ಮನೆಯಲ್ಲಿ ಹೆಂಡತಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ತನ್ನ ಲೈಂಗಿಕ ಆಸೆಗಳನ್ನು ಈಡೇರಿಸಿಕೊಳ್ಳಲಾಗದೇ ವ್ಯಕ್ತಿಯೊಬ್ಬ ತನ್ನ ಜನನಾಂಗವನ್ನೇ ಕತ್ತರಿಸಿಕೊಂಡಿರುವ ಘಟನೆ ನಡೆದಿದೆ. ಈ ಘಟನೆ ನಂತರ ಮುಂದೇನಾಯ್ತು ನೀವೇ ಓದಿ..

ಮನುಷ್ಯನ ಮನಸ್ಸು ಮತ್ತು ಒತ್ತಡ ಯಾವ ಹಂತಕ್ಕೆ ತಲುಪಬಹುದು ಎಂಬುದಕ್ಕೆ ಸಾಕ್ಷಿಯಾಗಿ ಅತ್ಯಂತ ಭಯಾನಕ ಮತ್ತು ಶಾಕಿಂಗ್ ಘಟನೆಯೊಂದು ನಡೆದಿದೆ. 42 ವರ್ಷದ ವ್ಯಕ್ತಿಯೊಬ್ಬ ತನ್ನ ಲೈಂಗಿಕ ಆಸೆಗಳನ್ನು ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಕೊಡಲಿಯಿಂದ ತನ್ನ ಜನನಾಂಗವನ್ನೇ ಕತ್ತರಿಸಿಕೊಂಡಿರುವ ಘಟನೆ ಶನಿವಾರ ಮಹಾರಾಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಡೆದಿದ್ದೇನು?

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ರಾಮ್‌ಮಿಲನ್ ಯಾದವ್ ಎಂಬ 42 ವರ್ಷದ ವ್ಯಕ್ತಿ ಈ ಘೋರ ಕೃತ್ಯ ಎಸಗಿದವರು. ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದ ರಾಮ್‌ಮಿಲನ್, ಶನಿವಾರ ತನ್ನ ಜಮೀನಿನ ಸಮೀಪವಿದ್ದ ಬಾವಿಯ ಬಳಿ ಹೋಗಿ ಕೊಡಲಿಯಿಂದ ಈ ಕೃತ್ಯ ಎಸಗಿದ್ದಾನೆ. ತೀವ್ರ ರಕ್ತಸ್ರಾವವಾಗಿ ನೋವಿನಿಂದ ನರಳುತ್ತಿದ್ದಾಗ ಆತನೇ ತನ್ನ ಸಂಬಂಧಿಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ಧಾವಿಸಿದ ಸಂಬಂಧಿಕರು ರಾಮ್‌ಮಿಲನ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ದಿಗಿಲುಗೊಂಡಿದ್ದಾರೆ.

ತಕ್ಷಣವೇ ಆತನನ್ನು ಮಹಾರಾಜ್‌ಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಗಾಯ ಗಂಭೀರವಾಗಿದ್ದರಿಂದ ವೈದ್ಯರ ಸಲಹೆಯಂತೆ ಛತ್ತರ್‌ಪುರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಡಲಿ ಏಟಿನಿಂದ ಜನನಾಂಗದ ಭಾಗ ಸಂಪೂರ್ಣವಾಗಿ ತುಂಡಾಗಿದ್ದು, ಆತ ಸದ್ಯ ಐಸಿಯುನಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾನೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್:

ಈ ಕೃತ್ಯ ಎಸಗುವ ಮೊದಲು ಅಥವಾ ನಂತರ ರಾಮ್‌ಮಿಲನ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾನೆ. ಅದರಲ್ಲಿ 'ನನ್ನ ಲೈಂಗಿಕ ಆಸೆಗಳನ್ನು ಕೊನೆಗಾಣಿಸಲು ಈ ರೀತಿ ಮಾಡಿಕೊಂಡಿದ್ದೇನೆ. ಇನ್ನು ಮುಂದಿನ ಜೀವನವನ್ನು ಕೇವಲ ಪ್ರಾರ್ಥನೆ ಮತ್ತು ದೇಶ ಸೇವೆಗೆ ಮೀಸಲಿಡುತ್ತೇನೆ' ಎಂದು ಹೇಳಿಕೊಂಡಿರುವುದು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದೆ. ಈತ 'ರಾಮಲೀಲಾ' ಎಂಬ ನಾಟಕ ತಂಡವನ್ನು ನಡೆಸುತ್ತಿದ್ದ ಎನ್ನಲಾಗಿದೆ.

ಕುಟುಂಬದ ಆರ್ಥಿಕ ಸಂಕಷ್ಟ:

ರಾಮ್‌ಮಿಲನ್ ಜೀವನದ ಹಿನ್ನೆಲೆ ಕರುಣಾಜನಕವಾಗಿದೆ. ಆತನ ಪತ್ನಿ ಕಳೆದ ಕೆಲವು ವರ್ಷಗಳಿಂದ ಪಾರ್ಶ್ವವಾಯುವಿನಿಂದ (Paralysis) ಬಳಲುತ್ತಿದ್ದು, ಹಾಸಿಗೆ ಹಿಡಿದಿದ್ದಾರೆ. ದಂಪತಿಗೆ ಮೂವರು ಮಕ್ಕಳಿದ್ದು, ಓರ್ವ ಮಗಳ ಮದುವೆ ಇದೇ ಜೂನ್ 25ಕ್ಕೆ ನಿಶ್ಚಯವಾಗಿದೆ. ಮನೆಯ ಜವಾಬ್ದಾರಿ ಮತ್ತು ಆರ್ಥಿಕ ಸಂಕಷ್ಟದ ನಡುವೆ ಈತ ಈ ರೀತಿ ಮಾಡಿಕೊಂಡಿರುವುದು ಕುಟುಂಬವನ್ನು ಬೀದಿಗೆ ತಳ್ಳಿದೆ. ಈ ಪ್ರಕರಣದ ಕುರಿತು ಪೊಲೀಸರಿಗೆ ಯಾವುದೇ ಲಿಖಿತ ದೂರು ಸಲ್ಲಿಕೆಯಾಗಿಲ್ಲ. ದೂರು ಬಂದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಾನಸಿಕ ಅಸ್ವಸ್ಥತೆ ಅಥವಾ ತೀವ್ರ ವೈರಾಗ್ಯದ ಹಾದಿ ಹಿಡಿದು ಈತ ಇಂತಹ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ.