂದು ಮುಗೀತು ಎಂದುಕೊಂಡಿದೆ. ಕಾರಣ ಹುಲಿ ಕೂಡ ಅದೇ ಗುಂಡಿಗೆ ಬಿದ್ದಿದೆ. ಅತೀ ಆಳದ ಗುಂಡಿ ಅದಲ್ಲ. ಹಾಗಂತ ಛಂಗನೆ ಮೇಲಕ್ಕೆ ಬರುವುದು ಅಸಾಧ್ಯ. ಗುಂಡಿಗೆ ಬಿದ್ದ ಹುಲಿ ಹಾಗೂ ನಾಯಿಗೆ ಯಾವುದೇ ಗಾಯವಾಗಿಲ್ಲ. ಮೊದಲೇ ಹಸಿದಿದ್ದ ಹುಲಿ ಪಕ್ಕದಲ್ಲೇ ನಾಯಿ ಇದ್ದರೂ ದಾಳಿ ಮಾಡಿಲ್ಲ. ಬದಲಾಗಿ ನಾಯಿ ಹಾಗೂ ಹುಲಿ ರಕ್ಷಣೆಗಾಗಿ ಕೂಗಿಕೊಂಡ ಘಟನೆ ವಿಶೇಷ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.

ಇಡುಕ್ಕಿ ಜಿಲ್ಲೆಯ ಕಾಡುಗಳಿಂದ ಆವೃತ್ತವಾಗಿದೆ. ಹೀಗಾಗಿ ಹುಲಿ ಹಾಗೂ ಚಿರತೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಹೀಗೆ ಕಾಡಿನಿಂದ ಆಹಾರ ಅರಸಿಕೊಂಡು ಬಂದ ಹುಲಿಗೆ ನಾಯಿ ಕಣ್ಣಿಗೆ ಬಿದ್ದಿದೆ. ನಾಯಿ ಮೇಲೆ ದಾಳಿಗೆ ಹುಲಿ ಮುಂದಾಗಿದೆ. ಆದರೆ ಹುಲಿ ದಾಳಿ ಅರಿತ ನಾಯಿ ಸ್ಥಳದಿಂದ ವೇಗವಾಗಿ ಓಡಲು ಆರಂಭಿಸಿದೆ. ಇತ್ತ ನಾಯಿ ಹಿಡಿಯಲು ಅದಕ್ಕಿಂತ ವೇಗದಲ್ಲಿ ಸಾಗಿದ ಹುಲಿಗೆ ನಿರಾಸೆಯಾಗಿದ್ದು ಗುಂಡಿ. ಡುಕ್ಕಿ ಚೆಲ್ಲಾರ್ಕೋವಿಲ್ ಮೆಟ್ಟು ಏಲಕ್ಕಿ ತೋಟದ ಗುಂಡಿಯಿಂದ ನಾಯಿ ಹಾಗೂ ಹುಲಿ ಬಿದ್ದಿದೆ.

ಆಳೆತ್ತರದ ಗುಂಡಿ ಇದು. ಈ ಗುಂಡಿಗೆ ಬಿದ್ದ ಹುಲಿ ಹಾಗೂ ನಾಯಿಗೆ ಮೇಲಕ್ಕೆ ಬರುವುದು ಸಾಧ್ಯವಿರಲಿಲ್ಲ. ಗುಂಡಿಗೆ ಬಿದ್ದ ರಭಸದಲ್ಲಿ ಹುಲಿ ಹಾಗೂ ನಾಯಿಗೆ ಯಾವುದೇ ಗಾಯವಾಗಿಲ್ಲ. ಆಹಾರಕ್ಕಾಗಿ ಯಾವ ನಾಯಿಯನ್ನು ಆಟ್ಟಾಡಿಸಿಕೊಂಡು ಬಂದಿತ್ತೋ ಅದೇ ನಾಯಿ ಇದೀಗ ಹುಲಿಯ ಪಕ್ಕದಲ್ಲೇ ಇದೆ. ಇತ್ತ ಹುಲಿ ಕೂಡ ಹಸಿದಿದೆ. ಆದರೆ ಹುಲಿ, ನಾಯಿ ಮೇಲೆ ದಾಳಿ ಮಾಡಿಲ್ಲ. ನಾಯಿಯನ್ನು ತಿಂದಿಲ್ಲ. ಬದಲಾಗಿ, ನಾಯಿ ಹಾಗೂ ಹುಲಿ ರಕ್ಷಣೆಗಾಗಿ ಕೂಗಿಕೊಂಡಿದೆ.

ನಾಯಿ ಹಾಗೂ ಹುಲಿಯ ಕೂಗಾಟ ಕೇಳಿಕೊಂಡ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರೆ. ಇತ್ತ ಕ್ಷಣದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಕಾರ್ಯಾಚರಣೆ ಆರಂಭಿಸಿದ್ದಾರೆ. ಹುಲಿ ಹಾಗೂ ನಾಯಿ ಎರಡನ್ನು ಸುರಕ್ಷಿತವಾಗಿ ಹೊರತೆಗೆಯಲು ಸಿಬ್ಬಂದಿಗಳು ಮುಂದಾಗಿದ್ದಾರೆ. ಹುಲಿ ಹಾಗೂ ನಾಯಿ ಎರಡೂ ಪ್ರಾಣಿಗಳಿಗೂ ಅರಿವಳಿಕೆ ನೀಡಲಾಗಿದೆ. ಮೊದಲ ಅರಿವಳಿಕೆಗೆ ಹುಲಿ ಪ್ರಜ್ಞೆ ತಪ್ಪಿಲ್ಲ. ಹೀಗಾಗಿ ಕೆಲ ಹೊತ್ತಿನ ಬಳಿಕ ಎರಡನೇ ಅರಿವಳಿಕೆ ನೀಡಲಾಗಿತ್ತು.

ಹುಲಿ ಜೊತೆಗಿದ್ದ ನಾಯಿ ರಕ್ಷಣೆಯೂ ಸವಲಾಗಿತ್ತು. ಹೀಗಾಗಿ ನಾಯಿಗೂ ಅರಿವಳಿಕೆ ನೀಡಲಾಗಿತ್ತು. ನಾಯಿ ಹಾಗೂ ಹುಲಿ ಪ್ರಜ್ಞೆ ತಪ್ಪಿದ ಬಳಿಕ ಬಲೆ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಹುಲಿಯನ್ನು ಪಂಜರದಲ್ಲಿ ಹಾಕಿದರೆ, ನಾಯಿಯನ್ನು ಗೂಡಿಗೆ ಹಾಕಿದ್ದಾರೆ. ಪಂಜರದಲ್ಲಿಟ್ಟ ಹುಲಿಯನ್ನು ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದ ವಿಶೇಷ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಪರೀಕ್ಷೆಗಳ ನಂತರ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದಲ್ಲಿಯೇ ಬಿಡಲಾಗುವುದು. ನಾಯಿಯ ಜೊತೆಗಿದ್ದ ಕಾರಣ ರೇಬಿಸ್ ಲಸಿಕೆ ಸೇರಿದಂತೆ ಚಿಕಿತ್ಸೆ ನೀಡಿದ ಬಳಿಕವೇ ಹುಲಿಯನ್ನು ಕಾಡಿಗೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಹೇಳಿದ್ದಾರೆ.